ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಬೆಳೆದುಕೊಳ್ಳಿ ತರಕಾರಿ

ಹಸಿರು ಕ್ರಾಂತಿಯ ಹೊಸ ಅವತಾರ
Last Updated 28 ಜುಲೈ 2014, 10:18 IST
ಅಕ್ಷರ ಗಾತ್ರ

ತುಮಕೂರು: ಏರುತ್ತಿರುವ ತರಕಾರಿ ಧಾರಣೆಯಿಂದ ಕಂಗಾಲಾಗಿರುವ ಮಧ್ಯಮವರ್ಗ ನಿಧಾನವಾಗಿ ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆದುಕೊಳ್ಳುವ ಆಲೋಚನೆ ಮಾಡುತ್ತಿದೆ. ಮನೆಯ ಕೈತೋಟ– ತಾರಸಿ ತೋಟಗಳ ಮಾದರಿಯಲ್ಲಿ ಅಲ್ಲಲ್ಲಿ ಕಂಡು ಬರುತ್ತಿದ್ದ ಪ್ರಯತ್ನಕ್ಕೆ ಇದೀಗ ತೋಟಗಾರಿಕೆ ಇಲಾಖೆಯ ಬೆಂಬಲ ಸಿಕ್ಕಿದೆ.

ತೋಟಗಾರಿಕೆ ಇಲಾಖೆ ಜಾರಿಗೊಳಿಸಿದ ‘ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಯೋಜನೆ’ಗೆ ನಗರದಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ.

‘ನಗರದ ವಿವಿಧ ಬಡಾವಣೆಗಳ ೨೦೦೦ ಜನರಿಗೆ ೨೦ ಬ್ಯಾಚ್‌ನಲ್ಲಿ ತರಬೇತಿ ಕೊಡುವ ಉದ್ದೇಶ ಇತ್ತು. ಆದರೆ ಒಟ್ಟು ೨೧೫೦ ಕುಟುಂಬಗಳು ಆಸಕ್ತಿ ತೋರಿಸಿದವು. ಎಲ್ಲರಿಗೂ ತರಬೇತಿ, ತರಕಾರಿ ಬೀಜದ ಕಿಟ್ ಮತ್ತು ಮಣ್ಣು ಅಗೆಯುವ ಉಪಕರಣವನ್ನು ಉಚಿತವಾಗಿ ಒದಗಿಸಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ವಿಶ್ವನಾಥಗೌಡ ಹೇಳಿದರು.

ಕುಂಡ ಕೃಷಿ, ತಾರಸಿ ಕೃಷಿ, ಕೈತೋಟ, ಅಡುಗೆ ಮನೆ ನೀರಿನ ಸದ್ಬಳಕೆ, ಮಳೆ ನೀರು ಸಂಗ್ರಹ– ಬಳಕೆ, ತರಕಾರಿ ಗಿಡಗಳ ಪರಿಚಯ, ಹೈಡ್ರೋಫೋನಿಕ್ಸ್‌– ಏರೋಫೋನಿಕ್ಸ್‌ ಮತ್ತು ಸಾಯಿಲ್‌ಲೆಸ್‌ ಕಲ್ಚರ್ (ಮಣ್ಣಿಲ್ಲದ ಕೃಷಿ) ಪರಿಚಯ, ಗಿಡಗಳ ಪೌಷ್ಟಿಕಾಂಶ ನಿರ್ವಹಣೆ, ಅತಿ ಕಡಿಮೆ ಸ್ಥಳದಲ್ಲಿ ೪ ಜನರಿರುವ ಒಂದು ಕುಟುಂಬಕ್ಕೆ ವರ್ಷಪೂರ್ತಿ ತಾಜಾ ತರಕಾರಿ ಲಭ್ಯವಾಗುವ ಯೋಜನೆ ಕುರಿತು ತರಬೇತಿಯಲ್ಲಿ ಅಗತ್ಯ ಮಾಹಿತಿ ಒದಗಿಸಲಾಗಿದೆ.

‘ಕುಂಡಗಳಲ್ಲಿ ಬೆಳೆಯಬಹುದಾದ ಕ್ಯಾರೆಟ್, ಬೀಟ್‌ರೂಟ್, ಸೊಪ್ಪುಗಳ ಬಗ್ಗೆ ಜನರು ಹೆಚ್ಚು ಆಸಕ್ತಿ ತೋರಿದರು. ತರಕಾರಿ ಗಿಡಗಳೊಂದಿಗೆ ನಿತ್ಯೋಪಯುಕ್ತ ಔಷಧೀಯ ಸಸ್ಯಗಳ ಬಗೆಗೂ ಮಾಹಿತಿ ನೀಡಲಾಯಿತು. ಆಸಕ್ತರಿಗೆ ಗಿಡಗಳನ್ನೂ ಒದಗಿಸಲಾಯಿತು’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಸವಿತಾ ಪ್ರತಿಕ್ರಿಯಿಸಿದರು.

ಪರಿಶಿಷ್ಟ ಜಾತಿ– ಪಂಗಡಕ್ಕೆ ಸೇರಿದ ಒಟ್ಟು ೬ ಫಲಾನುಭವಿಗಳ ಮನೆಯಲ್ಲಿ ಮಾದರಿ ತಾರಸಿ ಕೈತೋಟ ನಿರ್ಮಾಣಕ್ಕೂ ಇಲಾಖೆ ನೆರವಾಗಿದೆ. ₨ ೬೦ ಸಾವಿರ ಅಂದಾಜು ವೆಚ್ಚದ ಈ ಯೋಜನೆಯಲ್ಲಿ ಶೇ ೯೦ರಷ್ಟು ಸಬ್ಸಿಡಿ ಇದೆ ಎಂದು ಅವರು ಮಾಹಿತಿ ನೀಡಿದರು.

ಮಾದರಿ ಯತ್ನ: ತೋಟಗಾರಿಕೆ ಇಲಾಖೆ ಕಚೇರಿಯ ತಾರಸಿ ಮೇಲೆ ಮತ್ತು ಮುಂದಿನ ಆವರಣದಲ್ಲಿ ಇದೀಗ ಮಾದರಿ ಕೈತೋಟ ಅರಳಿದೆ. ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವ ಜನರು ಕುಂಡ ಕೃಷಿ ಮತ್ತು ಮನೆ ಮುಂದಿನ ಅಲ್ಪ ಸ್ಥಳಾವಕಾಶದಲ್ಲಿ ತರಕಾರಿ ಸ್ವಾವಲಂಬಿಗಳಾಗುವ ಸಾಧ್ಯತೆಯನ್ನು ಕಣ್ಣಾರೆ ಕಾಣುತ್ತಿದ್ದಾರೆ. ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿ ಎದುರಿನ ಹೈಡ್ರೋಫೋನಿಕ್ಸ್‌ ತಂತ್ರದ ಕೃಷಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇಲಾಖೆ ಆವರಣದ ತೋಟದಲ್ಲಿರುವ ಕಡಿಮೆ ಸ್ಥಳಾವಕಾಶದಲ್ಲಿ ಅಗತ್ಯ ತರಕಾರಿ– ಸೊಪ್ಪು ಕೃಷಿಯ ತಾಕುಗಳನ್ನೂ ಜನರು ಉತ್ಸಾಹದಿಂದ ನೋಡುತ್ತಿದ್ದಾರೆ.

ಹಲವು ಸಮಸ್ಯೆಗೆ ಒಂದೇ ಪರಿಹಾರ: ನಗರದ ಹಲವು ಸಮಸ್ಯೆಗಳಿಗೆ ಕೈತೋಟ ಪರಿಹಾರವಾಗಬಲ್ಲದು. ಗಿಡಗಳಿಗೆ ನೀರು ಹಾಕಲೆಂದು ಮಳೆನೀರು ಸಂಗ್ರಹ ಅಳವಡಿಕೆ ಮತ್ತು ಬಚ್ಚಲು ನೀರಿಗೆ ಅಲ್ಪ ಸಂಸ್ಕರಣೆ ಆರಂಭವಾದರೆ ಅದು ಪರೋಕ್ಷವಾಗಿ ನಗರದ ನೀರು ಪೂರೈಕೆ ವ್ಯವಸ್ಥೆ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ಮನೆಯಲ್ಲಿ ಉತ್ಪತ್ತಿಯಾಗುವ ಜೈವಿಕ ತ್ಯಾಜ್ಯ– ಮನೆಯಲ್ಲಿಯೇ ಗೊಬ್ಬರವಾಗಿ ಗಿಡಗಳಿಗೆ ಬಳಕೆಯಾದರೆ ಕಸ ವಿಲೇವಾರಿ ವ್ಯವಸ್ಥೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಕೈತೋಟದಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹಕ್ಕೆ ಅಗತ್ಯ ವ್ಯಾಯಾಮ ಮತ್ತು ಉತ್ತಮ ಹವೆ ಲಭ್ಯ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿದಿನ ತಾಜಾ ತರಕಾರಿ ಸೇವನೆಯಿಂದ ಆರೋಗ್ಯದ ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಸುಸ್ಥಿರ ಕೃಷಿಯ ಬಗ್ಗೆ ಅಧ್ಯಯನ ನಡೆಸಿರುವ ಮಲ್ಲಿಕಾರ್ಜುನ ಹೊಸಪಾಳ್ಯ ಹೇಳುತ್ತಾರೆ.

ನಗರದ ಬಹುತೇಕ ಬಡಾವಣೆಗಳಲ್ಲಿ ಕೋತಿ ಕಾಟವಿದೆ. ಹೀಗಾಗಿ ನೆಲದಡಿ ಬೆಳೆಯುವ ಗೆಡ್ಡೆ ತರಕಾರಿಗಳು ಮತ್ತು ಸೊಪ್ಪನ್ನು ಮಾತ್ರ ಕೈತೋಟಗಳಲ್ಲಿ ಬೆಳೆಯಬೇಕು ಎನ್ನುವುದು ಅವರ ಸಲಹೆ.

ನಗರ ಕೃಷಿಗೆ ಹವಾನಾ ಮಾದರಿ
ಅದು ೧೯೯೦ನೇ ಇಸವಿ. ಜಗತ್ತಿನ ಸೂಪರ್‌ ಪವರ್‌ ಎನಿಸಿದ್ದ ಸೋವಿಯತ್ ರಷ್ಯಾ ಪತನ­ಗೊಂಡಿತ್ತು. ಮತ್ತೊಂದು ಸೂಪರ್‌ ಪವರ್ ಅಮೆರಿಕವನ್ನು ಎದುರು ಹಾಕಿಕೊಂಡಿದ್ದ ಕ್ಯೂಬಾಕ್ಕೆ ಆಹಾರ ಸರಬರಾಜು ಸ್ಥಗಿತಗೊಂಡಿತು. ಉಳಿದ ದೇಶಗಳು ಸಹಾಯ ನಿರಾಕರಿಸಿದ ಕಾರಣ ದೇಶದಲ್ಲಿ ಆಹಾರಕ್ಕೆ ಹಾಹಾಕಾರ.

ಹಸಿವಿನಿಂದ ಕಂಗಾಲಾದ ಕ್ಯೂಬಾ ರಾಜಧಾನಿ ಹವಾನಾ ನಗರದ ಜನ ಸಿಕ್ಕಸಿಕ್ಕಲ್ಲಿ ತರಕಾರಿ ಬೀಜ ಬಿತ್ತಿದರು. ಮನೆಗಳ ಬಾಲ್ಕನಿ, ತಾರಸಿ, ಫುಟ್‌ಪಾತ್‌ ಬದಿಯ ಪುಟ್ಟ ಜಾಗ, ಮನೆ ಮುಂದಿನ ಕುಂಡ ಅಷ್ಟೇಕೆ ಮನೆಯಂಗಳ­ದಲ್ಲಿಯೂ ತರಕಾರಿ ಕೃಷಿ. ಜನರ ಉತ್ಸಾಹಕ್ಕೆ ಇಂಬು ನೀಡಿದ ಅಲ್ಲಿನ ಸರ್ಕಾರ ನಗರ ಕೃಷಿ ಇಲಾಖೆ ಎಂಬ ಪ್ರತ್ಯೇಕ ಇಲಾಖೆಯನ್ನೇ ಆರಂಭಿಸಿತು. ತರಬೇತಿ, ಬಿತ್ತನೆ ಬೀಜ, ಗೊಬ್ಬರ ತಯಾರಿಕೆ, ನೀರಿನ ಬಳಕೆ ಬಗ್ಗೆ ಮಾಹಿತಿ ಒದಗಿಸಿತು. ಜನರ ಯತ್ನ– ಸರ್ಕಾರದ ಬೆಂಬಲದಿಂದ ಕ್ಯೂಬಾದಲ್ಲಿ ನಗರ ಕೃಷಿ ವ್ಯವಸ್ಥಿತವಾಗಿ ಬೆಳೆದಿದೆ. ದೇಶದ ಶೇ ೫೦ರಷ್ಟು ಮನೆಗಳು ತರಕಾರಿ ಸ್ವಾವಲಂಬಿಗಳಾಗಿವೆ. ಕೈತೋಟಗಳು ದೇಶವನ್ನೇ ಉಳಿಸಬಲ್ಲವು ಎನ್ನುವುದಕ್ಕೆ ಇಂದಿಗೂ ಹವಾನಾ ಸಿದ್ಧ ಮಾದರಿ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT