ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಮನೆ ‘ಅಮರ’

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮನೆಯನ್ನು ಹೀಗೆಯೇ ಕಟ್ಟಿಕೊಳ್ಳಬೇಕು, ಇಂತಹುದೇ ಸಾಮಗ್ರಿಗಳನ್ನು ಬಳಸಬೇಕು. ಮನೆಯ ಒಳಾಂಗಣ ವಿನ್ಯಾಸ, ಹೊರಭಾಗದ ಆಕಾರ ಹೀಗೇ ಇರಬೇಕು ಎಂಬ ನಿಯಮವೇನೂ ಇಲ್ಲ. ನಿಮ್ಮ ಕನಸಿಗೆ ತಕ್ಕಂತೆಯೇ ಮನೆ ನಿರ್ಮಿಸಿಕೊಳ್ಳಬಹುದು. ಮನೆಯನ್ನು ಮರದಿಂದಲೇ ಕಟ್ಟಿಕೊಳ್ಳುವಂತಿದ್ದರೆ ಹೇಗೆ? ಆ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ... 

ಮರದಿಂದ ಮನೆ ಕಟ್ಟಿ ವಾಸವಾಗುವ ಕಥೆ ಹಳೆಯ ಕಾಲದ್ದು. ಅನಂತರ ಮನುಷ್ಯನ ವಸತಿಗಳ ವಿನ್ಯಾಸ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಾ ಹೋದಂತೆ, ಕಾಂಕ್ರಿಟ್‌ ಕಟ್ಟಡ ಹೆಚ್ಚಿದಂತೆ ಮರದ ಬಳಕೆ ಕಡಿಮೆ ಆಗುತ್ತಾ ಬಂದಿತು. ಇತ್ತೀಚಿನ ವರ್ಷಗಳಲ್ಲಿ ಮರವನ್ನು ನಿಸರ್ಗದ ಅಮೂಲ್ಯ ಸಂಪತ್ತೆಂದು ಪರಿಗಣಿಸಲಾಗಿದೆ. ಮರದ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಡೆದು ಬಹು ಮಟ್ಟಿಗೆ ಯಶಸ್ವಿಯೂ ಆಗಿದೆ.

ಆದರೆ ಕೆಲವು ದೇಶಗಳಲ್ಲಿ ನೆಲ, ಗೋಡೆ, ಚಾವಣಿ ಎಲ್ಲವನ್ನೂ ದೃಢವಾದ ಮರದಿಂದಲೇ ನಿರ್ಮಿಸುವ ಕ್ರಮ ಬೆಳೆಯತೊಡಗಿದ್ದು ಅದು ಜನಾಕರ್ಷಣೀಯವೂ ಆಗುತ್ತಿದೆ. ಪೂರ್ಣವಾಗಿ ಮರದಿಂದಲೇ ಮನೆ ನಿರ್ಮಾಣವಾಗುವ ರೂಢಿ ಇಂದಿನದೇನಲ್ಲ. ಯುರೋಪಿನಲ್ಲಿ 12ನೇ ಶತಮಾನದಲ್ಲಿ, ಇತರೆಡೆ 15-16ನೇ ಶತಮಾನದಲ್ಲಿ ಮರದ ಹಲಗೆಗಳಿಂದ ಮನೆಗಳು ನಿರ್ಮಾಣಗೊಂಡಿದ್ದವು. 19ನೇ ಶತಮಾನದಲ್ಲಿ ಕೀಲುಗಳ ಮೂಲಕ ಜೋಡಿಸುವ ಮನೆಗಳು ಸಿದ್ಧವಾಗಿದ್ದವು. ಅಮೆರಿಕ, ನೆದರ್ಲೆಂಡ್, ಜರ್ಮನಿಯಲ್ಲಿರುವ ಪುರಾತನ ಇಗರ್ಜಿ ಮತ್ತು ಶ್ರೀಮಂತರ ಮನೆಗಳ ಹಜಾರಗಳ ಕಂಬ, ಚಾವಣಿ, ಗೋಡೆ ಎಲ್ಲವೂ ಮರದಿಂದಲೇ ನಿರ್ಮಾಣವಾಗಿದ್ದವು. ಶತಮಾನ ಕಳೆದರೂ ಅವು ಸುಭದ್ರವಾಗಿಯೇ ಉಳಿದಿವೆ. ಮಾರುಕಟ್ಟೆ ಸಭಾಂಗಣಗಳು ಆ ಕಾಲದಲ್ಲಿ ದಪ್ಪ ಮರದಿಂದ ನಿರ್ಮಾಣಗೊಂಡಿದ್ದರೂ ಈಗ ಕೂಡ ಸದೃಢವಾಗಿವೆ.

ರೋಮನ್ ವಾಸ್ತುಶಿಲ್ಪಿ ವಿಟ್ರುವಿಯಸ್ ಹಲವು ಶತಮಾನಗಳ ಹಿಂದೆ ಮರದ ಸಾಮಗ್ರಿಗಳಿಂದ ಮನೆ ನಿರ್ಮಿಸುವ ಸಿದ್ಧಾಂತವನ್ನು ತಯಾರಿಸಿದ್ದ. ಡಚ್ಚರು 17ನೇ ಶತಮಾನದಲ್ಲಿ ಕಟ್ಟಿದ ಇಂತಹ ಮನೆಗಳು ಈಗಲೂ ಹೊಸದರಂತಿವೆ. 1970ರಲ್ಲಿ ಅಮೆರಿಕ ಮತ್ತು ಕೆನಡಾದಲ್ಲಿ ಮರದಿಂದ ಅತ್ಯಾಧುನಿಕ ಮನೆಗಳ ನಿರ್ಮಾಣ ಮೊದಲು ಆರಂಭಗೊಂಡಿತು. ಈಗ ಬಾಲ್ಟಿಕ್ ದೇಶಗಳು, ಸ್ವೀಡನ್, ಇಂಗ್ಲೆಂಡ್, ರಷ್ಯಾ, ಫಿನ್ಲೆಂಡ್, ನಾರ್ವೆ, ಫ್ರಾನ್ಸ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್ ಹೀಗೆ ಅಸಂಖ್ಯ ದೇಶಗಳು ಅದನ್ನು ಅನುಸರಿಸಿವೆ. ಚೀನಾ ಮತ್ತು ಜಪಾನ್‌ನಲ್ಲಿ ಭೂಕಂಪ ಹಾಗೂ ಚಂಡಮಾರುತವಾದರೂ ಮನೆ ಕುಸಿತದ ಭಯ ಮೂಡಿಸದಂತಹ ಬಿದಿರಿನ ಮನೆಗಳು ತಯಾರಾಗುತ್ತಿವೆ.

ವಿವಿಧ ದೇಶಗಳಲ್ಲಿ ವಾಣಿಜ್ಯ ಬಳಕೆಯ ಮರಗಳ ಸಂಪತ್ತು ವಿಪುಲವಾಗಿ ರುವುದರಿಂದ ಮರದ ಹಲಗೆಗಳಿಂದ ಮನೆ ಕಟ್ಟುವುದು ದುಬಾರಿಯಲ್ಲ. ಎಕ್ಸೊಟಿಕ್ ಮತ್ತು ಓಕ್ ಜಾತಿಯ ಹಳೆಯ ಮರಗಳು ಬಹಳ ಸದೃಢವಾಗಿರುವುದರಿಂದ ಮನೆಗಳ ನಿರ್ಮಾಣಕ್ಕೆ ಉಪಯುಕ್ತವಾಗಿವೆ. ಅತ್ಯಾಧುನಿಕ ತಂತ್ರಜ್ಞಾನದ ವಾಸ್ತು ವಿನ್ಯಾಸ, ಮರಗಳಿಂದ ಹಲಗೆ ತಯಾರಿಸಲು ಸುಧಾರಿತ ಯಂತ್ರಗಳಿರುವುದರಿಂದ ಬ್ಯೂನಸ್ ರಾ ಕಲ್ಲು, ಇಟ್ಟಿಗೆ, ಗಾಜು ಇವಿಷ್ಟನ್ನೇ ಬಳಸಿ ಈ ಮನೆಗಳು ಸಿದ್ಧವಾಗುತ್ತವೆ.

ಮಹಡಿಯ ದೊಡ್ಡ ಮನೆಗಳಾದರೆ ಕಾಂಕ್ರಿಟ್‌ ಪಿಲ್ಲರ್‌ಗಳನ್ನು ಹಾಕಿ ಭದ್ರ ಗೊಳಿಸುತ್ತಾರೆ. ಆಕರ್ಷಕ ವಿನ್ಯಾಸಗಳು, ಸುಂದರವಾದ ಅಳವಡಿಕೆಗಳಿವೆ. ಕಾಂಕ್ರಿಟ್‌ ಗೋಡೆಗೆ ಸಡ್ಡು ಹೊಡೆಯುವಂತೆ ಮರದ ಗೋಡೆಗಳನ್ನು ಒಳಗೊಂಡ ಹಜಾರ, ಶಯನದ ಕೋಣೆ, ಸ್ನಾನಗೃಹ, ಅಡುಗೆ ಕೋಣೆ, ಮಹಡಿ ಎಲ್ಲವೂ ಮನ ಸೆಳೆಯುತ್ತವೆ.

ಮರದ ಗೋಡೆಗಳಿಗೆ ಮನೆ ಮಾಲೀಕರು ತಮಗೆ ಇಷ್ಟವಾದ ಬಣ್ಣ ಬಳಿದು ರಂಗು ತುಂಬಬಹುದು, ಸುಣ್ಣದ ಚಿಪ್ಪಿನ ಅಲಂಕಾರ ಮಾಡಬಹುದು. ಈ ಮನೆಗಳ ಚಾವಣಿಯೂ ಮರದ್ದೇ ಆಗಿರುವುದರಿಂದ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗಲು ಇಳಿಜಾರಾಗಿರುತ್ತವೆ.

ಬೆಳಕು ಹೆಚ್ಚು ಬರಲು ಗೋಡೆಯ ಜೋಡಣೆಗಳಲ್ಲಿ ಸಂದಿನ ವ್ಯವಸ್ಥೆಯಿದೆ. ದೃಢತೆಗಾಗಿ ಉಕ್ಕಿನ ಪಟ್ಟಿಗಳನ್ನು ಉಪಯೋಗಿಸುತ್ತಾರೆ. ಥೈಲ್ಯಾಂಡ್‌ನಲ್ಲಿ ಬೇಕಾದಲ್ಲಿಗೆ ಸಾಗಿಸಿ ಮರುಜೋಡಿಸಲು ಅವಕಾಶವಾಗುವಂತಹ ಮನೆಗಳೂ ಕೈಗೆಟಕುತ್ತವೆ. ಈ ತಂತ್ರಜ್ಞಾನದಲ್ಲಿ ಸಾಲುಮನೆಗಳು, ನದಿಯ ಮೇಲೆ ಸೇತುವೆ ಮಾಡಿ ಅದರ ಮೇಲೆ ಮನೆಗಳ ನಿರ್ಮಾಣವಾಗುತ್ತಿವೆ. ಗೋಡೆಗಳು 10ರಿಂದ 30 ಸೆಂ.ಮೀ ದಪ್ಪ ಇರುತ್ತವೆ. 20 ಅಡಿ ಎತ್ತರದ ಸರಳವಾದ ಒಂದು ಮನೆಯನ್ನು ಮೂರೇ ದಿನಗಳಲ್ಲಿ ನಿರ್ಮಿಸಬಹುದು. ಇವು ನಿರ್ಮಾಣ ದೃಷ್ಟಿಯಿಂದಲೂ ಕಡಿಮೆ ವೆಚ್ಚದವಾಗಿವೆ.

ಹವಾಮಾನದ ವೈಪರೀತ್ಯ ವಿರುದ್ಧ ಸೆಣೆಸಬಲ್ಲ ಗುಣವಿರುವ ಮರಗಳನ್ನು ಉಪಯೋಗಿಸುವ ಕಾರಣ ತೇವಕ್ಕೆ ಶಿಲೀಂಧ್ರ ಬೆಳೆದು ಹಾಳಾಗದು. ಬಿಸಿಲಿಗೆ ಬಾಗದು. ಜಿರಳೆ, ಗೆದ್ದಲುಗಳಂತಹ ಕೀಟಗಳು ಬಾಧಿಸದಂತೆ, ಬೆಂಕಿಯ ಆಘಾತಕ್ಕೆ ಬಲಿಯಾಗ ದಂತೆ ಸೂಕ್ತ ನಿರೋಧಕ ವ್ಯವಸ್ಥೆಗಳನ್ನು ಅಳವಡಿಸುತ್ತಾರೆ. ನೀರಿನಿಂದ ತೊಳೆದರೂ ಧಕ್ಕೆಯಾಗದು. ತಳದಿಂದ ಅರ್ಧಭಾಗ ಕಲ್ಲಿನಿಂದ ಕಟ್ಟಿ ಮೇಲ್ಭಾಗವನ್ನು ಮರದಿಂದ ಕಟ್ಟುವ ವಿಧಾನವೂ ಬಂದಿದೆ.

ಮನಿಲಾದಲ್ಲಿ ಕಸ ಮತ್ತು ಮರಳಿನ ರಾಶಿಯಲ್ಲಿ ಇಂತಹ ಮನೆಗಳನ್ನು ಕಟ್ಟುತ್ತಾರೆ. ಪ್ರವಾಹ ಬಂದಾಗ ಮನೆಗಳ ಸ್ಥಳಾಂತರಕ್ಕೆ ಸುಲಭವಾಗುತ್ತದಂತೆ. ಕಾಂಕ್ರಿಟ್‌ನ ಮನೆಗಳಂತೆಯೇ ಇವುಗಳೂ ಹೆಚ್ಚು ಬಾಳಿಕೆ ಬರುತ್ತವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT