ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನೆಲಸಮ: ₹ 50 ಕೋಟಿ ಆಸ್ತಿ ವಶ

ಅಲ್ಲಾಳಸಂದ್ರ ಕೆರೆ ಒತ್ತುವರಿ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ
Last Updated 25 ಏಪ್ರಿಲ್ 2015, 20:31 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ಸಮೀಪದ ಅಲ್ಲಾಳಸಂದ್ರ ಕೆರೆ ಅಂಗಳದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ 42 ಮನೆಗಳನ್ನು ಶನಿವಾರ ತೆರವುಗೊಳಿಸಿದ ನಗರ ಜಿಲ್ಲಾಡಳಿತ, ಸುಮಾರು ₹ 50 ಕೋಟಿ ಮೌಲ್ಯದ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದೆ.

ಜಿಲ್ಲಾಧಿಕಾರಿ ವಿ.ಶಂಕರ್‌ ನೇತೃತ್ವದಲ್ಲಿ ಭಾರೀ ಪೊಲೀಸ್‌ ಭದ್ರತೆಯೊಂದಿಗೆ ಬೆಳಿಗ್ಗೆ 8 ಗಂಟೆಗೆ ತೆರವು ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ, ಜೆಸಿಬಿ ಯಂತ್ರಗಳ ನೆರವಿನಿಂದ ಮನೆಗಳನ್ನು ಒಡೆದು ಉರು ಳಿಸುವ ಮೂಲಕ ಬೆಳಿಗ್ಗೆ 10.30 ಗಂಟೆ ಯೊಳಗಾಗಿ ಸಂಪೂರ್ಣ ನೆಲಸಮಗೊಳಿ ಸಿದರು.  ಈ ಸಂದರ್ಭದಲ್ಲಿ ನಿವಾಸಿಗಳು ಗೋಳಾಡುತ್ತ ಸಾಮಗ್ರಿಗಳನ್ನು ಹೊರಗೆ ತೆಗೆದುಕೊಳ್ಳುತ್ತ, ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ 30 ವರ್ಷಗಳಿಂದ ಈ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಈಗ ಏಕಾಏಕಿ ತೆರವುಗೊಳಿಸಿದರೆ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ದಿಕ್ಕು ತೋಚದಂತಾಗಿದೆ. ಶ್ರೀಮಂತರ ಮನೆಗಳನ್ನು ಒಡೆದರೆ ಅವರು ತಡೆದು ಕೊಳ್ಳುತ್ತಾರೆ. ಆದರೆ ಬಡವರ ಮನೆಗಳನ್ನು ಧ್ವಂಸಗೊಳಿಸಿ, ಬೀದಿಗೆ ಹಾಕಿದರೆ ಒಳ್ಳೆಯದಾಗುವುದಿಲ್ಲ’ ಎಂದು ಪದ್ಮಜಾ ಅಳಲು ತೋಡಿಕೊಂಡರು.

‘ಇಲ್ಲಿ ಮನೆ ಕಳೆದುಕೊಂಡಿರುವವರಿಗೆ ಬೇರೆಡೆ ಪರ್ಯಾಯ ನಿವೇಶನ ನೀಡಲಾಗುವುದು ಎಂದು ತಿಳಿಸಿ, ಒಂದು ಟೋಕನ್‌ ರೀತಿಯ ಚೀಟಿ ನೀಡಿದ್ದು, ಹಕ್ಕುಪತ್ರ ಕೊಟ್ಟಿಲ್ಲ. ಆ ಪ್ರಕಾರ ನಮಗೆ ಗುರ್ತಿಸಿರುವ ಜಾಗದಲ್ಲಿ ಕಲ್ಲುಗಳನ್ನು ಅಳವಡಿಸಿದಾಗ ಸ್ಥಳೀಯರು ಅದನ್ನು ಕಿತ್ತೆಸೆದಿದ್ದಾರೆ. ಇದರಿಂದ ನಮಗೆ ನ್ಯಾಯ ಸಿಗುವ ಭರವಸೆ ಇಲ್ಲದಂತಾಗಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ನಮಗೆ ಜಾಗವನ್ನು ನಿಗದಿಪಡಿಸಿ, ಸೂಕ್ತ ನ್ಯಾಯ ದೊರಕಿಸಿಕೊಡಬೇಕು’ ಎಂದು ಕುಮಾರ್‌ ಆಗ್ರಹಿಸಿದರು.

‘ತೆರವು ಮಾಡಿಕೊಳ್ಳಲು ಇನ್ನೂ ಎರಡು ದಿನ ಕಾಲಾವಕಾಶ ನೀಡಿದ್ದರೆ ಅನುಕೂಲವಾಗುತ್ತಿತ್ತು. ಮನೆಯಲ್ಲಿ ನಾನೊಬ್ಬಳೇ ಇರುವುದರಿಂದ ಸಾಮಗ್ರಿಗಳನ್ನು ಬೇಗ ಸಾಗಿಸಲು ಸಾಧ್ಯವಾಗಲಿಲ್ಲ.  ಹಳೆಯ ಸಾಮಗ್ರಿಗಳಿಂದ ಬೇರೆಡೆ ಗುಡಿಸಲು ನಿರ್ಮಿಸಿಕೊಳ್ಳಬಹುದಾಗಿತ್ತು. ಆದರೆ ಮನೆಯನ್ನು ಧ್ವಂಸಗೊಳಿಸಿರುವುದರಿಂದ ಅದಕ್ಕೂ ಅವಕಾಶವಿಲ್ಲಂತಾಗಿದೆ’ ಎಂದು ಸುಬ್ಬಮ್ಮ ಕಣ್ಣೀರು ಸುರಿಸಿದರು.

4 ತಿಂಗಳ ಹಿಂದೆ ನೋಟಿಸ್‌:  ‘ಈ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದ ನಿವಾಸಿಗಳಿಗೆ  4 ತಿಂಗಳ ಹಿಂದೆಯೇ ನೋಟಿಸ್‌ ನೀಡಲಾಗಿತ್ತು. ಅವರೆಲ್ಲರೂ ಬಂದು ಭೇಟಿಯಾಗಿ ನಾವು ಕಡುಬಡವರಾಗಿದ್ದು, ನಮಗೆ ಬೇರೆಯಾವುದೇ ವಸತಿ ಸೌಕರ್ಯವಿಲ್ಲ. ಮನೆ ಕಳೆದುಕೊಂಡರೆ ಬೀದಿಪಾಲಾಗುತ್ತೇವೆ. ನಮಗೆ ವಾಸಿಸಲು ಪರ್ಯಾಯ ವ್ಯವಸ್ಥೆ ಒದಗಿಸಿ, ತೆರವುಗೊಳಿಸಿದರೆ ಅಭ್ಯಂತರವಿಲ್ಲ ಎಂದು ಕೇಳಿಕೊಂಡಿದ್ದರು’ ಎಂದು ಯಲಹಂಕ ತಹಶೀಲ್ದಾರ್‌ ಬಾಳಪ್ಪ ಹಂದಿಗುಂದ ತಿಳಿಸಿದರು.

‘ನಂತರ ಸ್ಥಳ ಪರಿಶೀಲನೆ ನಡೆಸಿ, ಈ ವಿಚಾರವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿತ್ತು.  ಅವರ ನಿರ್ದೇಶನದ ಮೇರೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.  ಎರಡು ಎಕರೆ ಪ್ರದೇಶದಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಿ, ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ’ ಎಂದರು.

ನೆಲ್ಲುಕುಂಟೆ ಕೆರೆ ಒತ್ತುವರಿ ತೆರವು: ಬೆಂಗಳೂರು ಉತ್ತರ ತಾಲ್ಲೂಕಿನ ಕಡತ ನಮಲೆ ಗ್ರಾಮದ ಸರ್ವೆ ಸಂಖ್ಯೆ 36ರಲ್ಲಿ ನೆಲ್ಲುಕುಂಟೆ ಕೆರೆ ಅಂಗಳದ ಒಟ್ಟು 24 ಎಕರೆ 37 ಗುಂಟೆ ಜಾಗದ 8 ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್‌ ಬಾಳಪ್ಪ ಹಂದಿಗುಂದ ಅವರು ತಿಳಿಸಿದರು.

ಡಿ.ಲಿಂಗಪ್ಪ, ಲಿಂಗಪ್ಪ, ಎಚ್‌.ಪಿ. ಅಶೋಕ್‌, ಪೂರ್ಣಿಮಾ ಕೋಂ ಎನ್‌.ಸ್ವಾಮಿ, ಚಿಕ್ಕೇಗೌಡ ಎಂಬುವರು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ ₹ 10 ಕೋಟಿಗಳಷ್ಟಾಗಿದೆ. ಸೋಮವಾರ ತೆರವು ಕಾರ್ಯಾಚರಣೆ ಮುಂದುವರಿಸಿ, ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
*
ಸಂತ್ರಸ್ತರಿಗೆ ವೀರಸಾಗರ ಗ್ರಾಮದಲ್ಲಿ 15 ಗುಂಟೆ ಜಮೀನಿನಲ್ಲಿ ನಿವೇಶನ ನೀಡಲು ವ್ಯವಸ್ಥೆ ಮಾಡಲಾಗಿದೆ.
- ಬಾಳಪ್ಪ ಹಂದಿಗುಂದ,
ತಹಶೀಲ್ದಾರ್‌


ಅಂಕಿಅಂಶ
41 
ಎಕರೆಅಲ್ಲಾಳಸಂದ್ರ ಕೆರೆ ವಿಸ್ತೀರ್ಣ
2 ಎಕರೆ ಒತ್ತುವರಿ
25 ಎಕರೆ ನೆಲ್ಲುಗುಂಟೆ ಕೆರೆ ವಿಸ್ತೀರ್ಣ
ಎಕರೆ ಒತ್ತುವರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT