ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೆ ಮುದ್ದು ಪ್ರಾಣಿಗೊಂದು ಗೂಡು

Last Updated 9 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕನಸಿನ ಮನೆ ಎಂದೊಡನೇ ಅದು ಕೇವಲ ಮನುಷ್ಯರಿಗೇ ಆಗಬೇಕೆಂದೇನೂ ಇಲ್ಲ. ಮನೆ ಮಂದಿಯ ಮುದ್ದಿನ ಸಾಕು ಪ್ರಾಣಿಗೂ ಒಂದು ಸೂರು ಬೇಕಲ್ಲವೇ? ನೆಚ್ಚಿನ ಪ್ರಾಣಿಗೆ ಹೆಚ್ಚೇನೂ ಖರ್ಚಿಲ್ಲದೆ, ಸುಲಭ­ದಲ್ಲಿ ಸುಂದರ ಮನೆಯೊಂದನ್ನು ನಿರ್ಮಿಸುವ ಬಗೆ ಹೇಗೆ? ಇಲ್ಲಿದೆ ಕೆಲವು ಸಲಹೆ...

ಮುದ್ದಿಗಾಗಿ ಮನೆಗಳಲ್ಲಿ ಸಾಕುವ ಪ್ರಾಣಿಗಳು ಈಗ ಕುಟುಂಬದ ಸದಸ್ಯನಂತಾಗಿವೆ. ಹೀಗಾಗಿಯೇ ಕನಸಿನ ಮನೆಯಲ್ಲಿ ಸಾಕು ಪ್ರಾಣಿಗಳಿಗೂ ಪಾಲಿದೆ. ಮನೆಗಳು ದೊಡ್ಡದಿರಲಿ ಅಥವಾ ಸಣ್ಣದಿರಲಿ ಅಲ್ಲಿ ಸಾಕು ಪ್ರಾಣಿಗಳಿಗೂ ಸೂಕ್ತ ಸ್ಥಳಾವಕಾಶ ಮಾಡಬಹುದು.
ಕನಸಿನ ಮನೆ ಎಂದ ತಕ್ಷಣ ಪ್ರತಿಯೊಬ್ಬರ ಮನಸ್ಸಿ ನಲ್ಲೂ ಒಂದೊಂದು ಆಸೆ ಚಿಗುರೊಡೆಯುತ್ತದೆ. ಇಂಥ ಕನಸಿನ ಮನೆಯಲ್ಲಿ ಮನೆಯ ಸದಸ್ಯನಂತಿರುವ ಮುದ್ದಾದ ನಾಯಿ, ಮೊಲ, ಬೆಕ್ಕು, ಲವ್‌ಬರ್ಡ್ಸ್‌, ಗಿಳಿ, ಪಾರಿವಾಳ ಹಾಗೂ ಗಿನಿಪಿಗ್‌ಗಾಗಿ ಚಿಕ್ಕದಾಗಿ, ಚೊಕ್ಕವಾಗಿ ಕಾಣುವ ಪ್ರತ್ಯೇಕವಾದ ಸ್ಥಳ ಮೀಸಲಿ ಡಬೇಕು. ಅದು ಪ್ರಾಣಿಗಳಿಗೂ ಸುಖವಾಗಿರುತ್ತದೆ, ಮನೆಯ ಇತರೆ ಸದಸ್ಯರಿಗೂ ಹಿತಕರವಾಗಿರುತ್ತದೆ.

ಪ್ರಾಣಿ ಪ್ರಿಯರು ತಮ್ಮ ಮುದ್ದು ಪ್ರಾಣಿ, ಪಕ್ಷಿಗಳಿಗಾಗಿ, ಅವುಗಳನ್ನು ಜೋಪಾನವಾಗಿಡುವುದಕ್ಕಾಗಿ ಎಷ್ಟು ಬೇಕಾದರೂ ಹಣವನ್ನು ವ್ಯಯಿಸಲು ಸಿದ್ಧರಿರುತ್ತಾರೆ. ನಾಯಿ ಹಾಗೂ ಮೊಲಗಳನ್ನು ಸಾಕುವವರಲ್ಲಿ ಕೆಲವರು ಮನೆಯ ಹೊರಗಡೆ ಚಿಕ್ಕದಾಗಿ ಮನೆ ಅಥವಾ ಗೂಡುಗಳನ್ನು ಮಾಡುತ್ತಿದ್ದರು. ಮತ್ತೆ ಕೆಲವರು ಮನೆಗಳ ಒಳಭಾಗದಲ್ಲೇ ಅವುಗಳಿಗೆ ವ್ಯವಸ್ಥೆ ಮಾಡಿ ಕೊಡುತ್ತಾರೆ. ಪ್ರಾಣಿಗಳೆಂದರೆ ತುಂಬಾ ಪ್ರೀತಿ ಇರುವವರು ಮನೆಯಲ್ಲಿ ಎಲ್ಲಿ ಬೇಕಾದರೂ ಇರುವಂತೆ ಸ್ವಾತಂತ್ರ್ಯ ನೀಡಿರುತ್ತಾರೆ.

ಮನೆ ಕಾವಲಿಗಾಗಿಯೇ ನಾಯಿ ಸಾಕುವವರು ಮನೆಯ ಹೊರಭಾಗದಲ್ಲಿ, ಮಹಡಿ ಮೆಟ್ಟಿಲಿನ ಕೆಳಭಾಗದಲ್ಲಿ ನಾಯಿ ಗೂಡುಗಳನ್ನು ಮಾಡಬಹುದು. ಅದಕ್ಕಾಗಿ ಹೆಚ್ಚಿನ ಶ್ರಮ ಅಥವಾ ಹಣ ವೆಚ್ಚ ಮಾಡುವ ಅಗತ್ಯವಿಲ್ಲ. ಅತಿ ಕಡಿಮೆ ಖರ್ಚಿನಲ್ಲಿ ಇರುವ ಸ್ಥಳವನ್ನು ಸೂಕ್ತವಾಗಿ ಬಳಸಿಕೊಂಡು ನಾಯಿ ಅತ್ತಿತ್ತ ಹೊರಳಿ ಮಲಗಲು ಗೂಡಿನಲ್ಲಿ ಸ್ಥಳಾವಕಾಶ ಕಲ್ಪಿಸಬಹುದು.

ಮನೆಗಳ ಹೊರ ಭಾಗದಲ್ಲಿ ಸ್ವಲ್ಪ ಸ್ಥಳಾವಕಾಶ ಇರುವವರು ನೀರು ಬೀಳದ ಸ್ಥಳದಲ್ಲಿ ಕಬ್ಬಿಣದ ಬೋನುಗಳನ್ನು ಇಡಬಹುದು. ಇಲ್ಲವಾದಲ್ಲಿ ಎರಡು ಗೋಡೆಗಳ ಮಧ್ಯೆ ಇರುವ ಚಿಕ್ಕದಾದ ಸ್ಥಳದಲ್ಲಿ ಕಬ್ಬಿಣ ಅಥವಾ ಮರದ ಪಟ್ಟಿಗಳಿಂದ ನಿರ್ಮಿಸಿದ ಗೇಟ್‌ ಇಡುವ ಮೂಲಕ ಪ್ರಾಣಿಗಳ ವಿಶ್ರಾಂತಿಗೆ ಸ್ಥಳಾವಕಾಶ ಮಾಡಿಕೊಡಬಹುದು. ದೀರ್ಘಕಾಲ ಬಾಳಿಕೆ ಬರುವ ಪ್ಲಾಸ್ಟಿಕ್‌ ಶೀಟ್‌, ಮರದ ಹಲಗೆಗಳನ್ನು ಬಳಸಿಯೇ ಬಹಳ ಕಡಿಮೆ ಖರ್ಚಿನಲ್ಲಿ ಗೂಡುಗಳನ್ನು ನಿರ್ಮಿಸ ಬಹುದು ಎನ್ನುತ್ತಾರೆ ವಾಸ್ತುಶಿಲ್ಪಿ ಬಿ.ಚಿದಾನಂದ್‌.
‘ನಾನು ಸಾಮಾನ್ಯವಾಗಿ ಮನೆಗಳಿಗೆ ನೀಲನಕ್ಷೆ ಸಿದ್ಧಪಡಿಸಿಕೊಡುವಾಗ ಪ್ರಾಣಿ ಪ್ರಿಯರು ತಮ್ಮ ಮನೆಯ ಮುದ್ದು ಪ್ರಾಣಿಗಾಗಿ ಪ್ರತ್ಯೇಕ ವಾಸ ಸ್ಥಳಕ್ಕಾಗಿ ಬೇಡಿಕೆ ಮುಂದಿಡುತ್ತಾರೆ. ಅದಕ್ಕೆ ತಕ್ಕಂತೆಯೇ ಮನೆಯ ವಿನ್ಯಾಸವನ್ನು ರಚಿಸಿ ಕಟ್ಟಿಕೊಡುತ್ತೇವೆ. ಇಲ್ಲಿಯವರೆಗೆ ನಿರ್ಮಿಸಿದ ಬಹಳಷ್ಟು ಮನೆಗಳಲ್ಲಿ ಪ್ರಾಣಿಗಳಿಗಾಗಿ ಮೀಸಲಿಟ್ಟ ಗೂಡು, ಪುಟ್ಟ ಆವಾಸ ಸ್ಥಾನಗಳನ್ನು ಹೊರಭಾಗದಲ್ಲೇ ಮಾಡಿಕೊಟ್ಟಿದ್ದೇನೆ’ ಎನ್ನುತ್ತಾರೆ ಅವರು.

ಎಲ್ಲ ಮನೆಗಳಲ್ಲೂ ಸಾಕು ಪ್ರಾಣಿಗಳನ್ನು ಪ್ರೀತಿಸು ವವರೇ ಇರುತ್ತಾರೆ ಎಂದೇನಲ್ಲ. ಪ್ರಾಣಿಗಳೆಂದರೆ ದೂರ ಓಡುವವರು, ಪ್ರಾಣಿಗಳನ್ನು ಮುಟ್ಟಲೂ ಇಷ್ಟಪಡ ದವರೂ ಇರುತ್ತಾರೆ. ನಾಯಿ, ಪಕ್ಷಿಗಳನ್ನು ಸಾಕಿದ್ದರೂ ಅವು ಮನೆಗಳಲ್ಲಿ ಎಲ್ಲ ಕಡೆ ಇರುವುದು, ಸಂಚರಿ ಸುವುದು ಇಷ್ಟ ಇರುವುದಿಲ್ಲ.  ಹೀಗಾಗಿ ಅವುಗಳನ್ನು ಒಂದು ನಿಗದಿತ ವ್ಯಾಪ್ತಿಯಲ್ಲಿಯಷ್ಟೇ ಇರುವಂತೆ ಸೀಮಿತಗೊಳಿಸಲು ಬಯಸುತ್ತಾರೆ. ಅಂತಹವರಿ ಗಾಗಿಯೂ ಸಾಕಷ್ಟು ಆಯ್ಕೆಗಳಿವೆ.

ಚಿಕ್ಕ ನಾಯಿ ಹಾಗೂ ಬೆಕ್ಕುಗಳನ್ನು ಸಾಕುವವರು ಮನೆಯ ಒಳಭಾಗದಲ್ಲಿಯೇ ವ್ಯರ್ಥವಾಗಿರುವ ಅಥವಾ ಹೆಚ್ಚಾಗಿ ಬಳಕೆಗೇ ಬಾರದ ಸ್ಥಳವನ್ನು ಸಾಕು ಪ್ರಾಣಿಗಳ ವಿಶ್ರಾಂತಿಗೆ ಮೀಸಲಿಡಲು ಬಳಸಬಹುದು. ಉದಾಹರಣೆಗೆ ಹಜಾರದಲ್ಲಿ ಹಾಕಿರುವ ತುಸು ಎತ್ತರವಿರುವ ದಿವಾನ್‌ ಅಥವಾ ಮರದ ಉದ್ದದ ಕುರ್ಚಿಗಳ ಕೆಳಭಾಗದಲ್ಲಿಯೇ ಸಾಕು ಪ್ರಾಣಿಗೆ ವಿಶ್ರಾಂತಿ ತಾಣ ಮಾಡಿಕೊಡಬಹುದು. ಮಾರುಕಟ್ಟೆಯಲ್ಲಿ ಪ್ರಾಣಿಗಳಿಗಾಗಿಯೇ ನಿರ್ಮಿಸಿದ ಚಿಕ್ಕ ರೆಡಿಮೇಡ್‌ ಮನೆಗಳು ಸಿಗುತ್ತದೆ. ಅವನ್ನು ತಂದು ಸೋಫಾ, ದಿವಾನ್‌ ಕೆಳಗೆ ಜೋಡಿಸಿಡಬಹುದು.

ಮನೆ ದೊಡ್ಡದಾಗಿದ್ದು, ಖಾಲಿ ಜಾಗವೂ ಸಾಕಷ್ಟು ಇದ್ದಲ್ಲಿ ಕಡಿಮೆ ಬೆಲೆಯ ರಬ್ಬರ್‌ವುಡ್‌ ಅಥವಾ ಮನೆಯಲ್ಲಿಯೇ ವ್ಯರ್ಥವಾಗಿ ಬಿದ್ದಿರುವ ಮರದ ದೊಡ್ಡ ಮರದ ಪೆಟ್ಟಿಗೆಗಳಿಂದಲೇ ಪೊಮೆರಿಯನ್‌, ಪಗ್‌ ಮೊದಲಾದ ಚಿಕ್ಕಗಾತ್ರದ ನಾಯಿ ಹಾಗೂ ಬೆಕ್ಕುಗಳಿಗೆ ಬಾಕ್ಸ್‌ ಮನೆ ತಯಾರಿಸಬಹುದು.

‘ಇದು ನನ್ನ ಮನೆ/ಗೂಡು’
ಪ್ರಾಣಿಗಳ ಮನೆ ಎಂದ ಕೂಡಲೇ ಅದು ನೋಡಲು ಮನೆಯಂತೆಯೇ ಇರಬೇಕೆಂದಿಲ್ಲ. ನಿಮ್ಮ ಮುದ್ದಿನ ಶ್ವಾನ, ಮಾರ್ಜಾಲ ಅಥವಾ ಮೊಲ ‘ಇದು ನನ್ನ ಮನೆ/ಗೂಡು’ ಎಂದು ಸುರಕ್ಷತೆಯ ಭಾವದಲ್ಲಿ ವಿಶ್ರಮಿಸಲು ಅವಕಾಶ ನೀಡುವಂತಿದ್ದರೂ ಸಾಕು.

ತುಸು ಹಣ ವೆಚ್ಚ ಮಾಡಲು ಸಿದ್ಧರಿದ್ದರೆ, ಮರದ ದಪ್ಪ ಪಟ್ಟಿಗಳನ್ನು ಬಳಸಿಯೇ ವಿವಿಧ ವಿನ್ಯಾಸದಲ್ಲಿ ಗೂಡುಗಳನ್ನು ಪ್ರಾಣಿಗಳಿಗೆ ರಚಿಸಿಕೊಡಬಹುದು. ಪುಟ್ಟ ಮಕ್ಕಳಿಗೆ ಅವರ ಕೊಠಡಿಯಲ್ಲಿ ಬಂಕರ್‌ ನಿರ್ಮಿಸಿ ಕೊಡುವಂತೆಯೇ ಸಾಕು ಪ್ರಾಣಿಗಳಿಗೂ ಅದರ ಗೂಡನ್ನು ವಿನ್ಯಾಸ ಮಾಡಿಕೊಡಬಹುದು. ನಾಯಿ, ಬೆಕ್ಕು ಸಂಖ್ಯೆ ಹೆಚ್ಚಿದ್ದರೆ ಆ ಗೂಡಿನಲ್ಲಿಯೇ ಎರಡು ಮೂರು ಅಂತಸ್ತುಗಳನ್ನು ನಿರ್ಮಿಸಿ ಅವು ಹತ್ತಿಳಿಯಲು ಅನುಕೂಲವಾಗುವಂತೆ ಪುಟಾಣಿ ಮೆಟ್ಟಿಲುಗಳನ್ನೂ ಇಡಬಹುದು. ವಿಶ್ರಾಂತಿ ತೆಗೆದುಕೊಳ್ಳಲು ಪುಟಾಣಿ ಹಾಸಿಗೆಯನ್ನೂ ಹಾಕಬಹುದು.

ಪಕ್ಷಿಗಳ ಮನೆ

ಮನೆಗಳಲ್ಲಿ ಸಾಕುವ ವಿದೇಶಿ ಗಿಣಿ, ಪಾರಿವಾಳ ಹಾಗೂ ಲವ್‌ಬರ್ಡ್ಸ್‌ಗಳಿಗೆ ಈಗ ವಿನೂತನ ವಿನ್ಯಾಸದಲ್ಲಿ ಗೂಡು ನಿರ್ಮಿಸುವ ಪರಿಪಾಠ ಪ್ರಾರಂಭವಾಗಿದೆ.

ಮನೆ ಸುತ್ತು ಖಾಲಿ ಜಾಗ ಇದ್ದರೆ ಪಕ್ಷಿಪ್ರಿಯರು ಚಿಕ್ಕದಾಗಿ ಬೆಳೆಯುವ ಮರಗಳನ್ನು ಬೆಳೆಸುತ್ತಾರೆ. ಗಾಳಿ ಬೆಳಕು ಚೆನ್ನಾಗಿರುವಂತೆ ವ್ಯವಸ್ಥೆ ಮಾಡಿ ಅದರೊಳಗೆ ತಮ್ಮಿಷ್ಟದ ಪಕ್ಷಿಗಳನ್ನು ತಂದು ಸಾಕುತ್ತಾರೆ. ಈ ರೀತಿಯ ಮನೆಗಳನ್ನು ನಿರ್ಮಿಸಲು ಸ್ಥಳ ಹೆಚ್ಚಾಗಿ ಬೇಕಾಗುತ್ತದೆ. ಜತೆಗೆ ಹಣವೂ ಹೆಚ್ಚು ಖರ್ಚಾಗುತ್ತದೆ.  ಕೆಲವರು ಪಂಜರದಲ್ಲಿ ಪಕ್ಷಿಗಳನ್ನು ಸಾಕುತ್ತಾರೆ. ಇನ್ನು ಕೆಲವರು ಮರಿ ಇದ್ದಾಗಿನಿಂದ ಒಂದೇ ಕಡೆ ಇರುವಂತೆ ತರಬೇತಿ ನೀಡಿ, ತೆರೆದ ಗೂಡುಗಳನ್ನು ಮನೆಯ ಒಳಭಾಗದಲ್ಲೇ ನಿರ್ಮಿಸುತ್ತಾರೆ.

ಸದ್ಯ ನಾನಿರುವುದು ಬಾಡಿಗೆ ಮನೆಯಲ್ಲಿ. ಹಾಗಿದ್ದೂ ಮನೆಯಲ್ಲಿ 50ಕ್ಕೂ ಹೆಚ್ಚು ಪಾರಿವಾಳಗಳನ್ನು ಸಾಕಿದ್ದೇನೆ. ಮಹಡಿ ಮೇಲೆ ಅವುಗಳಿಗೆ ಗೂಡು ನಿರ್ಮಿಸಿದ್ದೇನೆ. ಹಣ್ಣುಗಳನ್ನು ಪ್ಯಾಕ್‌ ಮಾಡುವ ಮರದ ಪಟ್ಟಿಯ ಬಾಕ್ಸ್‌ಗಳನ್ನು ಬಳಸಿಯೇ  ಕೇವಲ ₨500ರಲ್ಲಿ ಗೂಡು ನಿರ್ಮಿಸಿದ್ದೇನೆ. ಅವು ಹೊರಗೆ ಹಾರಿ ಹೋದರೂ ಮತ್ತೆ ಮನೆಗೆ ಮರಳುವಂತೆ ತರಬೇತಿ ನೀಡಿದ್ದೇನೆ. ಬೆಳಿಗ್ಗೆ ತಿಂಡಿ ಹಾಕಿ ಹಾರಲು ಬಿಟ್ಟರೆ ಸಂಜೆವರೆಗೂ ಅವುಗಳು ಮನೆಗೆ ಬರುವುದಿಲ್ಲ. ಕತ್ತಲಾಗುತ್ತಿದ್ದಂತೆ ತಾವಾಗಿಯೇ ಗೂಡು ಸೇರುತ್ತವೆ. ಎನ್ನುತ್ತಾರೆ ಬೆಂಗಳೂರಿನ ಪಕ್ಷಿಪ್ರಿಯ ಪವನ್‌.

ಇದೇ ಗೂಡು ಮನೆಗಳಲ್ಲಿ ಪ್ರಾಣಿಗಳ ನೀರು ಹಾಗೂ ಆಹಾರದ ಪಾತ್ರೆ ಇಡಲೂ ಸ್ಥಳ ಮೀಡಲಿಡಬಹುದು. ಮನೆಯ ಯಾವುದಾದರೂ ಒಂದು ಕಡೆ ಎರಡು ಅಥವಾ ಮೂರು ಗೋಡೆಗಳು ಒಟ್ಟಾಗಿ ಸೇರಿಕೊಳ್ಳು ವಂತಿದ್ದರೆ ಆ ಜಾಗವನ್ನು ಬಳಸಿಕೊಂಡು ಮನೆ ಕಟ್ಟಬಹುದು.

ಆದರೆ ಮನೆಗಳ ಒಳಭಾಗದಲ್ಲಿ ಯಾವುದೇ ಪ್ರಾಣಿಗಳಿಗೆ ಮನೆ ಕಟ್ಟುವಾಗ ಮುನ್ನೆಚ್ಚರಿಕೆ ವಹಿಸಬೇಕು. ಕಾರಣ ಮನೆಯ ಒಳಗಿರುವ ಜೀವಿ ಸದಾ ಕಣ್ಣೆದುರು ಇರುವಂತೆ ನೋಡಿಕೊಂಡರೆ ಒಳ್ಳಯದು. ಮನೆಗೆ ಯಾರಾದರೂ ಬಂದಲ್ಲಿ ಅವುಗಳಿಗೂ ಕಾಣು ವಂತಿರಬೇಕು.

ಮನೆಗಳ ಹೊರಗೆ ಸ್ಥಳಾವಕಾಶ ಇಲ್ಲದವರು ಮನೆಗಳ ತಾರಸಿಯಲ್ಲಿ ಪ್ರಾಣಿಗಳಿಗೆ ಗೂಡು ನಿರ್ಮಿಸಬಹುದು. ಬೆಕ್ಕು ಹಾಗೂ ನಾಯಿಗಳಿಗೆ ಮನೆಗಳ ಮೇಲೆ ಗೂಡು ಕಟ್ಟಿದರೆ ಅವುಗಳಿಗೆ ಓಡಾಡಲು ತುಂಬಾ ಜಾಗ ಸಿಗುತ್ತದೆ. ಅಲ್ಲದೆ ಅವುಗಳಿಗೆ ಕಾಂಕ್ರೀಟ್‌ ಫ್ಲೋರಿಂಗ್‌ ಇದ್ದರೆ ತುಂಬಾ ಒಳ್ಳೆಯದು.

ಇದರಿಂದ ಸ್ಥಳವನ್ನು ಸ್ವಚ್ಛಗೊಳಿಸಲು ಅನುಕೂಲವಾಗುತ್ತದೆ. ರಬ್ಬರ್‌ ವುಡ್‌, ಪಿವಿಸಿ ಪಾರ್ಟಿಕಲ್‌ ಹಾಗೂ ಎಫ್‌ಆರ್‌ಪಿ ಇತರೆ ವಸ್ತುಗಳನ್ನು ಬಳಸಿ ಗೂಡುಗಳನ್ನು ಕಟ್ಟಬಹುದು. ರಬ್ಬರ್‌ ವುಡ್‌ ಬಳಸಿದರೆ ನಾಯಿಗಳು ಕಚ್ಚಿ ಚೂರು ಮಾಡುವ ಅಪಾಯವೂ ಇರುತ್ತದೆ.    

ನಾಯಿಗೆ ಮನೆ ಅಂಗಳದಲ್ಲಿ ಗೂಡು ನಿರ್ಮಿಸುವುದಾದರೆ ಕೆಲವು ಅಂಶ ಅರಿತಿರಬೇಕು:
*ನಾಯಿ ವಾಸಿಸುವ ಸ್ಥಳದಲ್ಲಿ ಗಾಳಿ, ಬೆಳಕು ಚೆನ್ನಾಗಿ ಬರುವಂತಿರಬೇಕು. 
*ಬಿಸಿಲು, ಮಳೆಯಿಂದ ರಕ್ಷಣೆ ಇರಬೇಕು.
*ಗೇಟ್‌ ಪಕ್ಕದಲ್ಲಿಯೇ ನಾಯಿ ಗೂಡು ನಿರ್ಮಿಸಬಾರದು. ಆದರೆ, ನಾಯಿಗೆ ಗೇಟ್‌ ಹಾಗೂ ರಸ್ತೆಯಲ್ಲಿ ನಡೆಯುವ ಘಟನೆಯ ದೃಶ್ಯಗಳು ಸ್ವಲ್ಪವಾದರೂ ಕಾಣುವಂತೆ ಇರಬೇಕು.
*ನಾಯಿ ಗೂಡು ಚಿಕ್ಕದಾಗಿದ್ದಲ್ಲಿ, ರಾತ್ರಿ ವೇಳೆ ಕೌಂಪೌಂಡ್‌ ಒಳಗೆ ಓಡಾಡಲು ಬಿಡಬೇಕು. ದಿನದ 24 ಗಂಟೆಯೂ ಗೂಡಿನಲ್ಲಿಯೇ ಕೂಡಿ ಹಾಕಿದರೆ ನಾಯಿಗಳ ದೇಹ, ಮನಸ್ಸಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂಬುದನ್ನು ನೆನಪಿಡಬೇಕು.
*ಮನೆಯೊಳಗಿನಿಂದಲೂ ಮುದ್ದಿನ ಪ್ರಾಣಿಯನ್ನು ಗಮನಿಸಲು ಅವಕಾಶವಾಗುವ ಎಡೆಯಲ್ಲಿಯೇ  ಪ್ರಾಣಿಗಳ ಗೂಡು ಅಳವಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT