ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಂಗಳದಲ್ಲಿ ಈಜುಕೊಳ ಇದ್ದರೆ.. ಆಹಾ!

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಿವೇಶನ ಚಿಕ್ಕದೇ ಇರಲಿ, ದೊಡ್ಡದೇ ಇರಲಿ, ಅಂದಚೆಂದದ ವಿನ್ಯಾಸಕ್ಕೇ ಪ್ರಾಶಸ್ತ್ಯ. ಮಿರಿಮಿರಿ ಮಿಂಚುವ ಸೋಫಾ ಸೆಟ್ ಇಡಲು ಹಜಾರ, ವಾಲ್‌ಮೌಂಟೆಡ್ ಎಲ್‌ಇಡಿ ಟಿ.ವಿ ಅಳವಡಿಸಲು ಒಂದು ಆಕರ್ಷಕವಾದ ಆಯಕಟ್ಟಿನ ಜಾಗ, ಡೈನಿಂಗ್ ಹಾಲ್ ಇತ್ಯಾದಿಗಳ ಒಳಾಂಗಣ ವಿನ್ಯಾಸದ ಯೋಜನೆಯು ಅಡಿಪಾಯ ಮೊದಲೇ ಸಿದ್ಧವಾಗುತ್ತದೆ. ಇದರೊಂದಿಗೆ ಮನೆಯಲ್ಲೊಂದು ಈಜುಕೊಳವೂ ಇದ್ದರೆ ಹೇಗೆ?

ಮನೆಯೆಂದರೆ ನಾಲ್ಕು ಗೋಡೆ, ಒಂದು ಸೂರು, ಅಗತ್ಯಕ್ಕೆ ತಕ್ಕ ಅಡುಗೆ ಮನೆ, ಬೆಡ್‌ರೂಮು, ಹಜಾರ, ಶೌಚಾಲಯ ಆದರೆ ಸಾಕು ಎಂದು ಹೇಳುವ ಕಾಲ ಈಗಿಲ್ಲ. ಟಿ.ವಿ ಧಾರಾವಾಹಿಗಳು, ಚಲನಚಿತ್ರಗಳಲ್ಲಿ ತೋರಿಸುವ ಮನೆಗಳ ವಿನ್ಯಾಸಗಳಿಗೆ ಮಧ್ಯಮವರ್ಗದವರು ಮನಸೋಲುತ್ತಿದ್ದಾರೆ.

ನಿವೇಶನ ಚಿಕ್ಕದೇ ಇರಲಿ, ದೊಡ್ಡದೇ ಇರಲಿ, ಅಂದಚೆಂದದ ವಿನ್ಯಾಸಕ್ಕೇ ಪ್ರಾಶಸ್ತ್ಯ. ಮಿರಿಮಿರಿ ಮಿಂಚುವ ಸೋಫಾ ಸೆಟ್ ಇಡಲು ಹಜಾರ, ವಾಲ್‌ಮೌಂಟೆಡ್ ಎಲ್‌ಇಡಿ ಟಿ.ವಿ ಅಳವಡಿಸಲು ಒಂದು ಆಕರ್ಷಕವಾದ ಆಯಕಟ್ಟಿನ ಜಾಗ, ಡೈನಿಂಗ್ ಹಾಲ್ ಇತ್ಯಾದಿಗಳ ಒಳಾಂಗಣ ವಿನ್ಯಾಸದ ಯೋಜನೆಯು ಅಡಿಪಾಯ ಮೊದಲೇ ಸಿದ್ಧವಾಗುತ್ತದೆ. ಇದರೊಂದಿಗೆ ಮನೆಯಲ್ಲೊಂದು ಈಜುಕೊಳವೂ ಇದ್ದರೆ ಹೇಗೆ?

ಇಂಥದೊಂದು ಆಲೋಚನೆ ಈಗ ಹಲವರಲ್ಲಿ ಬರುತ್ತಿದೆ!
ಒತ್ತಡದ ಬದುಕು, ವೃತ್ತಿ–ಜೀವನದ ಜಂಜಾಟಗಳಲ್ಲಿ  ಆರೋಗ್ಯ ನಿರ್ವಹಣೆ ಮಾಡಿಕೊಳ್ಳಲು, ತುಸು ಬೇಸರವಾದಾಗ ಮನಸ್ಸಿಗೆ ತುಸು ಉಲ್ಲಾಸ ನೀಡಲು, ಮೈಕೈ ನೋವಿದ್ದಾಗ ಈಜಾಟವಾಡಿ ದೇಹವನ್ನು ಹಗುರಗೊಳಿಸಿಕೊಳ್ಳಲು ಮನೆಯಂಗಳದಲ್ಲಿಯೇ ಚಿಕ್ಕದಾದರೂ ಒಂದು ಚೊಕ್ಕ ಈಜುಕೊಳ  ಇದ್ದರೆ ಹೇಗೆ?

ಈ ಆಸೆಯ ಬೆನ್ನುಹತ್ತಿದ ಕೆಲವರಾದರೂ ಮನೆಯಂಗಳದಲ್ಲಿ ಇತ್ತೀಚೆಗೆ ಪುಟ್ಟ ಈಜುಕೊಳ ಕಟ್ಟಿಸಿಕೊಳ್ಳುವತ್ತ ಚಿತ್ತ ಹರಿಸುತ್ತಿದ್ದಾರೆ. ಇದು ಈಗ ಪಾರಂಪರಿಕ ನಗರಿ ಮೈಸೂರಿಗೂ ಕಾಲಿಟ್ಟಿದೆ. ಜೆ.ಪಿ ನಗರದ ನಿವಾಸಿ, ದವಸ, ಧಾನ್ಯದ ವ್ಯಾಪಾರಸ್ಥರಾದ ವೀರೇಶ್ ಅವರು ಇಂತಹ ಪ್ರಯೋಗವನ್ನು ತಮ್ಮ ಮನೆಯಂಗಳದಲ್ಲಿ, ಅದೂ 45/60 ಅಡಿ ಉದ್ದ ಅಗಲದ ನಿವೇಶನದಲ್ಲಿಯೇ ಮಾಡಿದ್ದಾರೆ.

ಮೂಲತಃ ಪಿರಿಯಾಪಟ್ಟಣದವರಾದ ಅವರಿಗೆ ಬಾಲ್ಯದಿಂದಲೂ ಈಜಿನ ಹವ್ಯಾಸ. ಆದರೆ, ಎಂದಿಗೂ ಸ್ಪರ್ಧಾತ್ಮಕ ಈಜುಗಾರರಾಗಿರಲಿಲ್ಲ. ಮೈಸೂರಿನ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದಾಗ ಸರಸ್ವತಿಪುರಂ ಈಜುಕೊಳದಲ್ಲಿ ಪ್ರತಿದಿನ ಈಜಲು ಹೋಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ತಮ್ಮ ತಂದೆಯವರ ಅಂಗಡಿಯ ವ್ಯವಹಾರಕ್ಕೆ ಕೈಜೋಡಿಸಿದ್ದ ಅವರು, ಬಿಬಿಎಂ ಪದವಿ ಬಳಿಕ ಮೈಸೂರಿನಲ್ಲಿಯೇ ಉಳಿದುಕೊಂಡರು. ವ್ಯಾಪಾರವೂ ಕುದುರಿತು. ಜೊತೆಗೆ ಮನಸ್ಸಿನ ಮೂಲೆಯಲ್ಲಿ ಮನೆ ಕಟ್ಟಿಸಿದರೆ ಅದರಲ್ಲೊಂದು ಈಜುಕೊಳ ಕಟ್ಟಿಸಬೇಕು ಎಂಬ ಆಸೆಯೂ ದೊಡ್ಡದಾಯಿತು.

ಜೆ.ಪಿ.ನಗರದಲ್ಲಿ 24 ಚದರ ಅಳತೆಯ ನಿವೇಶನದಲ್ಲಿ ಮನೆ ಕಟ್ಟಿಸುವಾಗ ಎಂಜಿನಿಯರ್‌ಗೆ ಈಜುಕೊಳದ ವಿನ್ಯಾಸವನ್ನೂ ತಯಾರಿಸುವಂತೆ ಮೊದಲೇ ಹೇಳಿದರು. ಅದಕ್ಕಾಗಿ ಡ್ಯುಪ್ಲೆಕ್ಸ್‌ ಮನೆ ಕಟ್ಟಿಸಿ, ಕೆಳಗೆ ಈಜುಕೊಳಕ್ಕೆ ಜಾಗ ಉಳಿಯುವಂತೆ ನೋಡಿಕೊಂಡರು.

ನಿವೇಶನ ಮಧ್ಯಮ ಗಾತ್ರದ್ದೇ ಆಗಿದ್ದರೂ 17X12 ಅಡಿ ಅಳತೆಯ ಈಜುಕೊಳ ನಿರ್ಮಾಣವಾಗಿದೆ. 4.2 ಅಡಿ ಆಳದ ಕೊಳ ಇದು. ಬೇಸಿಗೆಯಲ್ಲಿ ಪ್ರತಿದಿನವೂ ಈಜುವ ವೀರೇಶ್ ಮತ್ತು ಅವರ ಇಬ್ಬರು ಮಕ್ಕಳು, ಉಳಿದ ಋತುಗಳಲ್ಲಿ ಭಾನುವಾರಕ್ಕೊಮ್ಮೆ ಈಜುವ ಹವ್ಯಾಸ ಇಟ್ಟುಕೊಂಡಿದ್ದಾರೆ.

‘ಮೊದಲಿನಿಂದಲೂ ಮನೆಯಲ್ಲೊಂದು ಈಜುಕೊಳ ಕಟ್ಟಿಸಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ₨3.8 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಿದ್ದೇನೆ. ನೀರಿನ ಶುದ್ಧೀಕರಣ, ನಿರ್ವಹಣೆಗೆ ಮಾಸಿಕ ₨400 ಖರ್ಚಾಗುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಮುಳುಗಿರುವ ನಮಗೆ ಮಾನಸಿಕ ಹಾಗೂ ದೈಹಿಕ ಒತ್ತಡ ನಿವಾರಣೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಈಜುಕೊಳ ತುಂಬಾ ಉಪಯುಕ್ತವಾಗಿದೆ. ಅದರಲ್ಲಿ ಈಜು ಸರ್ವಾಂಗಕ್ಕೂ ಕಸರತ್ತು ಒದಗಿಸುವ ವ್ಯಾಯಾಮವಾಗಿದೆ. ನಮ್ಮ ಕುಟುಂಬದ ಆರೋಗ್ಯ ಮತ್ತು ಬೇಸಿಗೆಯಲ್ಲಿ ಮನೆಯಲ್ಲಿ ತಂಪು ವಾತಾವರಣ ಕಾಪಾಡಿಕೊಳ್ಳಲು ಈ ಕೊಳದಿಂದ ಸಾಧ್ಯವಾಗಿದೆ’ ಎನ್ನುತ್ತಾರೆ ವೀರೇಶ್.

ಫಿಟ್‌ನೆಸ್‌ಗಾಗಿ ಮನೆಯಲ್ಲಿ ಟ್ರೆಡ್‌ಮಿಲ್, ಹೋಮ್‌ ಜಿಮ್ ಸಲಕರಣೆಗಳನ್ನು ತಂದಿಡುವವರ ಸಂಖ್ಯೆಯೂ ಸಾಕಷ್ಟಿದೆ. ಆದರೆ, ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಈಜುಕೊಳ ಕಟ್ಟಿಸಿಕೊಳ್ಳುವ ‘ಟ್ರೆಂಡ್‌’ ಬೆಂಗಳೂರಿನಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಈಗ ನಿಧಾನವಾಗಿ ಮೈಸೂರಿನಂತಹ 2ನೇ ಶ್ರೇಣಿ ನಗರಗಳಲ್ಲಿಯೂ ನಿಧಾನವಾಗಿ ಗೋಚರಿಸಲಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT