ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಉಳಿಯಲಿದೆ ಮಿಶ್ರತ್ಯಾಜ್ಯ!

ಕಸ ವಿಂಗಡಣೆ ಕಡ್ಡಾಯಗೊಳಿಸಿದ ಬಿಬಿಎಂಪಿ l ಗುತ್ತಿಗೆದಾರರು–ಅಧಿಕಾರಿಗಳಿಗೆ ಹೊಣೆ
Last Updated 25 ನವೆಂಬರ್ 2015, 20:36 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಲ್ಲಿ ಮಿಶ್ರತ್ಯಾಜ್ಯ ಶೇಖರಣೆ ಮಾಡಿಟ್ಟಿರುವಿರಾ? ಹಾಗಾದರೆ ಆ ತ್ಯಾಜ್ಯ ಮನೆಯಲ್ಲೇ ಉಳಿಯಲಿದೆ. ಬೇರ್ಪಡಿಸಿಕೊಟ್ಟರೆ ಮಾತ್ರ ಪೌರಕಾರ್ಮಿಕರು ಅದನ್ನು ಸಂಗ್ರಹಿಸಿಕೊಂಡು ಹೋಗಲಿದ್ದಾರೆ.

ಮೂಲದಲ್ಲೇ ಕಸ ಬೇರ್ಪಡಿಸಿ ಕೊಡುವುದನ್ನು ಈಗ ಕಡ್ಡಾಯಗೊಳಿಸಲಾಗಿದ್ದು, ಇನ್ನುಮುಂದೆ ಮನೆಗಳಿಂದ ಮಿಶ್ರತ್ಯಾಜ್ಯ ಕೊಟ್ಟರೆ ಅದನ್ನು ಪಡೆಯದಂತೆ ಪೌರಕಾರ್ಮಿಕರಿಗೆ ಸೂಚನೆ ನೀಡಲಾಗಿದೆ.

ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸುಬೋಧ್‌ ಯಾದವ್‌ ಈ ಸಂಬಂಧ ಬುಧವಾರ ಎಲ್ಲ
ವಲಯಗಳ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ನಡೆಸಿದರು. ‘ಕಸ ಬೇರ್ಪಡಿಸಿ ಕೊಡುವುದನ್ನು ಈ ಹಿಂದೆಯೇ ಕಡ್ಡಾಯ ಮಾಡಬೇಕಿತ್ತು. ಆಗ ಬೇರ್ಪಡಿಸಿ ತಂದ ತ್ಯಾಜ್ಯದ ಸಂಸ್ಕರಣೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ. ಈಗ ಅದಕ್ಕೆ ಅಗತ್ಯವಾದ ಮೂಲಸೌಕರ್ಯ ಸೃಷ್ಟಿಸಲಾಗಿದೆ’ ಎಂದು ಯಾದವ್‌ ತಿಳಿಸಿದರು.

‘ಪ್ರತಿದಿನ 2,350 ಟನ್‌ ಹಸಿ ತ್ಯಾಜ್ಯ ಸಂಸ್ಕರಣೆಗೆ ವ್ಯವಸ್ಥೆಯಾಗಿದೆ. 189 ವಾರ್ಡ್‌ಗಳಲ್ಲಿ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ತೆರೆಯಲಾಗಿದೆ. ಇನ್ನುಮುಂದೆ ಯಾವುದೇ ನೆಪ ಹೇಳದೆ ಪ್ರತ್ಯೇಕಿಸಿದ ಕಸವನ್ನಷ್ಟೇ ಸಂಗ್ರಹಿಸಬೇಕು’ ಎಂದು ಸೂಚನೆ ನೀಡಿದರು.

‘ಪೌರ ಘನತ್ಯಾಜ್ಯ (ವ್ಯವಸ್ಥಾಪನೆ ಮತ್ತು ನಿರ್ವಹಣೆ) ನಿಯಮ 2000’ ಪ್ರಕಾರ ಘನತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸುವುದು ಕಡ್ಡಾಯವಾಗಿದೆ. ನಗರದಲ್ಲಿ ಪ್ರತಿದಿನ ನಾಲ್ಕು ಸಾವಿರ ಟನ್‌ ಕಸ ಉತ್ಪಾದನೆ ಆಗುತ್ತದೆ. ಅದನ್ನು ಮಿಶ್ರಗೊಳಿಸಿ ತಂದರೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಅಸಾಧ್ಯವಾಗಿದೆ. ಇದುವರೆಗಿನ ಭೂಭರ್ತಿ ಘಟಕಗಳ ಸಮಸ್ಯೆಗೆ ಮಿಶ್ರಕಸವೇ ಕಾರಣವಾಗಿದೆ’ ಎಂದು ವಿವರಿಸಿದರು.

‘ಮಿಶ್ರ ಕಸ ತಂದಿದ್ದರಿಂದ ಟೆರ್ರಾ ಫರ್ಮಾ, ಎಂಎಸ್‌ಜಿಪಿ ಸೇರಿದಂತೆ ವಿವಿಧ ಘಟಕಗಳಲ್ಲಿ ಸಮಸ್ಯೆಯಾಗಿದೆ. ಹೀಗಾಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗದೆ ಎಲ್ಲೆಂದರಲ್ಲಿ ಸುರಿಯಲಾಗಿದೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಈ ಹಿಂದೆ ಹಲವು ಬಾರಿ ಸೂಚನೆ ನೀಡಿದ್ದರೂ ತ್ಯಾಜ್ಯ ವಿಂಗಡಣೆ ಮಾಡಿಲ್ಲ. ಈ ಕುರಿತು ಸಾರ್ವಜನಿಕರಲ್ಲಿ ಅರಿವನ್ನೂ ಮೂಡಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತ್ಯಾಜ್ಯ ವಿಲೇವಾರಿ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದ್ದು, ಗುತ್ತಿಗೆದಾರರಿಂದ ಸಹಕಾರ ಅಗತ್ಯವಾಗಿದೆ’ ಎಂದು ಅವರು ತಿಳಿಸಿದರು. ಈ ಮಧ್ಯೆ ರಾಜರಾಜೇಶ್ವರಿನಗರ ವಲಯ ಸೇರಿದಂತೆ ಹಲವೆಡೆ ಕಸ ವಿಂಗಡಣೆ ಮಹತ್ವ ಸಾರಲು ಕರಪತ್ರ ಹಂಚಲಾಗುತ್ತಿದೆ. ಆ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಆರಂಭಿಸಲಾಗಿದೆ.

ತ್ಯಾಜ್ಯ ವಿಂಗಡಣೆ: ಏನೇನು ನಿರ್ದೇಶನ?
* ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕ ಮಾಡಬೇಕು. ಈ ಸಂಬಂಧ ಸಾರ್ವಜನಿಕರಿಗೆ ಗುರುವಾರದಿಂದಲೇ ಅರಿವು ಮೂಡಿಸಬೇಕು

* ಪೌರಕಾರ್ಮಿಕರಿಗೆ ಅರಿವು ಮೂಡಿಸಿ, ಮನೆ–ಮನೆಗಳಿಂದ ವಿಂಗಡಿಸಿದ ತ್ಯಾಜ್ಯವನ್ನಷ್ಟೇ ಸಂಗ್ರಹಿಸಿ, ಪ್ರತ್ಯೇಕ ಕಂಟೇನರ್‌ಗಳಲ್ಲಿ ಸಂಗ್ರಹಿಸಬೇಕು. ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ, ಒಣತ್ಯಾಜ್ಯವನ್ನು ಸಂಗ್ರಹಣಾ ಕೇಂದ್ರಗಳಿಗೆ, ಸ್ಯಾನಿಟರಿ ತ್ಯಾಜ್ಯವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಬೇಕು

* ಪ್ರತಿದಿನ ಹಸಿ ಕಸ ಸಂಗ್ರಹಿಸಬೇಕು; ವಾರಕ್ಕೆ ಎರಡು ಬಾರಿ (ಬುಧವಾರ ಮತ್ತು ಭಾನುವಾರ) ಒಣತ್ಯಾಜ್ಯ ಸಂಗ್ರಹಿಸಬೇಕು

* ಕೇಂದ್ರೀಕೃತ ಸಂಸ್ಕರಣಾ ಘಟಕಗಳಿಗೆ ಹಸಿ ತ್ಯಾಜ್ಯವನ್ನಷ್ಟೇ ಸಾಗಿಸಬೇಕು

***

ಯಾವುದು ಹಸಿಕಸ?
ಅಡುಗೆ ತ್ಯಾಜ್ಯ, ಹಣ್ಣು–ತರಕಾರಿ ತ್ಯಾಜ್ಯ, ಮೊಟ್ಟೆ ಪದರ ಮತ್ತು ಸಾವಯವ ಕ್ರಿಯೆಯಲ್ಲಿ ಬಹುಬೇಗ ಕರಗುವ ಇತರ ಪದಾರ್ಥಗಳು.

ಯಾವುದು ಒಣಕಸ?
ಪೇಪರ್‌, ಪ್ಲಾಸ್ಟಿಕ್‌, ಲೋಹ, ಗ್ಲಾಸ್‌, ಥರ್ಮೊಕೊಲ್‌, ಫ್ಯಾಬ್ರಿಕ್‌, ಚರ್ಮ, ರೆಕ್ಸಿನ್‌, ಕಟ್ಟಿಗೆ, ಇ–ತ್ಯಾಜ್ಯ ಹಾಗೂ ಸಾವಯವ ಕ್ರಿಯೆಯಲ್ಲಿ ಕರಗದ ಇತರ ವಸ್ತುಗಳು
(ಇ–ತ್ಯಾಜ್ಯ: ಬ್ಯಾಟರಿ, ಕಂಪ್ಯೂಟರ್‌ ಭಾಗ, ವೈರ್‌, ಎಲೆಕ್ಟ್ರಾನಿಕ್‌ ಉಪಕರಣ, ಸೆಲ್‌ಫೋನ್‌, ಬಲ್ಬ್‌, ಟ್ಯೂಬ್‌ಲೈಟ್‌, ಸಿಎಫ್‌ಎಲ್‌)

ಯಾವುದು ಸ್ಯಾನಿಟರಿ ತ್ಯಾಜ್ಯ?
ಸ್ಯಾನಿಟರಿ ನ್ಯಾಪ್ಕಿನ್‌, ಡೈಪರ್‌, ರಕ್ತ ಇಲ್ಲವೆ ಕೀವದಿಂದ ಕೊಳೆಯಾದ ಯಾವುದೇ ಬಗೆಯ ಬಟ್ಟೆ, ನ್ಯಾಪ್ಕಿನ್‌, ಡೈಪರ್‌ ಇಲ್ಲವೆ ಬ್ಯಾಂಡೇಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT