ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಪಶು ಆಹಾರ

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮಾರುಕಟ್ಟೆಯಲ್ಲಿ ದೊರೆಯುವ ಪಶು ಆಹಾರದಲ್ಲಿ ಗುಣಮಟ್ಟದ ಬಗ್ಗೆ ಖಾತ್ರಿ ಇರುವುದಿಲ್ಲ. ಆದ್ದರಿಂದ ರೈತರೇ ಖುದ್ದಾಗಿ ಈ ಆಹಾರವನ್ನು ತಯಾರಿಸಿಕೊಳ್ಳಬಹುದಾಗಿದೆ. ಪೇಟೆಯಲ್ಲಿ ಸಿಗುವ ಪಶು ಆಹಾರಕ್ಕೆ ಕೆ.ಜಿಯೊಂದಕ್ಕೆ 18 ರಿಂದ 20 ರೂಪಾಯಿಯಾದರೆ, ಮನೆಯಲ್ಲಿ ತಯಾರಿಸುವ ಆಹಾರಕ್ಕೆ 15 ರಿಂದ 16 ರೂಪಾಯಿ ತಗಲುವ ಜೊತೆಗೆ ರಾಸುಗಳ ಆರೋಗ್ಯವೂ ಸುಧಾರಿಸುತ್ತದೆ.  
                                     
ಹೆಚ್ಚು ಬಂಡವಾಳವಿಲ್ಲದೇ, ದೊಡ್ಡ ಕಾರ್ಖಾನೆಗಳ ಅಗತ್ಯವಿಲ್ಲದೇ, ಗ್ರೈಂಡರ್, ಪಲ್ವರೈಜರ್ ಅಥವಾ ಮಿಕ್ಸರ್‌ನ ಅವಶ್ಯಕತೆಯೂ ಇಲ್ಲದೇ ಸ್ಥಳೀಯವಾಗಿ ಲಭ್ಯವಿರುವ ಕಚ್ಚಾವಸ್ತುಗಳಿಂದಲೇ ಖುದ್ದಾಗಿ ತಯಾರಿಸಿಕೊಳ್ಳಬಹುದು. ಸ್ವಲ್ಪ ಹೆಚ್ಚುವರಿ ಶ್ರಮ ಬೇಕಾದರೂ, ಸಿಕ್ಕುವ ಪ್ರಯೋಜನ ಬಲು ದೊಡ್ಡದು.
ಪಶು ಆಹಾರಕ್ಕೆ ಮುಖ್ಯವಾಗಿ ಬೇಕಾಗುವ ಕಚ್ಚಾಪದಾರ್ಥಗಳೆಂದರೆ ಏಕದಳ ಆಹಾರ ಧಾನ್ಯಗಳಾದ- ಮೆಕ್ಕೆಜೋಳ, ಜೋಳ, ರಾಗಿ, ನವಣೆ, ಸಜ್ಜೆ ಇತ್ಯಾದಿ; ಉಪ ಉತ್ಪನ್ನಗಳಾದ ಗೋಧಿಬೂಸ, ರವೆಬೂಸ, ಅಕ್ಕಿತೌಡು, ದ್ವಿದಳ ಧಾನ್ಯದ ಪುಡಿ ಇತ್ಯಾದಿ ಹಾಗೂ ಎಣ್ಣೆಕಾಳು ಹಿಂಡಿ, ಶೇಂಗಾಹಿಂಡಿ, ಹತ್ತಿಹಿಂಡಿ, ಸೋಯಾಹಿಂಡಿ, ಎಳ್ಳುಹಿಂಡಿ, ಸಾಸಿವೆ ಹಿಂಡಿ, ತೆಂಗಿನ ಹಿಂಡಿ ಇತ್ಯಾದಿ.

ಈ ಮೂರು ವಿಧದ ಕಚ್ಚಾಪದಾರ್ಥಗಳಲ್ಲಿ ಮೊದಲು ತಿಳಿಸಿರುವ ಧಾನ್ಯಗಳ ಪುಡಿ ಶೇ 35 ಭಾಗ, ಉಪ ಉತ್ಪನ್ನಗಳು ಶೇ 30, ಎಣ್ಣೆಕಾಳು ಹಿಂಡಿ ಇತ್ಯಾದಿ ಶೇ 30 ಭಾಗಗಳಿಗೆ ಶೇ 5 ಭಾಗವನ್ನು ಉಪ್ಪು ಹಾಗೂ ಲವಣಮಿಶ್ರಣ ಸೇರಿಸಿದರೆ ಪಶುಆಹಾರ ತಯಾರಾಗುತ್ತದೆ. ಮಾರುಕಟ್ಟೆಯಲ್ಲಿ ಇವೆಲ್ಲ ಪುಡಿಯ ರೂಪದಲ್ಲೂ ದೊರೆಯುತ್ತವೆ. ಕೃಷಿ ಇಲಾಖೆಯಿಂದ ಶೇ 50ರ ಸಹಾಯಧನದಲ್ಲಿ 30 ಸಾವಿರ ರೂಪಾಯಿ ಬೆಲೆಯ ಪಲ್ವರೈಜರ್ (ಧಾನ್ಯ ಪುಡಿಮಾಡುವ ಯಂತ್ರ) ಲಭ್ಯವಿದೆ. ಮೂರು ಅಶ್ವಶಕ್ತಿ ಸಾಮರ್ಥ್ಯ ಹಾಗೂ ಸಿಂಗಲ್ ಫೇಸ್‌ನಲ್ಲಿ ಓಡುವ ಯಂತ್ರದಿಂದ ಮೆಕ್ಕೆಜೋಳ, ರಾಗಿ, ಜೋಳ, ಹೆಸರು ಇತ್ಯಾದಿಗಳನ್ನು ಪುಡಿ ಮಾಡಿ ಹಸುಗಳಿಗೆ ಬೇಕಾದ ಪಶು ಆಹಾರ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

ಗುಣಮಟ್ಟ ಕಂಡುಹಿಡಿಯುವುದು ಹೀಗೆ...
ಕಚ್ಚಾಪದಾರ್ಥಗಳ ಬಣ್ಣ, ರುಚಿ, ವಾಸನೆ ಇತ್ಯಾದಿ ಭೌತಿಕ ಗುಣಗಳನ್ನು ನೋಡಿಯೇ ಗುಣಮಟ್ಟವನ್ನು ಅಂದಾಜಿಸಬಹುದು. ನಿರ್ದಿಷ್ಟವಾಗಿ ಹೇಳಲು ಕೆಳಕಂಡ ವಿಧಾನಗಳು ಸಹಕಾರಿ.

ತೇವಾಂಶ: ಪಶು ಆಹಾರಕ್ಕೆ ಬಳಸುವ ಕಚ್ಚಾಪದಾರ್ಥಗಳ ತೇವಾಂಶದ ಪ್ರಮಾಣ ಶೇ 10ಕ್ಕಿಂತ ಹೆಚ್ಚಾಗಿದ್ದರೆ ಪಶು ಆಹಾರ ಬೇಗ ಕೆಡುತ್ತದೆ. ಹಾಗಾಗಿ ತೇವಾಂಶದ ಬಗ್ಗೆ ಗಮನ ಅಗತ್ಯ. ಅಂಗೈಯಲ್ಲಿ ಒಂದಿಷ್ಟು ಧಾನ್ಯಗಳನ್ನು ತೆಗೆದುಕೊಂಡು ಮುಷ್ಟಿ ಮಾಡಿ ಅಮುಕಿದಾಗ ಕಾಳುಗಳು ಒಂದಕ್ಕೊಂದು ಅಥವಾ ಅಂಗೈಗೆ ಅಂಟಿಕೊಂಡರೆ ತೇವಾಂಶ ಶೇ 10ಕ್ಕಿಂತ ಅಧಿಕವಾಗಿದೆ ಎಂದರ್ಥ. ಅಂತಹ ಧಾನ್ಯಗಳನ್ನು ಮೂರು ದಿನ ಪ್ರಖರವಾದ ಬಿಸಿಲಿನಲ್ಲಿ ಏಳೆಂಟು ತಾಸು ಒಣಗಿಸಿ ನಂತರ ಉಪಯೋಗಿಸಬಹುದು.

ಮೆಕ್ಕೆಜೋಳದ ಗುಣಮಟ್ಟ ಪರೀಕ್ಷೆ: ಒಂದು ಲೀಟರ್ ಗಾತ್ರದ ಅಳತೆ ಮಾಪಕದಲ್ಲಿ ಚೆನ್ನಾಗಿ ಒಣಗಿದ, ಸ್ವಚ್ಛವಾಗಿರುವ ಮೆಕ್ಕೆಜೋಳ (ಇಡೀ ಕಾಳು) ತುಂಬಿ ತೂಕ ಮಾಡಿ. 700 ಗ್ರಾಂಗಿಂತ ಹೆಚ್ಚು ತೂಕ ಇದ್ದರೆ ಪಶು ಆಹಾರ ತಯಾರಿಕೆಗೆ ಯೋಗ್ಯ. ಎಚ್ಚರಿಕೆ ಅಗತ್ಯ: ಮಾರುಕಟ್ಟೆಯಲ್ಲಿ ಕಚ್ಚಾಪದಾರ್ಥಗಳನ್ನು ಕೊಳ್ಳುವಾಗ ಕಲಬೆರೆಕೆ ಬಗ್ಗೆ ಗಮನ ಅಗತ್ಯ. ಕಚ್ಚಾಪದಾರ್ಥಗಳು ಹಾಗೂ ತಯಾರಿಸಿದ ಪಶು ಆಹಾರವನ್ನು  ಸಂಗ್ರಹಿಸುವ ಕೊಠಡಿ ತೇವ ರಹಿತವಾಗಿರಬೇಕು. ಧಾನ್ಯವಿರುವ ಚೀಲಗಳನ್ನು ನೆಲದ ಮೇಲೆ ಇಡದೇ ಸ್ಲ್ಯಾಬ್ (ಇಟ್ಟಿಗೆ ಅಥವಾ ಮರದ ತುಂಡು) ನಿರ್ಮಿಸಿ ಅದರ ಮೇಲೆ ಇಡುವುದರಿಂದ ತೇವಾಂಶ ಹತೋಟಿಯಲ್ಲಿರುವುದು. ಇಲಿ-ಹೆಗ್ಗಣಗಳ ಉಪಟಳ ತಪ್ಪಿಸಲು ಕಿಂಡಿ-ಕಿಟಕಿಗಳನ್ನು ಮೆಶ್‌ನಿಂದ ಭದ್ರಪಡಿಸಿಕೊಳ್ಳುವುದು ಸೂಕ್ತ. ಸಿದ್ಧಪಡಿಸಿದ ಪಶು ಆಹಾರವನ್ನು ಮಳೆಗಾಲದಲ್ಲಿ ಗರಿಷ್ಠ 15 ದಿನ ಹಾಗೂ ಬೇಸಿಗೆಯಲ್ಲಿ 30 ದಿನಗಳವರೆಗೆ ಸಂಗ್ರಹಿಸಬಹುದು.

ಎಷ್ಟು ಹಾಲಿಗೆ ಎಷ್ಟು ಹಿಂಡಿ?
ಮಿಶ್ರತಳಿ ಹಸು-ಎಮ್ಮೆಗಳಿಗೆ ದಿನನಿತ್ಯ ಜೀವನಾಧಾರ ಆಹಾರವಾಗಿ ಒಂದು ಕೆ.ಜಿ. ಸಮತೋಲನ ಆಹಾರ ನೀಡಬೇಕು. ಹಾಲು ಕೊಡುವ ರಾಸುಗಳಿಗೆ ಉತ್ಪಾದನಾ ಆಹಾರವಾಗಿ ಪ್ರತಿ ಲೀಟರ್ ಹಾಲಿನ ಇಳುವರಿಗೆ ಅರ್ಧ ಕೆ.ಜಿ. ಆಹಾರ ಬೇಕು. ಅಂದರೆ ಹತ್ತು ಲೀಟರ್ ಹಾಲು ಕೊಡುವ ಹಸುವಿಗೆ ಜೀವನಾಧಾರ ಆಹಾರ ಒಂದು ಕೆ.ಜಿ. ಹಾಗೂ ಉತ್ಪಾದನಾ ಆಹಾರ ಐದು ಕೆ.ಜಿ. ಹೀಗೆ ದಿನಕ್ಕೆ ಆರು ಕೆ.ಜಿ. ಆಹಾರ ಬೇಕಾಗುತ್ತದೆ.

ಆದಾಗ್ಯೂ ಇದು ರಾಸುಗಳಿಗೆ ನೀಡುವ ವಿವಿಧ ಬಗೆಯ ಹಸಿರು ಮೇವು, ಒಣಮೇವು ಹಾಗೂ ಅವುಗಳ ಗುಣಮಟ್ಟವನ್ನು ಅವಲಂಬಿಸಿದೆ. ಸದಾ ಹಸಿರು ಮೇವು ನೀಡುವ ರಾಸುಗಳಿಗೆ ಮೂರು ಲೀಟರ್ ಹಾಲು ಉತ್ಪಾದನೆಗೆ ಒಂದು ಕೆ.ಜಿ. ಪಶು ಆಹಾರ ನೀಡಿದರೆ ಸಾಕು. ಆಹಾರ ಬದಲಾಯಿಸುವ ಸಂದರ್ಭ ಬಂದರೆ ದಿಢೀರಾಗಿ ಮಾಡದೇ ಕ್ರಮೇಣ ಮೊದಲಿನ ಅಹಾರದ ಜೊತೆ ಸ್ವಲ್ಪ ಸ್ವಲ್ಪ ಸೇರಿಸುತ್ತಾ ಹೆಚ್ಚಿಗೆ ಮಾಡಿ. ದಿಢೀರಾದರೆ ಅಜೀರ್ಣತೆ ಖಚಿತ.
ರಾಸುಗಳಿಗೆ ಎರಡು ಹೊತ್ತು ಕೊಡುವ ಒಟ್ಟು ಪಶು ಆಹಾರವನ್ನೇ ದಿನಕ್ಕೆ ಮೂರು ಹೊತ್ತು ನೀಡಿದರೆ ಜೀರ್ಣಕ್ರಿಯೆ ಹಾಗೂ ಹಾಲಿನ ಪ್ರಮಾಣ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT