ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣದಂಡನೆ: ಛದ್ಮವೇಷದ ಪ್ರತೀಕಾರ?

ಅಕ್ಷರ ಗಾತ್ರ

ಇಂದು ಅಮ್ನೆಸ್ಟಿ ಇಂಟರ್‌­ನ್ಯಾಷ­ನಲ್‌ನಂತಹ ಸಂಸ್ಥೆಗಳು ಸಮೀಕ್ಷೆ ನಡೆಸಿ ಜಗತ್ತಿನಾದ್ಯಂತ ನೂರಾರು ದೇಶಗಳು ಮರಣ­­­ದಂಡನೆಯನ್ನು ಬಹಿಷ್ಕರಿಸಿವೆ ಎಂದು ವರದಿ ಮಾಡುತ್ತಿವೆ, ಯೂರೋಪಿನ ಹೆಚ್ಚು ಕಡಿಮೆ ಎಲ್ಲ ದೇಶಗಳೂ ಈಗಾಗಲೇ ಮರಣ­ದಂಡ­ನೆ­ಯನ್ನು ತಮ್ಮ ಕಾನೂನು ಸಂಹಿತೆ­ಯಿಂದ ತೆಗೆದುಹಾಕಿವೆ. ಇದು ನಿಜಕ್ಕೂ ಆಶಾ­ದಾ­ಯ­ಕವಾದ ಬೆಳವಣಿಗೆಯಾಗಿದೆ. ಇದು ಮನುಷ್ಯ ನಾಗರಿಕತೆಯು ಆರೋಗ್ಯಕರ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದರ ಸೂಚನೆ­ಯಾಗಿದೆ. ಯಾವುದೇ ಕಾನೂನು ಸಂಹಿತೆ­ಯಲ್ಲಿ ಮರಣದಂಡನೆ ಒಂದು ಕಾನೂನಾತ್ಮಕ ಶಿಕ್ಷೆ­ಯಾಗಿರುವಷ್ಟೂ ಕಾಲ ಅದನ್ನು ಮೃಗ­ಪ್ರಭು­ತ್ವ­ದಲ್ಲಷ್ಟೇ ಕಂಡು ಬರುವ - ಪ್ರತೀಕಾರ ಸಂಹಿತೆ ಎಂದು ಕರೆಯಬೇಕಲ್ಲದೆ ನಿಜಾರ್ಥದಲ್ಲಿ ಅದನ್ನು ನಾಗರಿಕ ಕಾನೂನು ಎಂದು ಕರೆಯಲು ಬರುವುದಿಲ್ಲ. ನಾವು ನೀಡುವ ಶಿಕ್ಷೆ ಛದ್ಮವೇಷದ ಪ್ರತೀಕಾರವಾಗಬಾರದು. ಸಂದರ್ಭವಶಾತ್, ಪರಿಸ್ಥಿತಿಯ ಕೈಬೊಂಬೆಯಂತೆ ವರ್ತಿಸುವ ಒಬ್ಬ ಕೊಲೆಗಾರ ಕ್ಷಮಾರ್ಹನಾಗಿರುವನು. ಆದರೆ ಜವಾ­ಬ್ದಾರಿ­ಯುತ ಶಕ್ತಿ ಮತ್ತು ಸ್ಥಾನಮಾನ ಹೊಂದಿ­ರುವ ಒಂದು ನ್ಯಾಯಸಂಹಿತೆ ತಾನೂ ಆ ಕೊಲೆಗಡುಕನ ಕೃತ್ಯವನ್ನೇ ಅನುಸರಿಸಿದರೆ ಅದು ಖಂಡಿತವಾಗಿ ಕ್ಷಮಾರ್ಹವಲ್ಲ.

ಏಕೆಂದರೆ ಮರಣದಂಡನೆಯಂತಹ ಶಿಕ್ಷೆಗೆ ಬಲಿ­ಯಾ­ಗುವ ಒಬ್ಬ ಅಪರಾಧಿ ತನ್ನ ಸಮಾ­ಜದ ರೋಗಚಿಹ್ನೆಗಳನ್ನು ತೋರಿಸುತ್ತಿರುವವನು. ಇಂತಹ ಪರಿಸ್ಥಿತಿಯಲ್ಲಿ ರೋಗಚಿಹ್ನೆಗಳಿಗೆ ಚಿಕಿತ್ಸೆ ನೀಡಲು ಹೋಗದೆ ರೋಗದ ಮೂಲವನ್ನು ಸರಿಯಾಗಿ ಹಿಡಿಯಬೇಕಾಗುತ್ತದೆ. ಓರ್ವ ಅಪ­ರಾಧಿ ವ್ಯಕ್ತಿಗತವಾಗಿ ಒಬ್ಬ ರೋಗಗ್ರಸ್ತನೆಂದು ತೀರ್ಮಾ­­ನಿ­ಸುವ ನಾಗರಿಕತೆ ಆತ್ಮವಂಚನೆ ಮಾಡಿ­­­ಕೊಳ್ಳುತ್ತಿರುತ್ತದೆ. ಒಂದು ನಾಗರಿಕ ಸಂಹಿತೆ­ಯು ಸರಣಿ ಹಂತಕರಿಗೆ, ವಿಕೃತ ಕಾಮಿ­ಗ­ಳಿಗೆ, ಅತ್ಯಾಚಾರಿಗಳಿಗೆ ಸೂಕ್ತವಾದ ಮಾನಸಿಕ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸುವ ನಿಟ್ಟಿನಲ್ಲಿ ಯೋಚಿಸ­ಬೇಕಲ್ಲದೆ ಅಂಥವರನ್ನು ಒಂದೇ ಸಲಕ್ಕೆ ಮುಗಿಸಿಬಿಡಬಾರದು. ಇನ್ನಾವ ಚಿಕಿತ್ಸೆ­ಯಿಂ­ದಲೂ ಸರಿಪಡಿಸಲಾಗದ ಮತ್ತು ಸಮಾಜಕ್ಕೆ ಕಂಟಕಪ್ರಾಯರಾಗಬಲ್ಲ ರೋಗಿಗಳಾಗಿದ್ದಲ್ಲಿ (ಅಪ­ರಾ­ಧಿ­ಗಳಲ್ಲ) ಅಂಥವರನ್ನು ಮನೋ­ರೋಗ ವೈದ್ಯರ ಉಸ್ತುವಾರಿಯಲ್ಲಿ ಚಿರನಿದ್ರೆಗೆ ಕಳು­ಹಿ­ಸ­ಬಹುದಾದರೂ ಅಂತಹ ಶಿಕ್ಷೆಯನ್ನು ಅಪರಾಧ ಕಾಯಿದೆಯ ಅಡಿಯಲ್ಲಿ ಅನು­ಮೋ­ದಿ­­ತವಾದ ದಯಾಮರಣ ಎಂದು ಘೋಷಿಸಬೇಕೇ ವಿನಾ ಅದನ್ನು ಮರಣ­ಶಾಸನ ಎಂದು ಕರೆಯಬಾ­ರ­ದು­. 

ಇಂದು ಉಮೇಶ್ ರೆಡ್ಡಿಯಂತಹ ವಿಕೃತ­ಕಾಮಿ­ಗಳು ಜೈಲಿನಲ್ಲಿದ್ದೂ ಗಂಭೀರವಾದ ಓದಿನಲ್ಲಿ ತೊಡ­­ಗಿ­ಕೊಂಡಿದ್ದಾರೆ. ಜೈಲಿನಲ್ಲೇ  ವಿದ್ಯಾಭ್ಯಾಸ ಮುಗಿಸಿ ಡಿಗ್ರಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲ­ವ­ರು ಜೀವದಾನಕ್ಕೆ ಮೊರೆ ಇಡುತ್ತಿದ್ದಾರೆ. ಇಂತಹ ಮನವಿಗಳಿಗೆ ನಮ್ಮ ಕಾನೂನು ವ್ಯವ­ಸ್ಥೆಯು ಕಿವುಡಾದರೆ ಅದನ್ನು ಕಠೋರ­ತನ­ವೆಂದೇ ಕರೆಯಬೇಕಾಗುತ್ತದೆ.

ಅಪರಾಧ ಮಾಡಿದಾತ ತನ್ನ ಹಳೆಯ ಚಾಳಿ­ಯನ್ನೇ ಮುಂದುವರಿಸಲು ಈ ರೀತಿ ಸುಳ್ಳು ಹೇಳು­ತ್ತಿ­­­ರುವನೆಂಬ ಅನುಮಾನ ಹುಟ್ಟದಿರದು. ಅಂತಹ ಅನುಮಾನಗಳನ್ನು ಬಗೆಹರಿಸಿಕೊಂಡು ನಿಜವನ್ನು ಪತ್ತೆ ಹಚ್ಚಲು ವಿವಿಧ ಮಾರ್ಗೋ­ಪಾಯಗಳಿವೆ. ಆಧುನಿಕ ನರವಿಜ್ಞಾನಶಾಸ್ತ್ರದ ವಿವಿಧ ಸಂಶೋಧನೆಗಳನ್ನು - ನಾರ್ಕೋ ಪರೀಕ್ಷೆ, ಬ್ರೈನ್ ಮ್ಯಾಪಿಂಗ್, ಟ್ರುತ್ ಸೆರಮ್ ಇತ್ಯಾದಿ - ನಮ್ಮ ವಿಧಿವಿಜ್ಞಾನ ಪ್ರಯೋಗಾಲಯಗಳು ಈಗಾ­ಗಲೇ ಯಶಸ್ವಿಯಾಗಿ ಬಳಸಿಕೊಳ್ಳುತ್ತಿವೆ.

ವಿಶ್ವ­ದರ್ಜೆಯ ಗುಣಮಟ್ಟದ ಚಿಕಿತ್ಸೆಗಳ­ನ್ನಾ­ದರೂ ನೀಡಿ ಅಂತಹ ಮನೋರೋಗಿಗಳನ್ನು ಮುಖ್ಯವಾಹಿನಿಗೆ ಸೇರಿಸಬೇಕಾದುದು ಒಂದು ನಾಗ­ರಿಕ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಆಗ ಮಾತ್ರ ಒಂದು ವ್ಯವಸ್ಥೆಯು - ಒಬ್ಬ ವಿಕೃತ­ಕಾಮಿ­ಯನ್ನು ಅಥವಾ ಕೊಲೆಯ ವ್ಯಸನಿಯನ್ನು ಮನುಷ್ಯನನ್ನಾಗಿ ಪರಿವರ್ತಿಸಿದ - ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಹಾಗಲ್ಲದೆ ಮರಣದಂಡ­ನೆಯ ಹೆಸರಿನಲ್ಲಿ ಅಮೂಲ್ಯವಾದ ಮನುಷ್ಯಜೀ­ವ­ವನ್ನು ನಾಶ ಮಾಡುವುದು ನಿಜಕ್ಕೂ ಲಜ್ಜೆ­ಗೇಡು, ಇನ್ನು ಹೆಗ್ಗಳಿಕೆಯಂತೂ ದೂರದ ಮಾತು. ತೆರೆದ ಕೊಳವೆ ಬಾವಿಗಳೊಳಗೆ ಬೀಳುವ ಪುಟ್ಟ ಕಂದಮ್ಮಗಳನ್ನು ರಕ್ಷಿಸಲು ಹರ­ಸಾಹಸ ಮಾಡುವ ಜನಕ್ಕೆ ಜೀವದ ಬೆಲೆ ಗೊತ್ತಿಲ್ಲವೆಂದರೆ ಏನರ್ಥ?

ಇವಿಷ್ಟೂ ಸಾಮಾಜಿಕ ಅಪರಾಧಿಗಳ ಕತೆ­ಯಾಯಿತು. ಇನ್ನು ರಾಜಕೀಯ ಅಪರಾಧ ಇದಕ್ಕಿಂತಲೂ ಜಟಿಲವಾದ ಸಮಸ್ಯೆಯಾಗಿದೆ. ಗಾಂಧಿ­ಯನ್ನು ಕೊಂದವನು ಅಥವಾ ಮುಂಬಯಿ­ಯಲ್ಲಿ ಬಾಂಬ್ ದಾಳಿ ನಡೆಸಿದ­ವನು ಖಂಡಿತವಾಗಿ ಪರಿಸ್ಥಿತಿಯ ಕೈಗೊಂಬೆ­ಯಂತೆ ವರ್ತಿಸಿ ಅಪರಾಧ ಕೃತ್ಯಗಳನ್ನು ನಡೆಸಿರಲಾರ. ಅವನಿಗೆ ತಾನೇನು ಮಾಡುತ್ತಿ­ದ್ದೇನೆ ಎಂದು ಚೆನ್ನಾಗಿಯೇ ತಿಳಿದಿರುತ್ತದೆ. ಇಂತ­ಹ­ವರಿಗೆ ವಿಧಿಸಲಾಗುವ ಶಿಕ್ಷೆ ಯಾವ ಪ್ರಕಾರ­ದ್ದಾಗಿರಬೇಕು ಎಂಬುದು ಚರ್ಚಾಯೋಗ್ಯವಾದ ಸಂಗತಿಯಾದರೂ ಸದ್ಯಕ್ಕೆ ರಾಜಕೀಯ ಕೈದಿ­ಗಳಿಗೆ ಶಿಕ್ಷೆ ವಿಧಿಸುವಾಗ ಬಹುತೇಕ ಸಂದರ್ಭ­ಗಳಲ್ಲಿ ನ್ಯಾಯಾಲಯಗಳು ರಾಜಕೀಯ ಒತ್ತಡ ಅನುಭವಿಸುತ್ತಿರುತ್ತವೆ. ರಾಜಕೀಯ ಅಪರಾಧಗಳ ವಿಷಯದಲ್ಲಿ ನ್ಯಾಯಾಂಗ ವ್ಯವಸ್ಥೆ ಸಮರ್ಥವಾದ ತೀರ್ಮಾನಗಳನ್ನು ತೆಗೆದು­ಕೊಳ್ಳಲು ನ್ಯಾಯಾಲಯಗಳು ಈಗ  ಚೀನಾದ­ಲ್ಲಾ­ಗುತ್ತಿರುವಂತೆ ಹೆಚ್ಚು ಆಧುನಿಕವೂ, ನಿಷ್ಪಕ್ಷ­ಪಾತವೂ ಆದ ಕಾನೂನು ವ್ಯವಸ್ಥೆಯನ್ನು ಹೊಂದ­ಬೇಕಾದುದು ಅಗತ್ಯ.  

ಇಂದು ಐಎಸ್‌ಐಎಸ್ ಉಗ್ರರು, ನಕ್ಸಲರು ಮೊದಲಾದವರು ನಡೆಸುತ್ತಿರುವ ನರಹತ್ಯೆ­ಗಳನ್ನು ನಮ್ಮ ಕಾನೂನು ಸಂಹಿತೆಗಳು ಅಪರಾ­ಧವೆಂದು ಪರಿಗಣಿಸುವವಾದರೂ ಅವರ ಬಳಿ ಅವರದ್ದೇ ಆದ ಕಾನೂನು ಸಂಹಿತೆಗಳಿರುತ್ತವೆ. ಆ ಸಂಹಿತೆಗಳ ಪ್ರಕಾರ ಅವರ ನರಹತ್ಯೆ ಅವರ ಪಾಲಿನ ಕರ್ತವ್ಯವೋ ಅಥವಾ ಗುರಿಸಾಧನೆಗೆ ಅನಿವಾರ್ಯವಾದ ಕೃತ್ಯವೋ ಆಗಿರುತ್ತದೆ. 

ನಾವು ಮನುಷ್ಯರು ವಾಸಿಸಲು ಯೋಗ್ಯವಾದ ಸಮಾಜವನ್ನು ನಿರ್ಮಿಸಿಕೊಂಡಿಲ್ಲವೆಂಬುದಕ್ಕೆ ಇಂದಿನ ರಾಜಕೀಯ ಮತ್ತು ಧಾರ್ಮಿಕ ಅಪರಾ­ಧ­ಗಳು ರುಜುವಾತುಗಳಾಗಿವೆ. ಅಂಥ­ದೊಂದು ಯೋಗ್ಯ ಮತ್ತು ಮಾನವೀಯ ಸಮಾಜದಲ್ಲಿ ಮರಣ­ದಂಡನೆ ಪ್ರಯತ್ನವೇ ಇಲ್ಲದಂತೆ ಕಣ್ಮರೆಯಾಗುತ್ತದೆ.

ಅಲ್ಲಿಯ ತನಕ ಕಾನೂನಿನ ಹೆಸರಿನಲ್ಲಿ ಅಥವಾ ಕಾನೂನನ್ನು ಕೈಗೆ ತೆಗೆದು­ಕೊಂಡವರ ಹೆಸರಿನಲ್ಲಿ ಮರಣ­ದಂಡನೆ (ಇನ್ನು ಆತ್ಮಹತ್ಯೆಯಂತೂ ಇವೆರಡಕ್ಕಿಂತಲೂ ಘೋರ­ವಾದ ಸಾವಿನ ಶಿಕ್ಷೆಯಾಗಿದೆ) ಜಾರಿ­ಯಲ್ಲಿದ್ದೇ ಇರುತ್ತದೆ. ಹಾಗೆಂದು ಸತ್ಯ­ಯುಗ ಪ್ರಾರಂಭ­ವಾಗುವ­ವರೆಗೂ ನಾವು ಕಾಯುತ್ತ ಕೂರು­ವಂತಿಲ್ಲ. ಒಂದು ಮಾನವೀಯ ಸಮಾಜ­ವನ್ನು ರೂಪಿ­ಸುವ ನಿಟ್ಟಿನಲ್ಲಿ ಮರಣ­ದಂಡನೆ­ಯನ್ನು ಶಾಶ್ವತ­­ವಾಗಿ ಬಹಿಷ್ಕರಿ­ಸುವುದೇ ಕಾನೂ­ನಿನ ನೆಲೆಯಲ್ಲಿ ಮೊದಲ ಮತ್ತು ಸರಿಯಾದ ಹೆಜ್ಜೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT