ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೊಂದು ಹಸನಾದ ಚಿತ್ರಮಂದಿರ!

Last Updated 14 ಮೇ 2015, 19:30 IST
ಅಕ್ಷರ ಗಾತ್ರ

ಸಿನಿಮಾ ವ್ಯಾಮೋಹಿಗಳ ಸಂಖ್ಯೆ ನಮ್ಮಲ್ಲಿ ಹೆಚ್ಚು. ಎಲ್ಲರಿಗೂ ಚಿತ್ರಮಂದಿಗಳಿಗೆ ಹೋಗಿ ಸರತಿಯಲ್ಲಿ ನಿಂತು ಟಿಕೇಟ್‌ ಖರೀದಿಸಿ ಸಿನಿಮಾ ನೋಡುವಷ್ಟು ತಾಳ್ಮೆ , ಸಮಯ ಎರಡೂ ಇರುವುದಿಲ್ಲ. ಆದ್ದರಿಂದಲೇ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗಳಲ್ಲಿಯೇ ಕೂತು ಸಿನಿಮಾ ನೋಡುವುದನ್ನು ಬಹುತೇಕರು ಇಷ್ಟಪಡುತ್ತಾರೆ. ಮನೆಯಲ್ಲಿಯೇ ಅಳವಡಿಸಬಹುದಾದ ದೊಡ್ಡ ದೊಡ್ಡ ಟೀವಿ, ಮಿನಿ ಥಿಯೇಟರ್‌ ಹಾಗೂ ಕಂಪ್ಲೀಟ್‌ ಹೋಂ ಥಿಯೇಟರ್‌ಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ.

ಇತ್ತೀಚೆಗೆ ಯಾರೇ ಹೊಸದಾಗಿ ಬೃಹತ್‌ ಮನೆಗಳನ್ನು ಕಟ್ಟಲು ಮುಂದಾದರೂ ಹೋಂ ಥಿಯೇಟರ್‌ಗಾಗಿಯೇ ಪ್ರತ್ಯೇಕ ಸ್ಥಳವನ್ನು ಮೀಸಲಿಡುತ್ತಾರೆ. ಕೆಲವರು ಲಿವಿಂಗ್‌ ರೂಂನಲ್ಲೇ 50 ಇಂಚಿನ ಅಥವಾ ಅದಕ್ಕೂ ದೊಡ್ಡ ಪರದೆಯ ಟೀವಿಗಳನ್ನು ಇಡಲು ಮೊದಲೇ ಜಾಗ ಬಿಟ್ಟಿರುತ್ತಾರೆ. ಅದಕ್ಕಾಗಿ ಮನೆಗಳನ್ನು ಕಟ್ಟುವ ಮೊದಲೇ ವಾಸ್ತುಶಿಲ್ಪಿಗಳಿಗೆ ಹೇಳಿ, ಸ್ಥಳಾವಕಾಶ ಮಾಡಿಸಿಕೊಳ್ಳುತ್ತಾರೆ.

ಮನೆಗಳಲ್ಲಿ ಮೂರು ರೀತಿಯ ಹೋಂ ಥಿಯೇಟರ್‌ಗಳನ್ನು ಮಾಡಿಕೊಳ್ಳಬಹುದು– ಲಿವಿಂಗ್‌ ರೂಂ ಸೆಟ್‌ಅಪ್‌, ಮಿನಿ ಹೋಂ ಥಿಯೇಟರ್‌ ಹಾಗೂ ಸ್ಟುಡಿಯೊ ರೀತಿಯ ಕಂಪ್ಲೀಟ್‌ ಹೋಂ ಥಿಯೇಟರ್‌. ಕೇವಲ ಮನೆಯವರ ಬಳಕೆಗೆ ಮಾಡಿಕೊಳ್ಳುವ ಸುಸಜ್ಜಿತ ಹೋಂ ಥಿಯೇಟರ್‌ ನಿರ್ಮಾಣಕ್ಕೆ ಪರವಾನಗಿ ಪಡೆಯುವ ಅಗತ್ಯ ಇಲ್ಲ.

ಲಿವಿಂಗ್‌ ರೂಮ್‌ ಸೆಟ್‌ ಅಪ್‌
ವೈಜ್ಞಾನಿಕವಾಗಿ ಟೀವಿ ಪರದೆ ಮತ್ತು ಪ್ರೇಕ್ಷಕರ ನಡುವೆ 10 ಅಡಿ ಅಂತರ ಇರಬೇಕು. ಟೀವಿಯನ್ನು ನೆಲದಿಂದ ಕನಿಷ್ಠ ಮೂರು ಅಡಿ ಎತ್ತರದಲ್ಲಿ ಇಡಬೇಕು. ಅದಕ್ಕೆ ತಕ್ಕಂತೆ ಲಿವಿಂಗ್‌ ರೂಂನ ಅಳತೆ ಹಾಗೂ ಟೀವಿಯ ಗಾತ್ರಕ್ಕೆ ತಕ್ಕಂತೆ ಲಿವಿಂಗ್‌ ರೂಂನಲ್ಲಿ 5.1 ಸೆಟ್‌ಅಪ್ ಅಳವಡಿಸಿಕೊಳ್ಳಬಹುದು. 5.1 ಸೆಟ್‌ಅಪ್‌ನಲ್ಲಿ ಫ್ಲೋರ್‌ ಸ್ಟ್ಯಾಂಡಿಂಗ್‌ ಸ್ಪೀಕರ್ಸ್‌, ಅಥವಾ ಸ್ಯಾಟಲೈಟ್‌ ಸ್ಪೀಕರ್ಸ್‌, ಬ್ಲೂ ರೇ ಡಿವಿಡಿ ಪ್ಲೇಯರ್‌, ರೇರ್‌ ಸ್ಪೀಕರ್ಸ್‌, ಸಬ್‌ ವೂಫರ್‌ ಹಾಗೂ ಆಂಪ್ಲಿಫಯರ್‌ ಸೆಟ್‌ಅಪ್‌ ಇರುತ್ತದೆ.

ಇದರಲ್ಲಿ ಲಿವಿಂಗ್‌ ರೂಂನಲ್ಲಿ ಹೆಚ್ಚಿನ ಸ್ಥಳಾವಕಾಶ ಹೊಂದಿರುವವರು ಸ್ಟ್ಯಾಂಡಿಂಗ್‌ ಸ್ಟೀರಿಯೊ ಸೆಟ್‌ ಬಳಸಿಕೊಳ್ಳಬಹುದು. ಇಲ್ಲವಾದಲ್ಲಿ ಕೇವಲ ಸ್ಯಾಟಲೈಟ್‌ ಸ್ಪೀಕರ್ಸ್‌ ಬಳಸಿಕೊಳ್ಳಬಹುದು. ಇದರ ಬೆಲೆ ₹ 50 ಸಾವಿರದಿಂದ ₹ 1.4 ಲಕ್ಷದವರೆಗೂ ಇದೆ (ಟೀವಿಯನ್ನು ಹೊರತುಪಡಿಸಿ). ಹತ್ತು ಅಡಿ ಅಗಲ ಹಾಗೂ ಹತ್ತು ಅಡಿ ಉದ್ದದ ಸ್ಥಳ ಹೊಂದಿರುವವರು ಲಿವಿಂಗ್‌ ರೂಂ ಸೆಟ್‌ಅಪ್‌ ಮಾಡಿಕೊಳ್ಳಬಹುದು.

ಮಿನಿ ಹೋಂ ಥಿಯೇಟರ್‌
14  ಅಡಿ ಅಗಲ ಹಾಗೂ 17 ಅಡಿ ಉದ್ದದ ಸ್ಥಳಾವಕಾಶವಿದ್ದಲ್ಲಿ ಅಚ್ಚುಕಟ್ಟಾದ ಒಂದು ಮಿನಿ ಹೋಂ ಥಿಯೇಟರ್‌ ನಿರ್ಮಾಣ ಮಾಡಬಹುದು. ಇಲ್ಲಿ ಮಾಡುವ ಸೆಟ್‌ಅಪ್‌ಗೆ 7.1 ಎಂದು ಹೇಳಲಾಗುತ್ತದೆ. ಇದರಲ್ಲಿ 3ಡಿ ಅಥವಾ ಫುಲ್‌ ಎಚ್‌ಡಿ ಪ್ರೊಜೆಕ್ಟರ್‌, ಆಂಫ್ಲಿಫಯರ್‌, 120 ಇಂಚಿನ ಪರದೆ, 15 ಅಡಿಯ ಒಂದು ಸಬ್‌ವೂಫರ್‌, ಫ್ರಂಟ್‌, ರೇರ್‌ ಮತ್ತು ಸೀಲಿಂಗ್‌ ಸ್ಪೀಕರ್‌ಗಳು ಇರುತ್ತವೆ.

ಇಲ್ಲಿ ಫ್ರೇಮ್‌ ಇರುವ ಹಾಗೂ ಇಲ್ಲದ ಪರದೆಗಳು ಲಭ್ಯವಿದ್ದು, ಗ್ರಾಹಕರು ಇಷ್ಟಪಡುವ ಪರದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ 3ಡಿ ಸೌಲಭ್ಯ ಇರುವ ಪ್ರೊಜೆಕ್ಟರ್ ಅಥವಾ ಫುಲ್‌ ಎಚ್‌ಡಿ ಪ್ರೊಜೆಕ್ಟರ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ದರ ₹  2.5 ಲಕ್ಷದಿಂದ ಪ್ರಾರಂಭವಾಗುತ್ತದೆ.  ಸೌಂಡ್‌ ಅಕೌಸ್ಟಿಕ್ಸ್‌  ಸೆಟ್‌ಅಪ್‌ ಅನ್ನು ಹೊರತುಪಡಿಸಿದ ಬೆಲೆ ಇದು.

ಡೆಡಿಕೇಟೆಡ್‌ ಸ್ಟುಡಿಯೊ ಹೋಂ ಥಿಯೇಟರ್‌
ಇಲ್ಲಿ ಮಿನಿ ಹೋಂ ಥಿಯೇಟರ್‌ನಲ್ಲಿ ಇರುವ ಸೆಟ್‌ಅಪ್‌ ಅನ್ನೇ ಬಳಸಿಕೊಳ್ಳಲಾಗುತ್ತದೆ. ಆದರೆ ಸ್ಥಳದ ವಿಸ್ತೀರ್ಣ ಸ್ವಲ್ಪ ದೊಡ್ಡದಾಗಿರುತ್ತದೆ. 20 ಅಡಿ ಅಗಲ ಹಾಗೂ 20 ಅಡಿಗೂ ಹೆಚ್ಚಿನ ಉದ್ದ ಇದ್ದರೆ ಅಲ್ಲಿ ಸುಂದರವಾದ ಐಷಾರಾಮಿ ಮೋಟರೈಸ್ಡ್‌ ಸೋಫಾಗಳ ಮೇಲೆ ನಾಲ್ಕರಿಂದ ಆರು ಮಂದಿ ಕುಳಿತು   ಸಿನಿಮಾ ವೀಕ್ಷಿಸುವಂತೆ ಅವಕಾಶ ಮಾಡಿಕೊಳ್ಳಬಹುದು. ಸ್ಥಳಾವಕಾಶ ಹೆಚ್ಚಾಗಿದ್ದಾಗ ಸಿನಿಮಾ ಸ್ಕೋಪ್‌ ಕರ್ವ್ಡ್‌ ಪರದೆಯನ್ನು ಬಳಸಿಕೊಳ್ಳಬಹುದು.

ಅದರಲ್ಲೂ ವಿಥ್‌ ಫ್ರೇಮ್‌ ಹಾಗೂ ವಿಥೌಟ್‌‌ ಫ್ರೇಮ್‌ ಲಭ್ಯವಿದೆ. ಇದರೊಂದಿಗೆ ಥಿಯೇಟರ್‌ಗಳಲ್ಲಿ ಬಳಸುವ ಟಿಎಚ್‌ಎಕ್ಸ್‌ ತಂತ್ರಜ್ಞಾನವನ್ನು ಇಲ್ಲಿ ಬಳಸಿಕೊಳ್ಳಬಹುದು. ಅಂದರೆ ಪರ್ಫೊರೇಟೆಡ್‌ ಪರದೆಯನ್ನು ಬಳಸಿ ಫ್ರಂಟ್‌ ಸ್ಪೀಕರ್‌ಗಳನ್ನು ಪರದೆ ಹಿಂದೆ ಅಳವಡಿಸಿಕೊಳ್ಳಬಹುದು. ಇದರಿಂದ ಚಿತ್ರಮಂದಿರದಲ್ಲಿ ಕೂತು ನೋಡುವ ಅನುಭವವನ್ನು ಮನೆಯಲ್ಲೇ ಪಡೆಯಬಹುದು. ಈ ಪರದೆಯಲ್ಲಿ ಶಬ್ದ ಹೊರಬರಲು ಸಣ್ಣ ಸಣ್ಣ ರಂಧ್ರಗಳಿರುತ್ತವೆ. ಇದರ ದರ ₹ 6.5 ಲಕ್ಷದಿಂದ ಪ್ರಾರಂಭವಾಗುತ್ತದೆ; ಇದು ಸೌಂಡ್‌ ಅಕೌಸ್ಟಿಕ್ಸ್‌ ಸೆಟ್‌ಅಪ್‌ ಅನ್ನು ಹೊರತುಪಡಿಸಿ. 

ಹೋಂ ಥಿಯೇಟರ್‌ಗಳ ನಿರ್ಮಾಣದಲ್ಲಿ ಎಲ್ಲದಕ್ಕಿಂತ ಅಕೌಸ್ಟಿಕ್ಸ್‌ ಪಾತ್ರ ಬಹಳ ಮುಖ್ಯ. ಅಕೌಸ್ಟಿಕ್ಸ್‌ ಸರಿಯಾಗಿ ಆಗದೇ ಇದ್ದರೆ, ನೆಮ್ಮದಿಯಿಂದ ಸಿನಿಮಾ ನೋಡಲು ಆಗುವುದಿಲ್ಲ. ಕಾರಣ ಕೋಣೆಯೊಳಗೆ ಪ್ರತಿಧ್ವನಿ ಹೆಚ್ಚಾಗಿ ಕಿರಿಕಿರಿಯಾಗುತ್ತದೆ. ಅದಕ್ಕಾಗಿಯೇ ಹೋಂ ಥಿಯೇಟರ್‌ ಮಾಡುವ ಮೊದಲು ನುರಿತ ತಜ್ಞರು ಹಾಗೂ ಅಕೌಸ್ಟಿಕ್ಸ್‌ ಬಗ್ಗೆ ಮಾಹಿತಿ ಇರುವವರನ್ನು ಸಂಪರ್ಕಿಸುವುದು ಉತ್ತಮ. ಇದರ ದರ ಅಡಿಗೆ 350 ರೂಪಾಯಿಯಿಂದ ಪ್ರಾರಂಭವಾಗುತ್ತದೆ.

ಪ್ರತಿಧ್ವನಿ ನಿಲ್ಲಿಸಬೇಕು
ಕೇವಲ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ತಂದು ಒಂದು ಕೋಣೆಯಲ್ಲಿ ಇಟ್ಟಮಾತ್ರಕ್ಕೆ ಅದು ಹೋಂ ಥಿಯೇಟರ್‌ ಎಂದು ಕರೆಸಿಕೊಳ್ಳುವುದಿಲ್ಲ. ಒಂದು ಕೋಣೆಯಲ್ಲಿ ದೊಡ್ಡ ದೊಡ್ಡ ಸ್ಪೀಕರ್‌ ಹಾಕಿ ಸಿನಿಮಾ ಓಡುವಾಗ ಕೇಳುವ ಶಬ್ದ ಆ ಕೋಣೆಯಿಂದ ಹೊರಹೋಗದಂತೆ ಮಾಡಬೇಕು. ಅದಕ್ಕೂ ಹೆಚ್ಚಾಗಿ ಕೋಣೆಯೊಳಗೆ ಪ್ರತಿಧ್ವನಿ ಆಗದಂತೆ ತಡೆಗಟ್ಟಬೇಕು. ಅದಕ್ಕಾಗಿ ಸೌಂಡ್‌ ಅಕೌಸ್ಟಿಕ್ಸ್‌ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು.

ಅದಕ್ಕಾಗಿ ಕೋಣೆಯನ್ನು ಸಿದ್ಧಗೊಳಿಸಬೇಕು. ಮೊದಲು ಕೋಣೆಯಲ್ಲಿ ಸ್ಪೀಕರ್‌ಗಳಿಂದ ಬರುವ ಶಬ್ದ ಯಾವ ದಿಕ್ಕಿನಲ್ಲಿ ಚಲಿಸುತ್ತದೆ, ಎಲ್ಲಿ ಅದು ಪ್ರತಿಧ್ವನಿಯಾಗಿ ಹೊಮ್ಮುತ್ತದೆ ಎಂದು ಪತ್ತೆ ಮಾಡಬೇಕು. ನಂತರ ಶಬ್ದವನ್ನು ನಿಯಂತ್ರಕಗಳಾದ ಪಾಲಿವುಲ್‌, ಗ್ಲಾಸ್‌ ವುಲ್‌, ರಾಕ್‌ವುಲ್‌ಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಅಕೌಸ್ಟಿಕ್ಸ್‌ ಮಾಡಲಾಗುತ್ತದೆ. ಎಲ್ಲೆಲ್ಲಿ ಪ್ರತಿಧ್ವನಿ ಹೊಮ್ಮುತ್ತದೋ ಅಲ್ಲಿ ಶಬ್ದನಿಯಂತ್ರಕಗಳನ್ನು ಗೋಡೆಯ ಮೇಲೆ ಟಕ್ಇನ್‌ ಮಾಡಲಾಗುತ್ತದೆ.

ನಂತರ ಅದರ ಮೇಲೆ ಫ್ರೇಮಿಂಗ್‌ ಮಾಡಿ ಅದರ ಮೇಲೆ ತೆಳುವಾದ ಸಣ್ಣ ಸಣ್ಣ ರಂಧ್ರಗಳಿರುವ ಬಟ್ಟೆಯನ್ನು ಟಕ್‌ಇನ್‌ ಮಾಡಲಾಗುತ್ತದೆ. ಇದರಿಂದ ಪ್ರತಿಧ್ವನಿ ಹೊಮ್ಮುವುದು ಹಾಗೂ ರೂಮಿನಿಂದ ಶಬ್ದ ಹೊರಹೋಗುವುದನ್ನು ತಡೆಯಬಹುದು. ಇದಲ್ಲದೆ ಸ್ಪೀಕರ್‌ಗಳಿಗೆ ಮಾಡುವ ಕೇಬಲಿಂಗ್‌ ತುಂಬಾ ಮಹತ್ವದ್ದು.

ಸರಿಯಾದ ಕೇಬಲ್‌ಗಳನ್ನು ಆಯ್ಕೆ ಮಾಡಿಕೊಳ್ಳದಿದ್ದಲ್ಲಿ, ಸ್ಪೀಕರ್‌ಗಳಿಂದ ಬರಬೇಕಾದ ಶಬ್ದ ಸರಿಯಾಗಿ ಬರುವುದಿಲ್ಲ. ಅದಕ್ಕಾಗಿ ಒಎಫ್‌ಸಿ ಕೇಬಲ್‌(ಆಮ್ಲಜನಕಮುಕ್ತ ಕೇಬಲ್‌) ಬಳಸಬೇಕು. ಜತೆಗೆ ಉಡನ್‌ ಫ್ಲೋರಿಂಗ್‌ ಅಥವಾ ಉತ್ತಮ ದರ್ಜೆ ಕಾರ್ಪೆಟ್ ಬಳಸಬೇಕು. ಇದನ್ನು ಹೊರತುಪಡಿಸಿ ಒಳಾಂಗಣ ವಿನ್ಯಾಸ ಮಾಡಿಸಲು ನುರಿತ ವಿನ್ಯಾಸಕಾರರನ್ನು ಸಂಪರ್ಕಿಸಿದರೆ ಉತ್ತಮ.  
ಪ್ರಮೋದ್‌, ಎಲೈಟ್‌ ಸಿನಿಮಾಸ್‌ನ ಮಾಲೀಕ
ಮಾಹಿತಿಗೆ: ಎಲೈಟ್‌ ಸಿನಿಮಾಸ್‌: 080–42032234, 9916745828

ವಾರಕ್ಕೆರಡು ಸಿನಿಮಾ ನೋಡಲೇಬೇಕು
ಮನೆಯಲ್ಲಿ 14/26 ಅಡಿ ಜಾಗ ಖಾಲಿ ಇತ್ತು. ಆ ಜಾಗವನ್ನು ಹೇಗೆ ಬಳಸಿಕೊಳ್ಳೋದು, ಅಲ್ಲಿ ಏನು ಮಾಡೋದು ಎಂದು ತುಂಬಾ ಯೋಚನೆ ಮಾಡುತ್ತಿದ್ದೆ. ಅಲ್ಲೊಂದು ಡಿಸ್‌ಕಶನ್‌ ರೂಂ ಮಾಡೋಣ ಅಂತ ಕೊನೆಗೂ ನಿರ್ಧರಿಸಿಕೊಂಡೆ. ಆದರೆ ನಮ್ಮ ಆರ್ಕಿಟೆಕ್ಟ್‌ ಹೋಂ ಥಿಯೇಟರ್‌ ಮಾಡಿ ಅಂತ ಸಲಹೆ ನೀಡಿದ್ರು. ಕೊನೆಗೆ ಅದು ಡಿಸ್‌ಕಶನ್‌ ಕಮ್‌ ಹೋಂ ಥಿಯೇಟರ್‌ ಆಗಿ ಬದಲಾಯಿತು.

15ರಿಂದ 16 ಜನ ಕುಳಿತು ಸಿನಿಮಾ ನೋಡಲು ಸಾಧ್ಯವಾಗುವಂಥ ಥಿಯೇಟರ್‌ ಇದಾಗಿದ್ದು, ಸೀಟಿಂಗ್‌ ಕೂಡ ವಿಭಿನ್ನವಾಗಿ ಮಾಡಿಸಿದ್ದೇನೆ. ಅಲ್ಲಿ ಸಿನಿಮಾ ನೋಡಲು, ಬೇಕೆಂದರೆ ಚರ್ಚೆ ನಡೆಸಲೂ ಸಾಧ್ಯವಾಗುವಂತಿದೆ ಸೀಟಿಂಗ್‌. ಹೋಂ ಥಿಯೇಟರ್‌ ಮಾಡಿಸುವಾಗ ವೃತ್ತಿಪರರಿಂದಲೇ ಮಾಡಿಸುವುದು ಒಳ್ಳೆಯದು.

ಒಳಾಂಗಣದ ವಿನ್ಯಾಸ, ಆಕೌಸ್ಟಿಕ್ಸ್‌ ವಿನ್ಯಾಸ ಸರಿಯಾಗಿಲ್ಲವೆಂದಾದರೆ ತುಂಬಾ ಕಷ್ಟ. ಅದೂ ಅಲ್ಲದೆ ಇತ್ತೀಚೆಗೆ ಹೋಂ ಥಿಯೇಟರ್‌ ಒಂದು ಫ್ಯಾಷನ್‌ ಆಗಿಬಿಟ್ಟಿದೆ. ವಾರದಲ್ಲಿ ಎರಡು ಮೂರು ಸಿನಿಮಾವನ್ನಾದರೂ ನೋಡುತ್ತೇವೆ ಎನ್ನುವ ಬದ್ಧತೆ ಇದ್ದರೆ ಮಾತ್ರ ಮಾಡಿಸಿಕೊಳ್ಳಿ. ಇಲ್ಲವಾದರೆ ಸುಮ್ಮನೆ ದುಡ್ಡು ಹಾಳುಮಾಡಿಕೊಳ್ಳುವುದು ಸರಿಯಲ್ಲ.


ಎಂಟೊಂಬತ್ತು ವರ್ಷದ ಹಿಂದೆ ನಾನು ಮಾಡಿಸಿದ್ದು. ಈಗೀಗ ಹೋಂ ಥೀಯೇಟರ್‌ ಮಾಡಿಸಿಕೊಳ್ಳುವುದು ಟ್ರೆಂಡ್‌ ಆಗಿಹೋಗಿದೆ. ನಾನಂತೂ ಧ್ವನಿ, ಛಾಯಾಗ್ರಹಣ, ಕ್ಯಾಮೆರಾ ಹ್ಯಾಂಡೆಲಿಂಗ್‌ ಹೀಗೆ ವಿವಿಧ ಆಯಾಮಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಇರುವವನು. ಹೀಗಾಗಿ ಸಿನಿಮಾ ನೋಡುವುದು ರೂಢಿಯಾಗಿ ಹೋಗಿದೆ.

ಅಲ್ಲದೆ ಹಾಲಿವುಡ್‌ನ ಅತ್ಯುತ್ತಮ ಸಿನಿಮಾಗಳನ್ನು ನೋಡುತ್ತಲೇ ಇರುತ್ತೇನೆ. ವಾರದಲ್ಲಿ ಎರಡರಿಂದ ಮೂರು ಸಿನಿಮಾವನ್ನು ವೀಕ್ಷಿಸುವ ಪರಿಪಾಠವನ್ನು ರೂಢಿಸಿಕೊಂಡಿದ್ದೇನೆ. ನಾನು ನೋಡಿದ ಹಾಗೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಮನೆಯ ಹೋಂ ಥಿಯೇಟರ್‌ ತುಂಬಾ ಚೆನ್ನಾಗಿದೆ ಹಾಗೂ ವೃತ್ತಿಪರವಾಗಿದೆ.
ಜಗ್ಗೇಶ್‌, ನಟ
ಅಭಿಪ್ರಾಯ ಸಂಗ್ರಹ: ಸುರೇಖಾ ಹೆಗಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT