ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲದ ಕ್ಷೇಮಕ್ಕೆ ಎರಡು ಕಣ್ಣುಗಳು; ತ್ಯಾಗ–ಸೇವೆ

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರ ಬೋಧನೆಗಳ ಸಾರ - ತ್ಯಾಗ ಮತ್ತು ಸೇವೆ. ಅದು ಕೇವಲ ವೈಯಕ್ತಿಕ ಮಟ್ಟದಲ್ಲಷ್ಟೇ ಅಲ್ಲ, ಈ ಮೌಲ್ಯಗಳನ್ನು ಅವರು ರಾಷ್ಟ್ರೀಯ ಆದರ್ಶಗಳೆಂದರು. ಅವರು ಯಾವುದೇ ಧರ್ಮಗ್ರಂಥವನ್ನೋ ಅಥವಾ ಧಾರ್ಮಿಕ ಆಚಾರಗಳನ್ನೋ ರಾಷ್ಟ್ರೀಯ ಆದರ್ಶವೆನ್ನಲಿಲ್ಲ; ತ್ಯಾಗ ಮತ್ತು ಸೇವೆಗಳಿಂದ ಮಾತ್ರ ರಾಷ್ಟ್ರನಿರ್ಮಾಣ ಸಾಧ್ಯವೆಂದರು. ಈ ಅವಳಿ ಆದರ್ಶಗಳು ಎಲ್ಲರಿಗೂ ಅರ್ಥವಾಗಬಲ್ಲ, ಅನುಭವಕ್ಕೆ ಬರುವಂತಹ ಕಾರ್ಯ ಮತ್ತು ಪರಿಣಾಮ.

ಧ್ಯಾನವೆಂದರೆ ಮೂಗು ಹಿಡಿದು ಮಂತ್ರ ಜಪಿಸುವುದಲ್ಲ, ಹಾಗೆಯೇ ಅದನ್ನು ಖಂಡಿಸುವುದೂ ಅಲ್ಲ.  ಜನಸಾಮಾನ್ಯರನ್ನು ಅವರ ಆತ್ಮಾಭಿಮಾನಕ್ಕೆ ಧಕ್ಕೆಯಾಗದಂತೆ ಅವರನ್ನು ಮೇಲೆತ್ತುವುದೇ ಸ್ವಾಮಿ ವಿವೇಕಾನಂದರು ಸೂಚಿಸಿದ ಮಾರ್ಗ. ಅವರು ಎಲ್ಲ ಯೋಗಗಳನ್ನು ಕುರಿತು ಉಪನ್ಯಾಸ ಮಾಡಿದರು ಪಾಶ್ಚಾತ್ಯದೇಶಗಳಲ್ಲಿ.

ಆದರೆ ನಮ್ಮ ದೇಶದಲ್ಲಿ ಕೊಂಬೊದಿಂದ ಆಲ್ಮೊರಾದವರೆಗೆ ಅವರು ಹರಿಸಿದ ಮಿಂಚಿನವಾಣಿ ಆತ್ಮಾಭಿಮಾನದ, ದೇಶಸೇವೆಯ ಕರೆ. ಆಗ ಭಾರತದಲ್ಲಿ ತಮ್ಮ ಉದ್ದೇಶಗಳಿಗಾಗಿ ಸಮರ್ಪಿಸಿಕೊಳ್ಳಬಲ್ಲ ಸ್ತ್ರೀಯರು ಇಲ್ಲದ ಕಾರಣ ನಿವೇದಿತಾಳಂತಹ ಸಿಂಹಸದೃಶ ವ್ಯಕ್ತಿತ್ವನ್ನು ಅವರು ಆಮದು ಮಾಡಿಕೊಂಡರು. ಕೊಲ್ಕೊತ್ತಾದ ಯುವಜನರಿಗೆ ಅವಳು ‘ಅಕ್ಕ ನಿವೇದಿತಾ’ ಆದದ್ದು ಚರಿತ್ರೆ.

ಅವಳು ಸ್ಥಾಪಿಸಿದ ಹೆಣ್ಣುಮಕ್ಕಳ ಶಾಲೆ, ಅವಳು ಪ್ಲೇಗ್ ಮಾರಿಯ ಸಂದರ್ಭದಲ್ಲಿ ನಡೆಸಿದ ಸೇವೆ ವಿವೇಕಾನಂದರ ಉಪದೇಶಗಳಿಗೆ ಜೀವಂತಭಾಷ್ಯವಾದವು. ಕೊನೆಗೂ ಅವಳು ಸೇವೆಯಲ್ಲಿಯೇ ಸವೆದು ಮರಣವನ್ನಪ್ಪಿದಳು. ನಿವೇದಿತಾಳಂತೆಯೇ ನೇರವಾಗಿ ಅಥವಾ ಪರೋಕ್ಷವಾಗಿ ಅವರ ಧ್ಯೇಯಗಳಿಗೆ ನೆರವಾದ ವಿದೇಶೀಯರಲ್ಲಿ ಮುಖ್ಯರಾದವರು: ಜೊಸೆಫಿನ್ ಮೆಕ್ಲಾಯ್ಡ್, ಹೆನ್ರಿಟಾ ಮುಲ್ಲರ್, ಓಲೆ ಬುಲ್, ಝೇವಿಯರ್ ದಂಪತಿಗಳು ಮತ್ತು ಜೆ.ಜೆ. ಗುಡ್ ವಿನ್.

ಸನ್ಯಾಸಿಗಳ ಸಂಘಟನೆ ವಿವೇಕಾನಂದರಿಗೂ ಮುಂಚೆ ಭಾರತದಲ್ಲಿ ನಡೆದಿರಲಿಲ್ಲವೆಂದಲ್ಲ, ಆದರೆ ಅದು ಮತ, ಧರ್ಮ, ಆಚಾರಗಳಿಗೆ ಒತ್ತುಕೊಟ್ಟ, ದೈವಕೇಂದ್ರಿತ ಸಂಘಟನೆಯಾಗುಳಿದಿತ್ತು. ವಿವೇಕಾನಂದರ ವೈಶಿಷ್ಟ್ಯವೆಂದರೆ ಅವರು ತಮ್ಮ ಸನ್ಯಾಸೀಸಂಘಟನೆಯ ಕೇಂದ್ರವಾಗಿ ಮಾನವನನ್ನು ಪರಿಧಿಯಾಗಿ ದೈವವನ್ನು ಇಟ್ಟರು. ಜೀವ = ಶಿವ ಎಂಬ ಹೊಸ ಸೂತ್ರ ನೀಡಿದರು. ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬುದು ಅವರು ಸ್ಥಾಪಿಸಿದ ರಾಮಕೃಷ್ಣ ಮಿಷನ್ನಿನ ಧ್ಯೇಯವಾಕ್ಯ.

ಇಂದಿಗೂ ವಿಶ್ವದಾದ್ಯಂತ ಮಿಷನ್ನಿನ ಸನ್ಯಾಸಿಗಳು ಸದ್ದಿಲ್ಲದೆ ಸೇವಾಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ತಾವು ಪರಿವ್ರಜನದ ಕಾಲದಲ್ಲಿ ಭೇಟಿಯಾದ ರಾಜರನ್ನೂ, ಹಿರಿಯ ಮುತ್ಸದ್ದಿಗಳನ್ನೂ ಸಮಾಜಚಿಂತಕರನ್ನೂ ಈ ತ್ಯಾಗ–ಸೇವೆಗಳ ಸುಳಿಗೆ ಪರಿಚಯಿಸಿದರು ವಿವೇಕಾನಂದರು. ಖೇತ್ರಿಯ ಮಹಾರಾಜ ಅಜಿತಸಿಂಗ್, ತನ್ನ ಪ್ರಾಂತ್ಯದಲ್ಲಿ ಹಿಂದುಳಿದ ವರ್ಗದವರಿಗಾಗಿ ಶಾಲೆಗಳನ್ನು ತೆರೆದ. ಇತ್ತ ಮೈಸೂರು ಪ್ರಾಂತ್ಯದಲ್ಲಿಯೂ ಅವರ ಪ್ರಭಾವವಿತ್ತು. ಅವರು ಮೈಸೂರು ಮಹಾರಾಜರಿಗೆ ಬರೆದ ಪತ್ರವೊಂದರ ಸಾಲುಗಳು ಹೀಗಿವೆ: “....

ಮಹಾರಾಜ, ಯಾರು ಇತರರಿಗಾಗಿ ಜೀವಿಸಿದ್ದಾರೆಯೋ ಅವರು ಮಾತ್ರವೇ ಬದುಕಿರುವರು. ಉಳಿದವರು ಉಸಿರಾಡುತ್ತಿದ್ದರೂ ಸತ್ತಂತೆಯೇ....”. ಇದೇ ಪತ್ರದಲ್ಲಿ ವಿವೇಕಾನಂದರು ಮಹಾರಾಜರಿಗೆ ಬರೆಯುತ್ತಾರೆ: “....ಘನತೆವೆತ್ತ ಮಹಾರಾಜರಾದ ತಾವು ಬಡಜನರಿಗಾಗಿ ಶಾಲೆಗಳನ್ನು ತೆರೆಯಬಹುದು, ಆದರೆ ಭಾರತೀಯರ ಬಡತನ ಎಷ್ಟಿದೆಯೆಂದರೆ ಶಾಲೆಗೆ ಬರುವುದಕ್ಕಿಂತ ಹೊಲದಲ್ಲಿ ಗೇಯುವುದೇ ಇಲ್ಲಿನ ಮಕ್ಕಳಿಗೆ ಲಾಭದಾಯಕವಾಗಿ ಕಾಣುವುದು.

ಬಾಲಕನು ಶಿಕ್ಷಣ ಪಡೆಯಲು ಶಾಲೆಗೆ ಬರಲಾಗದಿದ್ದರೆ, ಶಿಕ್ಷಣವೇ ಅವನ ಮನೆಬಾಗಿಲಿಗೆ ಹೋಗಬೇಕು.....”. ಮತ್ತೆ ಹೇಳುತ್ತಾರೆ: “ಉದಾತ್ತ ಮನಸ್ಸಿನವರಾದ ತಮ್ಮಂತಹ ಭಾರತಾಂಬೆಯ ರಾಜಪುತ್ರರು, ತಾಯಿ ಭಾರತಿಯು ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡುವಲ್ಲಿ ಬಹಳಷ್ಟು ಮಾಡಬಲ್ಲಿರಿ. ತನ್ಮೂಲಕ ತಮ್ಮ ಹೆಸರು, ಕೀರ್ತಿ ಅಜರಾಮರವಾಗಿ ಉಳಿಯುವುದು. ಅಜ್ಞಾನದಲ್ಲಿ ಮುಳುಗಿದ ಮಿಲಿಯಗಟ್ಟಲೆ ಭಾರತೀಯರನರಳುವಿಕೆ ತಮ್ಮ ವಿಶಾಲಹೃದಯಕ್ಕೆ ತಟ್ಟಲಿ, ತಮಗೆ ಆ ಭಾವತೀವ್ರತೆಯ ಅನುಭವವಾಗಲಿ ಎಂಬುದೇ ಭಗವಂತನಲ್ಲಿ ಈ ವಿವೇಕಾನಂದನ ಪ್ರಾರ್ಥನೆ.”

ಒಬ್ಬ ದೇಶೀಯ ಸಂಸ್ಥಾನದ ರಾಜನಿಗೆ ಈ ಬಗೆಯ ತೀವ್ರಭಾವಪ್ರಚೋದಕ ಪತ್ರ ಬರೆಯವುದೆಂದರೆ ವಿವೇಕಾನಂದರೊಳಗೆ ಈ ತ್ಯಾಗ-ಸೇವೆಗಳ ಆದರ್ಶದ ಕೆಚ್ಚು ಎಷ್ಟಿದ್ದಿರಬಹುದು? ತತ್ಪರಿಣಾಮವಾಗಿ ಈ ಪತ್ರದ ಭಾವಗಳನ್ನು ಸ್ವೀಕರಿಸಿದ್ದರ ಪರಿಣಾಮವೋ ಎಂಬಂತೆ ಮೈಸೂರು ಪುರೋಗಾಮಿ ಸಂಸ್ಥಾನವೆನ್ನಿಸಿಕೊಂಡಿದ್ದಲ್ಲದೆ ಉತ್ತಮ ಪ್ರಗತಿಯನ್ನೂ ಸಾಧಿಸಿತು.

ಈ ಪ್ರಭಾವ ದಟ್ಟವಾಗಿದ್ದುದರ ಕಾರಣವೋ ಏನೋ ಮುಂದೊಮ್ಮೆ ತಮ್ಮ ನೆಚ್ಚಿನ ದಿವಾನರು ರಾಜೀನಾಮೆಯಿತ್ತರೂ ಮೈಸೂರು ಸಂಸ್ಥಾನದ ಅರಸುಮನೆತನ ತನ್ನ ಸಾಮಾಜಿಕನ್ಯಾಯ, ಸಮಾನ ಅವಕಾಶಗಳ ತತ್ತ್ವದಿಂದ ಸರಿಯಲಿಲ್ಲ.

ಸ್ವಾಮಿ ವಿವೇಕಾನಂದರ ಸಹವರ್ತಿಗಳೂ ಶ್ರೀರಾಮಕೃಷ್ಣರ ನೇರ ಶಿಷ್ಯರೂ ಆದ ಸ್ವಾಮಿ ಅಖಂಡಾನಂದರು ಈ ಅವಳಿ ಆದರ್ಶಗಳನ್ನು ಎದೆಗಪ್ಪಿಕೊಂಡವರಲ್ಲಿ ಮೊದಲಿಗರು.

ತಮ್ಮ ಪರಿವ್ರಜನ ಕಾಲದಲ್ಲಿ ಟಿಬೆಟ್ ಮೊದಲಾದ ಪ್ರದೇಶಗಳನ್ನು ಕಾಲ್ನಡಿಗೆಯಲ್ಲಿಯೇ ಸಂಚರಿಸಿ, ತೀವ್ರ ಸಾಧನೆಗಳನ್ನು ಅಪೂರ್ವ ಆಧ್ಯಾತ್ಮಿಕ ಅನುಭವಗಳನ್ನು ಪಡೆದುಕೊಂಡರೂ ಅವರು ಆಯ್ದುಕೊಂಡ ಕ್ಷೇತ್ರ ‘ಸೇವೆ’. 1894ರ ಸುಮಾರಿನಲ್ಲಿ ಅವರು ರಾಜಸ್ಥಾನದ ಒಬ್ಬ ಶ್ರೀಮಂತ ಭಕ್ತನ ಮನೆಯಲ್ಲಿ ಉಳಿದುಕೊಂಡಿದ್ದಾಗ ಆ ಪ್ರದೇಶದ ಬಡಜನರ ದಾರುಣಸ್ಥಿತಿ ಕಂಡು ತಮ್ಮ ಗುರುಭಾಯಿ ವಿವೇಕಾನಂದರಿಗೆ ಪತ್ರ ಬರೆಯುತ್ತಾರೆ. ಅದಕ್ಕೆ ಉತ್ತರ ಬರೆಯುವಾಗ ವಿವೇಕಾನಂದರು ಒಕ್ಕಣಿಸುತ್ತಾರೆ: “..... ಶ್ರೀಮಂತರ ಮನೆಯ ಭಕ್ಷ್ಯಗಳನ್ನು ಭುಂಜಿಸುತ್ತಾ ‘ ರಾಮಕೃಷ್ಣ, ಓ ಭಗವಂತ!’ ಎಂದು ಹಲುಬಿದರೆ ಏನೂ ಪ್ರಯೋಜನವಿಲ್ಲ. ಬಡವರಿಗಾಗಿ ಏನಾದರೂ ಮಾಡು.

ಹುಲ್ಲು ತಿಂದು ಬದುಕಿದರೂ ಸರಿ, ಪರರಿಗೆ ಒಳಿತನ್ನು ಮಾಡಬೇಕು. ಕಾವಿವಸನವು ಭೋಗಕ್ಕಾಗಿ ಅಲ್ಲ, ಅದು ಶ್ರೇಷ್ಠಜೀವನದ, ನಾಯಕತ್ವದ ಸಂಕೇತ. ಬಡವರು, ಅನಕ್ಷರಸ್ಥರು, ಅಜ್ಞಾನಿಗಳು, ದಮನಿತರು ನಿನ್ನ ದೇವರಾಗಲಿ. ಅವರಿಗೆ ಸಲ್ಲಿಸುವ ಸೇವೆಯೇ ನಿನ್ನ ಅತ್ಯುನ್ನತ ಧರ್ಮವೆಂದು ತಿಳಿ.” ಈ ಮಾತುಗಳನ್ನು ಅಕ್ಷರಶಃ ಪಾಲಿಸಿದರು ಅಖಂಡಾನಂದರು.

1894ರಲ್ಲಿ ಅವರು ಖೇತ್ರಿಯ ಮನೆಮನೆ ಬಾಗಿಲು ತಟ್ಟಿ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಾರ್ಥಿಸಿದರು. ಪರಿಣಾಮವಾಗಿ ಹಿಂದಿನ ವರ್ಷ ಕೇವಲ 80 ಮಕ್ಕಳಿದ್ದ ಶಾಲೆ ಆ ವರ್ಷ 257 ಮಕ್ಕಳನ್ನು ದಾಖಲಿಸಿತು. ಬೇಲೂರಿನ ರಾಮಕೃಷ್ಣ ಮಿಷನ್ ಸ್ಥಾಪನೆಗೊಂಡ ಹದಿನೈದೇ ದಿನದಲ್ಲಿ, ಮೇ  15, 1897 ಮಹುವಾ ಪ್ರದೇಶದಲ್ಲಿ ಬರಪರಿಹಾರ ಕಾರ್ಯ ಕೈಗೆತ್ತಿಕೊಂಡರು ಅಖಂಡಾನಂದರು. ಸರಗಾಚಿ ಎಂಬಲ್ಲಿ ಒಂದು ಅನಾಥಾಶ್ರಮವನ್ನು ಮತ್ತು ಶಾಲೆಯನ್ನು ತೆರೆದರು.

ಅಲ್ಲಿ ಬಹಳ ದುಸ್ತರ ಪರಿಸ್ಥಿತಿಯಲ್ಲಿ ಅವರು ಎಲ್ಲ ಸಂಕಟಗಳನ್ನು ದಾಟಿದರು. ದಾನವಾಗಿ ದೊರೆತ ಭೂಮಿಯಲ್ಲಿ ಬಡರೈತನಂತೆ ಕೌಪೀನಧಾರಿಯಾಗಿ ನೇಗಿಲು ಹಿಡಿದು ಬೆಳೆ ಬೆಳೆದು ಬಡಮಕ್ಕಳಿಗೆ ಊಟವಿಕ್ಕಿದರು. ಹಗಲಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಪಾಠ, ಅದೇ ಶಾಲೆಯಲ್ಲಿ ರಾತ್ರಿ ವೇಳೆಯಲ್ಲಿ ವಯಸ್ಕರಿಗೆ ಶಿಕ್ಷಣವಿತ್ತರು ಅಖಂಡಾನಂದರು.

ಇದೆಲ್ಲ ನಡೆದದ್ದು  1980ರ ದಶಕಗಳಲ್ಲಿ ಎಂಬುದು ನೆನಪಿಡಬೇಕಾದ ಅಂಶ. ವಿವೇಕಾನಂದರಿಂದ ಪ್ರೇರಿತರಾದ ಒಬ್ಬೊಬ್ಬರದೂ ಒಂದೊಂದು ವೀರಗಾಥೆ, ಮನುಕುಲಕ್ಕೆ ಆದರ್ಶಪ್ರಾಯವಾದ ಯಶೋಗಾಥೆ. ಭಾರತವನ್ನಷ್ಟೇ ಅಲ್ಲ, ವಿಶ್ವವನ್ನೇ ಕಟ್ಟಬೇಕೆಂದು ಯಾರೇ ಮುಂದೆ ಬಂದರೂ ಇಂದು ಎಂದು ಎಂದೆಂದೂ ಒಂದೇ ಬುನಾದಿ, ಅದೇ ತ್ಯಾಗ ಮತ್ತು ಸೇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT