ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಒಡತಿಯ ಕೈ ಕತ್ತರಿಸಿ ಪರಾರಿ

ಕಡಿಮೆ ಬೆಲೆಗೆ ಮರಳು ಪೂರೈಸದ ಕಾರಣಕ್ಕೆ ಗಲಾಟೆ; ನಾಲ್ವರಿಂದ ಕೃತ್ಯ
Last Updated 3 ಜುಲೈ 2015, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಗೆ ಮರಳು ಪೂರೈಸಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಲಾರಿ ಮಾಲೀಕನ ಮೇಲೆ ಕೋಪಗೊಂಡ ದುಷ್ಕರ್ಮಿಗಳು, ಅವರ ಪತ್ನಿ ಎಂದು ಭಾವಿಸಿ ಮಚ್ಚಿನಿಂದ ಮತ್ತೊಬ್ಬ ಮಹಿಳೆಯ ಮುಂಗೈ ಕತ್ತರಿಸಿ ಪರಾರಿಯಾಗಿರುವ ಘಟನೆ ಹೇರೋಹಳ್ಳಿ ಸಮೀಪದ ಕೆಂಪೇಗೌಡನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಮಂಗಳಗೌರಿ (23) ಅವರ ಎಡಗೈ ತುಂಡಾಗಿದ್ದು, ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ವರ್ತನೆಯನ್ನು ಪ್ರಶ್ನಿಸಲು ಮುಂದಾದ ಮಂಗಳಗೌರಿ ಅವರ ಪತಿ ರಾಘವೇಂದ್ರ ಹಾಗೂ ಅತ್ತೆ ದೊಡ್ಡಮ್ಮ ಅವರ ಮೇಲೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

‘ಕುಣಿಗಲ್‌ನ ಕೃಷ್ಣ, ಭಟ್ಟರಹಳ್ಳಿಯ ಸಂದೀಪ್ ಹಾಗೂ ಅವರ ಮತ್ತಿಬ್ಬರು ಸಹಚರರು ಈ ಕೃತ್ಯ ಎಸಗಿದ್ದಾರೆ. ಅವರ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಏನಿದು ಗಲಾಟೆ: ಎಲೆಕ್ಟ್ರಿಷಿಯನ್ ಆಗಿರುವ ರಾಘವೇಂದ್ರ, ಪತ್ನಿ–ಅತ್ತೆ ಜತೆ ಕೆಂಪೇಗೌಡನಗರ ಎರಡನೇ ಅಡ್ಡರಸ್ತೆಯ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. ತಮ್ಮ  ಮತ್ತೊಂದು ಮನೆಯನ್ನು ಲಾರಿ ಮಾಲೀಕ ನಂಜೇಗೌಡ ಮತ್ತು ಅವರ ಭಾಮೈದ ಕುಮಾರ್ ಎಂಬುವರಿಗೆ ಬಾಡಿಗೆ ಕೊಟ್ಟಿದ್ದರು. ಆರು ತಿಂಗಳ ಹಿಂದೆ ವಿವಾಹವಾದ ನಂಜೇಗೌಡ, ನಂತರ ವಾಸ್ತವ್ಯವನ್ನು ಸುಂಕದಕಟ್ಟೆಗೆ ಬದಲಾಯಿಸಿದ್ದರು.

‘ಆರೋಪಿಗಳಾದ ಕೃಷ್ಣ ಮತ್ತು ಸಂದೀಪ್ ಅಕ್ರಮ ಮರಳು ಮಾರಾಟ ದಂಧೆ ನಡೆಸುತ್ತಾರೆ. ಸಂದೀಪ್‌ ಭಟ್ಟರಹಳ್ಳಿಯಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿಸುತ್ತಿದ್ದಾನೆ. ಹೀಗಾಗಿ ತಮ್ಮ ಲಾರಿಯಲ್ಲಿ ಕಡಿಮೆ ಬೆಲೆಗೆ ಮರಳು ಪೂರೈಕೆ ಮಾಡುವಂತೆ ಭಾವ–ಭಾಮೈದನಿಗೆ ತಿಳಿಸಿದ್ದರು. ಇದಕ್ಕೆ ನಂಜೇಗೌಡ ಒಪ್ಪಿರಲಿಲ್ಲ. ಹೀಗಾಗಿ ಆರೋಪಿಗಳು ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ನಂಜೇಗೌಡ ವಾಸ್ತವ್ಯ ಬದಲಿಸಿರುವ ವಿಷಯ ತಿಳಿಯದ ಕೃಷ್ಣ ಹಾಗೂ ಸಂದೀಪ್, ಬುಧವಾರ ರಾತ್ರಿ ಕೆಂಪೇಗೌಡನಗರದ ಮನೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಕುಮಾರ್ ಜತೆ ಜಗಳ ಪ್ರಾರಂಭಿಸಿದ್ದರು. ಆಗ ಮಧ್ಯಪ್ರವೇಶಿಸಿದ್ದ ಮನೆ ಮಾಲೀಕ ರಾಘವೇಂದ್ರ, ‘ನಿಮ್ಮ ವ್ಯವಹಾರ ಏನಿದ್ದರೂ ಆಚೆ ಇಟ್ಟುಕೊಳ್ಳಿ. ನಮ್ಮ ಮನೆ ಬಳಿ ಬಂದು ಬಾಡಿಗೆದಾರರ ಜತೆ ಗಲಾಟೆ ಮಾಡಿದರೆ ಪೊಲೀಸರಿಗೆ ವಿಷಯ ತಿಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು, ನಂಜೇಗೌಡ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಸಹಚರರ ಜತೆ ಗುರುವಾರ ರಾತ್ರಿ ಪುನಃ ಮನೆ ಬಳಿ ಹೋಗಿದ್ದರು. ಆಗ ರಾಘವೇಂದ್ರ, ‘ನಂಜೇಗೌಡ ಮನೆ ಖಾಲಿ ಮಾಡಿ ಆರು ತಿಂಗಳಾಯಿತು. ಭಾಮೈದ ಕುಮಾರ್ ಮಾತ್ರ ನೆಲೆಸಿದ್ದಾರೆ’ ಎಂದು ಹೇಳಿದ್ದರು. ಇದನ್ನು ನಂಬದ ಆರೋಪಿಗಳು, ಅವರನ್ನು ಕೆಳಗೆ ತಳ್ಳಿ ಮನೆಯೊಳಗೆ ನುಗ್ಗಿದ್ದರು.

ನಂತರ ಒಳಗಿದ್ದ ಕುಮಾರ್‌ ಅವರನ್ನು ಥಳಿಸಿ, ಭಾವನ ಬಗ್ಗೆ ವಿಚಾರಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ರಾಘವೇಂದ್ರ, ಮಂಗಳಗೌರಿ ಹಾಗೂ ದೊಡ್ಡಮ್ಮ ಅವರು ಕುಮಾರ್‌ನ ರಕ್ಷಣೆಗೆ ಧಾವಿಸಿದರು. ಈ ವೇಳೆ ಕೃಷ್ಣ, ನಂಜೇಗೌಡರ ಪತ್ನಿ ಎಂದು ಭಾವಿಸಿ ಮಂಗಳಗೌರಿ ಅವರ ಕೈಗೆ ಮಚ್ಚಿನಿಂದ ಹೊಡೆದ.

ಇತರೆ ಆರೋಪಿಗಳು ರಾಘವೇಂದ್ರ ಹಾಗೂ ದೊಡ್ಡಮ್ಮ ಅವರ ಮೇಲೆ ಹಲ್ಲೆ ನಡೆಸಿದರು. ನಂತರ ‘ಮತ್ತೆ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತೇವೆ. ನಂಜೇಗೌಡ ಹಾಗೂ ಆತನ ಪತ್ನಿಯನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿ ಪರಾರಿಯಾದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಯತ್ನ (ಐಪಿಸಿ 307), ಹಲ್ಲೆ (ಐಪಿಸಿ 324), ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504), ಜೀವ ಬೆದರಿಕೆ (ಐಪಿಸಿ 506) ಹಾಗೂ ಅತಿಕ್ರಮವಾಗಿ ಮನೆಗೆ ನುಗ್ಗಿದ (ಐಪಿಸಿ 448) ಆರೋಪದ ಮೇಲೆ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಶಸ್ವಿ ಶಸ್ತ್ರಚಿಕಿತ್ಸೆ
‘ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಜಗಳ ನಡೆಯುವಾಗಲೇ ಸ್ಥಳೀಯರು ಠಾಣೆಗೆ ಕರೆ ಮಾಡಬಹುದಿತ್ತು. ಆದರೆ, ಎಲ್ಲ ಮುಗಿದ ನಂತರ ಮಾಹಿತಿ ಕೊಟ್ಟರು. ಕೂಡಲೇ ಗಾಯಾಳುಗಳನ್ನು ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಶಸ್ತ್ರಚಿಕಿತ್ಸೆ ಮೂಲಕ ಮಂಗಳಗೌರಿ ಅವರ ಅಂಗೈಯನ್ನು ಯಶಸ್ವಿಯಾಗಿ ಜೋಡಿಸಲಾಗಿದೆ. ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT