ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೊಬ್ಬ ಪೊಲೀಸ್‌ ಇದ್ದರೂ ಮಹಿಳೆ ರಕ್ಷಣೆ ಅಸಾಧ್ಯ

ಮಹಾರಾಷ್ಟ್ರ ಗೃಹ ಸಚಿವರ ವಿವಾದಿತ ಹೇಳಿಕೆ: ಬಿಜೆಪಿ ಖಂಡನೆ
Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಹುತೇಕ ಅತ್ಯಾಚಾರಗಳು ಮನೆಗಳಲ್ಲಿ ನಡೆ­ಯುತ್ತಿದ್ದು, ಪ್ರತಿ ಮನೆಗೂ ಪೊಲೀಸ­ರನ್ನು ನಿಯೋ­ಜಿಸ­­ಲಾಗದು ಎಂದು ಮಹಾರಾಷ್ಟ್ರದ ಗೃಹ ಸಚಿವ ಆರ್‌.ಆರ್‌. ಪಾಟೀಲ್‌ ವಿವಾದಿತ ಹೇಳಿಕೆ ನೀಡಿ, ಭಾರಿ ಟೀಕೆಗೆ ಗುರಿಯಾಗಿದ್ದಾರೆ.

ಬದಾಯೂಂ ಸಾಮೂ­­ಹಿಕ ಅತ್ಯಾ­ಚಾರ ಪ್ರಕರಣ ದೇಶ­ದಾದ್ಯಂತ ಹುಯಿ­ಲೆ­ಬ್ಬಿ­ಸಿರುವಾಗ, ಬುಧ­ವಾರ ವಿಧಾನ ಪರಿ­ಷತ್‌ನಲ್ಲಿ ನಡೆದ ಮಹಿಳೆಯರು ಮತ್ತು ದಲಿತರ ಮೇಲಿನ ಅಪರಾಧಗಳ ಚರ್ಚೆ­ಯಲ್ಲಿ ಸಚಿವರು ಉತ್ತರಿಸಿದರು.

ಅತ್ಯಾಚಾರಗಳಲ್ಲಿ ಶೇ 40ರಷ್ಟು   ತಿಳಿದವರಿಂದಲೇ, ಶೇ 6.34ರಷ್ಟು ತಂದೆ ಅಥವಾ ಸಹೋದರ­ರಿಂದ, ಶೇ 6.65­ರಷ್ಟು ಹತ್ತಿರದ ಸಂಬಂಧಿ­ಗಳಿಂದ ಹಾಗೂ ಶೇ 40ರಷ್ಟು ಮದುವೆಯ ಭರವಸೆ ಮೇಲೆ ನಡೆಯುತ್ತಿದೆ ಎಂದು ಅವರು ಅಂಕಿ–ಅಂಶಗಳನ್ನು ನೀಡಿದರು.

‘ನೈತಿಕ ಮೌಲ್ಯಗಳು ಕುಸಿದಿರುವ ಕಾರಣ ಅತ್ಯಾಚಾರದಂತಹ ಅಪರಾಧ­ಗಳು ನಡೆ­ಯುತ್ತಿವೆ’ ಎಂದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಮಹಾ­ರಾಷ್ಟ್ರದಲ್ಲಿ ಮಹಿಳೆಯರ ಮೇಲಿನ ಅಪ­ರಾಧ ಪ್ರಕರಣ ಕಡಿಮೆ ಇವೆ ಎಂದರು.

ಪಾಟೀಲ್‌ ಹೇಳಿಕೆಗೆ ವಿರೋಧಪಕ್ಷ­ಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. ಮಹಾ­ರಾಷ್ಟ್ರ ವಿಧಾನ ಪರಿಷತ್‌ನ ಬಿಜೆಪಿ ನಾಯಕ ವಿನೋದ್‌ ತಾವ್ಡೆ ಅವರು, ಮಹಿಳೆಯರ ವಿರು­ದ್ಧದ ಅಪರಾಧ­ಗಳನ್ನು ತಡೆಯಲು ಸಚಿವರು ವಿಫಲ­ರಾಗಿ­ರುವುದು ಅವರ ಹೇಳಿಕೆ­ಯಿಂದ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

‘ಪ್ರತಿ ಮನೆಗೆ ಪೊಲೀಸರನ್ನು ನೇಮಿಸ­ಬೇಕಿಲ್ಲ. ಒಬ್ಬ ಪೊಲೀಸ್‌ಗೆ 10 ಸಾವಿರ ಜನರನ್ನು ನಿಯಂತ್ರಿಸುವ ಸಾಮರ್ಥ್ಯ ನೀಡುವುದು ಗೃಹ ಸಚಿವರ ಕೆಲಸ. ಮಹಾರಾಷ್ಟ್ರ ಪೊಲೀಸರ ಮೇಲೆ ಇಂತಹ ಹೊಣೆ ಇದ್ದು, ಆದರೆ ಈಗಿನ ಗೃಹ ಸಚಿವರು ಅಧಿಕಾರ ವಹಿಸಿಕೊಂಡ ನಂತರ ಆ ಸ್ಥಿತಿ ಇಲ್ಲ‘ ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿ ಲೋಕಸಭಾ ಸದಸ್ಯೆ ಪೂನಂ ಮಹಾಜನ್‌ ಅವರೂ ಗೃಹ ಸಚಿವರನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌–ಎನ್‌ಸಿಪಿ ಸರ್ಕಾರ ಇರುವಷ್ಟು ದಿನ ಮಹಿಳೆಯರ ಮೇಲಿನ ಅಪರಾಧಗಳು ನಿಲ್ಲುವುದಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ನಾಲ್ಕು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆದು ಹೊಸ ಸರ್ಕಾರ ಬಂದಾಗ ಮಹಿಳೆಯರ ಸುರಕ್ಷತೆ ಸರ್ಕಾ­ರದ ಆದ್ಯತೆ ಆಗಲಿದೆ ಎಂದಿದ್ದಾರೆ.

ಪ್ರತಿಪಕ್ಷಗಳ ಟೀಕೆಗೆ ನಂತರ ಸುದ್ದಿ­­ಗಾರರ ಜೊತೆ ಮಾತನಾಡಿ ಉತ್ತ­ರಿಸಿ­ರುವ ಪಾಟೀಲ್‌, ತಮ್ಮ ಹೇಳಿಕೆ­ಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿ­ದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರವು ಮಹಿಳೆ­ಯರ ಸುರಕ್ಷತೆಗೆ ಆದ್ಯತೆ ನೀಡಿದ್ದು ಇದು ಮುಂದುವರಿಯಲಿದೆ ಎಂದು ಹೇಳಿ­ದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿ­ಸಲು ಸರ್ಕಾರ ಬದ್ಧವಾಗಿದ್ದು ಸಾಕಷ್ಟು ಸುರ­ಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT