ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೇ ರಂಗಾಲಯ, ಅಲ್ಲೇ ‘ಜನ ಗಣ ಮನ’

Last Updated 6 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ನಮ್ಮ ಮನೆಯ ಆವರಣದಲ್ಲೇ ಪುಟ್ಟದೊಂದು ರಂಗಮಂದಿರ ಕಟ್ಟಿಕೊಂಡು ಆಗಾಗ ನಾಟಕ ಪ್ರದರ್ಶಿಸುವ ಕೆಲವು ಕುಟುಂಬಗಳು ನಗರದಲ್ಲಿ ಇವೆ.

ಅಂತಲ್ಲಿ ನಾಟಕಗಳ ತಾಲೀಮು ಇರುತ್ತದೆ, ರಂಗ ಶಿಬಿರ ನಡೆಯುತ್ತದೆ, ವಿಚಾರ ಸಂಕಿರಣ, ರಂಗಗೀತೆ ಪ್ರಾತ್ಯಕ್ಷಿಕೆಗಳು ಏರ್ಪಡುತ್ತವೆ. ಒಟ್ಟಾರೆ ನಿರಂತರ ರಂಗ ಚಟುವಟಿಕೆ ಇಂತಹ ಕುಟುಂಬಗಳ ಉದ್ದೇಶ. ಸಾಮಾನ್ಯವಾಗಿ ಇಡೀ ಕುಟುಂಬ ಅಥವಾ ಕುಟುಂಬದ ಬಹುತೇಕ ಸದಸ್ಯರು ನಾಟಕಕ್ಕೆ ಸಮರ್ಪಿಸಿಕೊಂಡಾಗ ರಂಗ ಕಾಯಕ ಹೀಗೆ ಗಿಜಿಗುಡುತ್ತದೆ.

ಅಂತಹ ರಂಗ ಕುಟುಂಬಗಳ ಪೈಕಿ ಮಾಗಡಿ ರಸ್ತೆ, ಬ್ಯಾಡರಹಳ್ಳಿ ಸಮೀಪದ ಕೆಂಪೇಗೌಡ ನಗರದ ‘ಸಂಸಾರ ಸದನ’ವೂ ಒಂದು. ಈ ರಂಗ ಕುಟುಂಬದ ಮಾಲೀಕರು ಅಲಿಯಾಸ್ ಈ ನಾಟಕ ಕಂಪನಿ ಮಾಲೀಕರು ಆಂಜನೇಯ. ತಮ್ಮ ಮನೆಯ ಕೆಳ ಅಂತಸ್ತನ್ನು ನಾಟಕಕ್ಕೆ ಮೀಸಲಿಟ್ಟಿರುವ ಈ ‘ಸದ್ದಿಲ್ಲದ ಸಾಧಕರು’ ನಾಟ್ಯರಾಣಿ ಶಾಂತಲಾ ಕನ್ನಡ ಕಲಾ ಸಂಘದ ಮೂಲಕ ಇಲ್ಲಿ ನಿರಂತರ ರಂಗ ಚಟುವಟಿಕೆ ನಡೆಸುತ್ತಾರೆ.

ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ದಿನ ಸಾಮಾನ್ಯವಾಗಿ ಬಹುತೇಕರಿಗೆ ಬಿಡುವು! ಆದರೆ ಈ ಸಂಸಾರ ಸದನದಲ್ಲಿ ಇಡೀ ದಿನ ಎರಡು ನಾಟಕ ಪ್ರದರ್ಶನ ಸೇರಿದಂತೆ ವಿಚಾರ ಸಂಕಿರಣ, ರಂಗಗೀತೆ ನಡೆದವು. ಜೀಜೀ (ಗೋವಿಂದೇಗೌಡ) ರಚಿಸಿ, ನಿರ್ದೇಶಿಸಿದ ಹಾಸ್ಯ ನಾಟಕ ‘ಜನ ಗಣ ಮನ’ ನಟ ನಟಿಯರ ಚುರುಕಾದ ಅಭಿನಯದಿಂದ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ‘ನಾಟಕಮನೆ’ ರಂಗ ತಂಡ ಈ ನಾಟಕ ಪ್ರಸ್ತುತ ಪಡಿಸಿತು.

ಅದೊಂದು ಮಧ್ಯಮವರ್ಗದ ಮನೆ. ಮನೆಯೊಡತಿ ದೋಸೆ ಹೊಯ್ಯುತ್ತಿರುತ್ತಾಳೆ. ಅನ್ನ ನೀಡಿರಿ ಎಂದು ಭಿಕ್ಷುಕ ಹೊರಗೆ ಗೋಗರೆಯುತ್ತಾನೆ. ಮನೆಯೊಡತಿಗೆ ಎಲ್ಲಿಲ್ಲದ ಸಿಟ್ಟು. ದಬಾಯಿಸಿ ಅಟ್ಟುತ್ತಾಳೆ. ಮನೆಯೊಳಗೆ ಏನು ನಡೆಯುತ್ತಿರಬಹುದು ಎಂದು ಭಿಕ್ಷುಕ ಕದ್ದು ಕೇಳಿಸಿಕೊಳ್ಳುತ್ತಾನೆ. ಭಿಕ್ಷುಕ ಇನ್ನೂ ತೊಲಗಿ ಹೋಗಿಲ್ಲ ಎಂದು ಕೋಪದಿಂದಲೇ ಮಹಿಳೆ ಮನೆಯಿಂದ ಹೊರಗೆ ಬಂದರೆ ಆಕೆ ಹೊಯ್ದಿರುವ ದೋಸೆಗಳ ಸಂಖ್ಯೆ ಸರಿಯಾಗಿ ಆರು ಎನ್ನುತ್ತಾನೆ. ಅಲಾ! ಇವನಿಗೆ ಹೇಗೆ ಗೊತ್ತಾಯಿತು.

ಇವನು ವಾಸ್ತು ಪಂಡಿತನೋ, ಪವಾಡ ಪುರುಷನೋ ಇರಬಹುದು ಎಂದು ಮಹಿಳೆ ಭಾವಿಸಿದಾಗ ಅದೇ ಮೂಢನಂಬಿಕೆ ಆ ಓಣಿಯಲ್ಲಿ ಹಬ್ಬುತ್ತದೆ! ಮುಂದೆ ಆ ಓಣಿಯ ಗೌಡನ ಮನೆ ಕಳವಾಗುತ್ತದೆ. ಕಳ್ಳನನ್ನು ಗುರುತಿಸುವ ಶಕ್ತಿ ಈ ಭಿಕ್ಷುಕನಿಗೆ ಇದೆ ಎಂದು ಮಹಿಳೆ ಹೇಳಿದ್ದನ್ನೇ ನಂಬಿ ಪಂಚಾಯಿತಿ ಸೇರುತ್ತಾರೆ. ಪವಾಡ ಪುರುಷನಾದ ಭಿಕ್ಷುಕನು ತನ್ನ ಗುಟ್ಟನ್ನು ಬಯಲಿಗೆಳೆಯಬಹುದೆಂದು ಊಹಿಸಿದ ನಿಜವಾದ ಕಳ್ಳ!

ಅಲ್ಲಿಗೆ ಓಡೋಡಿ ಬಂದು ತಾನೇ ಕದ್ದಿರುವುದಾಗಿ  ನಿವೇದಿಸಿಕೊಂಡು ಹೇಗಾದರೂ ಶಿಕ್ಷೆಯಿಂದ ಪಾರು ಮಾಡಿಸು ಎಂದು ಭಿಕ್ಷುಕನಲ್ಲಿ ಮನವಿ ಮಾಡುತ್ತಾನೆ. ಕಳ್ಳ ಬಚಾವಾಗುತ್ತಾನೆ. ಹೀಗೆ ಆ ಊರಿನಲ್ಲಿ ಭಿಕ್ಷುಕನ ಪವಾಡ ಹೆಚ್ಚುತ್ತ ಹೋದಂತೆ ಪರ ಊರಿನ ಪ್ರಜ್ಞಾವಂತನೊಬ್ಬ ಬಂದು ಜನರ ಮೂಢನಂಬಿಕೆಯನ್ನು ಬಯಲಿಗೆಳೆಯುತ್ತಾನೆ. ಮೂಢನಂಬಿಕೆ ನಿವಾರಣೆಯ ಆಶಯವನ್ನು ನಾಟಕ ಹೊಂದಿದೆ.

ನಿರೂಪಣಾ ವಿಧಾನ ಹಾಸ್ಯಮಯ. ನಟ ನಟಿಯರ ಪಾದರಸದಂತಹ ಚಲನೆ ಹಾಸ್ಯವನ್ನು ಸಮರ್ಥವಾಗಿ ಕಟ್ಟಿಕೊಡಬಲ್ಲದು. ನಾಟಕಮನೆ ಹಾಗೂ ಈ ಸಂಸಾರ ಸದನದಲ್ಲಿ ಪಳಗಿದ ಯುವ ಪ್ರತಿಭಾವಂತರು ನಾಟಕವನ್ನು ಸೊಗಸಾಗಿ ಕಟ್ಟಿಕೊಟ್ಟರು. ಹುಚ್ಚನ ಪಾತ್ರದಲ್ಲಿ ಹುಲಿಗೆಪ್ಪ ನಾಯಕ ಎಂಬ ಆಜಾನುಬಾಹು ನಟ ತಮ್ಮ ದೇಹ ಭಾಷೆಯಿಂದ ಗಮನ ಸೆಳೆದರು. ಮಾತಿನ ವರಸೆ ಚೆನ್ನಾಗಿತ್ತು. ಮಹಿಳೆಯ ಪಾತ್ರದಲ್ಲಿ ಮರಿಯಮ್ಮನಹಳ್ಳಿ ಡಿ.ಹನುಮಕ್ಕ ನೈಜವಾಗಿ ಅಭಿನಯಿಸಿದರು.

ತಮ್ಮ ಊರಿನ ಆಡುಭಾಷೆಯನ್ನು ಬೆಂಗಳೂರು ನಗರದ ಆಡುಭಾಷೆಗೆ ಕಸಿ ಮಾಡಿದ ಪರಿ ಸೊಗಸಾಗಿತ್ತು. ಅವರ ಊರಿನ ಆಡುಭಾಷೆ ಗೊತ್ತಿದ್ದ ಪ್ರೇಕ್ಷಕನಿಗೆ ಅದನ್ನು ಸವಿಯುವುದು ಒಂದು ಪರಿಯಾದರೆ, ನಗರದ ಪ್ರೇಕ್ಷಕರಿಗೆ ಇಲ್ಲಿನ ಮಧ್ಯಮವರ್ಗದ ಘಟವಾಣಿ ಹೆಂಗಸಿನ ತೀರಾ ಸಹಜ ಭಾಷೆ ಎನಿಸಿತ್ತು. ಅಭಿನಯವೂ ನೈಜವಾಗಿತ್ತು.

ಜೋಯಿಸ ಪಾತ್ರದಲ್ಲಿ ಯೋಗೀಶ, ಪಂಡಿತನ ಪಾತ್ರದಲ್ಲಿ ಆನಂದ ಡಿ. ಕಳಸದ ಅವರ ಅಭಿನಯ ಸಹಜವಾಗಿತ್ತು. ಗೌಡನಾಗಿ ಪುರುಷೋತ್ತಮ, ಕಳ್ಳನಾಗಿ ಸುರೇಶ, ಊರ ಜನರ ಪಾತ್ರಗಳಲ್ಲಿ ಕೆ.ಎಸ್.ಪ್ರದೀಪ, ಮಧು ನಡುವೆ, ಎಂ.ವೆಂಕಟೇಶ್, ಎಂ.ಜೆ.ಭರತ್ ಎಲ್ಲರೂ ಸಲೀಸಾಗಿ ಹಾಡಿದರು, ನರ್ತಿಸಿದರು, ದೇಹವನ್ನು ತಮ್ಮ ಇಚ್ಛಾನುಸಾರ ಕುಣಿಸಿ ನಗಿಸಿ ನಲಿಸಿದರು. ಪುಟ್ಟದೊಂದು ಸಂದೇಶ ಇಟ್ಟುಕೊಂಡು ನಗೆಯ ಹರಿವಿನಲ್ಲಿ ನಾಟಕವನ್ನು ಕೊಂಡೊಯ್ದರೆ ಬಡಾವಣೆಗಳ ಜನ ನಾಟಕ ನೋಡಲು ಮುಗಿಬೀಳುತ್ತಾರೆ ಎನ್ನುವುದು ಇಲ್ಲಿ ಸಾಬೀತಾಯಿತು.

ಕಳೆದ ಎರಡು ವರ್ಷಗಳಿಂದ ಈ ಸಂಸಾರ ಸದನದಲ್ಲಿ ನಾಟಕ ಚಟುವಟಿಕೆ ಶುರುವಾಗಿದೆ. ಬರಬರುತ್ತ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿದೆ. ಸಾಮಾನ್ಯವಾಗಿ ನಾಟಕವೊಂದಕ್ಕೆ ಸಾವಿರಾರು ಪ್ರೇಕ್ಷಕರು ಬೇಕಾಗುವುದಿಲ್ಲ. ಐವತ್ತರಿಂದ ಇನ್ನೂರು ಮುನ್ನೂರು ಪ್ರೇಕ್ಷಕರೇ ನಾಟಕ ವೀಕ್ಷಣೆಗೆ ಸೂಕ್ತ.

ಕಲಾಗ್ರಾಮ, ಹಂಪಿನಗರ ಗ್ರಂಥಾಲಯ, ಸೇವಾಸದನ, ಕೆ.ಎಚ್.ಕಲಾಸೌಧ, ರಂಗಶಂಕರ ಹೀಗೆ ಈ ಎಲ್ಲ ನಗರದ ಬಡಾವಣೆಗಳಲ್ಲಿ ನಾಟಕ ನೋಡಲು ಸೇರುವವರ ಸಂಖ್ಯೆ ಸಾಮಾನ್ಯವಾಗಿ 200ರಿಂದ 300. ಮನೆಗಳ ರಂಗಮಂದಿರಗಳಲ್ಲಿ ನೂರಿನ್ನೂರು ಮಂದಿ ಪ್ರೇಕ್ಷಕರು ಸೇರಿದರೂ ಸಾಕು, ಹೆಚ್ಚು ಖರ್ಚಿಲ್ಲದ ನಾಟಕ ರಂಗೇರುತ್ತದೆ. ನೆನಪಿಸಿಕೊಂಡಾಗಲೆಲ್ಲ ಒಂದೊಂದು ನಾಟಕ ಪ್ರದರ್ಶನ ನೀಡಿಬಿಡ ಬಹುದು. ಇಲ್ಲಿ ಆಗುತ್ತಿರುವುದೂ ಹಾಗೆಯೇ.

ಆಂಜನೇಯ ಅವರ ಮನೆಯವರು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ನೆರೆದಿರುವ ಪ್ರೇಕ್ಷಕರಿಗೆ ಅದರಲ್ಲೂ ಮಕ್ಕಳಿಗೆ ಬಿಸ್ಕತ್ತು, ಕಾಫಿ ಸರಬರಾಜು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದರ ಉಸ್ತುವಾರಿ ಮನೆಯ ಒಡತಿ ಪ್ರಭಾವತಿ ಆಂಜನೇಯ ಅವರದು. ಈ ಕಂಪನಿಯ ಒಬ್ಬ ಕಲಾವಿದರಾಗಿರುವುದರ ಜತೆಗೆ ಮ್ಯಾನೇಜರ್ ಕೆಲಸ ನಿಭಾಯಿಸುವವರು ಆಂಜನೇಯ ಅವರ ಪುತ್ರಿ ಶಾಂತಲಾ ಹಾಗೂ ಪುತ್ರ ಧನ್ವಂತ್ರಿ.

ಇನ್ನು ಈ ಸಂಸಾರ ಸದನದಲ್ಲೇ ಆಗಾಗ ವಾಸವಿರುವ ಯೋಗೀಶ, ಗೋವಿಂದೇಗೌಡ, ವೆಂಕಟೇಶ, ಹನುಮಕ್ಕ, ಸುರೇಶ ಎಲ್ಲರೂ ರಂಗಸೇವೆಗೆ ಕೈಗೂಡಿಸುತ್ತಾರೆ. ಅಂತಲೇ ಅಂದುಕೊಂಡಾಗಲೆಲ್ಲ ಸಲೀಸಾಗಿ ಇಲ್ಲಿ ನಾಟಕ ಪ್ರದರ್ಶನ ಆಗುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT