ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಸಂತಸ ಹೆಚ್ಚಿಸುವ ಸಾಕುಪ್ರಾಣಿ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಖುಷಿ, ಉಲ್ಲಾಸ ಹಾಗೂ ಸದಾ ಚಟುವಟಿಕೆಯಿಂದ ಕೂಡಿರುವ ಒಂದು ಸುಂದರ ಮನೆ ಎನಿಸಿಕೊಳ್ಳಲು ಹತ್ತಾರು ಅಂಶಗಳಿರಬೇಕು. ಮನೆಯ ವಾಸ್ತು, ಬಣ್ಣ, ಕಟ್ಟಿದ ರೀತಿ, ಮನೆಯ ಎದುರಿಗೆ ಉದ್ಯಾನವನ, ಮನೆಯಲ್ಲಿ ಓಡಾಡುವ ಪುಟ್ಟ ಮಕ್ಕಳು.... ಜತೆಗೆ ಕೆಲವಾದರೂ ಸಾಕು ಪ್ರಾಣಿಗಳು ಇರಬೇಕು.

ಅದೊಂದು ಸುಂದರ ಮನೆ. ಎದುರಿಗೆ ಹೂದೋಟ ಕಣ್ಸೆಳೆಯು­ತ್ತಿದೆ. ಆ ಸೌಂದರ್ಯಕ್ಕೆ ಕಳಶವಿಟ್ಟಂತೆ ಹೂದೋಟದ ಮಧ್ಯೆ ಆಫ್ರಿಕನ್ ಲವ್ ಬರ್ಡ್ಸ್ ಗೂಡಿನೊಳಗೆ ಚಿಲಿಪಿಲಿಗುಟ್ಟುತ್ತಿವೆ.

ಮನೆಯ ಗೃಹಿಣಿ ಗಾಯತ್ರಿ  ಗಿಳಿಗಳಿಗೆ ಕಾಳುಗಳನ್ನು ತಿನ್ನಿಸುತ್ತಾ ಅವುಗಳನ್ನು ಮಾತನಾಡಿಸುತ್ತಿದ್ದಾರೆ. ಒಡತಿಯ ಮಾತಿಗೆ ಗಿಳಿಗಳೂ ಚಿಲಿಪಿಲಿಗುಟ್ಟತ್ತಾ ಪ್ರತಿಕ್ರಿಯಿಸುತ್ತಿವೆ. ಗೃಹಿಣಿಗೋ ಮೇರೆ ಮೀರಿದ ಸಂತೋಷ.

‘ನಂಗೆ ಈ ಮುದ್ದು ಗಿಣಿಗಳು ಪುಟ್ಟ ಮಕ್ಕಳಂತೆ. ಇವುಗಳನ್ನು ನೋಡುತ್ತಾ ದಿನಪೂರ್ತಿ ಸಂತೋಷದಿಂದ ಕಳೆಯುತ್ತೇನೆ’ ಎಂದು ಆಕೆ ನಕ್ಕು ಹಗುರಾದರು.

ವೃತ್ತಿಯಲ್ಲಿ ವೈದ್ಯರಾಗಿರುವ ಅರುಣಾ ದಂಪತಿಗೆ ಕ್ಲಿನಿಕ್‌ನಿಂದ ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದಾಗ ಮನಸ್ಸಿಗೆ ತುಸು ನಿರಾಳ ಎನಿಸುವುದು ಬಣ್ಣಬಣ್ಣದ ಗುಬ್ಬಚ್ಚಿಗಳ ಗೂಡು ವೀಕ್ಷಿಸಿದಾಗಲೆ.

ಅವರ ಮನೆಯ ಮುಂದೆ ಇರುವ ಎರಡು ಗೂಡುಗಳಲ್ಲಿ ಬಿಳಿ ಬಣ್ಣದ ಪುಟ್ಟ ಗುಬ್ಬಿಗಳು, ಹಸಿರು ಬಣ್ಣದ ನಾಲ್ಕೈದು ಗಿಳಿಗಳು ಸದಾ ಚಿಲಿಪಿಲಿಗುಟ್ಟತ್ತಾ ಸಮೀಪ ಹೋದವರ ಗಮನ ಸೆಳೆಯುತ್ತವೆ. ನೋಡುಗರ ಕಣ್ಣಿಗೆ ಮುದವನ್ನು ನೀಡುತ್ತವೆ.

ತಮ್ಮ ಮನೆಯ ಒಡೆಯರನ್ನು ಕಂಡ ಕೂಡಲೇ ಅವು ಕುಣಿದು ಕುಪ್ಪಳಿಸತೊಡಗಿದವು. ತಕ್ಷಣ ಮನೆಯೊಳಗಿದ್ದ ಪುಟ್ಟ ಬೆಕ್ಕೊಂದು ಮ್ಯಾವ್ ಎಂದು ಕೂಗಿಕೊಂಡು ಬಂದು ಡಾ. ಅರುಣಾ ಅವರ ಕಾಲಿನ ಸುತ್ತಾ ಸುತ್ತಲಾರಂಭಿಸಿತು. ಮನೆಯೊಡತಿಗೋ ಮುದ್ದು ಪ್ರಾಣಿ ಪಕ್ಷಿಗಳ ದರ್ಶನವಾಗುತ್ತಲೇ, ದಿನವಿಡೀ ಕ್ಲಿನಿಕ್‌ನಲ್ಲಿ ದುಡಿದ ಶ್ರಮವೆಲ್ಲಾ ಕ್ಷಣ ಮಾತ್ರದಲ್ಲೇ ಮಾಯ!

ಮಕ್ಕಳಿಬ್ಬರು ಓದಿ ಉದ್ಯೋಗ ಗಳಿಸಿ ವಿದೇಶದಲ್ಲಿದ್ದಾರೆ. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿರುವ ಸರೋಜಾ ಹಾಗೂ ಸತ್ಯನಾರಾಯಣ ದಂಪತಿಯದ್ದು ನಿವೃತ್ತಿ ಜೀವನ. ಹೊತ್ತು ಕಳೆಯುವುದೇ ಸಮಸ್ಯೆ. ಆಗ ಅವರ ಏಕತಾನತೆ ಹೋಗಲಾಡಿಸಿದ್ದು ನಾಯಿ, ಮೊಲ ಹಾಗೂ ಗಿಳಿಗಳು.

ಈ ಸಾಕು ಪ್ರಾಣಿ ಪಕ್ಷಿಗಳನ್ನು ಸಲಹುತ್ತಾ ಮಾತನಾಡಿಸುತ್ತಾ ಕಾಲ ಕಳೆಯುವುದೆಂದರೆ ವೃದ್ಧ ದಂಪತಿಗೆ ಏನೋ ಒಂದು ಖುಷಿ.
ಸಾಫ್ಟ್‌ವೇರ್ ದಂಪತಿ ರಮ್ಯಾ ಮತ್ತು ಗಿರೀಶ್ ಬೆಳಿಗ್ಗೆ ಆಫೀಸಿಗೆ ಹೋದರೆ ಮನೆಗೆ ಬರುವುದು ಸಾಯಂಕಾಲವೇ. ಅಷ್ಟು ಹೊತ್ತು ಅವರ ಮೂರು ವರ್ಷದ ಮಗ ಪಂಚಮ್‌ನನ್ನು ನೋಡಿಕೊಳ್ಳುವುದು ಮನೆಗೆಲಸದವಳು. ಆ ಪುಟ್ಟ ಮಗುವಿನ ಮೆಚ್ಚಿನ ಫ್ರೆಂಡ್ಸ್‌ ಎಂದರೆ ಲವ್ ಬರ್ಡ್ಸ್.
ಮಗು, ಆ ಗಿಳಿಗಳನ್ನು ಮಾತನಾಡಿಸುತ್ತಾ, ಆಟವಾಡಿಸುತ್ತಾ, ಅಪ್ಪ -ಅಮ್ಮ ಬರುವವರೆಗೂ ಖುಷಿಯಿಂದ ಇರುತ್ತದೆ.

ನಗರ ಪ್ರದೇಶಗಳಲ್ಲಿ ಸಾಕುಪ್ರಾಣಿಗಳನ್ನು, ಗಿಳಿಗಳನ್ನು ಸಾಕುವ ಟ್ರೆಂಡ್ ಹೆಚ್ಚುತ್ತಿದೆ. ಜನರು ತಮ್ಮ ಮನೆಯ ಒಂದು ಮೂಲೆಯಲ್ಲಿ ಅವಕ್ಕೆ ಒಂದು ಸ್ಥಾನ ನೀಡುತ್ತಾರೆ.

ಕೆಲವು ವರ್ಷಗಳ ಹಿಂದಿನವರೆಗೂ ಮನೆಯ ಅಂದವನ್ನು ಹೆಚ್ಚಿಸಲು ಅಕ್ವೇರಿಯಂ ತಂದಿಡುತ್ತಿದ್ದರು. ಆದರೆ ಈಗ ಜನರು ನಾಯಿ, ಬೆಕ್ಕು ಹಾಗೂ ವಿವಿಧ ರೀತಿಯ ಪಕ್ಷಿಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗದಂತೆ ನೋಡಿಕೊಳ್ಳುತ್ತಾರೆ. ಅದು ಬಾಡಿಗೆ ಮನೆಯಾದರೂ ಸರಿ ಸಾಕುಪ್ರಾಣಿಗಳನ್ನು ಸಾಕುವುದು ಎಂದರೆ ಕೆಲವರಿಗೆ ಅಚ್ಚುಮೆಚ್ಚಿನ ಹವ್ಯಾಸ.

ಆಹಾರ: ಮನೆ ಸದಸ್ಯರು ಕೆಲ ದಿನಗಳ ಮಟ್ಟಿಗೆ ಹೊರಗಡೆ ಹೋಗುವುದಾದರೆ ವಾಪಸ್‌ ಬರುವವರೆಗೂ ಸರಿಹೋಗುವಂತೆ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಶೇಖರಿಸಿಟ್ಟು ಹೋಗುವ ವ್ಯವಸ್ಥೆಯೂ ಇದೆ. ಉದಾಹರಣೆಗೆ ಅಕ್ವೇರಿಯಂನಲ್ಲಿರುವ ಮೀನುಗಳಿಗೆ ಕೆಲ ದಿನಗಳವರೆಗೆ ಅಕ್ವೇರಿಯಂ ಒಳಗಡೆ ಇಟ್ಟು ನೀಡುವ ಆಹಾರ ಅಕ್ವೇರಿಯಂ ಮಳಿಗೆಗಳಲ್ಲಿ ದೊರಕುತ್ತದೆ.

ಹೀಗೆ ನಗರ ಪ್ರದೇಶದ ಜನರಿಗೆ ತಮ್ಮ ಪೆಟ್ ಪ್ರಾಣಿ, ಪಕ್ಷಿಗಳನ್ನು ಸಾಕುವುದೆಂದರೆ ಫ್ಯಾಷನ್ ಜತೆಗೆ ಮಾನಸಿಕ ನೆಮ್ಮದಿ, ಸಂತೋಷ ನೀಡುವುದಾಗಿದೆ. ಗಾರ್ಡನಿಂಗ್, ಪ್ರಾಣಿಗಳನ್ನು ಸಾಕುವುದು ಉತ್ತಮ ಹವ್ಯಾಸವೆನಿಸಿದೆ. ಹಳ್ಳಿ ಪ್ರದೇಶದ ಜನರೂ ಇದಕ್ಕೆ ಹೊರತಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT