ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಸುಯೋಗ್ಯ ಲಕ್ಷಣ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮಲೆನಾಡಿನಾದ್ಯಂತ ಎಲ್ಲ ಜನಾಂಗದ ಮನೆಗಳಲ್ಲೂ ಈಗ ಒಂದು ಹೊಸ ಹೊಳಪು. ಸಾಲ ಮಾಡಿಯಾದ್ರು ಮನೆಗೆ ಬಣ್ಣ ಬಳಿಸೋಣವೆಂಬ ಭಾವ. ಬೆಟ್ಟದ ಮೇಲಿನ ಮನೆಯನ್ನೆಲ್ಲ ತಮಗಿಷ್ಟ ಬಂದಂತೆ ಸಿಂಗರಿಸಿ ತನ್ಮಯತೆ ತೋರುವ ಪುಳಕ. ಕಾರಣವಿಷ್ಟೇ, ಸಾಂಪ್ರದಾಯಿಕ ಸುಗ್ಗಿ ಹಬ್ಬದ ಸಂಭ್ರಮ ಕಣ್ತುಂಬಿಕೊಳ್ಳುವ ಕಾಲ ಹತ್ತಿರವಾಗುತ್ತಿದೆ.

ಊರ ಸುಗ್ಗಿ ಹಬ್ಬದ ದೇವತೆಗಳ ಪೂಜೆಯ ನೆಪದಲ್ಲಿ ಅಕ್ಕಪಕ್ಕದ ಊರಿನ ಮನೆಯವರೆಲ್ಲ ಕುಳಿತು ಚರ್ಚಿಸುವ ಸಂದರ್ಭ ಮತ್ತೊಂದೆಡೆ.
ಮನುಷ್ಯತ್ವ ಮತ್ತು ಮನಸ್ಸು ಹಾಗೂ ಮನೆ ಒಂದಾಗಿ ಮಿಡಿಯುವ ಈ ಹೊತ್ತಿನಲ್ಲಿ ಗಮನ ಸೆಳೆಯುವ ಒಂದು ಪಟದ ಬಗ್ಗೆ ನಿಮಗೆ ಹೇಳಲೇಬೇಕೆನಿಸುತ್ತಿದೆ.

ಈ ಫೋಟೋದಲ್ಲಿನ ಚಿತ್ರವನ್ನು ಧರ್ಮಸ್ಥಳದಿಂದ ತಂದು ಚೌಕಟ್ಟು ಹಾಕಿಸಿ ಮಲೆನಾಡಿನ ಬಹುತೇಕ ಮನೆಗಳಲ್ಲಿ ಎಲ್ಲರ ಕಣ್ಣಿಗೂ ಸುಲಭದಲ್ಲಿ ಗೋಚರಿಸುವ ಜಾಗದಲ್ಲಿ ತೂಗುಹಾಕಲಾಗಿದೆ. ಜತೆಗೆ, ಕುಟುಂಬದ ಸದಸ್ಯರೂ ಚಿತ್ರಪಟಕ್ಕೆ ಭಕ್ತಿಯಿಂದ ನಮಿಸುತ್ತಿದ್ದಾರೆ. ಜತೆಗೆ ಅದರಲ್ಲಿನ ತತ್ವವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಮನೆಯ ಸುಯೋಗ್ಯ ಲಕ್ಷಣಗಳು ಎಂಬ ಮುಖ್ಯ ತಲೆಬರಹದೊಂದಿಗೆ ಒಟ್ಟು ಐದು ಸಾಲುಗಳು ಮನೆಮಂದಿಗೆಲ್ಲ ಬದುಕಿನ ಪಾಠ ಹೇಳುವಂತಿದೆ. ‘ಮನೆ ಕಟ್ಟಿದರಷ್ಟೇ ಸಾಲದು ಮಗಾ, ಅದರಲ್ಲಿ  ನೆಮ್ಮದಿ, ಸಂತಸದಿಂದ ಬದುಕೋದು ಮುಖ್ಯ ಕಣಾ’ ಅಂತ ಬೆಟ್ಟದಮನೆ ಅಂಚಿನ ಹಿರಿಯಜ್ಜ ಹೊಗೆ -ಧೂಳು ಹಿಡಿದ ಹಳೇ ಪಟವನ್ನು ಒರೆಸುತ್ತಾ ಮೆಲುನಗೆ ಬೀರುವುದನ್ನು ಗಮನಿಸಿದೆ.

ಅದರಲ್ಲಿ ಅಂಥದ್ದು ಏನಿದೆ? ಎಂದು ಅಜ್ಜಯ್ಯನನ್ನು ಪ್ರಶ್ನೆ ಮಾಡಿದೆ. ಅಜ್ಜ ಓದಿ ವಿವರಿಸುತ್ತಾ ಹೋದಂತೆ ನಾನು ಆಲಿಸುತ್ತಾ ಹೋದೆ...
ಕೆಂಪು, ನೀಲಿ ಇಂಕಿನಲ್ಲಿ ಮುದ್ರಿಸಲಾಗಿರುವ ಆ ಐದು ಸವಿ ಸಾಲಿನ ಅಕ್ಷರಗಳು ಇಂತಿವೆ.
* ಧಾರ್ಮಿಕತೆಯೇ ಮನೆಯ ಕಲಶ
* ಆಧರಾತಿಥ್ಯವೇ ಮನೆಯ ವೈಭವ
* ಸಮಾನಾಧಾನವೇ ಮನೆಯ ಸುಖ
* ಸಂತುಷ್ಟ ಗೃಹಿಣಿಯೇ ಮನೆಯ ಲಕ್ಷ್ಮಿ
* ವ್ಯವಸ್ಥೆಯೇ ಮನೆಯ ಸೊಬಗು.

ಮಂಗಳೂರಿನ ಸರಸ್ವತಿ ಪ್ರಿಂಟಿಂಗ್ ವರ್ಕ್ಸ್ ಲಿ.ನಲ್ಲಿ ಮುದ್ರಣಗೊಂಡಿರುವ  ಈ ಚಿತ್ರಪಟ, ಒಂದು ಸುಂದರ ಸಾಂಸಾರಿಕ ಬದುಕಿಗೆ ಅಗತ್ಯವಾದ ನುಡಿಮುತ್ತು ಗಳನ್ನು ಮಲೆನಾಡಿನ ಪ್ರತೀ ಮನೆಯಲ್ಲೂ ಗೋಚರಿಸು ವಂತೆ ಮಾಡಿದೆ.  ಅತ್ಯಂತ ವೇಗದ, ಆತುರದ,  ಸಮಾ ಧಾನವೇ ಇಲ್ಲದಂತಹ ಈ ಆಧುನಿಕ ಯುಗದಲ್ಲೂ ನೆಮ್ಮದಿ ಬದುಕಿನ ಸರಳ ಸೂತ್ರಗಳನ್ನು ಬೋಧಿಸುವ ಇಂತಹ ಚಿತ್ರಪಟಗಳು ಈಗಲೂ ಅಲ್ಲಲ್ಲಿಯಾದರೂ ಕಾಣಿಸುತ್ತಿವೆ ಎಂದರೆ ಚಕಿತಗೊಳಿಸುವಂಥದ್ದೆ.

ಅದೇನೇ ಇರಲಿ. ಕಲ್ಲು, ಇಟ್ಟಿಗೆ, ಗಾರೆ, ಹೆಂಚು ಅಥವಾ ಕ್ರಾಂಕ್ರಿಟ್‌ ತಾರಸಿ ಹಾಕಿಸಿ ಮನೆ ಕಟ್ಟಿಕೊಂಡರಷ್ಟೇ ಸಾಲದು, ಆ ಮನೆಯಲ್ಲಿ ಬದುಕುವ ಮನಸುಗಳೂ ಪರಸ್ಪರ ಬೆಸೆದುಕೊಳ್ಳಬೇಕು. ಅದೊಂದು ಸರಳ, ಸುಂದರ, ನೆಮ್ಮದಿಯ ಗುಬ್ಬಚ್ಚಿ ಗೂಡು ಎನಿಸಿಕೊಳ್ಳಬೇಕಾದರೆ ಈ ಪಂಚಸೂತ್ರಗಳನ್ನು ಪಾಲಿಸಲೇಬೇಕು ಎನಿಸುವುದಿಲ್ಲವೇ?

ಹೌದು, ಅಪರೂಪಕ್ಕೆಂಬಂತೆ ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಎಂಬ ಹಾಡು ನೆರೆಯ ಮನೆಯ ರೇಡಿಯೋದಿಂದಲೋ, ಟಿ.ವಿಯಲ್ಲೋ ಪ್ರಸಾರವಾಗುತ್ತಿದೆ. ಕೇಳಿಸಿಕೊಳ್ಳಿ, ಇದು ತನ್ಮಯಗೊಳ್ಳುವ ಸಮಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT