ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಕಟ್ಟಿಸಲು ಗುತ್ತಿಗೆದಾರನ ನಂಬಿ ಕೆಟ್ಟಂತಾಯಿತಲ್ಲಾ...

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆ  ದಂಪತಿಯದ್ದು ಈಶ್ವರ ಪಾರ್ವತಿ ಹೋಲುವಂತಹುದೇ ಹೆಸರು. ಮೈಸೂರು ನಿವಾಸಿಗಳಾದ ಅವರಿಗೂ ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳಬೇಕು ಎಂಬ ಕನಸಿತ್ತು. ಅದಕ್ಕಾಗಿಯೇ ಮಧ್ಯಮವರ್ಗದ ಆ ಕುಟುಂಬ ವರ್ಷಗಳ ಕಾಲದಿಂದ ಕಷ್ಟಪಟ್ಟು ಸಾಕಷ್ಟು ಹಣವನ್ನು ಉಳಿಸುತ್ತಾ ಬಂದಿತ್ತು.

ವರ್ಷಗಳ ಪ್ರಯತ್ನದ ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನವೂ ಮಂಜೂರಾಯಿತು. ಅಷ್ಟರಲ್ಲಾಗಲೇ ಒಂದಷ್ಟು ಲಕ್ಷ ಹಣವೂ ಸೇರಿಕೊಂಡಿತ್ತು. ಬ್ಯಾಂಕ್‌ನಲ್ಲಿ ಗೃಹಸಾಲವೂ ಹೆಚ್ಚಿನ ತಕರಾರಿಲ್ಲದೆ ಮಂಜೂರಾಯಿತು. ಕಡೆಗೂ ಕನಸಿನ ಮನೆ ಕಟ್ಟಿಕೊಳ್ಳುವ ಗಳಿಗೆ ಕೂಡಿಬಂದಿತು.

ಪತಿರಾಯರದ್ದು ಯಂತ್ರೋಪಕರಣಗಳ ಕಾರ್ಖಾನೆಯಲ್ಲಿ ಕೆಲಸ. ಅವರ ಪರಿಣತಿ ಇದ್ದುದು ಯಂತ್ರೋಪಕರಣಗಳ ಕುರಿತಾಗಿತ್ತು. ಮನೆ ಕಟ್ಟುವ ವಿಚಾರದಲ್ಲಿ ಹೆಚ್ಚೇನೂ ಜ್ಞಾನ ಇರಲಿಲ್ಲ.

ಕನಸಿನ ಮನೆಗೆ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾಯಿತು. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಯನ್ನೂ ಪಡೆದಾಯಿತು. ಇನ್ನೇನಿದ್ದರೂ ಮನೆ ಕಟ್ಟುವುದನ್ನು ಆರಂಭಿಸುವುದಷ್ಟೇ ಬಾಕಿ.

ಆಗಲೇ ಎದುರಾಗಿದ್ದು ಮುಖ್ಯ ಪ್ರಶ್ನೆ. ಮನೆಯನ್ನು ತಾವೇ ಮುಂದೆ ನಿಂತುಕೊಂಡು ಕಟ್ಟಿಸುವುದೋ ಅಥವಾ ‘ಅನುಭವಿ’ ಗುತ್ತಿಗೆದಾರರಿಗೆ ಒಪ್ಪಿಸುವುದೋ?

ಬಂಧು ಮಿತ್ರರು, ಪರಿಚಯದವರ ಸಲಹೆಗಳ ಮೇರೆಗೆ ಒಬ್ಬ ಗುತ್ತಿಗೆದಾರರನ್ನು ನೇಮಿಸಿಕೊಂಡಿದ್ದೂ ಆಯಿತು. ನಗುನಗುತ್ತಲೇ ಮಾತನಾಡುತ್ತಿದ್ದ ಆ ಗುತ್ತಿಗೆದಾರನ ಬಗ್ಗೆ ದಂಪತಿಗೆ ವಿಶ್ವಾಸ ಮೂಡಲು ಹೆಚ್ಚು ಸಮಯೂ ಹಿಡಿಯಲಿಲ್ಲ.

ತಳಪಾಯದಿಂದ ಆರಂಭಿಸಿ ಮಹಡಿ ಮನೆ ನಿರ್ಮಿಸಿಕೊಡುವುದು. ಮನೆ ಡ್ಯುಪ್ಲೆಕ್ಸ್‌ ಶೈಲಿಯದಾಗಿದ್ದರಿಂದ ಸ್ಟೇರ್‌ಕೇಸ್‌ (ಮಹಡಿಗೆ ಮೆಟ್ಟಿಲು) ಹಜಾರದಲ್ಲಿ ಬರಬೇಕು. ಕೆಳ ಅಂತಸ್ತಿನಲ್ಲಿನ ಹಜಾರ, ಅಡುಗೆ ಮನೆ (ಜತೆಗೆ ಸ್ಟೋರ್‌ರೂಂ), ಪೂಜಾಗೃಹ, ಒಂದು ಕೊಠಡಿ, ನೆಲದಾಳದ ನೀರಿನ ಸಂಗ್ರಹ ತೊಟ್ಟಿ, ತಾರಸಿ ಮೇಲೊಂದು ಟ್ಯಾಂಕ್‌, ವಿದ್ಯುತ್‌, ನಲ್ಲಿ ಸಂಪರ್ಕ, ಬಣ್ಣ ಹೊಡೆಸುವುದೂ ಸೇರಿದಂತೆ ಚದರಡಿಗೆ ₨1.30 ಲಕ್ಷ ಲೆಕ್ಕದಲ್ಲಿ ಮನೆ ನಿರ್ಮಿಸಿಕೊಡಬೇಕು. ನಾಲ್ಕೂ ಮಗ್ಗಲಿಗೆ ಕಾಂಪೌಂಡ್‌ಗೆ ಬೇರೆಯದೇ ಲೆಕ್ಕಾಚಾರ ಎಂದು ಮಾತಾಯಿತು.

ಹಲವು ಸುತ್ತಿನ ಮಾತುಕತೆ, ಒಪ್ಪಂದ ಎಲ್ಲಾ ಆದ ನಂತರ ಒಂದು ಶುಭಮುಹೂರ್ತದಲ್ಲಿ ತಳಪಾಯಕ್ಕಾಗಿ ಗುದ್ದಲಿ ಪೂಜೆಯೂ ಸಾಂಪ್ರದಾಯಿಕವಾಗಿ ನೆರವೇರಿತು. ಭೂಮಿ ಅಗೆಯುವುದು, ಕಲ್ಲು ಕಟ್ಟಡ, ಗೋಡೆ ನಿರ್ಮಾಣ ನಡೆಯುತ್ತಾ ಹೋಯಿತು.

ಪತಿರಾಯರಿಗೆ ಹಗಲು ಕಚೇರಿ ಕೆಲಸ ಇರುತ್ತಿದ್ದುದರಿಂದ ಮನೆ ನಿರ್ಮಾಣದ ಸ್ಥಳದಲ್ಲಿ ಹೆಚ್ಚು ಸಮಯ ಇರಲಾಗುತ್ತಿರಲಿಲ್ಲ. ಪತ್ನಿಯೇ ಸ್ಕೂಟಿಯಲ್ಲಿ ಬಂದು ಸಂಜೆವರೆಗೂ ಇದ್ದು ಹೋಗುತ್ತಿದ್ದರು. ಆದರೆ, ಅವರಿಗೆ ಮನೆ ನಿರ್ಮಾಣದ ವಿವಿಧ ಹಂತಗಳು, ಕೆಲಸದ ವೈಖರಿ ಹಾಗೂ ಸಿಮೆಂಟ್‌ ಮರಳು ಜಲ್ಲಿ ಮಿಶ್ರಣ ಮೊದಲಾದ ಸಂಗತಿಗಳು ಅಷ್ಟೇನೂ ತಿಳಿಯುತ್ತಿರಲಿಲ್ಲ. ಗುತ್ತಿಗೆದಾರರನ್ನು ಕೇಳಿದಾಗೆಲ್ಲಾ ಆತ ನಗುತ್ತಲೇ ಸಮಜಾಯಿಷಿ ನೀಡುತ್ತಿದ್ದರು. ‘ನೀವೇನೂ ಆತಂಕ ಪಡಬೇಡಿ ತಾಯಿ. ನಿಮ್ಮ ಮನೆಯನ್ನು ಅಚ್ಚುಕಟ್ಟಾಗಿಯೆ ಕಟ್ಟಿಕೊಡುತ್ತೇನೆ’ ಎಂದು ನಗುನಗುತ್ತಲೇ ಭರವಸೆ ನೀಡುತ್ತಿದ್ದರು.

ಗುತ್ತಿಗೆದಾರರು ಕಿಟಕಿ, ಬಾಗಿಲು ಚೌಕಟ್ಟುಗಳನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡಿರಲಿಲ್ಲ. ಹಾಗಾಗಿ, ಬಾಗಿಲು, ಕಿಟಕಿ ಬರುವೆಡೆಯಲ್ಲೆಲ್ಲಾ  ಜಾಗ ಖಾಲಿ ಬಿಟ್ಟು ಗೋಡೆ, ತಾರಸಿ ಕೆಲಸ ಮುಗಿಸಿದರು. ಆಗಲೂ ಸಂಶಯಗೊಂಡ ಮನೆ ಮಾಲೀಕರು ಪ್ರಶ್ನಿಸಿದ್ದಕ್ಕೆ, ಗುತ್ತಿಗೆದಾರರಿಂದ ಮತ್ತದೇ ನಗುವಿನಿಂದೊಡಗೂಡಿದ ಸಮಾದಾನದ ಉತ್ತರ.

ನಿಧಾನವಾಗಿ ಸಿದ್ಧವಾದ ಕಿಟಕಿ, ಬಾಗಿಲು ಚೌಕಟ್ಟುಗಳನ್ನು ನಂತರ ಖಾಲಿ ಬಿಟ್ಟ ಎಡೆಯಲ್ಲಿ ಕ್ಲ್ಯಾಂಪ್‌ಗಳನ್ನು ಹಾಕಿ ಅಳವಡಿಸಲಾಯಿತು. ಆಗ ಗೋಡೆಯ ಅಂಚಿಗೂ, ಮರದ ಚೌಕಟ್ಟುಗಳ ನಡುವೆ ಒಂದು ಒಂದೂವರೆ ಅಂಗುಲದಷ್ಟು ಅಂತರ ಉಳಿಯಿತು. ಆಗಲೂ ಮನೆ ಮಾಲೀಕರು ಪ್ರಶ್ನಿಸಿದ್ದಕ್ಕೆ, ‘ನಂಬಿಕೆ ಇಡಿ ಸಾರ್‌. ಅಲ್ಲೆಲ್ಲಾ ಕಾಂಕ್ರೀಟ್‌ ಭರ್ತಿ ಮಾಡಿಸುತ್ತೇನೆ. ನಿಮ್ಮ ಮನೆ ಭದ್ರವಾಗಿಯೆ ಕಟ್ಟಿಕೊಡುತ್ತೇನೆ’ ಎಂಬ ನಗುವಿನ ಉತ್ತರ. ಸ್ವಂತ ಮನೆಯ ಕನಸು ಕಂಡ ದಂಪತಿ, ಸದಾ ನಗುಮುಖದ ಗುತ್ತಿಗೆದಾರರ ಮಾತನ್ನೇ ನಂಬುತ್ತಾ ಹೋದರು.

ಎರಡೂ ಅಂತಸ್ತಿನ ತಾರಸಿಯೂ ಆಯಿತು. ವಿದ್ಯುತ್‌ ವೈರಿಂಗ್, ನಲ್ಲಿ ಜೋಡಣೆ ವೇಳೆ ಗಮನಿಸಿದರೆ ಹಲವು ಲೋಪಗಳು ನಿಧಾನವಾಗಿ ಗೋಚರಿಸಲಾರಂಭಿಸಿದವು. ಮನೆ ನಿರ್ಮಾಣ ಆರಂಭಕ್ಕೂ ಮುನ್ನ ಹೇಳಿದ್ದೇ ಒಂದು, ಈಗ ಬಳಸುತ್ತಿರುವ ಸಲಕರಣಗಳೇ ಬೇರೊಂದು. ಆಗ ಪ್ರಶ್ನಿಸಿದರೂ ಮತ್ತದೇ ನಗುವಿನ ಸಮಜಾಯಿಷಿ.

ಬಣ್ಣ ಹೊಡೆದೂ ಆಯಿತು. ಅಂತೂ ಮನೆ ನಿರ್ಮಾಣ 9 ತಿಂಗಳಲ್ಲಿ ಪೂರ್ಣಗೊಂಡಿತು. ಬಂಧು ಮಿತ್ರರನ್ನು ಕರೆದು ಅದ್ದೂರಿಯಾಗಿ ಗೃಹ ಪ್ರವೇಶವನ್ನೂ ಮುಗಿಸಲಾಯಿತು.

ಗುತ್ತಿಗೆದಾರರ ಬಾಕಿ ಹಣವನ್ನೂ ಪಾವತಿಸಲಾಯಿತು. ಗೃಹಪ್ರವೇಶದ ದಿನ ಹೊಸ ಬಟ್ಟೆ, ಫಲ ತಾಂಬೂಲದೊಂದಿಗೆ ಗೌರವವನ್ನೂ ಸಲ್ಲಿಸಲಾಯಿತು.

ಮುಂದಿನ ಒಂದು ವಾರದೊಳಗೆ ಬಾಡಿಗೆ ಮನೆ ಖಾಲಿ ಮಾಡಿ ‘ಸ್ವಂತ ಮನೆ’ಗೆ ಸ್ಥಳಾಂತರಗೊಂಡಿದ್ದೂ ಆಯಿತು. ಕಡೆಗೂ ನಮ್ಮದೇ ಮನೆಯಲ್ಲಿ ವಾಸಿಸುವ ಸಮಯ ಬಂದಿತು. ಇನ್ನೇನಿದ್ದರೂ ಸುಖ ಶಾಂತಿಯ ಬದುಕು ಎಂಬ ನೆಮ್ಮದಿಯ  ಭಾವ.
ದಿನಗಳು ನಿಲ್ಲುವುದಿಲ್ಲ. ಚಳಿಗಾಲವಾಯಿತು. ಬೇಸಿಗೆಯೂ ಓಡೋಡಿ ಬಂದಿತು.

ಗೋಡೆಗಳಲ್ಲಿ ಅಲ್ಲಲ್ಲಿ ಒಂದೊಂದು ಸಣ್ಣ ಬಿರುಕುಗಳು ಕಾಣಿಸಿಕೊಂಡವು. ಗುತ್ತಿಗೆದಾರರಿಗೆ ಕರೆ ಹೋಯಿತು.
‘ಏ ಇದೆಲ್ಲಾ ಮಾಮೂಲು. ಹೊಸ ಮನೆಯ ಗೋಡೆ ಅಲ್ಲವೇ, ಏರ್‌ಕ್ರಾಕ್‌ ಇದ್ದದ್ದೇ. ನೀವೇನೂ ಚಿಂತೆ ಮಾಡಬೇಡಿ’ ಎಂದು ಗುತ್ತಿಗೆದಾರರ ನಗುತ್ತಲೇ ಸಮಾಧಾನದ ಉತ್ತರ ನೀಡಿದರು.

ಬಿಸಿಲ ತಾಪ ಜೋರಾದಂತೆ ಕಿಟಕಿ, ಬಾಗಿಲು ಚೌಕಟ್ಟುಗಳು ತುಸು ತುಸುವೇ ಕಿರಿದಾಗುತ್ತಾ ಗೋಡೆಯಂಚಿನಿಂದ ದೂರ ಸರಿಯಲಾರಂಭಿಸಿದವು. ಚೂರು ಚೂರೇ ಕಾಂಕ್ರಿಟ್‌ ಉದುರಿಸಲಾರಂಭಿಸಿತು.

ಇದೇಕೇ ಹೀಗಾಗುತ್ತಿದೆ? ಎಂಬ ಪ್ರಶ್ನೆ ಇಟ್ಟುಕೊಂಡೇ ಗುತ್ತಿಗೆದಾರರಿಗೆ ಕರೆ ಮಾಡಲಾಯಿತು. ಫೋನಿನಲ್ಲಿ ನಗುತ್ತಲೇ ಮಾತನಾಡಿದ ಆತ, ಆಗ ಬರುವೆ, ಈಗ ಬರುವೆ ಎಂದು ಹೇಳುತ್ತಲೇ ಇದ್ದರು.

ಗುತ್ತಿಗೆದಾರ ತೇವಾಂಶವಿನ್ನೂ ಆರದೇ ಇದ್ದ ಮರಮುಟ್ಟುಗಳನ್ನೇ ತಂದು ಕಿಟಕಿ ಬಾಗಿಲು ಮಾಡಿಸಿದ್ದರು. ಬೇಸಿಗೆ ಕಾಲದ ತಾಪದಲ್ಲಿ ಚೌಕಟ್ಟುಗಳು ತೇವಾಂಶ ಕಳೆದುಕೊಳ್ಳುತ್ತಾ ಕುಗ್ಗಲಾರಂಭಿಸಿದವು.  ಕೊನೆಗೆ ಚೌಕಟ್ಟು ಮತ್ತು ಬಾಗಿಲು ಒಂದೊಂದು ದಿಕ್ಕಿಗೆ ವಾಲಿಕೊಂಡು ಉರುಟುರುಟಾಗಿ ಕಾಣಲಾರಂಬಿಸಿದವು. ಪರಿಣಾಮ, ಒಂದೋ ಬಾಗಿಲು ಹಾಕಲು ಆಗುತ್ತಿರಲಿಲ್ಲ, ಇಲ್ಲವೇ ಹಾಕಿದ ಬಾಗಿಲನ್ನು ತೆರೆಯುವುದೇ ಕಷ್ಟವಾಗುತ್ತಿತ್ತು.

ಈ ಮಧ್ಯೆ ಮನೆಗೆ ಬರುತ್ತಿದ್ದ ಬಂಧು ಮಿತ್ರರು, ಪರಿಚಿತರಿಗೆ ದಂಪತಿ ತಮ್ಮ ಹೊಸ ಮನೆಯನ್ನು ಒಳಹೊರಗೆಲ್ಲಾ ತೋರಿಸಿ ಸ್ವಂತ ಮನೆ ಕಟ್ಟಿಸಿದ ಖುಷಿ ಅನುಭವಿಸುತ್ತಿದ್ದರು. ಆದರೆ, ಆ ಖುಷಿ ಹೆಚ್ಚು ಸಮಯ ಉಳಿಯುತ್ತಿರಲಿಲ್ಲ.
ನೋಡಿದವರೆಲ್ಲಾ, ಮನೆ ನಿರ್ಮಾಣದಲ್ಲಿ ಎದ್ದು ಕಾಣುತ್ತಿದ್ದ ಒಂದೊಂದೇ ಲೋಪಗಳನ್ನು ಗುರುತಿಸಿ ತೋರುತ್ತಿದ್ದಾಗ ದಂಪತಿ ಖುಷಿಯಲ್ಲೇ ಕರಗಿ ಹೋಗುತ್ತಿತ್ತು.

ಮುಂದೆ ಬಂದದ್ದೇ ಮಳೆಗಾಲ. ಈ ಅವಧಿಯಲ್ಲಿ ಮನೆಯ ಇನ್ನಷ್ಟು ಹುಳುಕುಗಳು ಹೊರಗೆಬಂದವು. ಸಾಮಾನ್ಯವಾಗಿ ತಾರಸಿಯಲ್ಲಿ ಮಳೆ ನೀರು ಸರಾಗ ಹರಿದುಹೋಗುವಂತೆ ಮಧ್ಯಭಾಗದಿಂದ ಅಂಚಿನತ್ತ ಅಲ್ಪ ಪ್ರಮಾಣದಲ್ಲಿ ಗಾರೆಯನ್ನು ಇಳಿಜಾರು ಮಾಡಲಾಗುತ್ತದೆ. ಆದರೆ, ಆ ಕೆಲಸದಲ್ಲಾಗಲೀ, ಮಳೆ ನೀರು ಹರಿದು ಹೋಗುವ ಪಿವಿಸಿ ಪೈಪ್‌ ಜೋಡಣೆ ಕೆಲಸವನ್ನಾಗಲೀ ಅಚ್ಚುಕಟ್ಟಾಗಿ ಮಾಡಿರಲಿಲ್ಲ. ಇದರಿಂದ ತಾಸಿಯಲ್ಲಿ ನೀರು ನಿಂತು ಗೋಡೆಗಳು ತೇವಾಂಶ ಹೀರಿಕೊಳ್ಳಲಾರಂಭಿಸಿದವು. ಗೋಡೆಗಳ ಒಳ ಹೊರ ಭಾಗದ ಗಾರೆ ಸ್ವಲ್ಪ ಸ್ವಲ್ಪವೇ ಕಿತ್ತು ಬರಲಾರಂಭಿಸಿತು.

ವರ್ಷ ಕಳೆಯುವಷ್ಟರಲ್ಲೇ ಕನಸಿನ ಮನೆಯ ಪರಿಸ್ಥಿತಿ ಹದಗೆಟ್ಟು ದುಃಸ್ವಪ್ನದಂತೆ ಭಾಸವಾಯಿತು. ಎರಡನೇ ವರ್ಷ ತುಂಬುತ್ತಿರುವ ಈ ಹೊತ್ತಿನಲ್ಲೇ ದಂಪತಿ ಸ್ವಂತ ಮನೆಯ ನೆಮ್ಮದಿ ಕಳೆದುಕೊಂಡಿದ್ದಾರೆ.  ಅವರ ಮನಸ್ಥಿರಿ ಹೇಗಾಗಿದೆ ಎಂದರೆ, ಯಾರಿಗಾದರೂ ಮಾರಿ ಕೈತೊಳೆದುಕೊಳ್ಳೋಣ ಎಂಬಷ್ಟು ಬೇಸರಗೊಂಡಿದ್ದಾರೆ.

ಇಲ್ಲಿ ಎಲ್ಲಿ ಲೋಪವಾಯಿತು. ಮನೆ ನಿರ್ಮಾಣದ ಬಗ್ಗೆ ಮಾಲೀಕರಿಗೆ ಹೆಚ್ಚಿನ ಜ್ಞಾನ ಇರದೇ ಇದ್ದುದೇ ತಪ್ಪೇ?  ಗುತ್ತಿಗೆದಾರರನ್ನು ನಂಬಿ ಕೆಲಸ ಒಪ್ಪಿಸಿದ್ದೇ ತಪ್ಪೇ? ಒಪ್ಪಂದದಂತೆ ಹಣ ಪಾವತಿಸುತ್ತಾ ಬಂದರೂ ಲಾಭದಾಸೆಯಿಂದ ಕಳಪೆ ಗುಣಮಟ್ಟದ ಮನೆ ಕಟ್ಟಿಕೊಟ್ಟ ಗುತ್ತಿಗೆದಾರನದೇ ತಪ್ಪೇ?

ಹತ್ತಿಪ್ಪತ್ತು ವರ್ಷಗಳ ಕಾಲ ಕಷ್ಟಪಟ್ಟು ಉಳಿಸಿದ ಹಣದಲ್ಲಿ ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳುವ ಕನಸು ಕಾಣುವ ಜನರ ಆಸೆ ಈಡೇರುವುದಾದರೂ ಹೇಗೆ?

ಮನೆ ನಿರ್ಮಾಣದ ಗುತ್ತಿಗೆಯನ್ನು ಒಟ್ಟಾರೆಯಾಗಿ ವಹಿಸುವುದು ಸರಿಯೋ? ಸಾಮಗ್ರಿಗಳನ್ನು ತಾವೇ ಓಡಾಡಿ ಖರೀದಿಸಿ, ನಿರ್ಮಾಣದ ವಿವಿಧ ಹಂತದ ಕೆಲಸಗಳಿಗೆ ಕೂಲಿ ಪಾವತಿಸಿ ಮನೆ ಕಟ್ಟಿಸಿಕೊಳ್ಳುವುದೇ ಸರಿಯೋ?

ಇತ್ತೀಚಿನ ವರ್ಷಗಳಲ್ಲಿ ಮನೆ ಕಟ್ಟಿಸಿದವರು ತಮ್ಮ ಒಳ್ಳೆಯ/ಕೆಟ್ಟ ಅನುಭವಗಳನ್ನು ಇಲ್ಲಿ ಹಂಚಿಕೊಂಡರೆ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಯೋಜಿಸಿದವರಿಗೆ ಅವೆಲ್ಲವೂ ದಾರಿದೀಪ ಆಗಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT