ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನು ಧರ್ಮಶಾಸ್ತ್ರ ನಾಶವಾದರೆ ಅಭಿವೃದ್ಧಿ ಸಾಧ್ಯ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮನುಧರ್ಮ ಶಾಸ್ತ್ರವನ್ನು ನಾಶ ಮಾಡದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು  ಲೇಖಕ ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ಅಂಗವಾಗಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಪ್ರಜಾಪ್ರಭುತ್ವದ ರಕ್ಷಣೆಗಾಗಿ ರಾಜ್ಯಮಟ್ಟದ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಪುಸ್ತಕ ಸುಡುವುದನ್ನು ನಾನು ವಿರೋಧಿಸುತ್ತೇನೆ. ಆದರೆ, ಮನುಧರ್ಮ ಶಾಸ್ತ್ರವನ್ನು ಮಾತ್ರ ಸುಟ್ಟು ಹಾಕಬೇಕು. ಸಾವಿರಾರು ವರ್ಷಗಳಿಂದ ಈ ಧರ್ಮದ ಮೂಲಕ ಮೇಲ್ವರ್ಗದವರು ಕೆಳವರ್ಗದವರನ್ನು ಶೋಷಣೆ ಮಾಡಿಕೊಂಡು ಬಂದಿದ್ದಾರೆ’ ಎಂದು ಹೇಳಿದರು.

‘ಧರ್ಮ ಚಲನಶೀಲವಾಗಿರಬೇಕು. ಅದು ಮನುಷ್ಯನನ್ನು ಶೋಷಣೆ ಮಾಡುವ ಸಾಧನವಾಗಬಾರದು.  ಸಂವಿಧಾನವೇ ದೇಶದ ನಿಜವಾದ ಧರ್ಮ’ ಎಂದು ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ‘ಇನ್ನು ಎರಡು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ವಾಸಿಸುವ ಕೇರಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುತ್ತೇವೆ’ ಎಂದರು.

‘ಒಂದು ಕಾಲದಲ್ಲಿ ದಲಿತರ ಕೇರಿಗಳಲ್ಲಿ ನಾಯಿಗಳೂ ವಾಸ ಮಾಡಲು ಸಾಧ್ಯವಾಗದ ಸ್ಥಿತಿ ಇತ್ತು. ಮೇಲ್ವರ್ಗದವರು ಈ ತಳ ಸಮುದಾಯದವರನ್ನು ಊರ ಹೊರಗೆ ಇಟ್ಟಿದ್ದರು’ ಎಂದರು.

‘ಗ್ರಾಮಗಳಲ್ಲಿ ಮಾರಿಹಬ್ಬದ ನೆಪದಲ್ಲಿ ಪ್ರಾಣಿಬಲಿ ಕೊಡುವ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ, ಉರುಳು ಸೇವೆ, ಮಡೆಸ್ನಾನದಂತಹ ಅಮಾನವೀಯ ಆಚರಣೆಗಳು ನಡೆಯುತ್ತಿವೆ. ಇವುಗಳನ್ನು ತೊಡೆದು ಹಾಕಲು ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರುತ್ತೇವೆ’ ಎಂದು ಹೇಳಿದರು.

‘ಕಾಯ್ದೆಯ ಕರಡು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಅದು ಪೂರ್ಣಗೊಂಡ ನಂತರ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸುತ್ತೇವೆ. ಪ್ರಜಾಪ್ರಭುತ್ವದ ರಕ್ಷಣೆಗೆ  ಇಂತಹ ಕಾಯ್ದೆಗಳನ್ನು ತರುವುದು ಅಗತ್ಯ ಇದೆ’ ಎಂದರು.

ಸಣ್ಣ ಕೈಗಾರಿಕೆ ಸಚಿವ ಸತೀಶ್ ಜಾರಿಕಿಹೊಳಿ ಮಾತನಾಡಿ, ‘ನಮ್ಮಲ್ಲಿ ಹಲವು ದಲಿತ ಸಂಘಟನೆಗಳಿವೆ. ಎಲ್ಲರೂ ಒಂದಾಗಿ ಹೋರಾಟ ನಡೆಸಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಬೃಹತ್ ಸಮಾವೇಶವನ್ನು ಶೀಘ್ರ  ಏರ್ಪಡಿಸುತ್ತೇವೆ. ಇದಕ್ಕೆ ಎಲ್ಲ ದಲಿತ ಸಂಘಟನೆಗಳು ಬೆಂಬಲ ನೀಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT