ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿಯಾ ಶರಪೋವಾ ಸವಾಲು ಅಂತ್ಯ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ರಾಯಿಟರ್ಸ್‌): ಯುಎಸ್‌ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದ ರಷ್ಯಾದ ಮರಿಯಾ ಶರಪೋವಾ ನಿರಾಸೆ ಅನುಭವಿಸಿದ್ದಾರೆ.

ಅರ್ಥರ್‌ ಆ್ಯಷ್‌ ಕ್ರೀಡಾಂಗಣದ ಕೋರ್ಟ್‌ನಲ್ಲಿ ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಡೆನ್ಮಾರ್ಕ್‌ನ ಕರೊಲಿನ್‌ ವೊಜ್‌ನಿಯಾಕಿ 6–4, 2–6, 6–2 ರಲ್ಲಿ ಶರಪೋವಾ ಅವರಿಗೆ ಆಘಾತ ನೀಡಿದರು. ಐದು ಬಾರಿಯ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ವಿಜೇತೆ ಶರಪೋವಾ 43 ಅನಗತ್ಯ ತಪ್ಪುಗಳು ಮತ್ತು ಎಂಟು ಡಬಲ್‌ ಫಾಲ್ಟ್ಸ್‌ಗಳನ್ನು ಎಸಗಿ ಸೋಲಿನ ಹಾದಿ ಹಿಡಿದರು.
2006 ರಲ್ಲಿ ಇಲ್ಲಿ ಚಾಂಪಿಯನ್‌ ಆಗಿದ್ದ ಶರಪೋವಾ ಮೊದಲ ಸೆಟ್‌ನಲ್ಲಿ ಸೋತರೂ ಎರಡನೇ ಸೆಟ್‌ ಗೆದ್ದುಕೊಂಡು ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ವೊಜ್‌ನಿಯಾಕಿ ರಷ್ಯಾದ ಆಟಗಾರ್ತಿಯ ಪ್ರಶಸ್ತಿಯ ಕನಸನ್ನು ನುಚ್ಚುನೂರು ಮಾಡಿದರು.

ಇಟಲಿಯ ಸಾರಾ ಎರಾನಿ ಮತ್ತು ಚೀನಾದ ಪೆಂಗ್‌ ಶುಯಿ ಅವರೂ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎಂಟರಘಟ್ಟ ಪ್ರವೇಶಿಸಿದರು. ಎರಾನಿ 6–3, 2–6, 6–0 ರಲ್ಲಿ ಕ್ರೊವೇಷ್ಯದ ಮಿರ್ಜಾನಾ ಲೂಸಿಕ್‌ ವಿರುದ್ಧ ಗೆದ್ದರೆ, ಪೆಂಗ್‌ ಶುಯಿ 6–3, 6–4 ರಲ್ಲಿ ಲೂಸಿ ಸಫರೋವಾ ಅವರನ್ನು ಮಣಿಸಿದರು.

ಪ್ರೀ ಕ್ವಾರ್ಟರ್‌ಗೆ ಫೆಡರರ್‌: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.ಇಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಫೆಡರರ್‌ ಭಾನುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ 4–6, 6–1, 6–1, 6–1 ರಲ್ಲಿ ಸ್ಪೇನ್‌ನ ಮಾರ್ಸೆಲೊ ಗ್ರಾನೊಲ್ಲೆರ್ಸ್‌ ವಿರುದ್ಧ ಗೆದ್ದರು.

ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ ಸ್ವಿಸ್‌ ಆಟಗಾರ ಮೊದಲ ಸೆಟ್‌ಅನ್ನು ಎದುರಾಳಿಗೆ ಒಪ್ಪಿಸಿದರು. ಆ ಬಳಿಕ ಅವರು ಶಿಸ್ತಿನ ಆಟ ತೋರಿದರು. ಮುಂದಿನ ಮೂರು ಸೆಟ್‌ಗಳಲ್ಲಿ ಗ್ರಾನೊಲ್ಲೆರ್ಸ್‌ಗೆ ಕೇವಲ ಮೂರು ಪಾಯಿಂಟ್‌ ಬಿಟ್ಟುಕೊಟ್ಟು ಪಂದ್ಯ ತಮ್ಮದಾಗಿಸಿಕೊಂಡರು.

ನಾಲ್ಕನೇ ಶ್ರೇಯಾಂಕದ ಆಟಗಾರ ಡೇವಿಡ್‌ ಫೆರರ್‌ ಸೋತು ಹೊರಬಿದ್ದರು. ಫ್ರಾನ್ಸ್‌ನ ಗಿಲೆಸ್‌ ಸಿಮೊನ್‌ 6–3, 3–6, 6–1, 6–3 ರಲ್ಲಿ ಫೆರರ್‌ ವಿರುದ್ಧ ಗೆದ್ದು 16ರ ಘಟ್ಟ ಪ್ರವೇಶಿಸಿದರು.ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಬಲ್ಗೇರಿಯದ ಗ್ರಿಗೊರ್ ದಿಮಿತ್ರೋವ್‌ 0–6,
6–3, 6–4, 6–1 ರಲ್ಲಿ ಬೆಲ್ಜಿಯಂನ ಡೇವಿಡ್‌ ಗೊಫಿನ್‌ ವಿರುದ್ಧವೂ, ಜೆಕ್‌ ಗಣರಾಜ್ಯದ ಥಾಮಸ್‌ ಬೆರ್ಡಿಕ್‌ 6–3, 6–2, 6–4 ರಲ್ಲಿ ರಷ್ಯಾದ ತೈಮೂರ್‌ ಗಬಾಶ್ವಿಲಿ ಮೇಲೂ, ಕ್ರೊವೇಷ್ಯದ ಮರಿನ್‌ ಸಿಲಿಕ್‌ 6–3, 3–6, 6–3, 6–4 ರಲ್ಲಿ ದಕ್ಷಿಣ ಆಫ್ರಿಕದ ಕೆವಿನ್‌ ಆ್ಯಂಡರ್‌ಸನ್‌ ಎದುರೂ ಜಯ ಪಡೆದರು.

ಕ್ವಾರ್ಟರ್‌ ಫೈನಲ್‌ಗೆ ರೋಹನ್‌ ಬೋಪಣ್ಣ
ನ್ಯೂಯಾರ್ಕ್‌ (ಪಿಟಿಐ): ರೋಹನ್‌ ಬೋಪಣ್ಣ ಮತ್ತು ಕ್ಯಾಥರಿನಾ ಸ್ರೆಬಾಟ್ನಿಕ್‌ ಜೋಡಿ ಯುಎಸ್‌ ಓಪನ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.ಭಾನುವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ– ಸ್ಲೊವೇನಿಯದ ಜೋಡಿ 6–3, 6–4 ರಲ್ಲಿ ಸ್ಪೇನ್‌ನ ಅನಾಬೆಲ್‌ ಮೆಡಿನಾ ಗ್ಯಾರಿಗ್ವೆಸ್‌ ದಕ್ಷಿಣ ಆಫ್ರಿಕದ ರಾವೆನ್‌ ಕ್ಲಾಸೆನ್‌ ವಿರುದ್ಧ ಜಯ ಪಡೆಯಿತು.
ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಸ್ಪರ್ಧಿಗಳು ಪರಸ್ಪರ ಪೈಪೋಟಿ ನಡೆಸಲಿದ್ದಾರೆ. ಬೋಪಣ್ಣ ಮತ್ತು ಸ್ರೆಬಾಟ್ನಿಕ್‌ ಅವರು ಸಾನಿಯಾ ಮಿರ್ಜಾ ಹಾಗೂ ಬ್ರೆಜಿಲ್‌ನ ಬ್ರೂನೊ ಸೊರೇಸ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT