ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬೇಡಿಕೆ ಇಳಿಮುಖ; ಸಮಯ ಕಾಯುತ್ತಿರುವ ಗ್ರಾಹಕ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ದೇಶದ ರಿಯಲ್‌ ಎಸ್ಟೇಟ್ ಅಭಿವೃದ್ಧಿ ಉದ್ಯಮ ಕ್ಷೇತ್ರವೇನೋ ಹೊಸದಾಗಿ ಬಂಡವಾಳ ಹರಿದುಬರಲು ಅವಕಾಶವಾಗಿ ರುವುದರಿಂದ ಬಹಳ ಹಿಗ್ಗಿನಲ್ಲಿದೆ. ಆದರೆ, ನಿರ್ಮಾಣಗೊಂಡ ಮನೆಗಳು, ವಸತಿ ಸಂಕೀರ್ಣಗಳು ಮಾರಾಟವಾಗದೇ ಉಳಿಯುತ್ತಿ ರುವುದು ಕಂಪೆನಿಗಳ ಚಿಂತೆಯನ್ನು ಹೆಚ್ಚಿಸಿದೆ.

ಜುಲೈ ಸೆಪ್ಟೆಂಬರ್‌ (ಹಣಕಾಸು ವರ್ಷದ 2ನೇ ತ್ರೈಮಾಸಿಕ) ಅವಧಿಯಲ್ಲಿ ಮನೆಗಳಿಗೆ ಬೇಡಿಕೆ ಶೇ 21ರಷ್ಟು ಕುಸಿತ ಕಂಡಿದೆ.
ಇದಕ್ಕೆ ಕಾರಣ, ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಿನ ಹಣಕಾಸು ಪರಾಮರ್ಶೆ ವೇಳೆ ಖಂಡಿತಾ ಬಡ್ಡಿಕಡಿತ ಮಾಡುತ್ತದೆ. ಇದರಿಂದ ಗೃಹಸಾಲದ ಬಡ್ಡಿದರದಲ್ಲಿ ಸಾಕಷ್ಟು ಇಳಿಕೆ ಆಗುತ್ತದೆ ಎಂಬ ನಿರೀಕ್ಷೆ. ಹಾಗೂ, ಮನೆಗಳ ಮಾರಾಟ ಕೆಲವು ತಿಂಗಳುಗಳಿಂದ ಇಳಿಮುಖ ವಾಗಿರುವುದರಿಂದ ರಿಯಲ್‌ ಎಸ್ಟೇಟ್‌ ಕಂಪೆನಿಗಳು ಬೆಲೆ ತಗ್ಗಿಸಬಹುದು ಅಥವಾ ವಿಶೇಷ ಕೊಡುಗೆಗಳನ್ನಾದರೂ ಘೋಷಿಸ ಬಹುದು ಎಂಬ ನಿರೀಕ್ಷೆ ಗ್ರಾಹಕರಲ್ಲಿರುವುದೇ ಆಗಿದೆ. 

ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್‌), ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತ, ಪುಣೆ, ಹೈದರಾಬಾದ್‌ ಮತ್ತು ಅಹ ಮದಾಬಾದ್‌ ದೇಶದ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಉದ್ಯಮ ಕ್ಷೇತ್ರ ದಲ್ಲಿ ಬಹಳ ಪ್ರಮುಖ ಮಾರುಕಟ್ಟೆಗಳು ಎನಿಸಿಕೊಂಡಿವೆ. ಇಂತಹ ಪ್ರಮುಖ ಮಾರುಕಟ್ಟೆ ನಗರಗಳಲ್ಲಿಯೇ ಹೊಸದಾಗಿ ನಿರ್ಮಿಸಿ ಮಾರಾಟಕ್ಕಿಟ್ಟಿರುವ ಮನೆಗಳಿಗೆ ಬೇಡಿಕೆ ಕಡಿಮೆ ಆಗಿದೆ.

ರಿಯಲ್‌ ಎಸ್ಟೇಟ್ ಕಂಪೆನಿಗಳದು ಎರಡು ಅಲುಗಿನ ಕತ್ತಿಯನ್ನು ಹಿಡಿದಂತಹ ಪರಿಸ್ಥಿತಿ. ಹೊಸದಾಗಿ ನಿರ್ಮಿಸಿದ ವಸತಿ ಸಂಕೀರ್ಣಗಳು ಮಾರಾಟವಾಗುತ್ತಿಲ್ಲ ಎಂಬುದು ಒಂದು ನೋವು. ಹಾಗೆಂದು ಸುಮ್ಮನೇ ಕೂರುವಂತಿಲ್ಲ. ಮಾರುಕಟ್ಟೆ ಯಲ್ಲಿನ ತೀವ್ರ ಸ್ಪರ್ಧೆಯನ್ನು ಎದಿರಿಸುವ ಸಲುವಾಗಿ ಹೊಸ ಹೊಸ ವಸತಿ ನಿರ್ಮಾಣ  ಯೋಜನೆಗಳನ್ನು ಕಾಲಕಾಲಕ್ಕೆ ಪ್ರಕಟಿಸುತ್ತಲೇ ಇರಬೇಕಲ್ಲಾ ಎಂಬುದು ಇನ್ನೊಂದು ಸಮಸ್ಯೆ. ಇದರ ಮಧ್ಯೆ, ವಸೂಲಾಗದ ಸಾಲ (ಎನ್‌ಪಿಎ) ಪ್ರಮಾಣ ಹೆಚ್ಚುತ್ತಿದೆ ಎಂದು ಬ್ಯಾಂಕ್‌ಗಳು ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಕ್ಷೇತ್ರಕ್ಕೆ ಸಾಲ ಮಂಜೂರು ಮಾಡಲು ಹಿಂದೇಟು ಹಾಕುತ್ತಿವೆ.

ಹೇಗೋ ಹಣವನ್ನು ಹೊಂದಿಸಿ ತಂದರೂ ಕಟ್ಟಡ ಗಳ ನಿರ್ಮಾಣ ದಿನೇ ದಿನೇ ದುಬಾರಿಯಾಗುತ್ತಿದೆ. ಸಿಮೆಂಟ್‌, ಕಬ್ಬಿಣ, ಇಟ್ಟಿಗೆ ಮತ್ತಿತರ ಸಾಮಗ್ರಿಗಳ ಬೆಲೆ ನಿರಂತರ ಏರುಮುಖವಾಗಿಯೇ ಇದೆ. ಜತೆಗೆ, ಎಷ್ಟಾದರೂ ಹಣ ನೀಡಲು ಸಿದ್ಧ ಎಂದರೂ ಮರಳು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ.

ಸಾಲ ಸಿಗುತ್ತಿಲ್ಲ, ಸಾಮಗ್ರಿಗಳು ದುಬಾರಿಯಾಗಿವೆ ಮೊದಲಾದ ಸಮಸ್ಯೆಗಳ ಮಧ್ಯೆಯೂ ನಿರ್ಮಾಣ ಯೋಜನೆ ಕೈಗೆತ್ತಿಕೊಂಡರೆ ಮನೆಗಳ ಮಾರಾಟವೂ ಆಶಾದಾಯಕವಾಗಿಲ್ಲ.  ಇದು ರಿಯಲ್‌ ಎಸ್ಟೇಟ್‌ ಕಂಪೆನಿಗಳ ಕಷ್ಟವನ್ನು ಹೆಚ್ಚಿಸಿದೆ.

ಎಂಟು ಪ್ರಮುಖ ನಗರಗಳಲ್ಲಿಯೇ ಕಳೆದ ವರ್ಷ ಒಟ್ಟು 43,800 ಮನೆಗಳು ಹೊಸದಾಗಿ ನಿರ್ಮಾಣ ಗೊಂಡಿವೆ. ಅಲ್ಲದೇ, 2014ರಲ್ಲಿ ಎಂಟೂ ನಗರಗಳಲ್ಲಿ ವಸತಿ ಸಂಕೀರ್ಣ, ವಿಲ್ಲಾಗಳು ಸೇರಿದಂತೆ ಒಟ್ಟು 166 ಹೊಸ ಯೋಜನೆಗಳು ವಿವಿಧ ರಿಯಲ್ ಎಸ್ಟೇಟ್‌ ಕಂಪೆನಿಗಳಿಂದ ಘೋಷಣೆಯಾಗಿವೆ. ಚೆನ್ನೈನಲ್ಲಿಯೇ ಅತಿ ಹೆಚ್ಚು ಅಂದರೆ, 45 ವಸತಿ ಸಮುಚ್ಛಯ ನಿರ್ಮಾಣ ಯೋಜನೆಗಳು ಈ ವರ್ಷ ಆರಂಭಗೊಂಡಿವೆ. ಅಹಮದಾಬಾದ್‌ನಲ್ಲಿ ಕನಿಷ್ಠ ಪ್ರಮಾಣದ, ಅಂದರೆ ಐದು ಯೋಜನೆಗಳು ಕಾರ್ಯಾರಂಭ ಮಾಡಿವೆ.

2013ರಲ್ಲಿಯೇ ಸಾಕಷ್ಟು ಹೊಸ ಮನೆಗಳು ಮಾರಾಟವಾಗದೇ ಉಳಿದಿವೆ. 2014ರಲ್ಲಿ ಕಾರ್ಯಾರಂಭ ಮಾಡಿದವನ್ನೂ ಸೇರಿಸಿ ಕೊಂಡರೆ ಮಾರಾಟವಾಗದ ಉಳಿಯುವ ಮನೆಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನುತ್ತದೆ ರಿಯಲ್‌ ಎಸ್ಟೇಟ್‌ ಅಧ್ಯಯನ ಸಂಸ್ಥೆ ಕುಷಮನ್‌ ಆ್ಯಂಡ್‌ ವೇಕ್‌ಫೀಲ್ಡ್‌.

ಮನೆಗಳ ಮಾರಾಟದಲ್ಲಿ ಅತಿ ಹೆಚ್ಚು (ಶೇ 62) ಕುಸಿತ ಅಹಮದಾಬಾದ್‌ನಲ್ಲಿ ಆಗಿದೆ. ಹಾಗಾಗಿಯೇ ಅಲ್ಲಿ ಈ ವರ್ಷ ಹೊಸ ಯೋಜನೆಗಳ ಘೋಷಣೆಯೂ ಕಡಿಮೆ ಆಗಿದೆ. ಗುಜರಾತ್‌ನ ಈ ನಗರದಲ್ಲಿ ಕಳೆದ ವರ್ಷ 2100 ಮನೆಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೆ, ಈ ವರ್ಷ 800 ಮನೆಗಳಿಗೆ ಇಳಿಕೆಯಾಗಿದೆ.

ಹೊಸ ಯೋಜನೆಗಳ ಆರಂಭದಲ್ಲಿ ಬೆಂಗಳೂರಿನಲ್ಲಿ ಶೇ 27, ಮುಂಬೈನಲ್ಲಿ 11ರಷ್ಟು ಇಳಿಕೆಯಾಗಿದೆ. ಉಳಿದ ನಾಲ್ಕು ನಗರಗಳಲ್ಲಿ ಹೊಸ ವಸತಿ ಸಮುಚ್ಛಯ ನಿರ್ಮಾಣ ಯೋಜನೆಗಳು 2014ರ ಲ್ಲಿಯೂ ತುಸು ಹೆಚ್ಚಿನ ಪ್ರಮಾಣದಲ್ಲಿಯೇ ಆರಂಭಗೊಳ್ಳುತ್ತಿವೆ. 

ಕೋಲ್ಕತ್ತದಲ್ಲಿ ಶೇ 28ರಷ್ಟು, ಪುಣೆಯಲ್ಲಿ ಶೇ 18ರಷ್ಟು, ಚೆನ್ನೈನಲ್ಲಿ ಶೇ 7 ಮತ್ತು ಹೈದರಾಬಾದ್‌ನಲ್ಲಿ ಶೇ 5ರಷ್ಟು ಅಧಿಕ ಪ್ರಮಾಣದಲ್ಲಿ ಮನೆಗಳ ನಿರ್ಮಾಣದ ಹೊಸ ಯೋಜನೆಗಳು ಈ ವರ್ಷ ಆರಂಭಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT