ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಹನನ ತಡೆಯಿರಿ

Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಬೆಂಗಳೂರನ್ನು ‘ಉದ್ಯಾನ ನಗರಿ’ ಎನ್ನುತ್ತಿದ್ದರು. ಸದಾ ತಂಪು ಹವಾಮಾನದ ಬೆಂಗಳೂರು ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತಿತ್ತು. ಇಲ್ಲಿರುವಷ್ಟು ಮರಗಳು, ಉದ್ಯಾನಗಳು ಭಾರತದ ಯಾವ ನಗರದಲ್ಲೂ ಇರಲಿಲ್ಲ. ಆದರೆ ಈಗ ಅಭಿವೃದ್ಧಿಯ ನಾಗಾ­­ಲೋಟದಲ್ಲಿ ಬೆಂಗಳೂರು ಬದಲಾಗಿದೆ. ತಂಪು ಹವೆ ದೂರವಾಗಿ ಮಳೆ­ಗಾಲದಲ್ಲೂ ಸೆಕೆ ಕಾಲಿಟ್ಟಿದೆ.

ಕಾಂಕ್ರೀಟ್‌ ಕಟ್ಟಡ, ರಸ್ತೆ ಅಗಲೀಕರಣ, ಮೆಟ್ರೊ ರೈಲು- ಮುಂತಾದ ಹಲವಾರು ಕಾರಣಗಳಿಗಾಗಿ ಸಾವಿರಾರು ಮರ­ಗಳನ್ನು ಕಡಿದುಹಾಕಲಾಗಿದೆ. ಈ ಮರಹನನ ಎಷ್ಟು ಅವ್ಯಾಹತವಾಗಿ ನಡೆ­ದಿದೆ­ಯೆಂದರೆ ಇತ್ತೀಚೆಗೆ ಜಾಹೀರಾತು ಫಲಕಗಳು ಕಾಣುವುದಿಲ್ಲ ಎಂಬ ಕಾರಣಕ್ಕಾಗಿಯೂ ಹಲವಾರು ಮರಗಳನ್ನು ರಾತೋರಾತ್ರಿ ಕಡಿದು­ಹಾಕ­ಲಾಗಿದೆ. ಕಳೆದ ವರ್ಷ ಹೀಗೆ ಜಾಹೀರಾತು ಫಲಕಗಳ ಸಲುವಾಗಿ ಮರ­ಗಳನ್ನು ಕಡಿದ ಬಗ್ಗೆ 24 ದೂರುಗಳು ದಾಖಲಾಗಿದ್ದವು.

ಕೆಲವರಿಗೆ ₨ 10 ಸಾವಿರ ದಂಡ ಹಾಕಿದ್ದು ಬಿಟ್ಟರೆ ಇಂತಹ ಮರಗಳ್ಳರನ್ನು ತಡೆಯಲು ಮಹಾ­ನಗರ ಪಾಲಿಕೆ ಬೇರೇನೂ ಕ್ರಮಗಳನ್ನು ಕೈಗೊಂಡಿಲ್ಲ. ಬೆಂಗಳೂರಿನ ನಾಗರಿ­ಕರು ಹೊರಗಿನವರಿಗೆ ಹೆಮ್ಮೆಯಿಂದ ತೋರಿಸುತ್ತಿದ್ದ ಲಾಲ್‌ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ಗಳಲ್ಲೂ ಮರಗಳ ಹನನ ಮತ್ತು ಕಳ್ಳತನ ಪದೇಪದೇ ನಡೆ­ಯು­ತ್ತಿದೆ.

95 ಲಕ್ಷ ದಾಟಿರುವ ಬೆಂಗಳೂರಿನ ಜನಸಂಖ್ಯೆಗೆ ಈಗ ಉಳಿದಿರು­ವುದು ಕೇವಲ 14,78,412 ಮರಗಳು ಮಾತ್ರ ಎನ್ನುವುದು ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ. ಕಿಕ್ಕಿರಿದಿರುವ ವಾಹನ­ಗಳಿಂದಾಗಿ ಈಗಾಗಲೇ ವಾಯುಮಾಲಿನ್ಯದಲ್ಲಿ ಅಪಾಯದ ಮಟ್ಟವನ್ನು ಮುಟ್ಟಿರುವ ಬೆಂಗಳೂರಿನಲ್ಲಿ ಇರುವ ಮರಗಳನ್ನೂ ರಕ್ಷಿಸದೇ ಹೋದರೆ ಭಯಾನಕ ಪರಿಸ್ಥಿತಿ ಉಂಟಾದೀತು.

198 ವಾರ್ಡ್‌ಗಳಿರುವ ಬೆಂಗಳೂರಿನಲ್ಲಿ ಅರಣ್ಯಘಟಕದ ಸಿಬ್ಬಂದಿ ಇರು­ವುದು 15 ಮಂದಿ ಮಾತ್ರ. ಇದರಲ್ಲಿ ಕ್ಷೇತ್ರಾಧಿಕಾರಿಗಳ ಸಂಖ್ಯೆ ಏಳು. ಗಸ್ತು ತಿರುಗಬೇಕಾದ ಉಳಿದ ಎಂಟು ಮಂದಿಗೆ ಪ್ರತ್ಯೇಕ ವಾಹನವೂ ಇಲ್ಲ. ಹೀಗಾಗಿ ಮರಹನನವನ್ನು ತಡೆಯಲಾಗದೆ ಪಾಲಿಕೆ ಕೈಕಟ್ಟಿ ಕುಳಿತಿದೆ ಎನ್ನು­ವುದು ಅಧಿಕಾರಿಗಳ ಮಾತು. ರಾಜ್ಯ ಸರ್ಕಾರ ಈ ಲೋಪದ ಕಡೆಗೆ ತಕ್ಷಣ ಗಮನ ಹರಿಸಬೇಕು.

ಮೊದಲು ಮರ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಾಡಿ, ಅಕ್ರಮವಾಗಿ ಮರ ಕಡಿಯುವವರಿಗೆ ಶಿಕ್ಷೆಯನ್ನು ಇನ್ನಷ್ಟು ಕಠಿಣ­ಗೊಳಿಸಬೇಕು. ಮರ ಕಡಿಯಲು ಅನುಮತಿ ನೀಡುವ ಅಧಿಕಾರವನ್ನು ಮಹಾ­ನಗರಪಾಲಿಕೆಯಿಂದ ಕಿತ್ತುಕೊಂಡು, ಅದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ­ಯೊಂದನ್ನು ಮಾಡಬೇಕು. ತೀರಾ ಅಗತ್ಯವಾದರೆ ಮರಗಳನ್ನು ಕಡಿಯುವ ಬದಲು ಸ್ಥಳಾಂತರ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು.

ಬೆಂಗಳೂರಿ­ನಲ್ಲಿ ಆಗಾಗ್ಗೆ ವನಮಹೋತ್ಸವದ ಹೆಸರಿನಲ್ಲಿ ಗಿಡಗಳನ್ನೇನೋ ನೆಡಲಾಗು­ತ್ತದೆ. ಆದರೆ ಅವುಗಳಲ್ಲಿ ಎಷ್ಟು ಉಳಿದು ಬೆಳೆಯುತ್ತವೆ ಎನ್ನುವ ಲೆಕ್ಕವೇ ಇಲ್ಲ. ವನಮಹೋತ್ಸವದ ಹೆಸರಿನಲ್ಲಿ ದುಡ್ಡು ಪೋಲು ಮಾಡುವ ಬದಲು, ಈ ಹಿಂದೆ ರಾಜ್ಯ ಸರ್ಕಾರ ಪ್ರಕಟಿಸಿದಂತೆ, ಬೆಂಗಳೂರಿನ ಸುತ್ತ ಇನ್ನೂ ನಾಲ್ಕು ಲಾಲ್‌ಬಾಗ್‌ ಮಾದರಿಯ ತೋಟಗಳನ್ನು ಬೆಳೆಸಲಿ. ಈ ನಿಟ್ಟಿನಲ್ಲಿ ಕಾಲಮಿತಿಯಲ್ಲಿ ಕೆಲಸ ಮಾಡಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT