ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋಧರ್ಮ ಬದಲಾಗಲಿ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಲಿಂಗ ತಾರತಮ್ಯ ನಿವಾರಣೆಯಲ್ಲಿ ಭಾರತ ಸಾಕಷ್ಟು ಹಿಂದುಳಿ­ದಿರುವುದು ಮತ್ತೊಮ್ಮೆ ವರದಿಯಾಗಿದೆ. ಲಿಂಗ ಸಮಾನತೆ­ಯಲ್ಲಿ ಈವರೆಗಿನ ನಮ್ಮ ಸ್ವಘೋಷಿತ ಸಾಧನೆಗೆ ಭ್ರಮನಿರಸನ ಉಂಟು  ಮಾಡುವಂತಿದೆ  ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಅಂಕಿಸಂಖ್ಯೆ.  ಒಟ್ಟಾರೆ ಜನಸಂಖ್ಯೆಯಲ್ಲಿ ಕರ್ನಾಟಕದ ಅರ್ಧದಷ್ಟೂ ಇಲ್ಲದ ನಾರ್ಡಿಕ್‌ ದೇಶಗಳು (ಐಸ್ಲೆಂಡ್‌, ಫಿನ್ಲೆಂಡ್‌, ನಾರ್ವೆ, ಸ್ವೀಡನ್‌, ಡೆನ್ಮಾರ್ಕ್‌) ಲಿಂಗ ಸಮಾನತೆ ಸಾಧನೆಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ಹಾಗೆಯೇ, 90ರ ದಶಕದವರೆಗೂ ಜನಾಂಗೀಯ ದ್ವೇಷದಲ್ಲಿ ಸಿಲುಕಿದ್ದ ರುವಾಂಡ ಮತ್ತು ನಿಕರಾಗುವದಂತಹ ರಾಷ್ಟ್ರಗಳು ಸಹ ಮೊದಲ ಹತ್ತು ಸಾಧಕರ ಪಟ್ಟಿಯಲ್ಲಿವೆ. ಹಾಗಿದ್ದರೆ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಾವು ಎಡವುತ್ತಿರುವುದಾದರೂ ಎಲ್ಲಿ? ಲಿಂಗ ಸಮಾನತೆಗಾಗಿ ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಮಗಳೆಲ್ಲ ಏನಾಗುತ್ತಿವೆ?

ಆರ್ಥಿಕ ಪಾಲ್ಗೊಳ್ಳುವಿಕೆ, ಶಿಕ್ಷಣ , ಆರೋಗ್ಯ, ಆಯುಷ್ಯ ಮತ್ತಿತರ ಮಾನ­ದಂಡ­ಗಳಲ್ಲಿ ಭಾರತದ ಸರಾಸರಿ ಪ್ರಮಾಣ ಬಹಳ ಕಡಿಮೆ ಇದೆ. ಈ ವಿಚಾರ­ಗಳಲ್ಲಿ ಕಳೆದ ವರ್ಷ 101ನೇ ಸ್ಥಾನದಲ್ಲಿದ್ದ ದೇಶ ಈಗ 114ನೇ ಸ್ಥಾನಕ್ಕೆ ಕುಸಿದಿದೆ. ಆದರೆ ರಾಜಕೀಯ ಸಶಕ್ತೀಕರಣದಲ್ಲಿ ಮಾತ್ರ 15ನೇ ಸ್ಥಾನಕ್ಕೆ ಏರಿ ಅಚ್ಚರಿಯ ಸಾಧನೆ ಮಾಡಿದೆ. ಕಳೆದ 50 ವರ್ಷಗಳಲ್ಲಿ ಹೆಚ್ಚಿನ ಮಹಿಳಾ ಮುಖ್ಯಸ್ಥರನ್ನು ಹೊಂದಿದ ದೇಶ ಎಂಬ ಹೆಗ್ಗಳಿಕೆಗೂ ಪಾತ್ರ­ವಾ­ಗಿದೆ.

ಇದು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿಯ ಯಶಸ್ವಿ ಅನುಷ್ಠಾನದ ಫಲ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೆ ಇತರ ಕ್ಷೇತ್ರಗಳಲ್ಲಿ ಇಂತಹ ಸಾಧನೆ ಸಾಧ್ಯವಾಗಿಲ್ಲವೇಕೆ? ಎಷ್ಟೇ ಆಗಲಿ ರಾಜ­ಕೀಯವು ಅಧಿಕಾರ ಮತ್ತು ಹಣ ಬಲದ ಕೇಂದ್ರ. ಅಲ್ಲಿ ಇಂತಹದ್ದೊಂದು ತಕ್ಕಮಟ್ಟಿನ ಸಾಧನೆಗೆ ಮೀಸಲಾತಿ ಊರುಗೋಲಾಗಿದೆ. ಆದರೆ ಸಾಮಾ­ಜಿಕವಾಗಿ ಹೆಣ್ಣನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ರೂಢಿಸು­ವುದು ಅಷ್ಟು ಸುಲಭವಲ್ಲ.

ಹೆಣ್ಣಿನ ಬಗ್ಗೆ ಇರುವ ರೂಢಿಗತ ಅಭಿಪ್ರಾಯ­ಗಳು, ವೈಯಕ್ತಿಕ ಕಟ್ಟುಪಾಡುಗಳು ಇಂತಹ ಪ್ರಯತ್ನಗಳನ್ನು ಹಿಮ್ಮೆಟ್ಟಿಸು­ತ್ತಿವೆ. ಹೆಣ್ಣಿಗೆ ವಸ್ತ್ರಸಂಹಿತೆ ಜಾರಿಗೆ ತರುವ, ಆಕೆ ಕೊಟ್ಟಷ್ಟು ಸಂಬಳಕ್ಕೆ ದುಡಿ­ಯ­ಬೇಕೆಂದು ತಾಕೀತು ಮಾಡುವ ದಾರ್ಷ್ಟ್ಯವು ಗಣ್ಯರು ಎನಿಸಿಕೊಂಡವ­ರಿಂದಲೇ ಆಗಾಗ್ಗೆ ವ್ಯಕ್ತವಾಗುವುದು ಇಂತಹ ವಿಚಾರಗಳ ಫಲವೇ ಆಗಿದೆ. ಈ ಬಗೆಯ ಸ್ಥಿತಿಯಿಂದ ದೇಶವನ್ನು ಹೊರತರಲು ಸರ್ಕಾರಕ್ಕೆ ಅತ್ಯಂತ ಪ್ರಬಲವಾದ ಇಚ್ಛಾಶಕ್ತಿಯೇ ಬೇಕು.

ಬಿಗಿಯಾದ ಕಾನೂನು, ಹೆಣ್ಣಿನ ಆತ್ಮ­ವಿಶ್ವಾಸ ಕುಗ್ಗಿಸುವ ಪ್ರಯತ್ನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಭಿಯಾನ­ದೋಪಾದಿಯಲ್ಲಿ ಜಾರಿಗೆ ಬರಬೇಕು. ಅದಕ್ಕಿಂತ ಹೆಚ್ಚಾಗಿ, ರಕ್ತಗತವಾಗಿ ಬಂದಿರುವ ಲಿಂಗ ತಾರತಮ್ಯದ ಕರಿನೆರಳಿನ ವಿರುದ್ಧ ಮನೆಮನೆಗಳಲ್ಲೂ ಸ್ವಯಂಪ್ರೇರಿತ ಆಂದೋಲನಕ್ಕೆ ಚಾಲನೆ ದೊರೆಯಬೇಕು. ಇಲ್ಲದಿದ್ದರೆ ಸದ್ಯದ ಪರಿಸ್ಥಿತಿಯಲ್ಲಂತೂ ಲಿಂಗ ಸಮಾನತೆ ಗಗನಕುಸುಮವೇ ಆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT