ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲವಿದು, ಮ್ಯೂಸಿಯಂ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ ತಾಲ್ಲೂಕಿನ ವರೂರ ಒಂದು ಪುಟ್ಟ ಹಳ್ಳಿ. ಗ್ರಾಮವನ್ನು ಸೀಳಿಕೊಂಡು ಹೋಗಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ. ಇದರ ಬದಿಯಲ್ಲಿಯೇ ಪುಟ್ಟದಾದ ಮನೆ. ಇಲ್ಲಿ ಅವಿಭಕ್ತ ಕುಟುಂಬದ ವಾಸ. ಮನೆಯೊಳಗಿನ ಪ್ರತಿಯೊಬ್ಬರೂ ಒಂದಿಲ್ಲೊಂದು ಹವ್ಯಾಸವನ್ನು ಹೊಂದಿದವರೇ. ಇವರ ಅಪರೂಪದ ಹವ್ಯಾಸಗಳನ್ನು ಆಲಿಸಲಾರಂಭಿಸಿದರೆ ಇದರೊಂದಿಗೆ ಕುತೂಹಲಕಾರಿ ಅಂಶಗಳು ಗರಿಬಿಚ್ಚಿಕೊಳ್ಳುತ್ತ ಹೋಗುತ್ತವೆ.

ಹಿರಿಯರಿಂದಲೇ ಶುರು ಮಾಡೋಣ. ಹಿರಾಸಾ ಮಿಸ್ಕಿನ್‌ ಭಾರತೀಯ ರೈಲ್ವೆ ಇಲಾಖೆಯಲ್ಲಿದ್ದರು. ಉಗಿಬಂಡಿಯ ಎಂಜಿನ್‌ಗೆ ಕಲ್ಲಿದ್ದಲು ಸುರಿಯುವುದು ಅವರ ಕಾಯಕವಾಗಿತ್ತು. ಅವರಿಗೆ ದೇಶ ಸುತ್ತುವುದು ಸಹಜವಾಗಿತ್ತು. ಒಮ್ಮೆ ಮನೆ ಬಿಟ್ಟರೆ ಇಂತಹದ್ದೇ ದಿನ ಮನೆಗೆ ಮರಳುತ್ತೇನೆ ಎನ್ನುವ ಸ್ಥಿತಿ ಇರಲಿಲ್ಲ. ವಾರಗಟ್ಟಲೇ ಮನೆಯಿಂದ ಹೊರಗೆ ಉಳಿಯಬೇಕಾಗುತ್ತಿತ್ತು. ಹೀಗಾಗಿ ಅವರು ಅಮೂಲ್ಯ ಸಮಯವನ್ನು ಹಳೆಯ ನಾಣ್ಯಗಳನ್ನು ಸಂಗ್ರಹಿಸಲು ಬಳಸಿಕೊಂಡರು. ದೇಶದ ವಿವಿಧೆಡೆಯಲ್ಲಿ ಜಾತ್ರೆ, ಮೇಳಗಳಿಗೆ ತೆರಳಿ ಅಲ್ಲಿ ಸಿಗುತ್ತಿದ್ದ ನಾಣ್ಯಗಳನ್ನು ಹೇಳಿದಷ್ಟು ಹಣ ಕೊಟ್ಟು ಖರೀದಿಸುತ್ತಿದ್ದರು. ಜಾತ್ರೆಯಲ್ಲಿ ಗುಜರಿ ರೂಪದಲ್ಲಿ ಕೆಲವಷ್ಟು ಅಪರೂಪದ ವಸ್ತುಗಳು ಮಾರಾಟವಾಗುತ್ತಿದ್ದವು.  ಹೆಚ್ಚಾಗಿ ನಾಣ್ಯಗಳು ದೊರೆತಿದ್ದು ಇಂಥ ಮೇಳಗಳಲ್ಲೇ.

ಹಿರಾಸಾ ನಿವೃತ್ತಿಯಾದ ನಂತರ ಅವರ ಪುತ್ರ ಮೋಹನ್‌ ಮಿಸ್ಕಿನ್ ಪುರಾತನ ನಾಣ್ಯಗಳ ಸಂಗ್ರಹ ಕಾರ್ಯವನ್ನು ಮುಂದುವರಿಸಿದರು. ಅವರೂ ದೇಶದ ವಿವಿಧೆಡೆ ಸುತ್ತಾಡಿ ರಾಜ ಮಹಾರಾಜರ ಕಾಲದ ನಾಣ್ಯಗಳನ್ನು ಸಂಗ್ರಹಿಸಿ ದಾಖಲೆಯನ್ನೇ ಮಾಡಿದರು. ಇದಕ್ಕೆ ಆರು ದಶಕಗಳೇ ಬೇಕಾದವು. ಇವರ ಬಳಿ ಎರಡು ಸಾವಿರ ವರ್ಷಗಳ ಹಿಂದೆ ಬಳಕೆಯಲ್ಲಿದ್ದ  ನಾಣ್ಯಗಳಿವೆ!

ನಾಣ್ಯಗಳ ಮ್ಯೂಸಿಯಂ

ಸಿಂಧುಸಂಸ್ಕೃತಿಯ ಸೀಸಾನಿಯಸ್, ಕ್ರಿ.ಶ. 200ರ ಕಾಲದ ಚಂದ್ರಗುಪ್ತ ಮೌರ್ಯ, 12ನೇ ಶತಮಾನದ ಹೊಯ್ಸಳ, 13ನೇ ಶತಮಾನದ ವಿಕ್ರಮಾದಿತ್ಯ, ದೇವಗಿರಿ, ದೆಹಲಿಯ ರಜಿಯಾ ಸುಲ್ತಾನಾ, ಕ್ರಿ.ಶ. 1335ರ ಹರಿಯಾಣದ ಕಾಂಗ್ರಾ, 14,15 ಹಾಗೂ 16ನೇ ಶತಮಾನದ ಬಹಮನಿ ಸುಲ್ತಾನರು, ಕ್ರಿ.ಶ.1798–1810ರ ಬಲರಾಮ ವರ್ಮ, 1566–1615ರವರೆಗೆ ಆಳ್ವಿಕೆ ನಡೆಸಿದ ಮೊಗಲ್ ಸಾಮ್ರಾಜ್ಯದ ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್‌, 1600ರ ಉತ್ತರ ಪ್ರದೇಶದ ದೌಲತಾಬಾದ್, ಹಂಪಿ ವಿಜಯನಗರ ಸಾಮ್ರಾಜ್ಯ (15,16,17ನೇ ಶತಮಾನ), ಬಾದಾಮಿ ಚಾಲುಕ್ಯರು, ವಿಜಯಪುರದ ಆದಿಲ್‌ಶಾಹಿ (1627), ಕೇರಳದ ತಂಜಾವೂರಿನ ತ್ರವನ್‌ ಕೊರೆ, 1842 ರಿಂದ 1920ರ ಗುಜರಾತದ ಕಛ್, ಭ್ರುಜ್, 1890ರ ಟಿಪ್ಪು ಸುಲ್ತಾನ್, ಮರಾಠರ ಸಾತಾರ ಸಂಸ್ಥಾನ, 1923ರ ಗ್ವಾಲಿಯರ್, ಪುಣೆಯ ಪೇಶ್ವೆ, 1910ರ ಹೈದರಾಬಾದ್ ನವಾಬರ ಕಾಲದ ನಾಣ್ಯಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಮಿಸ್ಕಿನ್ ಅವರ ಬಳಿ ಸೀಸ, ಮಿಶ್ರಲೋಹ, ಬುಲಿಯನ್, ಚಿನ್ನ, ತಾಮ್ರ, ಬೆಳ್ಳಿ, ಮಣ್ಣು ಹಾಗೂ ಖನಿಜಗಳಿಂದ ನಿರ್ಮಿಸಿದ ಅಪರೂಪದ ನಾಣ್ಯಗಳಿವೆ. ದೇಶ ವಿದೇಶಗಳ ಅಂಚೆ ಚೀಟಿಗಳನ್ನೂ ಸಂಗ್ರಹಿಸಿದ್ದಾರೆ.

ಚಾಲುಕ್ಯ ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹ ಸೊಸೈಟಿಯ ಅಧ್ಯಕ್ಷರೂ ಆಗಿರುವ ಮೋಹನ್‌ ಮಿಸ್ಕಿನ್‌ ಅವರು ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 150 ಶಾಲೆಗಳಲ್ಲಿ ನಾಣ್ಯ ಪ್ರದರ್ಶನ ಆಯೋಜಿಸಿ ಪುರಾತನ ನಾಣ್ಯಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದಾರೆ. ಶಾಲಾ ಕಾಲೇಜುಗಳ ಮುಖ್ಯಸ್ಥರು ಕರೆ ಮಾಡಿದರೆ ಸಾಕು, ಇವೆಲ್ಲವನ್ನೂ ಒಂದು ಪೆಟ್ಟಿಗೆಯಲ್ಲಿ ಹಾಕಿಕೊಂಡು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ಈ ಕೆಲಸವನ್ನು ಹಿರಾಸಾ ಅವರ ಮೊಮ್ಮಗ ಪವನ್ ಮಿಸ್ಕಿನ್‌ ಅವರು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಪವನ್ ಮಿಸ್ಕಿನ್‌ ಸಹ ಒಬ್ಬ ಹವ್ಯಾಸಿ ಹಕ್ಕಿ ವೀಕ್ಷಕ, ಅಷ್ಟೇ ಅಲ್ಲ ಉತ್ತಮ ಛಾಯಾಗ್ರಾಹಕ ಕೂಡ ಆಗಿದ್ದಾರೆ.

ಗ್ರಾಮದ ಪರಿಸರದಲ್ಲಿ ಕಾಣಿಸಿಕೊಳ್ಳುವ ಅಪರೂಪದ ಪಕ್ಷಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದ್ದಾರೆ. ಬಂಡಿಪುರ, ದಾಂಡೇಲಿ ಹಾಗೂ ಕೈಗಾ ಬರ್ಡ್‌ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಹೊಸ ಹಕ್ಕಿಗಳನ್ನು ಗುರುತಿಸಿದ್ದಾರೆ.

150 ಬಗೆಯ ಪಾಪಾಸುಕಳ್ಳಿ
ವರೂರಿನ ಮಿಸ್ಕಿನ್‌ ಅವರ ಮನೆಯಂಗಳದಲ್ಲಿ 100 ಬಗೆಯ ಪಾಪಾಸುಕಳ್ಳಿ ಪ್ರಬೇಧಗಳಿವೆ. ಒಂದೇ ತೆರನಾದ ಮಣ್ಣಿನ ಕುಡಿಕೆಗಳನ್ನು ಇಟ್ಟು ಬಗೆ ಬಗೆಯ ಪಾಪಾಸು ಕಳ್ಳಿಗಳನ್ನು ಬೆಳೆಯಲಾಗಿದೆ. ಇವುಗಳಲ್ಲಿ ವಿದೇಶಗಳಲ್ಲಿ ಬೆಳೆಯುವ ಅಪರೂಪ ಪಾಪಾಸುಕಳ್ಳಿಗಳಿದ್ದು, ಅವು ಕಂದು, ಹಳದಿ ಹಾಗೂ ಕೆಂಪು ಬಣ್ಣದ ಮೊಗ್ಗಿನಂತಹ ಹೂವು ಬಿಟ್ಟು ನೋಡುಗರ ಕಣ್ಮನ ಸೆಳೆಯುತ್ತಿವೆ. ಮನೆಯಂಗಳದಲ್ಲಿ ಆಲಂಕಾರಿಕ ಸಸ್ಯಗಳನ್ನು ಬೆಳೆಸಲಾಗಿದೆ. ಹೂವಿನ ಸಸಿಗಳಿಗಂತೂ ಲೆಕ್ಕವೇ ಇಲ್ಲ. ಅಂತೆಯೇ ಇಲ್ಲಿ ಹಲವು ಬಗೆಯ ಹಕ್ಕಿಗಳು ಮನೆ ಮಾಡಿವೆ. ಸಾಲದು ಎನ್ನುವಂತೆ ಹಕ್ಕಿಗಳಿಗೆ ಮನೆಯೊಳಗೆ ಹಾಗೂ ಹಿತ್ತಲಲ್ಲಿ ಗೂಡು ಕಟ್ಟಿಕೊಟ್ಟಿದ್ದಾರೆ. ಮನೆಯೊಳಗೂ ಹಕ್ಕಿಗೂಡುಗಳು ತುಂಬಿಕೊಂಡಿದ್ದು, ಅವು ಎಷ್ಟೇ ಕಸ ತಂದು ಚೆಲ್ಲಿದರೂ ಅವುಗಳನ್ನು ಓಡಿಸುವ ಗೋಜಿಗೆ ಮನೆಯವರು ಹೋಗಿಲ್ಲ. ಅವುಗಳಿಗೆ ನಿತ್ಯ ಕಾಳು ಹಾಕಿ ತಮ್ಮೊಂದಿಗೆ ಅವುಗಳಿಗೂ ವಾಸಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ಸಾಹಿತ್ಯ ಕೃಷಿ
ಮಿಸ್ಕಿನ್‌ ಅವರ ಮಾತೃಭಾಷೆ ಸಾವಜಿ. ಮನೆ ಮಂದಿ  ಐದು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾರೆ. ಮೋಹನ್‌ ಮಿಸ್ಕಿನ್ ಅವರಂತೂ ಕವಿ ಹಾಗೂ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಕ್ಷತ್ರಿಯ ಮೋಡಿ, ಬ್ರಾಹ್ಮಿ, ಹಳಗನ್ನಡ, ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಗಳು ಅವರಿಗೆ ಹಾಲು ಕುಡಿದಷ್ಟೇ ಸಲೀಸು. ಅಧ್ಯಯನ ಪ್ರವೃತ್ತಿಯೇ ಅವರನ್ನು ಲೇಖಕರನ್ನಾಗಿ ರೂಪಿಸಿದೆ. ಅವರು ಅನೇಕ ಕವನ ಸಂಕಲನ ಹಾಗೂ ಪುಸ್ತಕಗಳನ್ನು ಹೊರತಂದಿದ್ದು, ಇದಕ್ಕೆ ಹಲವು ಪ್ರಶಸ್ತಿಗಳೂ ಸಿಕ್ಕಿವೆ.

ಅವಿಭಕ್ತ ಕುಟುಂಬ
ಹಿರಾಸಾ ಮಿಸ್ಕಿನ್‌ ಅವರು ನಗರ ಪ್ರದೇಶದಲ್ಲಿ ಕೆಲಸ ಮಾಡಿದ್ದರೂ ವೃದ್ಧಾಪ್ಯದಲ್ಲಿ ನೆಲೆ ಕಂಡು ಕೊಂಡಿರುವುದು ಹುಬ್ಬಳ್ಳಿಯಿಂದ 20 ಕಿ.ಮೀ ಅಂತರದಲ್ಲಿರುವ ವರೂರ ಹಳ್ಳಿಯಲ್ಲಿ. ಆರು ಜನ ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. 16 ಮೊಮ್ಮಕ್ಕಳು ಹಾಗೂ ಐದು ಜನ ಮರಿಮಕ್ಕಳು ಇದ್ದಾರೆ. ಪ್ರಸ್ತುತ 35 ಸದಸ್ಯರಿರುವ ತುಂಬು ಕುಟುಂಬ ಇವರದ್ದು.

ಅಜ್ಜನ ಬದುಕಿನ ಉಗಿಬಂಡಿಗೆ ಯಶಸ್ಸಿನ ರೂಪದ  ಸದಸ್ಯರ ಬೋಗಿಗಳು ಸೇರಿಕೊಳ್ಳುತ್ತಲೇ ಇವೆ. ಕುಟುಂಬದ ಸಾಧನೆಯು ಹೆಜ್ಜೆಗಳನ್ನಿಡುತ್ತ ಮುಂದೆ ಸಾಗುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT