ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೊಂದು ಕೈತೋಟ ಮಾಡಿ..

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ದಿನೇದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದಾಗಿ ನಾವು ಉಸಿರಾಡುತ್ತಿರುವ ಗಾಳಿಯೂ ಕಲುಷಿತವಾಗುತ್ತಿದೆ. ಹೀಗಾಗಿ ತಾವು ವಾಸಿಸುವ ಮನೆಗಳಲ್ಲಿ ಉಸಿರಾಡಲು ಒಳ್ಳೆಯ ಗಾಳಿ ಸಿಗಲೆಂದು ಸಾಕಷ್ಟು ಮಂದಿ ಮನೆಗಳಲ್ಲೇ ಪುಟ್ಟ ಕೈತೋಟ, ಟೆರೇಸ್‌ ಗಾರ್ಡೆನಿಂಗ್‌ಗಳ ಮೊರೆಹೋಗುತ್ತಿದ್ದಾರೆ.

ಅದಕ್ಕಾಗಿಯೇ ಮನೆಗಳಲ್ಲಿ ಕೈತೋಟ, ಲಾನ್‌ ಮತ್ತು ಪುಟ್ಟ ಗಿಡಗಳನ್ನು ನೆಡುವ ಮೂಲಕ ಮಿನಿ ಗಾರ್ಡನ್‌ಗಳನ್ನು ನಿರ್ಮಾಣ ಮಾಡಿಕೊಡವವರು ಸ್ವತಂತ್ರ ಮನೆಗಳನ್ನು ಹೊಂದಿರುವವರಿಗೆ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗೆಂದೇ ಪ್ರತ್ಯೇಕ ಉದ್ಯಾನಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಅದರಲ್ಲೂ ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಮನೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಆಕರ್ಷಕವಾಗಿ ಕಾಣುವ ಮತ್ತು ಕಡಿಮೆ ನಿರ್ವಹಣೆ ಮಾಡುವಂತಹ ಹೋಂ ಗಾರ್ಡನ್‌ಗಳನ್ನು ನಿರ್ಮಿಸುತ್ತಿದ್ದಾರೆ.

30/40  ಅಥವಾ 60/40 ನಿವೇಶನದಲ್ಲಿ ಮನೆ ಕಟ್ಟುವವರು ಮನೆಯ ಮುಂದೆ ಅಥವಾ ಮನೆಯ ಮೇಲೆ ಸುಲಭವಾಗಿ ಗಾರ್ಡನ್‌ ಮಾಡಿಕೊಳ್ಳಬಹುದು. ಅದಕ್ಕಾಗಿ ತುಂಬಾ ಸ್ಥಳದ ಅವಶ್ಯಕತೆ ಇಲ್ಲ. ಪಾರ್ಕಿಂಗ್‌ಗಾಗಿ ಬಿಟ್ಟಿರುವ ಸ್ಥಳದ ಪಕ್ಕದಲ್ಲಿ ಎರಡು ಅಡಿಗಳಷ್ಟು ಜಾಗ ಖಾಲಿ ಇದ್ದರೆ ಸಾಕು, ಅಲ್ಲಿ ಲೇಯರ್‌ ಗಾರ್ಡನಿಂಗ್‌ ಮಾಡಬಹುದು.

ಲೇಯರ್‌ ಗಾರ್ಡೆನಿಂಗ್‌
ಮನೆಯ ಮುಂದೆ, ಪಕ್ಕ ಅಥವಾ ಹಿಂಭಾಗದಲ್ಲಿ ಎರಡರಿಂದ ಮೂರು ಅಡಿ ಖಾಲಿ ಜಾಗ ಬಿಟ್ಟು, ಅಲ್ಲಿ ಎತ್ತರ ಬೆಳೆಯುವ ಮರಗಳನ್ನು ನಂತರ ಅದರ ಪಕ್ಕದಲ್ಲಿ ಕಡಿಮೆ ಎತ್ತರ ಬೆಳೆಯುವ ಗಿಡಗಳನ್ನು ನೆಡಬಹದು. ಹೀಗೆ ಮೂರರಿಂದ ನಾಲ್ಕು ಲೇಯರ್‌ಗಳಲ್ಲಿ ಗಿಡಗಳನ್ನು ನೆಟ್ಟು ಲೇಯರ್‌ ಗಾರ್ಡನ್‌ ಸೃಷ್ಟಿಸಬಹುದು. ಇದರಿಂದ ರಸ್ತೆಯಿಂದ ಬರುವ ದೂಳು, ಕೆಟ್ಟಗಾಳಿ, ಅತಿಯಾದ ಶಬ್ದವನ್ನು ತಡೆಯಬಹುದು. 

ಸಾಮಾನ್ಯವಾಗಿ ಪಾಮ್‌ (ತಾಳೆ) ಜಾತಿಗೆ ಸೇರಿದ ಮರಗಳನ್ನು ಜನರು ಹೆಚ್ಚಾಗಿ ನೆಡುತ್ತಾರೆ. ಇದರ ಬೇರುಗಳು ತುಂಬಾ ಮೃದುವಾಗಿದ್ದು, ಹೆಚ್ಚು ಅಗಲವಾಗಿ ಹರಡುವುದಿಲ್ಲ. ಇದರಿಂದಾಗಿ ಮನೆಯ ಪಾಯ ಮತ್ತು ಅಕ್ಕಪಕ್ಕದಲ್ಲಿ ನೆಡುವ ಗಿಡಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ. ಇದರಲ್ಲಿ ಹಲವು ವಿಧದ ಗಿಡಗಳು ದೊರೆಯುತ್ತವೆ. ಇವು ಕಡಿಮೆ ನೀರಿನಲ್ಲಿ ಜೀವಿಸುತ್ತವೆ. ಇದರೊಂದಿಗೆ ಮನೆಯ ಕಾಂಪೌಂಡ್‌ಗಳಿಗೆ ಕಂಬಿಗಳನ್ನು ಹಾಕಿ ಅದಕ್ಕೆ ಚಿಕ್ಕ ಚಿಕ್ಕ ಕುಂಡಗಳನ್ನು ನೇತುಹಾಕಿ ಗಿಡಗಳನ್ನು ನೆಡಬಹುದು. ಹೀಗೆ ನೇತುಹಾಕಿದ ಕುಂಡಗಳಲ್ಲಿ ಹೂವಿನ ಗಿಡಗಳು, ಸೊಪ್ಪು ಮತ್ತು ತರಕಾರಿ ಗಿಡಗಳನ್ನು ಬೆಳೆಯಬಹುದು.

ನೀರಿನ ಕೊಳ ಮತ್ತು ಉದ್ಯಾನ
ಮನೆಯ ಕಾಂಪೌಂಡ್‌ನ ಪಕ್ಕದಲ್ಲಿ ಮೂರರಿಂದ ಐದು ಅಡಿ ಜಾಗ ಇದ್ದರೆ, ಅಲ್ಲಿ ಕಾಂಪೌಂಡ್ ಇರುವಷ್ಟು ಉದ್ದ ನೀರಿನ ಕೊಳ ಹಾಗೂ ಗಿಡಗಳನ್ನು ಬೆಳೆಸಬಹುದು. ಇಷ್ಟೇ ಅಲ್ಲದೆ ಡ್ಯುಪ್ಲೆಕ್ಸ್‌ ಮನೆಗಳಲ್ಲಿ ಮಹಡಿ ಮೆಟ್ಟಿಲುಗಳ ಕೆಳಭಾಗದಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಚಿಕ್ಕ ಕೊಳಗಳನ್ನು ನಿರ್ಮಿಸಿ ಗಿಡಗಳನ್ನು ಬೆಳೆಸಬಹುದು. ಇಂತಹ ಕೊಳಗಳಲ್ಲಿ ನೀರನ್ನು ಪುಟ್ಟ ಪುಟ್ಟ ಬಂಡೆಗಳ ಮೇಲಿನಿಂದ ಹರಿಯುವಂತೆ ಮಾಡಲು ಜ್ವಾಲಾಮುಖಿಯಿಂದಾದ ಕಲ್ಲುಗಳನ್ನು ತಂದು ಅಲಂಕರಿಸಬಹುದು. ಈ ಕಲ್ಲುಗಳ ಮೇಲೆ ಗಿಡಗಳನ್ನು ಇಟ್ಟು ಅಲ್ಲಿಯೂ ಒಂದು ತೋಟವನ್ನು ನಿರ್ಮಿಸಬಹುದು. ಈ ಕೊಳದಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಚಿಕ್ಕದಾಗಿ ಒಂದು ಮೋಟರ್‌ ಇಡಬೇಕು. ಜತೆಗೆ ಹರಿಯುವ ನೀರು ಶುದ್ಧೀಕರಣಗೊಂಡು ಮತ್ತೆ ಬಳಕೆಯಾಗುವಂತೆ ಮಾಡಬಹುದು.  

ವರ್ಟಿಕಲ್‌ ಗಾರ್ಡೆನಿಂಗ್‌
2/2 ಗೋಡೆಯಲ್ಲಿ ವರ್ಟಿಕಲ್‌ ಗಾರ್ಡನಿಂಗ್‌ ಸುಲಭವಾಗಿ ಮಾಡಬಹುದು. 2/2 ಅಡಿಯ ಗೋಡೆಯಲ್ಲಿ 15 ಗಿಡಗಳನ್ನು ಬೆಳೆಸಬಹುದು. ಮನೆಯ ಬಾಗಿಲಿನ ಪಕ್ಕದ ಗೋಡೆ, ಅಡುಗೆ ಮನೆ, ರೂಂಗಳಲ್ಲಿನ ಗೋಡೆ, ಹಾಲ್‌ನಲ್ಲಿರುವ ಗೋಡೆಗಳ ಮೇಲೆ ವರ್ಟಿಕಲ್‌ ಗಾರ್ಡೆನಿಂಗ್‌ ಮಾಡಬಹುದು. ಪ್ಲಾಸ್ಟಿಕ್‌, ಅಲ್ಯುಮಿನಿಯಂ ಅಥವಾ ಮರದ ಫ್ರೇಮ್‌ನಲ್ಲಿ ರ್‍ಯಾಕ್‌ ಮಾಡಿ, ಅವುಗಳಲ್ಲಿ ಪುಟ್ಟ ಕುಂಡಗಳು ಅಥವಾ ಜಿಯೋ ಬ್ಯಾಗ್‌ಗಳನ್ನು ನೇತುಹಾಕಿ ಅಲ್ಲಿ ಗಿಡಗಳನ್ನು ಬೆಳೆಸಬಹುದು. ಕುಂಡ ಹಾಗೂ ಜಿಯೋ ಬ್ಯಾಗ್‌ ಬೇಡ ಎನ್ನುವವರು ವೈಟ್ರೊ ಸಿಸ್ಟಂನಲ್ಲಿ ಫೋಮ್‌ ಬಳಸಿ ಅದರಲ್ಲಿ ಗಿಡಗಳನ್ನು ಬೆಳೆಸಬಹುದು. ಇದರಲ್ಲಿ ಮಣ್ಣಿನ ಬಳಕೆಯೇ ಇರುವುದಿಲ್ಲ. ವರ್ಟಿಕಲ್‌ ಗಾರ್ಡನಿಂಗ್‌ನಲ್ಲಿ ಸೊಪ್ಪು, ಹೂವಿನ ಗಿಡಗಳು ಹಾಗೂ ಷೋ ಗಿಡಗಳನ್ನು ಬೆಳೆಯಬಹುದು.

ಕರ್ಟನ್‌ ಗಾರ್ಡನಿಂಗ್‌
ಮನೆಯ ಕಿಟಕಿ ಹಾಗೂ ಬಾಲ್ಕನಿಗಳಲ್ಲಿ ಈ ಕರ್ಟನ್‌ ಗಾರ್ಡನಿಂಗ್‌ ಮಾಡಬಹುದು. ಕಿಟಕಿಗಳಿಗೆ ಇರುವ ಕಂಬಿಗಳಿಗೆ ಮನಿ ಪ್ಲಾಂಟ್‌ ಗಾರ್ಲಿಕ್‌ ಕ್ರೀಪರ್‌, ಅಲ್ಮಂಡಾ ಕ್ರೀಪರ್‌ ಸೇರಿದಂತೆ ಅಮೃತ ಬಳ್ಳಿಯಂತಹ ಬಳ್ಳಿಗಳನ್ನು ಹಬ್ಬಿಸಬಹುದು. ಕಿಟಕಿಯ ಮೇಲೆ ಒಂದು ಕಂಬಿಯನ್ನು ಕಟ್ಟಿ ಅಲ್ಲಿ ಅವುಗಳನ್ನು ಜೋತುಬೀಳುವಂತೆ ಇಡಬೇಕು. ಅವುಗಳು ಬೆಳೆದ ನಂತರ ಕರ್ಟನ್‌ ರೀತಿಯಲ್ಲಿ ಕೆಲಸಕ್ಕೆ ಬರುತ್ತವೆ. ಕಿಟಕಿಯಿಂದ ಬರುವ ಗಾಳಿ ಬೆಳಕು ಬಳ್ಳಿಗಳ ನಡುವೆಯ ಇರುವ ಜಾಗದಿಂದ ಮನೆಯ ಒಳಕ್ಕೆ ಬರುತ್ತವೆ. ಇದರಿಂದ ಮಲಿನವಾಗಿರುವ ಗಾಳಿ ಗಿಡಗಳ ಮೂಲಕ ಬಂದಾಗ ಶುದ್ಧಗಾಳಿಯಾಗಿ ಪರಿವರ್ತನೆಯಾಗುತ್ತದೆ. ಮನಿ ಪ್ಲಾಂಟ್‌ನಲ್ಲೇ ಐದು ವಿಧದ ಗಿಡಗಳಿವೆ.

ಮನೆಯ ಒಳಭಾಗದಲ್ಲಿ ನೆರಳಿನಲ್ಲಿ ಬೆಳೆಯುವ ಸಸಿಗಳನ್ನು ನೆಡಬಹುದು. ಅದರಲ್ಲೂ ನೆರಳಿನಲ್ಲಿ ಬೆಳೆದು ಹೂವು ಬಿಡುವ ಆ್ಯಂಥೋರಿಯಮ್ಸ್‌, ಸ್ಪಾತಿಫಿಲಂ, ಸಿಂಗೋನಿಯಂಮ್ಸ್‌ ಪೆಟ್ರೋಮಿಯಗಳನ್ನು ನೆಡಬಹುದು. ಆದರೆ ಇವುಗಳಿಗೆ ನೀರು ಮತ್ತು ಗೊಬ್ಬರ ಹಾಕಿ ಕೀಟಗಳ ಹಾವಳಿಯಿಂದ ತಡೆಯಲು ಸ್ವಲ್ಪ ಸಮಯ ಕೊಡಬೇಕಾಗುತ್ತದೆ. 

ಗಿಡಗಳಿಗೆ ನೀರು, ಗೊಬ್ಬರ ಹಾಕಿ ನೋಡಿಕೊಳ್ಳಲು ಸಮಯವಿಲ್ಲದವರಿಗಾಗಿ ‘ಮೇಂಟೆನೆನ್ಸ್ ಫ್ರೀ’ ಗಾರ್ಡನ್‌ ಇದೆ. ಇಲ್ಲಿ ಮರುಭೂಮಿಗಳಲ್ಲಿ ಬೆಳೆಯುವ ಸೆಕ್ಯುಲೆನ್ಸ್‌ ಜಾತಿಗೆ ಸೇರಿದ ಗಿಡಗಳನ್ನು ಬೆಳೆಸಬಹುದು. ಈ ಗಿಡಗಳು ನೀರನ್ನು ತುಂಬಾ ಬಳಸಿಕೊಳ್ಳುವುದರ ಜತೆಗೆ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಇವುಗಳಿಗೆ ರೋಗ ಮತ್ತು ಕೀಟಗಳ ಭಾದೆ ತುಂಬಾ ಕಡಿಮೆ. ವಾರಕ್ಕೊಮ್ಮೆ ನೀರು ಹಾಕಿದರೂ ಸಾಕಾಗುತ್ತದೆ. ಹೀಗಾಗಿಯೇ ಇದಕ್ಕೆ ನಿರ್ವಹಣೆ ತುಂಬಾ ಕಡಿಮೆ. ಆದರೆ ಈ ಗಿಡಗಳನ್ನು ಸೂರ್ಯನ ಬೆಳಕು ಬೀಳುವ ಕಡೆಗಳಲ್ಲಿ ಮಾತ್ರ ಇಡಬೇಕು. 

ಮನೆಗಳಲ್ಲಿ ಬಿದಿರು ಅಥವಾ ಪೈಪ್‌ಗಳಲ್ಲಿ ಗಿಡಗಳನ್ನು ಬೆಳೆಸಬಹುದು. ಅದಕ್ಕೆ ಮಣ್ಣನ್ನು ಬಳಸುವ ಅಗತ್ಯ ಇಲ್ಲ. ಜಲ್ಲಿ ಜಿಯೋ ಕ್ಲಾತ್‌ ಕೊಕೊಪಿಟ್‌ (ತೆಂಗಿನ ನಾರು), ಫೋಮ್‌ ನಲ್ಲೇ ಗಿಡ ಬೆಳೆಸಬಹುದು. ಮೊದಲಿನಂತೆ ಕೆಂಪುಮಣ್ಣನ್ನು ಬಳಸಿ ಗಿಡ ಬೆಳೆಯುವ ಅಗತ್ಯ ಇಲ್ಲ. ಹಾಗೂ ಒಂದು ವೇಳೆ ಗೋಡೆ ಹಾಳಾಗುತ್ತದೆ ಎಂಬ ಭಯವಿದ್ದಲ್ಲಿ ಅವರು  ಪ್ಲಾಸ್ಟಿಕ್‌ ಸೀಟ್‌ನಿಂದ ಗೋಡೆಯನ್ನು ಸಂರಕ್ಷಿಸಬಹುದು.

ಮನೆಯ ಒಳಗೆ ಉತ್ತಮ ಗಾಳಿಗಾಗಿ ಆಮ್ಲಜನಕ ನೀಡುವ ಗಿಡಗಳನ್ನು ಇಡಬಹುದು. ಇವು ನೆರಳಿನಲ್ಲಿ ಬೆಳೆಯುವ ಗಿಡಗಳಾಗಿದ್ದು, ಮನೆಯ ಒಳಗಿರುವ ಗಾಳಿಯನ್ನು ಶುದ್ಧೀಕರಿಸುತ್ತವೆ. ಹೀಗಾಗಿಯೇ ಮನುಷ್ಯನ ಅಗತ್ಯ ಹಾಗೂ ಅನುಕೂಲಕ್ಕೆ ತಕ್ಕ ಗಾರ್ಡನ್‌ ಈಗ ನಗರದಲ್ಲಿ ಲಭ್ಯ.

***
ಟೆರೇಸ್‌ ಗಾರ್ಡನಿಂಗ್‌ ಮತ್ತು ಲಾನ್‌
ಮನೆ ಮುಂದೆ ಗಾರ್ಡನ್‌ ಮಾಡಲು ಸ್ಥಳವಿಲ್ಲದವರು ಮನೆಯ ಮೇಲೆ ಗಾರ್ಡನ್‌ ಮಾಡಿಕೊಳ್ಳಬಹುದು. ಅದಕ್ಕಾಗಿ ಮನೆಯ ಟೆರೇಸ್‌ಗೆ ವಾಟರ್‌ ಫ್ರೂಫಿಂಗ್‌ ಮಾಡಿಸಿ ಅಲ್ಲಿ ಲಾನ್‌ ಹಾಗೂ ಗಾರ್ಡನ್‌ ನಿರ್ಮಿಸಿಕೊಳ್ಳಬಹುದು. ಹೊಸದಾಗಿ ಮನೆಗಳನ್ನು ಕಟ್ಟಿಸುವವರು ಈಗ ಮೊದಲೇ ಲಾನ್‌ ಹಾಗೂ ಗಾರ್ಡನ್‌ಗಳಿಗೆಂದೇ ಟೆರೇಸ್‌ಗೆ ವಾಟರ್‌ಪ್ರೂಫಿಂಗ್‌ ವ್ಯವಸ್ಥೆ ಮಾಡಿಸಿ, ಎಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಗಳ ಸಲಹೆ ಪಡೆದು ಯೋಜನೆ ರೂಪಿಸಿರುತ್ತಾರೆ. ಇಂತಹ ಮನೆಗಳಲ್ಲಿ ಲಾನ್‌ ಮಾಡಲು ಬಹಳ ಸುಲಭ.

ಇದು ಒಂದು ಅಡಿಯ ಬೆಲೆ ₹150ರಿಂದ ಪ್ರಾರಂಭವಾಗುತ್ತದೆ. ಟೆರೇಸ್‌ ಸಮತಟ್ಟಾಗಿದೆಯೇ, ಇಳಿಜಾರಾಗಿದೆ ಎನ್ನುವುದರ ಮೇಲೂ ದರ ಬದಲಾಗುತ್ತದೆ. ಅದರಲ್ಲೂ ಹಳೇ ಮನೆಗಳ ಮೇಲೆ ಲಾನ್‌ ಮತ್ತು ಗಾರ್ಡನ್‌ ನಿರ್ಮಿಸುವಾಗ ಮೊದಲು ಆ ಮನೆಯನ್ನು ಕಟ್ಟಿರುವ ಬಗೆ ಹಾಗೂ ಎಷ್ಟು ವರ್ಷ ಹಳೆಯದು ಎಂದು ಎಂಜಿನಿಯರ್‌ ಅವರಿಂದ ತಪಾಸಣೆ ಮಾಡಿಸಿ, ನಂತರ ಅವರ ಸಲಹೆ ಪ್ರಕಾರ ಯಾವ ರೀತಿಯ ಲಾನ್‌ ಹಾಗೂ ಗಾರ್ಡನ್‌ ನಿರ್ಮಿಸಬಹುದೆಂದು ನಿರ್ಧರಿಸುತ್ತೇವೆ.

ಲಾನ್‌ ಮಾಡುವುದರಲ್ಲಿ ಹಲವಾರು ವಿಧಗಳಿವೆ. ಕೆಲವೊಂದು ಲಾನ್ ಹೆಚ್ಚು ಪದರಗಳನ್ನು ಹೊಂದಿದ್ದು, ಛಾವಣಿ ಮೇಲೆ ಹೆಚ್ಚಿನ ಭಾರವನ್ನು ಬಿಡುತ್ತದೆ. ಇಂತಹ ಲಾನ್‌ಗಳನ್ನು ಹಳೇ ಮನೆಯ ಛಾವಣಿಯ ಮೇಲೆ ಮಾಡುವುದಿಲ್ಲ. ಅಲ್ಲಿ ಕಡಿಮೆ ತೂಕದ ವಸ್ತುಗಳನ್ನು ಬಳಸಿ ಹಗುರವಾದ ಲಾನ್‌ಗಳ ನಿರ್ಮಾಣ ಮಾಡಲಾಗುತ್ತದೆ. ಈಗ ಸಾಮಾನ್ಯವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಟೆರೇಸ್‌ಗಳ ಮೇಲೆ ಲಾನ್ ನಿರ್ಮಾಣ ಮಾಡುತ್ತಿದ್ದೇವೆ. ಲಾನ್‌ ಮಾಡಲು ಕೇವಲ 10/10 ಅಡಿ ಸ್ಥಳ ಇದ್ದರೆ ಸಾಕು.
ಅರುಣ್‌ ಕುಮಾರ್‌, ಮಾಲೀಕ, ಗೋಬ್ಲಲ್‌ ಗಾರ್ಡೆನಿಂಗ್‌ ಅಂಡ್‌ ನರ್ಸರಿ  (ಮಾಹಿತಿಗೆ 7411124444)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT