ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿಗೆ ಪರ್ಯಾಯ ‘ಜಿಬಿಎಫ್‌ಎಸ್‌’

Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಅಕ್ರಮ ಮರಳು ಗಣಿಗಾರಿಕೆ ನಿಷೇಧಿಸಿದ ನಂತರ ಮರಳಿಗೆ ಬೇಡಿಕೆ ಹೆಚ್ಚಾಯಿತು, ಅಲ್ಲದೆ ಬೆಲೆಯೂ ದುಬಾರಿಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಮರಳು ಹೀಗೆ ಅಮೂಲ್ಯ ವಸ್ತುವಾಗುತ್ತಿದ್ದಂತೆ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ಸಮಸ್ಯೆಗೆ ಪರಿಹಾರ ಹುಡುಕುವ ಸಲುವಾಗಿ ಸಹಾಯಕ ಪ್ರೊಫೆಸರ್‌ ಕಲ್ಯಾಣಿ ಕುಲಕರ್ಣಿ ಅವರು ಮರಳಿಗೆ ಪರ್ಯಾಯ ವಸ್ತುವೊಂದನ್ನು ಗುರುತಿಸಿದ್ದಾರೆ.

ಸಿಮೆಂಟ್ ಜೊತೆಗೆ ಮರಳಿನ ರೂಪವಾಗಿ ಕಬ್ಬಿಣ ಕಾರ್ಖಾನೆಯಲ್ಲಿ ಸಿಗುವ ಉಪ ಉತ್ಪನ್ನವನ್ನು ಬಳಸುವ ನೂತನ ವಿಧಾನವನ್ನು ಕಂಡುಕೊಂಡಿದ್ದಾರೆ. ಕಬ್ಬಿಣದ ಕಾರ್ಖಾನೆಯಲ್ಲಿ ಉಪ ಉತ್ಪನ್ನವಾಗಿ ಬರುವ ಜಿಬಿಎಫ್‌ಎಸ್‌ (ಗ್ರ್ಯಾನುಲೇಟೆಡ್‌ ಬ್ಲಾಸ್ಟ್‌ ಫ್ಯೂರೆನ್ಸ್‌ ಸ್ಲಾಗ್‌) ಪುಡಿಯನ್ನು ಸಿಮೆಂಟ್‌ನೊಂದಿಗೆ ಬಳಸಬಹುದು ಎಂಬುದನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದಾರೆ ಬೆಂಗಳೂರಿನ ಗೋಪಾಲನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಕಲ್ಯಾಣಿ.

ಕಲ್ಯಾಣಿ ಅವರು ಎಂಟೆಕ್‌ ಅಭ್ಯಾಸ ಮಾಡುತ್ತಿದ್ದು, ‘ಮರಳಿಗೆ ಪರ್ಯಾಯ ವಸ್ತು’ ವಿಷಯದ ಮೇಲೆಯೇ ಪ್ರಾಜೆಕ್ಟ್‌ ಮಾಡಿದ್ದಾರೆ. ಪ್ರಾಜೆಕ್ಟ್‌ ಭಾಗವಾಗಿ ಈ ‘ಮರಳನ್ನು’ ಕಂಡುಹಿಡಿದಿದ್ದಾರೆ.

‘ಮರಳು ಗಣಿಗಾರಿಕೆ ನಿಷೇಧಿಸಿದ್ದರಿಂದ ಮರಳಿನ ಬೆಲೆ ಗಗನಕ್ಕೇರಿತು. ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಮರಳಿಗೆ ಬದಲಿ ವಸ್ತುವನ್ನು ಕಂಡುಹಿಡಿಯಬೇಕೆಂಬ ಉದ್ದೇಶದಿಂದ ಈ ಪ್ರಾಜೆಕ್ಟ್‌ ಮಾಡಲು ಮುಂದಾದೆ, ಯಶಸ್ವಿಯೂ ಆದೆ. ಒಂದು ಕೆ.ಜಿ ಸಿಮೆಂಟ್‌ಗೆ ಎರಡು ಕೆ.ಜಿ ಮರಳು, ನಾಲ್ಕು ಕೆ.ಜಿ ಜಲ್ಲಿ ಮಿಶ್ರಣ ಮಾಡಿದ ಕಾಂಕ್ರಿಟ್‌ಗೂ, ಮರಳಿನ ಬದಲು 1.6 ಕೆ.ಜಿ. ಜಿಬಿಎಫ್‌ಎಸ್‌ ಮಿಶ್ರಣ ಮಾಡಿದ ಕಾಂಕ್ರಿಟ್‌ ಫಲಿತಾಂಶ ಒಂದೇ ಆಗಿತ್ತು. ಎರಡೂ ಗುಣಮಟ್ಟ ಒಂದೇ ಆಗಿತ್ತು. ಮರಳು ಹಾಕಿದ ಕಾಂಕ್ರಿಟ್‌ನ  ಬಾಳಿಕೆಯಂತೆಯೇ ಜಿಬಿಆರ್‌ಎಸ್‌ ಕಾಂಕ್ರಿಟ್‌ನ ಬಾಳಿಕೆ ಒಂದೇ ಆಗಿರುತ್ತದೆ’ ಎನ್ನುತ್ತಾರೆ ಕಲ್ಯಾಣಿ.

ನಾಲ್ಕು ತಿಂಗಳ ಅವಧಿಯಲ್ಲಿ ಈ ಪ್ರಯೋಗ ಮಾಡಿದ್ದಾರೆ. ಬಿಷ್ಣು ರಿಮಲ್‌, ಸಂದೀಪ್‌ ಥಾಪ ಪ್ರಾಜೆಕ್ಟ್‌ಗೆ ಸಹಕಾರ ನೀಡಿರುವುದನ್ನು ಕಲ್ಯಾಣಿ ಸ್ಮರಿಸಿಕೊಳ್ಳುತ್ತಾರೆ.  ಭಾರತೀಯ ಗುಣಮಟ್ಟ ಪರೀಕ್ಷೆ ಪ್ರಕಾರವೇ ಪ್ರಯೋಗ ನಡೆಸಲಾಗಿದೆ. ಜಿಬಿಎಫ್‌ಎಸ್‌ ಬಳಸಿದ ಒಂದು ಕ್ಯೂಬಿಕ್‌ ಮೀಟರ್‌ ಕಾಂಕ್ರಿಟ್‌ಗೆ 1 ಸಾವಿರ ರೂಪಾಯಿ ಉಳಿತಾಯವಾಗುತ್ತದೆ. ಒಂದು ಟನ್‌ ಸ್ಟೀಲ್‌ ಉತ್ಪಾದನೆಯಲ್ಲಿ 400 ಕೆ.ಜಿ. ಜಿಬಿಎಫ್‌ಎಸ್‌ ಬರುತ್ತದೆ. ರಸ್ತೆ ಕಾಮಗಾರಿಯಲ್ಲಿ ಮಣ್ಣಿನೊಂದಿಗೆ ಬೆರೆಸಲು ಉಪಯೋಗಿಸುತ್ತಿದ್ದ ಜಿಬಿಎಫ್‌ಎಸ್‌ ಕಾಂಕ್ರಿಟ್‌ಗೂ ಬಳಕೆಯಾಗುತ್ತಿರುವುದರಿಂದ ಪರಿಸರಕ್ಕೂ ಅನುಕೂಲವಾಗಲಿದೆ.

ವಿದೇಶಗಳಲ್ಲಿ ಬಳಕೆ
‘ಯುರೋಪ್‌ ದೇಶಗಳಲ್ಲಿ ಮರಳಿಗೆ ಪರ್ಯಾಯವಾಗಿ ಜಿಬಿಎಫ್‌ಎಸ್‌ ಬಳಸುವ ಕುರಿತು ಪ್ರಯೋಗಗಳು ನಡೆಯುತ್ತಿರುವುದನ್ನು ನಿಯತಕಾಲಿಕೆಗಳಲ್ಲಿ ನೋಡಿದ್ದೆ. ಹಾಗಾಗಿ ನಾನು ಕೂಡ ಇಲ್ಲಿ ಪ್ರಯೋಗ ಮಾಡಲು ನಿರ್ಧರಿಸಿದೆ. ಎಂಟೆಕ್‌ ಪ್ರಾಜೆಕ್ಟ್‌ಗಾಗಿ ಈ ವಿಷಯವನ್ನು ಆಯ್ಕೆ ಮಾಡಿಕೊಂಡೆ. ನಮ್ಮ ಪ್ರಯೋಗಾಲಯದಲ್ಲಿ ಜಲ್ಲಿ, ಸಿಮೆಂಟ್‌ ಹಾಗೂ ಜಿಬಿಎಫ್ಎಸ್‌ ಮಿಶ್ರಣದಿಂದ ಮಾಡಿದ ಚಿಕ್ಕ ಚಿಕ್ಕ ಇಟ್ಟಿಗೆಗಳನ್ನು ಮಾಡಲಾಗಿತ್ತು. ಅವುಗಳನ್ನು ಒಡೆದು ನೋಡಿದಾಗ ಮರಳನ್ನು ಬಳಸಿ ಉತ್ಪಾದಿಸಿದ ಇಟ್ಟಿಗೆಯಂತೆ ಚೂರಾಯಿತು, ಗುಣಮಟ್ಟವೂ ಉತ್ತಮವಾಗಿದೆ. ಈಗಾಗಲೇ ಪ್ರಾಜೆಕ್ಟ್ ಸಲ್ಲಿಸಲಾಗಿದ್ದು, ಮುಂದಿನ ಹಂತದ ಕುರಿತು ಚಿಂತಿಸಬೇಕು’ ಎನ್ನುತ್ತಾರೆ ಕಲ್ಯಾಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT