ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೋವಿಜ್ಞಾನದ `ಬಂಧವಿಮೋಚನ'

ಹಳತು ಹೊನ್ನು
Last Updated 29 ಜೂನ್ 2013, 19:59 IST
ಅಕ್ಷರ ಗಾತ್ರ

ಸುರಸಗ್ರಂಥ ಮಾಲಾ ಪುಸ್ತಕಮಾಲೆಯ 39ನೆಯ ಗ್ರಂಥ `ಬಂಧವಿಮೋಚನ'. ಇದು ಮನೋವಿಜ್ಞಾನವನ್ನು ಕುರಿತ ಒಂದು ಅಪರೂಪ ಕೃತಿ. 5000 ಪ್ರತಿಗಳು ಮೊದಲ ಆವೃತ್ತಿಯಲ್ಲಿ ಅಚ್ಚಾಗಿರುವುದು ಇದರ ಮಹತ್ವವನ್ನು ಹೇಳುವಂತಿದೆ. ಈ ಪುಸ್ತಿಕೆಯ ಲೇಖಕರು ಹಾವೇರಿಯ ಶೇಷಾಚಲ ಸಂಸ್ಕೃತ ಪಾಠಶಾಲೆಯಲ್ಲಿ ಮುಖ್ಯ ಅಧ್ಯಾಪಕರಾಗಿದ್ದ ವೇ.ಶಾ.ಸ. ಮಹಾದೇವಶಾಸ್ತ್ರೀ ಜಂತಲಿ ಅವರು.

1919ರಲ್ಲಿ ಪ್ರಕಟವಾಗಿರುವ ಮನೋವಿಜ್ಞಾನದ ಈ ಕೃತಿ ಅಷ್ಟ ಕಿರೀಟಾಕಾರದಲ್ಲಿದೆ. 30 ಪುಟಗಳ ಈ ಪುಸ್ತಿಕೆಯ ಬೆಲೆ 4 ಆಣೆ.

ಪ್ರಕಾಶಕರಾದ ಕನ್ನಡಿಗರ ಸೇವಕ ವೇ.ತಿ. ಕುಲಕರಣಿ (ಗಳಗನಾಥ ) ಅವರು ಪ್ರಸ್ತಾವನೆಯಲ್ಲಿ ಈ ಕೃತಿಯನ್ನು ಕುರಿತು, “ಬಂಧವಿಮೋಚನಕ್ಕೆ ಅತ್ಯಂತ ಅವಶ್ಯವಾಗಿರುವ ಮನಶ್ಶುದ್ಧಿಯನ್ನು ಹೇಗೆ ಮಾಡಿಕೊಳ್ಳಬೇಕೆಂಬುದನ್ನೂ, ಮನಸ್ಸಿನ ಧರ್ಮಗಳಾವುವೆಂಬದನ್ನೂ, ಅದರ ಸಂಯಮನದ ಕ್ರಮವನ್ನೂ ತಿಳಿಸುವುದಕ್ಕಾಗಿ ಈ ಚಿಕ್ಕ ಪ್ರಬಂಧವನ್ನು ಉಪನಿಷದಾದಿಗಳ ಆಧಾರದಿಂದ ನಮ್ಮ ಶಾಸ್ತ್ರಿಗಳು ಬಹು ಶ್ರಮಪಟ್ಟು ಬರೆದಿರುತ್ತಾರೆ.

ಇಂದ್ರಿಯಗಳ ಬಲಶಾಲಿತ್ವವೂ, ವಿಷಯಗಳ ಪ್ರಭಾವವೂ ಇದರಲ್ಲಿ ಚನ್ನಾಗಿ ವರ್ಣಿಸಲ್ಪಟ್ಟಿರುವವು. ಒಟ್ಟಿಗೆ ಈ ಪುಸ್ತಕವನ್ನು ಓದುವುದರಿಂದ ವಾಚಕರಿಗೆ ಹಲವು ಹೊಸ ವಿಷಯಗಳ ಜ್ಞಾನವು ಆಗಿ, ಅವರ ಆತ್ಮ ಹಿತದ ಯತ್ನಕ್ಕೆ ಬಹುಮಟ್ಟಿಗೆ ಸಹಾಯವಾಗುವುದೆಂದು ನಾವು ನಂಬುತ್ತೇವೆ” ಎಂದು ಇದರೊಳಗೆ ಬರುವ ವಿಷಯಗಳ ಬಗ್ಗೆ ಸೂಚನೆ ನೀಡುತ್ತಾರೆ. ಇಲ್ಲಿ ವಾಚಕರಿಗೆ ಹಲವು ಹೊಸ ವಿಷಯಗಳ ಜ್ಞಾನವು ಆಗಬೇಕಾದ್ದರ ಅಗತ್ಯವನ್ನು ಅಂದಿನ ಕಾಲದ ಮೇಧಾವಿಗಳು ಆಲೋಚಿಸಿದ್ದುದು ಗಮನಾರ್ಹ. ಇದರ ಜೊತೆಗೆ ಗಳಗನಾಥರು ಈ ಕೃತಿಯ ಪ್ರಕಟಣೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಶ್ರಮಪಟ್ಟು ನೆರವು ನೀಡಿದ ಪ್ರಿಯ ವಿದ್ಯಾರ್ಥಿಗಳಾದ ಶಂಕರಜೋಷಿ ತಿಳವಳ್ಳಿ ಹಾಗೂ ರಾಮಭಟ್ಟ ಮುಳಗುಂದ ಎಂಬ ಇಬ್ಬರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಂಡಿದ್ದಾರೆ.

ಈ ಪುಸ್ತಿಕೆಯಲ್ಲಿ ಒಟ್ಟು ಐದು ಪ್ರಕರಣಗಳಿವೆ. ಮನಸ್ಸು, ಇಂದ್ರಿಯಗಳು, ವಿಷಯಗಳು, ಮನಸ್ಸಿನ ಶುದ್ಧೀಕರಣ ಹಾಗೂ ಬಂಧವಿಮೋಚನ. ಪ್ರತಿ ಪ್ರಕರಣವೂ ಸಂಸ್ಕೃತದ ಶಾಸ್ತ್ರ ಗ್ರಂಥವೊಂದರಲ್ಲಿನ ಒಂದು ಶ್ಲೋಕದ ಉಲ್ಲೇಖದಿಂದ ಆರಂಭವಾಗುತ್ತದೆ. ಮನಸ್ಸು ಎಂಬ ಒಂದನೆಯ ಪ್ರಕರಣವು, `ಮನ ಏವ ಮನುಷ್ಯಾಣಾಂ ಕಾರಣ ಬಂಧ ಮೋಕ್ಷಯೋಃ  ಬಂಧಾಯ ವಿಷಯಾಸಕ್ತಂ ಮುಕ್ತ್ಯೌ ನಿರ್ವಿಷಯಾಸ್ಮತಂ ' (ಮನಸ್ಸೇ ಮನುಷ್ಯನ ಬಂಧನ ಮತ್ತು ಮೋಕ್ಷ ಎರಡಕ್ಕೂ ಕಾರಣ. ವಿಷಯಾಸಕ್ತ ಮನಸ್ಸು ಮನುಷ್ಯನನ್ನು ಇಹಲೋಕಕ್ಕೆ ಬಂಧಿಸುತ್ತದೆ. ಮುಕ್ತಿಗೆ ನಿರ್ವಿಷಯ ಮನಸ್ಸು ಕಾರಣವಾಗುತ್ತದೆ) ಎಂಬ ಶ್ಲೋಕದಿಂದ ಪ್ರಾರಂಭವಾಗಿದೆ. ಲೇಖಕರು ಈ ಪ್ರಕರಣದಲ್ಲಿ ನಮ್ಮ ಲೇಖದಲ್ಲಿ ನಾವು ಜ್ಞಾನಿಗಳ ಮತವನ್ನು ಉಲ್ಲೇಖಿಸುವೆವಲ್ಲದೆ, ಪ್ರಸಂಗ ವಿಶೇಷದಲ್ಲಿ ಮನಸ್ಸಿನ ಮಂಗಚೇಷ್ಟೆಗಳನ್ನಾದರೂ ಅನುಭವದಿಂದ ಹೇಳುವೆವು ಎಂದು ಹೇಳಿ ಸ್ವಾನುಭವಕ್ಕೆ ಒತ್ತು ಕೊಟ್ಟಿರುತ್ತಾರೆ. ಈ ಸಂದರ್ಭದಲ್ಲಿ  `ಮನವೆಂಬ ಮರ್ಕಟ' ಎಂಬ ವಚನಕಾರರ ಉಕ್ತಿಯು ನೆನಪಿಗೆ ಬರುವುದು.

`ಮನಸು' ಪ್ರಕರಣದ ಒಂದು ನಿರೂಪಣೆಯು ಹೀಗಿದೆ: `ದೇಹವೆಂಬದೊಂದು ರಾಜಧಾನಿಯು; ಜೀವಾತ್ಮನೆಂಬವನೇ ಅಲ್ಲಿಯ ಅರಸನು; ಮನಸ್ಸು ಆತನ ಮಂತ್ರಿಯು; ಪಂಚಪ್ರಾಣಗಳು ದ್ವಾರಪಾಲಕರು; ಜ್ಞಾನೇಂದ್ರಿಯ ಕರ್ಮೇಂದ್ರಿಯಗಳೇ ಆತನ ಪರಿಚಾರಕರು; ಇವರೆಲ್ಲರೂ ಕೂಡಿ ಆ ದೇಹದೊಡೆಯನಾದ ಜೀವಾತ್ಮನಿಗೆ ವಿವಿಧ ಉಪಭೋಗ್ಯ ವಿಷಯಗಳನ್ನು ಸಂಪಾದಿಸಿಕೊಡುತ್ತಾರೆ. ಆ ವಿಷಯಗಳ ಉಪಭೋಗದಿಂದ ಜೀವಾತ್ಮನಿಗೆ ಸುಖದುಃಖಗಳಾಗುತ್ತವೆಂಬುದು ಅನುಭವಸಿದ್ಧ ಮಾತಾಗಿರುತ್ತದೆ. ಮೂಲತಃ ಜೀವಾತ್ಮನು ಸ್ವತಂತ್ರನು, ಆನಂದ ಸ್ವರೂಪನು; ಆದರೆ, ಜಾಲಿಯ ಬಿತ್ತಿ ಕಾಲಿಗೆ ಮೂಲ ಮಾಡಿಕೊಂಡಂತೆ, ಆತನು ಮೇಲೆ ಹೇಳಿದ ತನ್ನ ಪರಿವಾರದ ಅಧೀನನಾಗಿ ಸ್ವಾತಂತ್ರ್ಯ ಸುಖವನ್ನು ಮರೆತು ಬಿಟ್ಟದ್ದರಿಂದ, ಪಾರತಂತ್ರ್ಯದ ಬಗೆಬಗೆಯ ಕಾಲ್ಪನಿಕ ಸುಖದುಃಖಗಳ ಜಗ್ಗಾಟಕ್ಕೆ ಗುರಿಯಾಗಿ ನರಳಬೇಕಾಗಿದೆ'. ಈ ಇಡೀ ಪ್ರಕರಣದಲ್ಲಿ ಮನಸ್ಸಿನ ಸ್ವರೂಪವನ್ನು ವೇದೋಪನಿಷತ್ತುಗಳ ಹಿನ್ನೆಲೆಯಲ್ಲಿ ಮನೋವೈಜ್ಞಾನಿಕವಾಗಿ ಸಾದ್ಯಂತವಾಗಿ ವಿವೇಚಿಸಲಾಗಿದೆ. ಮನಸ್ಸಿನ ಚಂಚಲ ಸ್ವಭಾವ ಹಾಗೂ ನಿರ್ಲಿಪ್ತ ಸ್ವಭಾವಗಳೆರಡನ್ನೂ ನಿದರ್ಶನಗಳೊಂದಿಗೆ ವಿವರವಾಗಿ ಚಿತ್ರಿಸಿರುತ್ತಾರೆ. ಮನಸ್ಸಿನ ಶಕ್ತಿ ಅಪಾರವಾದದ್ದೆಂದು ಹೇಳುವಾಗ ಅದರ ವೇಗ ಶಕ್ತಿ ಹಾಗೂ ಅಧಿಕಾರ ಶಕ್ತಿಯ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದೆ.

ಎರಡನೆಯ ಪ್ರಕರಣ ಇಂದ್ರಿಯಗಳ ವರ್ತನೆ ಮತ್ತು ಸ್ವರೂಪವನ್ನು ಕುರಿತದ್ದಾಗಿದೆ. ಈ ಪ್ರಕರಣ ಶ್ರಿಮದ್ಭಾಗವತದಲ್ಲಿನ `ಬಲವಾನಿಂದ್ರಿಯಗ್ರಾನೋ ವಿದ್ವಾಂಸ ಮಪಿಕರ್ಷತಿ' ಎಂಬ ಶ್ಲೋಕದಿಂದ ಆರಂಭವಾಗಿದೆ. ಅಂದರೆ- ಇಂದ್ರಿಯಗಳ ಸಮೂಹವು ಎಷ್ಟು ಬಲವಾಗಿರುತ್ತವೆ ಎಂದರೆ ವಿಷಯಗಳ ಸೆಳೆತದಿಂದ ಮನುಷ್ಯರು ವಿಷಯ ಸಂಗಮದ ಸುಖಗಳನ್ನು ತ್ಯಜಿಸುವುದು ಸೂಕ್ತ ಎಂದರ್ಥ. ಪ್ರಬಲವಾಗಿ ಪ್ರವರ್ತಿಸುವ ಇಂದ್ರಿಯಗಳ ವರ್ತನೆಗಳನ್ನು ನಿಯಂತ್ರಿಸಲು ಖಚಿತವಾದ ಮನಸ್ಸಿನಿಂದ ಮಾತ್ರ ಸಾಧ್ಯ ಎಂಬ ಅಂಶವನ್ನು ಈ ಪ್ರಕರಣದಲ್ಲಿ ಮಹಾದೇವಶಾಸ್ತ್ರಿ ಜಂತಲಿ ಅವರು ನಿರೂಪಿಸಿದ್ದಾರೆ. ಜ್ಞಾನೇಂದ್ರಿಯಗಳೇ ಆಗಲಿ, ಕರ್ಮೇಂದ್ರಿಯಗಳೇ ಆಗಲಿ ಪ್ರತಿಯೊಂದು ಇಂದ್ರಿಯಗಳು ತಮ್ಮ ತಮ್ಮ ಕೆಲಸಗಳನ್ನು ಮಾಡುವುದಕ್ಕೆ ಸಮರ್ಥವಾಗಿದ್ದರೂ ಅವುಗಳ ಕಡೆಗೆ ಮನಸ್ಸಿನ ಒಲವು ಇರಬೇಕಾಗುತ್ತದೆ ಎಂಬುದು ಲೇಖಕರ ನಿಲುವು.

ಮೂರನೆಯ ಪ್ರಕರಣ `ವಿಷಯಗಳು'. ವಿಷಯ ಎಂದರೆ ಕಾಮ ಎಂಬರ್ಥವಿದೆ. ಈ ಪ್ರಕರಣ ವಿಷಯದ ವಿಶ್ವರೂಪ ದರ್ಶನ ಮಾಡಿಸುತ್ತದೆ. ಈ ಪ್ರಕರಣವು `ಮಾಧವ ಗ್ರಂಥದ ತ್ಯಾಜ್ಯಂ ಸುಖಂ ವಿಷಯಸಂಗಮ ಜನ್ಮ ಪುಂಸಾಮ್‌ ವಿಸಿತ್ವಂತಿ ಭಧ್ರಂತಿ ಪ್ರಾಣಿನಹತಿ ವಿಷಯಾಃ' (ವಿಷಯಗಳು ಪ್ರಾಣಿಗಳನ್ನು ಬಂಧಿಸುವ ವಸ್ತುಗಳು. ಈ ವಿಷಯಗಳು ಮನಸ್ಸಿನಿಂದೊಡಗೂಡಿದ ಇಂದ್ರಿಯಗಳಿಗೆ ಗೋಚರವಾದರೆ ಸಾಕು, ಪ್ರಾಣಿಗಳನ್ನು ಎಳೆದೇ ಬಿಡುತ್ತದೆ) ಎನ್ನುವ ಶ್ಲೋಕದಿಂದ ಆರಂಭವಾಗಿದೆ. ವಿಷಯಗಳ ಅತಿ ಬಳಕೆಯಿಂದ ದೇಹ ಮತ್ತು ಜೀವ ಹೇಗೆ ಹಾಳಾಗುತ್ತವೆ ಎಂಬುದನ್ನು ತೋರಿಸಿಕೊಡುವುದೇ ಈ ಪ್ರಕರಣದ ಉದ್ದೇಶ. ಅದು ಇಲ್ಲಿ ಸಾರ್ಥಕವಾಗಿದೆ. ಈ ಪ್ರಕರಣದಲ್ಲಿ ಲೇಖಕರು ಮೂರು ವರ್ಗಗಳಾದ ಸಾತ್ವಿಕ, ರಾಜಸ ಮತ್ತು ತಾಮಸಗಳನ್ನು ಕುರಿತು ಭಾರತೀಯ ಪೂರ್ವ ಮೀಮಾಂಸಕರು ಹೇಳಿದ ತತ್ವಗಳನ್ನು ವಿಶ್ಲೇಷಿಸಿರುತ್ತಾರೆ. ಈ ಸಂದರ್ಭದಲ್ಲಿ ವಿಷಯಗಳಿಗೆ ಸಾಮಾಗ್ರಿಯಾಗಿರುವ ಅನ್ನ ನೀರು ಆಹಾರ ಮಲಮೂತ್ರಾದಿಗಳ ಪ್ರಸ್ತಾಪವೂ ಬರುತ್ತದೆ.

ನಾಲ್ಕನೆಯ ಪ್ರಕರಣ `ಮನಸ್ಸಿನ ಶುದ್ಧೀಕರಣ'. ಇದು ಬಹು ಕಷ್ಟಸಾಧ್ಯವಾದ ಸಂಗತಿ. ಈ ಪ್ರಕ್ರಿಯೆಯನ್ನು ಹೇಗೆ ಆಗು ಮಾಡಬೇಕೆಂಬುದೇ ಈ ಪ್ರಕರಣದ ವಸ್ತು. ಮನಸ್ಸು ಅನ್ನಜನ್ಯವೆಂಬುದು ಹಿಂದಿನವರ ತಿಳಿವಳಿಕೆ. ಅದರ ಶುದ್ಧಿಯೂ ಅನ್ನದಿಂದಲೇ ಆಗಬೇಕಾದ್ದು ಎಂಬುದು ಸಿದ್ಧವೇ ಸರಿ. ಇದನ್ನು ಕುರಿತು ಪ್ರಸ್ತುತ ಪ್ರಕರಣದಲ್ಲಿ ವಿವೇಚಿಸಲಾಗಿದೆ. ಸಾಮಾನ್ಯವಾಗಿ ಸಮಕಾಲೀನರು ಒಪ್ಪದಿರಬಹುದಾದ, ಆಹಾರ ಪದ್ಧತಿಗಳು ಮನಸ್ಸಿನ ವರ್ತನೆಯನ್ನು ನಿರ್ಧರಿಸುತ್ತದೆ ಎಂಬ ಸಾಂಪ್ರದಾಯಿಕ ಪರಿಕಲ್ಪನೆಯನ್ನೇ ಇಲ್ಲಿ ಲೇಖಕರು ಪ್ರತಿಪಾದಿಸುತ್ತಾರೆ. ಮನಸ್ಸಿಗೂ-ಇಂದ್ರಿಯಗಳಿಗೂ, ಇಂದ್ರಿಯಗಳಿಗೂ-ವಿಷಯಗಳಿಗೂ ಪರಸ್ಪರ ಅಪರಿತ್ಯಾಜ್ಯ ಸಂಬಂಧವಿರುವುದರಿಂದ ಇವುಗಳ ವ್ಯವಹಾರಗಳನ್ನು ನಾವು ವಿಚಾರಪೂರ್ವಕವಾಗಿ ವರ್ತಿಸಬೇಕೆಂಬುದು ಲೇಖಕರ ಖಚಿತವಾದ ಅಭಿಪ್ರಾಯ.

ಐದನೆಯ `ಬಂಧವಿಮೋಚನ' ಪ್ರಕರಣವು ದೇವರಲ್ಲಿ ಯಾರಿಗೆ ಪರಮ ಭಕ್ತಿ ಇರುವುದೋ ದೇವರಷ್ಟೇ ಭಕ್ತಿಯನ್ನು ಗುರುವಿನಲ್ಲಿ ಹೊಂದಿರುವನೋ ಅಂತಹ ವ್ಯಕ್ತಿಯ ಮನಸ್ಸಿನಲ್ಲಿ ದೇವರು ಮತ್ತು ಗುರುಗಳಿಬ್ಬರೂ ನೆಲೆಸಿರುತ್ತಾರೆ ಎನ್ನುವ ಅರ್ಥವುಳ್ಳ `ಯಸ್ಯ ದೇವೇ ಪರಾಭಕ್ತಿರ್ಯಥಾದೇವೇ ತಥಾ ಗುರೌ ತಸ್ಯೈತೇ ಕಥಿತಾ ಹೃರ್ಥಾಃ ಪ್ರಕಾಶಂತೇ ಮಹಾತ್ಮನಃ ' ಎಂಬ ಶ್ಲೋಕದಿಂದ ಆರಂಭವಾಗುತ್ತದೆ. ಈ ಪ್ರಕರಣದಲ್ಲಿ ಶಾಸ್ತ್ರಿಗಳು ಮನಸ್ಸಿನ ಚಾಂಚಲ್ಯವನ್ನು ನಿವಾರಿಸುವ ವಿಷಯಗಳನ್ನು ಕುರಿತು ಚಿಂತಿಸಿದ್ದಾರೆ. ಆವರು ಇದನ್ನು ಕುರಿತು ಈ ಮನಸ್ಸಿನ ಚಾಂಚಲ್ಯವನ್ನು ತೆಗೆದು ಹಾಕುವ ಉಪಾಯಗಳೆಂದರೆ ಸಂಕಲ್ಪ ಮತ್ತು ಯೋಗ ಎನ್ನುತ್ತಾರೆ. ಇವೆರಡೂ ಕೂಡಿ ಮನಸ್ಸಿನ ಚಾಂಚಲ್ಯವನ್ನು ಪರಿಹರಿಸುತ್ತದೆ. ಚಾಂಚಲ್ಯ ಎಂದರೆ ಮನಸ್ಸು ಒಂದು ಕೆಲಸವನ್ನು ಮಾಡಲು ಉಪಕ್ರಮಿಸಿ ಅದನ್ನು ಬಿಡುತ್ತದೆ, ಮತ್ತೊಂದು ಕೆಲಸ ಮಾಡಲು ಉಪಕ್ರಮಿಸಿ ಅದನ್ನೂ ಬಿಡುತ್ತದೆ, ಹೀಗೆ ಮಾಡುವುದು ಮನಸ್ಸಿನ ಚಾಂಚಲ್ಯ. ಈ ಚಾಂಚಲ್ಯವನ್ನು ಸಂಕಲ್ಪದಿಂದ ನಿವಾರಿಸುವುದು ಸುಲಭ. ಉದಾಹರಣೆಗೆ ಏಕಾದಶಿಯ ದಿವಸ ಉಪವಾಸ ಮಾಡುವ ಸಂಕಲ್ಪದಿಂದ ಆ ಇಡೀ ದಿನ ಅನ್ನಾಹಾರಗಳನ್ನು ವರ್ಜಿಸುವುದಿಲ್ಲವೆ? ಇದು ಲೇಖಕರು ಸಂಕಲ್ಪವನ್ನು ಅರ್ಥೈಸಿರುವ ವಿಧಾನ. ಇದನ್ನು ಇನ್ನೂ ಸ್ಪಷ್ಟವಾಗಿ ಹೇಳುವುದಕ್ಕೆ ಶಾಸ್ತ್ರಿಗಳು ಭಗವದ್ಗೀತೆಯಲ್ಲಿನ ನಿದರ್ಶನಗಳನ್ನು ಬಳಸಿಕೊಳ್ಳುತ್ತಾರೆ.

ಮನೋವಿಜ್ಞಾನದ ಶಿಸ್ತು ಒಂದು ಶತಮಾನದ ಹಿಂದೆ ಯಾವ ಸ್ವರೂಪದಲ್ಲಿದ್ದಿತು ಎಂಬುದಕ್ಕೆ ಈ ಪುಸ್ತಿಕೆ ಒಂದು ಕೈದೀವಿಗೆ. ಕನ್ನಡದಲ್ಲಿ ಮನೋವಿಜ್ಞಾನ ಪುಸ್ತಕಗಳ ಇತಿಹಾಸದಲ್ಲಿ ಈ ಗ್ರಂಥವು ತನ್ನದೇ ಆದ ಚಾಪನ್ನು ಮೂಡಿಸಿದೆ.                   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT