ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯ್ಯಾಸ್‌ ಮಾರುಕಟ್ಟೆ ವಿಸ್ತರಣೆ

Last Updated 21 ಜೂನ್ 2016, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಗ್ರಾಹಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ವೈವಿಧ್ಯಮಯ ಉತ್ಪನ್ನಗಳ ಮಾರುಕಟ್ಟೆಯನ್ನು ದೇಶದಾದ್ಯಂತ ₹ 200 ಕೋಟಿ ವೆಚ್ಚದಲ್ಲಿ ವ್ಯಾಪಕವಾಗಿ ವಿಸ್ತರಿಸಲು ಮಯ್ಯಾಸ್‌ ಬೀವರೀಜ್‌ ಆ್ಯಂಡ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮುಂದಾಗಿದೆ. ಮಯ್ಯಾಸ್‌ ಬ್ರ್ಯಾಂಡ್‌ನ ಯಶೋಗಾಥೆಯನ್ನು ಕೇಶವ ಜಿ. ಝಿಂಗಾಡೆ ಇಲ್ಲಿ ಕಟ್ಟಿಕೊಟ್ಟಿದ್ದಾರೆ.

* ಸೇವ್‌, ಆಲುಭುಜಿಯಾ, ಮಸಾಲೆಯುಕ್ತ ಕಡಲೆಬೀಜಗಳನ್ನು ದಾರಿಯಲ್ಲಿ ಹೋಗುತ್ತಲೆ ಆರಾಮವಾಗಿ ಸೇವಿಸುವ, ಕೈಯಿಂದ ಹೊರ ಚೆಲ್ಲದಂತೆ ಸೇವಿಸಲು ಅನುಕೂಲವಾಗುವ ಆಕಾರದಲ್ಲಿ ಒದಗಿಸಲು ಮುಂದಾಗಿದ್ದಾರೆ.

ಸದಾನಂದ ಮಯ್ಯ ಅವರ ಸಂದರ್ಶನ ಉದ್ದೇಶಕ್ಕೆ ಜಯನಗರದ ಕಚೇರಿಗೆ ಕಾಲಿಟ್ಟಾಗ, ಅವರು  ತಮ್ಮನ್ನು ಭೇಟಿಯಾಗಲು ಬಂದಿದ್ದ ತಾಯಿ – ಮಗಳಿಗೆ ಅಡುಗೆ ಪಾಠ ಹೇಳಿಕೊಡುತ್ತಿದ್ದರು. ಮಯ್ಯಾಸ್‌ ರೆಸ್ಟೊರಂಟ್‌ಗೆ ಮಧ್ಯಾಹ್ನದ ಊಟಕ್ಕೆ ಬಂದಿದ್ದ ಅವರಿಬ್ಬರು ಮಯ್ಯ ಅವರಿಂದಲೇ ಹೊಸ ಪಾಕ ವಿಧಾನ ತಿಳಿದುಕೊಳ್ಳಲು ಉತ್ಸುಕತೆ ತೋರಿದ್ದರು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ, ಅವರಿಬ್ಬರನ್ನು ಎದುರಿಗೆ ಕುಳ್ಳಿರಿಸಿಕೊಂಡು ಪಾಠ ಹೇಳಿ ಕಳಿಸಿದ ನಂತರ, ‘ಪ್ರಜಾವಾಣಿ’ ಜತೆ ಮಾತಿಗೆ ಕುಳಿತ ಮಯ್ಯ ಅವರು, ತಮ್ಮೆಲ್ಲ ಕನಸುಗಳನ್ನು ಹಂಚಿಕೊಂಡರು.

ಇದು ಮಯ್ಯ ಅವರು ತಮ್ಮ  ಗ್ರಾಹಕರ ಜತೆ ಹೊಂದಿರುವ ವಿಶಿಷ್ಟ ಬಾಂಧವ್ಯ ಮತ್ತು ವಹಿವಾಟು ವಿಸ್ತರಣೆಗೆ ಅನುಸರಿಸುವ ಕಾರ್ಯತಂತ್ರಕ್ಕೆ ಕನ್ನಡಿ ಹಿಡಿಯುತ್ತದೆ. ಗ್ರಾಹಕರ ಜಿಹ್ವಾ ಚಾಪಲ್ಯವನ್ನು ಚೆನ್ನಾಗಿ ಅರಿತಿರುವ ಈ ‘ಮಾಂತ್ರಿಕ ಬಾಣಸಿಗ’, ಇದೇ ಕಾರಣಕ್ಕೆ ಎರಡು ಬ್ರ್ಯಾಂಡ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿ ದೇಶ –ವಿದೇಶಗಳಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ‘ಮಯ್ಯಾಸ್ ಬ್ರ್ಯಾಂಡ್‌’ ಅನ್ನು ಗ್ರಾಹಕರ ನಾಲಿಗೆ ಮೇಲೆ ಕಾಯಂ ಆಗಿ ನೆಲೆವೂರುವಂತೆ ಮಾಡುವಲ್ಲಿ ಸಫಲರಾಗಿರುವ ಮಯ್ಯ, ಈಗ ವಹಿವಾಟನ್ನು ಕ್ರಮೇಣ ದೇಶದಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ. ಈ ಉದ್ದೇಶಕ್ಕೆ ₹ 200 ಕೋಟಿಗಳಷ್ಟು ಬಂಡವಾಳ ತೊಡಗಿಸಲು  ಉದ್ದೇಶಿಸಿದ್ದಾರೆ.

ಆಹಾರ ಸಂಸ್ಕರಣಾ ಉದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಡಾ. ಪಿ. ಸದಾನಂದ ಮಯ್ಯ ಅವರು (68), ದಶಕಗಳ ಹಿಂದೆ ಎಂಟಿಆರ್‌ ಹೋಟೆಲ್‌ನ ಅಡುಗೆ ಮನೆಯಲ್ಲಿ ಕಲಿತ ಪಾಠಗಳನ್ನು ಇನ್ನೂ ಹೊಸ ಹೊಸ ತಿನಿಸುಗಳ ತಯಾರಿಕೆಯಲ್ಲಿ ಬಳಸುತ್ತಲೇ ಇದ್ದಾರೆ. ದಣಿವರಿಯದ ಪರಿಶ್ರಮ ಅವರದ್ದು. ಇದೇ ಕಾರಣಕ್ಕಾಗಿಯೇ, 2012ರಲ್ಲಿ ಆರಂಭಿಸಿದ ಈ ಹೊಸ ಬ್ರ್ಯಾಂಡ್‌ ಮತ್ತು ವಹಿವಾಟು ಯಾವತ್ತೂ  ಮಯ್ಯಾ ಅವರ ಕೈಬಿಟ್ಟಿಲ್ಲ. ಪಾಕವಿಧಾನದ ರಹಸ್ಯಗಳನ್ನೆಲ್ಲ ಕರಗತ ಮಾಡಿಕೊಂಡಿರುವ ಮಯ್ಯಾ ಅವರು, ಉತ್ಪನ್ನಗಳ ಗುಣಮಟ್ಟದಲ್ಲಿ ನಿರಂತರವಾಗಿ ಸ್ಥಿರತೆ ಕಾಯ್ದುಕೊಂಡು ಬಂದಿರುವುದೇ ತಮ್ಮ ಯಶಸ್ಸಿನ ಗುಟ್ಟು ಎಂದು ಹೇಳುತ್ತಾರೆ.

ಯಾವುದೇ ಕಾರಣಕ್ಕೂ ಗುಣಮಟ್ಟದ ಜತೆ ರಾಜಿ ಇಲ್ಲ. ಇದೇ ಕಾರಣಕ್ಕೆ ರೆಸ್ಟೊರಂಟ್‌ಗಳ ವಿಸ್ತರಣೆ ವಿಷಯದಲ್ಲಿ ಹೆಚ್ಚು ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದ್ದೇವೆ ಎನ್ನುತ್ತಾರೆ.ತಾವೇ ಕಟ್ಟಿ ಬೆಳೆಸಿ, ಆನಂತರ ಮಾರಾಟ ಮಾಡಿದ್ದ ‘ಎಂಟಿಆರ್‌’ಗೆ ಪರ್ಯಾಯವಾಗಿ ಮಯ್ಯಾಸ್‌ ಬ್ರ್ಯಾಂಡ್‌ ಅಭಿವೃದ್ಧಿಪಡಿಸಿ ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮಯ್ಯಾಸ್‌ ಬಿವರೇಜಿಸ್‌ ಆ್ಯಂಡ್‌ ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಡಿ, ಅಲ್ಪಾವಧಿಯಲ್ಲಿ  ಮಯ್ಯಾಸ್‌ ಬ್ರ್ಯಾಂಡ್‌ ರೂಪಿಸಿ, ಅಭಿವೃದ್ಧಿಪಡಿಸಿ, ಗ್ರಾಹಕರ ಮನ ಗೆಲ್ಲುವಲ್ಲಿ ಯಶ ಕಂಡಿದ್ದಾರೆ. 

2007ರಲ್ಲಿ ನಾರ್ವೆ ಮೂಲದ ಓರ್ಕ್ಲಾ (orkla) ಸಂಸ್ಥೆಗೆ ‘ಎಂಟಿಆರ್‌’ ವಹಿವಾಟನ್ನು ಮಾರಾಟ ಮಾಡಿ, ಒಪ್ಪಂದದ ನಿಬಂಧನೆ ಅನ್ವಯ, 5 ವರ್ಷಗಳ ನಂತರವೆ ಹೊಸ ಬ್ರ್ಯಾಂಡ್‌ ಅಭಿವೃದ್ಧಿಪಡಿಸಿ, ತಮ್ಮ ಯಶೋಗಾಥೆ ಮುಂದುವರೆಸಿದ್ದಾರೆ. ದಿಢೀರ್‌ ಮಿಶ್ರಣ ಮತ್ತು ಮಸಾಲಾ ಉತ್ಪನ್ನ, ಸೇವಿಸಲು ಸಿದ್ಧ ಆಹಾರ (ready-to-eat food) ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಗ್ರಾಹಕರಿಗೆ ಹೊಸ ರುಚಿ ಹತ್ತಿಸಿದ ಹೆಗ್ಗಳಿಕೆ ಇವರದ್ದು. ‘ಎಂಟಿಆರ್‌’ ಉತ್ಪನ್ನಗಳು ದಕ್ಷಿಣ ಭಾರತದ ಆಹಾರ ಸಂಪ್ರದಾಯಕ್ಕೆ ಇನ್ನೊಂದು ಹೆಸರಾಗಿತ್ತು. ಈಗ ಅದರ ಜಾಗೆಯಲ್ಲಿ ಮಯ್ಯಾಸ್‌ ಬ್ರ್ಯಾಂಡ್‌ನ ಹೊಸ ಛಾಪು ಮೂಡಿಸುವಲ್ಲಿ ಸಫಲರಾಗಿದ್ದಾರೆ.

ವಹಿವಾಟು ವಿಸ್ತರಣೆ ಉದ್ದೇಶಕ್ಕೆ  ತಳಹದಿಯಾಗಿ ತಮ್ಮ ಉತ್ಪನ್ನಗಳ ತಯಾರಿಕಾ ಘಟಕಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ್ದಾರೆ. ಕೋಡುಬಳೆ, ಚಕ್ಕುಲಿ, ವಡೆ ತಯಾರಿಕೆಗೆ ಜರ್ಮನಿ, ಟರ್ಕಿಗಳಿಂದ ಯಂತ್ರೋಪಕರಣ ತರಿಸಿ ಕಾರ್ಖಾನೆಯಲ್ಲಿ ಅಳವಡಿಸಿದ್ದಾರೆ. 1976ರಲ್ಲಿ ಮೊದಲ ಬಾರಿಗೆ ರವೆ ಇಡ್ಲಿ ಮಿಶ್ರಣವನ್ನು ಪರಿಚಯಿಸಿದ ನಂತರ ಅವರ ಹೊಸ ಹೊಸ ಬಗೆಯ ತಿಂಡಿ ತಿನಿಸುಗಳ ತಯಾರಿಕೆಯು ನಾಗಾಲೋಟದಿಂದ ಮುಂದುವರೆಯುತ್ತಲೇ ಇದೆ. 

ಭೇಲ್‌ ಪುರಿ ಸೇವಿಸಲು ಬೀದಿ ಬದಿಯ ತಳ್ಳುಗಾಡಿ, ಹೋಟೆಲ್‌ಗಳನ್ನು ಹುಡುಕಿಕೊಂಡು ಹೋಗುವ ತೊಂದರೆ ತಪ್ಪಿಸಿ ಭೇಲ್‌ ಬಾರ್‌ ಪರಿಚಯಿಸಿ ಭೇಷ್‌ ಎನಿಸಿಕೊಂಡ ಮಯ್ಯ ಅವರು, ಇದೇ ಬಗೆಯಲ್ಲಿ ಆಲೂಭುಜಿಯಾವನ್ನು ಈಗ ವಿಶಿಷ್ಟ ಬಗೆಯಲ್ಲಿ ಪರಿಚಯಿಸಿದ್ದಾರೆ. ಇಂತಹ ಹಲವಾರು ಹೊಸ ಬಗೆಯ ತಿಂಡಿಗಳನ್ನು ಪರಿಚಯಿಸುವ ದೊಡ್ಡ ಪಟ್ಟಿಯೇ ಅವರ ಬತ್ತಳಿಕೆಯಲ್ಲಿ ಇನ್ನೂ ಇದೆ. 2007ರಿಂದ 2012ರವರೆಗಿನ 5 ವರ್ಷಗಳ ಬಿಡುವಿನ ಅವಧಿಯಲ್ಲಿ ವಿಶ್ವದ ಅನೇಕ ಕಡೆ ಭೇಟಿ ನೀಡಿದ ಮಯ್ಯ ಅವರು ತಮ್ಮೆಲ್ಲ ಕನಸುಗಳನ್ನು ನನಸಾಗಿಸಲು ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಸಫಲರಾದರು.


ಕುರುಕಲು ತಿಂಡಿಗಳನ್ನು ಎಣ್ಣೆಯಲ್ಲಿ ಕರಿದ ನಂತರವೂ ಅವುಗಳ ಮೂಲ ಗುಣಕ್ಕೆ ಇಣಿತೂ ಧಕ್ಕೆಯಾಗದಂತೆ ಹೆಚ್ಚುವರಿ ತೈಲ ಹೊರತೆಗೆಯುವ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಖಾರಾಬುಂದಿ ಸೇರಿದಂತೆ ಮಯ್ಯಾಸ್‌ ಕುರುಕಲು ತಿಂಡಿಗಳ ಸೇವನೆ ಆರೋಗ್ಯಕ್ಕೆ ಹಿತಕಾರಿಯಾಗುವಂತೆಯೂ ಎಚ್ಚರಿಕೆ ವಹಿಸಿರುವುದು, ಗ್ರಾಹಕರ ಆರೋಗ್ಯದ ಬಗ್ಗೆ ಇವರು ವಹಿಸಿರುವ ಕಾಳಜಿಯ ದ್ಯೋತಕವಾಗಿದೆ. ಕೋಡುಬಳೆ, ಚಕ್ಕುಲಿ, ವಡೆಗಳನ್ನೂ  ಯಂತ್ರಗಳ ಸಹಾಯದಿಂದಲೇ ರುಚಿಗೆ ಇಣಿತೂ ಧಕ್ಕೆಯಾಗದಂತೆ ತಯಾರಿಸುತ್ತಿರುವುದು ಇವರ ಇನ್ನೊಂದು ಹೆಗ್ಗಳಿಯಾಗಿದೆ. 

ಈಗ ಮಾರುಕಟ್ಟೆಯನ್ನು ವ್ಯಾಪಕವಾಗಿ ವಿಸ್ತರಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಲು ಮುಂದಾಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ, ಪಶ್ಚಿಮ ಮತ್ತು ಈಶಾನ್ಯ ಭಾರತ – ಹೀಗೆ ದೇಶಿ ಮಾರುಕಟ್ಟೆಯನ್ನು ಪ್ರತ್ಯೇಕವಾಗಿ ಗುರುತಿಸಿ ಹಂತ ಹಂತವಾಗಿ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ. ಕೊನೆಯಲ್ಲಿ ಮಧ್ಯಪ್ರದೇಶ, ಒಡಿಶಾ ಮತ್ತು ಬಿಹಾರ ರಾಜ್ಯಗಳ ಮಾರುಕಟ್ಟೆ ಪ್ರವೇಶಿಸುವ ಕಾರ್ಯತಂತ್ರ ಹಾಕಿಕೊಂಡಿದ್ದಾರೆ. ಇನ್ನೂ ಮೂರು ವರ್ಷಗಳವರೆಗೆ ಆಗುವಷ್ಟು ಹೊಸ ರುಚಿಗಳ ಪರಿಕಲ್ಪನೆಗಳು (ಕಾನ್ಸೆಪ್ಟ್‌) ಮಯ್ಯ ಅವರ ಬಳಿಯಲ್ಲಿ ಇವೆ.

ಗ್ರಾಹಕರಿಗೆ ನಿಧಾನವಾಗಿ ಒಂದೊಂದೆ ಹೊಸ ರುಚಿಗಳನ್ನು ಪರಿಚಯಿಸುವ ಇರಾದೆ ಅವರದ್ದಾಗಿದೆ. ಜತೆ, ಜತೆಯಲ್ಲಿಯೇ ಮಾರುಕಟ್ಟೆ ವಿಸ್ತರಿಸಲು ಹೊರಟಿದ್ದಾರೆ. ಸೇವ್‌, ಆಲುಭುಜಿಯಾ, ಮಸಾಲೆಯುಕ್ತ ಕಡಲೆ ಕಾಯಿಗಳನ್ನು ಆರಾಮವಾಗಿ ಕೈಯಿಂದ ಚೆಲ್ಲದಂತೆ ಸೇವಿಸಲು ಅನುಕೂಲವಾಗುವ ವಿಶಿಷ್ಟ ಆಕಾರದಲ್ಲಿ  ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಭೇಲ್‌ ಬಾರ್‌ ಗ್ರಾಹಕರ ಮನ ಗೆದ್ದಿರುವಂತೆ,  ಇತರ ಉತ್ಪನ್ನಗಳೂ ತಿನಿಸು ಪ್ರಿಯರ ಮೆಚ್ಚುಗೆಗೆ ಪಾತ್ರವಾಗಲಿವೆ ಎಂದು ಮಯ್ಯಾ ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ರಸಂ ಕ್ಯೂಬ್‌
ರಸಂ ಕ್ಯೂಬ್‌ ಇನ್ನೊಂದು ಜನಪ್ರಿಯ ಹೊಸ ಉತ್ಪನ್ನವಾಗಿದೆ. 200 ಮಿಲಿ ಲೀಟರ್‌ನಷ್ಟು ಬಿಸಿ ನೀರಿಗೆ ಒಂದು ಕ್ಯೂಬ್‌ ಹಾಕಿದರೆ ಬಿಸಿ ಬಿಸಿ ಅನ್ನದ ಜತೆ ಸೇವಿಸಲು ರುಚಿಕಟ್ಟಾದ ರಸಂ ಕ್ಯೂಬ್‌ ದಿಢೀರ್‌ ಸಿದ್ಧಗೊಳ್ಳುತ್ತದೆ.  1, 6 ಮತ್ತು 12ರ ಪ್ಯಾಕ್‌ಗಳಲ್ಲಿ ಲಭ್ಯ ಇರುವ ಈ ಕ್ಯೂಬ್ ಒಂದರ ಬೆಲೆ ₹10 ಮಾತ್ರ. 250 ಮಿಲಿ ಲೀಟರ್‌ನಷ್ಟು ಕುದಿಯುವ ಬಿಸಿ ನೀರಿನಲ್ಲಿ ಬೆರೆಸಿ ಸೂಪ್‌ನಂತೆಯೂ ಸೇವಿಸಬಹುದು. ಈ ಕ್ಯೂಬ್‌ನ ಬಾಳಿಕೆ ಒಂದು ವರ್ಷ. ಇದರಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸಿಲ್ಲ ಎಂದು ಮಯ್ಯಾ ಅವರು ಖಚಿತ ಭರವಸೆ ನೀಡುತ್ತಾರೆ.

ಕರ್ನಾಟಕ, ಆಂಧ್ರ, ಮದ್ರಾಸ್‌, ಗಾರ್ಲಿಕ್‌ ಸಾಂಬಾರ್‌ ಸೇರಿದಂತೆ ನಾಲ್ಕು ವಿಭಿನ್ನ ಬಗೆಯ ರಸಂ ಕ್ಯೂಬ್‌ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಇದೇ ಬಗೆಯಲ್ಲಿ ಉತ್ತರ ಭಾರತದ ದಾಲ್‌ ಕೂಡ ತಯಾರಿಸಲಾಗುತ್ತಿದೆ. ಸಾಂಪ್ರದಾಯಿಕ ತಿನಿಸುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ ಗ್ರಾಹಕರ ಅಗತ್ಯಗಳನ್ನೆಲ್ಲ ಪೂರೈಸಲಾಗುತ್ತಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ದಿನದ  24 ಗಂಟೆ ಕಾರ್ಯನಿರ್ವಹಿಸುವ ಮಳಿಗೆಗೆ ದೆಹಲಿಯಲ್ಲಿಯೂ ಬೇಡಿಕೆ ಕಂಡು ಬಂದಿದೆ. ಕೋಲಾರದ ಫುಡ್‌ಕೋರ್ಟ್‌ನಲ್ಲಿ ರೆಸ್ಟೊರಂಟ್‌  ಆರಂಭಿಸಲಾಗಿದೆ.

ರಾಜ್ಯದಾದ್ಯಂತ ಸರಣಿ ಮಳಿಗೆಗಳನ್ನು ಆರಂಭಿಸುವುದು ದೊಡ್ಡ ವಿಷಯವೇನಲ್ಲ. ಆದರೆ, ಗುಣಮಟ್ಟವನ್ನು ಒಂದೇ ಬಗೆಯಲ್ಲಿ ಕಾಯ್ದುಕೊಳ್ಳುವ ಸವಾಲಿನಿಂದಾಗಿ ಅದು ನಿರೀಕ್ಷಿಸಿದ ವೇಗದಲ್ಲಿ ಕಾರ್ಯಗತಗೊಳ್ಳುತ್ತಿಲ್ಲ ಎಂದು ಅವರು ಕಾರಣ ನೀಡುತ್ತಾರೆ. ಆರಂಭದಲ್ಲಿ ರೆಸ್ಟೊರೆಂಟ್‌ ಆರಂಭಿಸಿ  ಬ್ರ್ಯಾಂಡ್ ಜನಪ್ರಿಯತೆಗೊಳಿಸಲಾಯಿತು. ಬ್ರ್ಯಾಂಡ್‌ಗೆ ಸಿಗುತ್ತಿರುವ ಮನ್ನಣೆ  ಒಂದು ಹಂತಕ್ಕೆ ಬರುತ್ತಿದ್ದಂತೆ  ವಹಿವಾಟನ್ನು ಹೊಸ ಗಡಿಗಳಿಗೆ ವಿಸ್ತರಿಸಲು ಮುಂದಾಗಿದ್ದಾರೆ. 

ಈ ಉದ್ದೇಶಕ್ಕೆ ₹200 ಕೋಟಿಗಳನ್ನು ವೆಚ್ಚ ಮಾಡುವ ಮಯ್ಯ ಅವರ ಕನಸಿಗೆ ಕೈಜೋಡಿಸಲು ಹೂಡಿಕೆದಾರರು ಮುಂದೆ ಬಂದಿದ್ದು, ಅಗತ್ಯ ಸಂಪನ್ಮೂಲವನ್ನು ಒಟ್ಟು ಮಾಡಿಕೊಟ್ಟಿದ್ದಾರೆ. ಕೊರಿಯಾ, ಜಪಾನ್‌, ಸಿಂಗಪುರ, ಆಸ್ಟ್ರೇಲಿಯಾ ಮತ್ತು ಕೊಲ್ಲಿ ದೇಶಗಳಲ್ಲೂ ಮಯ್ಯಾಸ್‌ ಉತ್ಪನ್ನಗಳು ದೊರೆಯುತ್ತಿವೆ. ಶೀಘ್ರದಲ್ಲಿಯೇ ಇಂಗ್ಲೆಂಡ್‌ನಲ್ಲಿಯೂ ದೊರೆಯಲಿವೆ. ಇ–ಕಾಮರ್ಸ್‌ನ ಸ್ವಂತ ವಹಿವಾಟೂ ಚೆನ್ನಾಗಿಯೇ ನಡೆಯುತ್ತಿದೆ.

ಆನ್‌ಲೈನ್‌ ಮಾರುಕಟ್ಟೆಯ ಇತರ ಮಾರಾಟ ಮಳಿಗೆಗಳಲ್ಲಿ ಮಾತ್ರ ಮಯ್ಯಾಸ್‌ ಉತ್ಪನ್ನಗಳು ಲಭ್ಯ ಇಲ್ಲ. ಇದಕ್ಕೆ ವಹಿವಾಟಿನ ಸ್ವರೂಪ ಅಡ್ಡಿಯಾಗಿದೆ ಎಂದು ಮಯ್ಯ ಅವರು ಕಾರಣ ನೀಡುತ್ತಾರೆ. ಗ್ರಾಹಕರು ಕನಿಷ್ಠ ₹ 250ರಷ್ಟು ಮೊತ್ತದ ಉತ್ಪನ್ನಗಳಿಗೆ ಬೇಡಿಕೆ ಇಟ್ಟರೆ ಬೆಂಗಳೂರು ಮತ್ತು ರಾಜ್ಯದಲ್ಲಿ ಒಂದು ದಿನದಲ್ಲಿ ಮತ್ತು ದೇಶದ ಇತರ ಭಾಗದಲ್ಲಿ ಎರಡರಿಂದ ಮೂರು ದಿನಗಳಲ್ಲಿ ಉತ್ಪನ್ನಗಳನ್ನು ತಲುಪಿಸಲಾಗುತ್ತಿದೆ.

ಆರೋಗ್ಯಕರ ಪೇಯ, ಇನ್‌ಸ್ಟಂಟ್‌ ಮಿಕ್ಸ್‌, ಶೈತ್ತೀಕರಿಸಿದ ಆಹಾರ, ಮಸಾಲಾ, ಉಪ್ಪಿನಕಾಯಿ, ರೆಡಿ ಟು ಈಟ್‌, ಕುರುಕಲು ತಿಂಡಿ ಮತ್ತು ಸಿಹಿ ತಿನಿಸುಗಳ ವೈವಿಧ್ಯಮಯ ದೊಡ್ಡ ಪಟ್ಟಿಯೇ ಇವರಲ್ಲಿದೆ. ಅಡುಗೆ ಮಾಡುವ ಕಲೆ ಮತ್ತು ಎಂಜಿನಿಯರಿಂಗ್‌ ಗೊತ್ತಿದ್ದರೆ ಮಾತ್ರ ಸಂಸ್ಕರಿತ ಆಹಾರ ಉದ್ದಿಮೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಎಂಟಿಆರ್‌ನಲ್ಲಿ ಎರಡು ವರ್ಷ ಅಡುಗೆ ಮನೆಯಲ್ಲಿದ್ದುಕೊಂಡು  ಗಳಿಸಿದ ಅಪಾರ ಅನುಭವ ಈಗಲೂ ಅವರನ್ನು ಕೈಹಿಡಿದು ಮುನ್ನಡೆಸುತ್ತಿದೆ.

ರೈಲ್ವೆ ಪ್ರಯಾಣಿಕರಿಗೂ ಲಭ್ಯ
ಬಟ್ಟಲಿನಲ್ಲಿ ಒಂದು ವರ್ಷ ಬಾಳಿಕೆ ಬರುವ ರಸ್‌ಮಲೈ, ಮೊಸರನ್ನ, ಮತ್ತು ಮೊಸರು ವಡೆಗಳನ್ನೂ ಪರಿಚಯಿಸಲಾಗಿದ್ದು, ಇವು ಸದ್ಯದಲ್ಲೇ ರೈಲ್ವೆ ಪ್ರಯಾಣಿಕರಿಗೂ ದೊರೆಯಲಿವೆ. ಜತೆಗೆ ಪೊಂಗಲ್, ಖಾರಾಭಾತ್‌ ಕೂಡ ದೊರೆಯಲಿವೆ. ಕೇಟರಿಂಗ್‌ ಸೌಲಭ್ಯ ಇರುವ ದೂರ ಪಯಣದ ರೈಲುಗಳಲ್ಲಿ ಜುಲೈ ತಿಂಗಳಿನಿಂದ ಮಯ್ಯಾಸ್‌ನ ಸೇವಿಸಲು ಸಿದ್ಧ ಆಹಾರ ಉತ್ಪನ್ನ ಲಭ್ಯ ಇರಲಿವೆ. ₹100 ಬೆಲೆಯಲ್ಲಿ ದಕ್ಷಿಣ ಭಾರತದ ಊಟವನ್ನೂ ಪೂರೈಸಲು ಸಂಸ್ಥೆ ಸಜ್ಜಾಗಿದೆ. ರೈಲ್ವೆಗಳಲ್ಲಿ ಊಟ ಪೂರೈಸುವ  ಲೈಸೆನ್ಸ್‌ದಾರರು ಇತರ ಉತ್ಪನ್ನಗಳ ಜತೆಗೆ ಕಡ್ಡಾಯವಾಗಿ ಮಯ್ಯಾಸ್‌ ಉತ್ಪನ್ನಗಳನ್ನು ಖರೀದಿಸಿ ಪೂರೈಸುವ ಸಂಬಂಧ ಭಾರತೀಯ ರೈಲ್ವೆ ಒಪ್ಪಂದ ಮಾಡಿಕೊಂಡಿದೆ.

ವಹಿವಾಟು ವಿಸ್ತರಣೆಗೆ ಅಗತ್ಯ ಬಿದ್ದರೆ ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಷೇರು ಮಾರುಕಟ್ಟೆಗೂ ಹೋಗುವ ಸಾಧ್ಯತೆಯನ್ನು ಅವರು ತಳ್ಳಿ ಹಾಕುವುದಿಲ್ಲ. ಕಾರ್ಖಾನೆಗೆ ಭೂಮಿ ಖರೀದಿಯೂ ಸೇರಿದಂತೆ ₹ 100 ಕೋಟಿಗಳಷ್ಟು ಬಂಡವಾಳ ತೊಡಗಿಸಲಾಗಿದೆ. ಹೆಚ್ಚುವರಿಯಾಗಿ ಸಂಗ್ರಹಿಸಿರುವ ₹ 200 ಕೋಟಿಗಳು ದುಡಿಯುವ ಬಂಡವಾಳಕ್ಕೂ ನೆರವಾಗಲಿದೆ. ಮುಂದಿನ 3 ವರ್ಷಗಳಲ್ಲಿ ₹ 500 ಕೋಟಿ ವಹಿವಾಟು ನಡೆಸುವ ಗುರಿ ಸಾಧಿಸುವ ನಿಟ್ಟಿನಲ್ಲಿ ಸದಾನಂದ ಮಯ್ಯ ಅವರು ದೃಢ ಹೆಜ್ಜೆ ಇರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT