ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಭೂಮಿ ಮೇಲೆ ಕಡುಕಪ್ಪು ಪತಾಕೆ

Last Updated 23 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಚರಿತ್ರೆಯಲ್ಲಿನ ಬಹುತೇಕ ಯುದ್ಧಗಳು ಹಾಗೂ ಸಂಘರ್ಷಗಳಲ್ಲಿ ಹೆಚ್ಚು ಶೋಷಣೆಗೊಳಗಾಗುವುದು ಅಲ್ಪಸಂಖ್ಯಾತ ಸಮುದಾಯ, ಮಹಿಳೆಯರು ಮತ್ತು ಮಕ್ಕಳು. ಪ್ರಸ್ತುತ ಇರಾಕ್‌ನಲ್ಲಿ ನಡೆಯುತ್ತಿರುವ ಸಂಘರ್ಷ ‘ಯಾಜಿದಿ’ ಸಮುದಾಯದ ಅಸ್ತಿತ್ವಕ್ಕೆ ಆತಂಕ ಉಂಟುಮಾಡಿದೆ.

‘‘ಮೊಸೂಲ್‌ ನಗರವನ್ನು ಗೆದ್ದ ಉಗ್ರರು ಸಿಂಜರ್‌ಗೆ ಬರುತ್ತಾರೆ ಎಂದು ನಾನು ಎಣಿಸಿರಲಿಲ್ಲ. ಒಂದು ವೇಳೆ ಬಂದರೂ ‘ಪೇಷ್ಮರ್ಗಾ’ ಉಗ್ರರನ್ನು ಹೊಡೆದಟ್ಟುತ್ತೆ ಎಂದು ನೆಮ್ಮದಿಯಾಗಿದ್ದೆ. ಆದರೆ ಆಗಸ್ಟ್ 3ರಂದು ಉಗ್ರರು ದಾಳಿ ಇಟ್ಟರು. ನಮ್ಮನ್ನು ರಕ್ಷಿಸಬೇಕಿದ್ದ ಸೇನೆ ಓಡಿಹೋಯಿತು. ಜನರು ಪರ್ವತದಲ್ಲಿ ಬಚ್ಚಿಟ್ಟುಕೊಂಡರು. ನಾನು ಇತರ 40 ಸಂಬಂಧಿಕರೊಂದಿಗೆ ಮನೆಯೊಂದರಲ್ಲಿ ಅಡಗಿದ್ದೆ. ನಸುಕಿನ 2 ಗಂಟೆಗೆ ಉಗ್ರರು ಮನೆ ಬಾಗಿಲು ಮುರಿದರು. ಗಂಡಸರನ್ನು ಹೊರಗೆ ಕರೆದೊಯ್ದು ಸಾಲಾಗಿ ನಿಲ್ಲಿಸಿ ಗುಂಡು ಹೊಡೆದರು. ನನ್ನ 15 ವರ್ಷದ ಮಗಳೂ ಸೇರಿದಂತೆ ಎಲ್ಲ ಯುವತಿಯರನ್ನು ಹೊತ್ತೊಯ್ದರು. ಮುಂದೆ ಅವಳನ್ನು ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ...’’.

ಇದು ಉಗ್ರರ ದಾಳಿಗೆ ಗಂಡ, ಮಗಳನ್ನು ಕಳೆದುಕೊಂಡ ನೌರೆ ಹಸನ್ ಅಲಿ (40) ಎಂಬ ಮಹಿಳೆ ವಾಯವ್ಯ ಇರಾಕ್‌ನ ಡಾಹುಕ್‌ನ ಯಾಜಿದಿ ನಿರಾಶ್ರಿತರ ಶಿಬಿರದಲ್ಲಿ ವಿವರಿಸಿದ ಕತ್ತಲ ರಾತ್ರಿಯ ಕರಾಳ ನೆನಪು. ಇರಾಕ್‌ನ ಸಿಂಜರ್ ನಗರದಿಂದ ಓಡಿ ಹೋಗಿರುವ 1.30 ಲಕ್ಷ ಯಾಜಿದಿಗಳ ಬಳಿ ಹೇಳಿಕೊಳ್ಳಲು ಇಂಥ ಹಲವು ಕಥೆಗಳಿವೆ.

ಇರಾಕ್‌ನಲ್ಲಿ ನಡೆಯುತ್ತಿರುವ ಉಗ್ರರ ಅಟ್ಟಹಾಸದಿಂದ ಅತಿಹೆಚ್ಚು ಕಷ್ಟ ಅನುಭವಿಸುತ್ತಿರುವವರು ಯಾಜಿದಿಗಳು. ಇಸ್ಲಾಂ ಪೂರ್ವ ಕಾಲದ ಧರ್ಮವನ್ನೇ ಇಂದಿಗೂ ಅನುಸರಿಸುತ್ತಿರುವ ಅವರನ್ನು ಉಗ್ರರು ‘ಸೈತಾನನ ಆರಾಧಕರು’ ಎಂದು ಜರಿಯುತ್ತಾರೆ. ಅಟ್ಟಾಮಾನ್ ತುರ್ಕ್‌ ಮತ್ತು ಸದ್ದಾಂ ಹುಸೇನ್ ಆಡಳಿತದ ಕಾಲದಲ್ಲಿಯೂ ಯಾಜಿದಿಗಳು ನೆಮ್ಮದಿಯಾಗಿರಲಿಲ್ಲ. ಅವರನ್ನು ಭೂಮಿಯಿಂದ ಅಳಿಸಿಬಿಡುವ ಪ್ರಯತ್ನ ಈವರೆಗೆ 72 ಬಾರಿ ಆಗಿದೆ. ಈ ಬಾರಿಯದ್ದು 73ನೇ ಸಂಕಷ್ಟ.

ಯಾಜಿದಿ ಎನ್ನುವ ಸ್ವತಂತ್ರ ಧರ್ಮ
ಅನೇಕರು ಯಾಜಿದಿಗಳನ್ನು ಕ್ರಿಶ್ಚಿಯನ್–ಮುಸ್ಲಿಂ ಧರ್ಮದ ಕವಲು ಎಂದು ಗುರುತಿಸುತ್ತಾರೆ. ವಾಸ್ತವವಾಗಿ ಯಾಜಿದಿ ಎಂಬುದು ಪ್ರತ್ಯೇಕ ಧರ್ಮ. ಇವರು ಕ್ರಿಶ್ಚಿಯನ್ನರಂತೆ ಪವಿತ್ರೀಕರಣ (ಬ್ಯಾಪ್ಟಿಸಂ) ಹಾಗೂ ಮುಸ್ಲಿಮರಂತೆ ಸುನ್ನತಿಯನ್ನು ಒಪ್ಪುತ್ತಾರೆ. ಯಹೂದಿಗಳಂತೆ ಬೆಂಕಿಯನ್ನು ದೇವರ ಕುರುಹು ಎಂದು ಆರಾಧಿಸುತ್ತಾರೆ.

ಆದರೆ ಬಹುಪತ್ನಿತ್ವ ಮತ್ತು ಮತಾಂತರವನ್ನು ಒಪ್ಪುವುದಿಲ್ಲ. ಗಂಡು–ಹೆಣ್ಣಿನ ಕೂಡಿಕೆಯಾಗದೆ ಆವಿರ್ಭವಿಸಿದ ಜನಾಂಗ ತಮ್ಮದು ಹೆಮ್ಮೆ ಅವರಿಗಿದೆ. ತಳಿ ಶುದ್ಧತೆ ಕಾಪಾಡಿಕೊಳ್ಳುವ ಕಾರಣದಿಂದ ಇತರ ಧರ್ಮೀಯರೊಂದಿಗಿನ ಮದುವೆಗೂ ನಿಷೇಧವಿದೆ.

ಯಾಜಿದಿಗಳು ಮೆಲೆಕ್ ಟವ್ವಾಸ್ ಎಂಬ ನವಿಲು ದೇವತೆಯನ್ನು ಆರಾಧಿಸುತ್ತಾರೆ. ಮೆಲೆಕ್ ಟವ್ವಾಸ್‌ ಎಂಬುದು ದೇವರ ಆಜ್ಞೆ ಉಲ್ಲಂಘಿಸಿದ ಕಾರಣ ಸೈತಾನನಾದ ದೇವದೂತ ಎಂಬುದು ಇತರ ಧರ್ಮೀಯರ ಆರೋಪ. ಆದರೆ ಯಾಜಿದಿಗಳ ಪ್ರಕಾರ ಅದು ದೇವರ ಅನುಗ್ರಹದಿಂದ ಶುದ್ಧೀಕರಣಗೊಂಡ, ಭೂಮಿಯನ್ನು ಆಳುವ ದೇವತೆ.

ಭಾರತಕ್ಕೂ ಕಳವಳ
ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಭಾರತದಲ್ಲಿಯೂ ಬೆಂಬಲ ವ್ಯಕ್ತವಾಗುತ್ತಿರುವುದು ಕೇಂದ್ರ ಸರ್ಕಾರದ ನಿದ್ದೆಗೆಡಿಸಿರುವ ಸಂಗತಿ. ಉಗ್ರರ ಅರೇಬಿಕ್ ವಿಡಿಯೋ ಫಿಲಂಗಳು ಹಿಂದಿ–ತಮಿಳು ಸಬ್‌ಟೈಟಲ್‌ಗಳೊಂದಿಗೆ ಯೂಟ್ಯೂಬ್‌ನಲ್ಲಿ ಮರು ಪ್ರಸಾರವಾಗಿವೆ. ಮಹಾರಾಷ್ಟ್ರದ ಕಲ್ಯಾಣದಿಂದ 4 ಮಂದಿ ಈಗಾಗಲೇ ಮೊಸುಲ್‌ ನಗರಕ್ಕೆ ತೆರಳಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ತಮಿಳುನಾಡಿನ ಯುವಕರು ‘ಐಎಸ್‌ಐಎಸ್‌’ ಟೀ ಶರ್ಟ್‌ ತೊಟ್ಟಿರುವ ಫೋಟೊ ಸಹ ಉಗ್ರರ ಟ್ವಿಟರ್ ಅಕೌಂಟ್‌ನಲ್ಲಿ ಪ್ರದರ್ಶನಕ್ಕಿದೆ.

ಯಾಜಿದಿ ಜನರು ಭೂಮಿ, ಗಾಳಿ, ಬೆಂಕಿ ಮತ್ತು ನೀರನ್ನು ಪವಿತ್ರ ಭಾವದಿಂದ ಕಾಣುತ್ತಾರೆ. ನೆಲದ ಮೇಲೆ ಉಗುಳುವುದು, ಬಿಸಿ ನೀರು ಹಾಕುವುದು ಅವರ ಪಾಲಿಗೆ ಪಾಪಕೃತ್ಯ. ಇತರ ಧರ್ಮೀಯರೊಂದಿಗೆ ಹೆಚ್ಚಾಗಿ ಬೆರೆಯಲು ಅವರು ಇಷ್ಟ ಪಡುವುದಿಲ್ಲ. ಇದೇ ಕಾರಣಕ್ಕೆ ಮಿಲಿಟರಿಗೂ ಯಾಜಿದಿ ಯುವಕರು ಸೇರುವುದಿಲ್ಲ. ತಮ್ಮ ಜನಾಂಗವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ತಲುಪಲು ಅವರ ಇಂಥ ಕಟು ನಂಬಿಕೆಗಳೂ ಕಾರಣ.

ಉಳಿವಿಗಾಗಿ ಪಲಾಯನ
ಜಗತ್ತಿನಲ್ಲಿರುವ ಒಟ್ಟು ಯಾಜಿದಿಗಳ ಸಂಖ್ಯೆ ಸುಮಾರು 7 ಲಕ್ಷ. ಇದರಲ್ಲಿ 5 ಲಕ್ಷ ಮಂದಿ ಸಿಂಜರ್ ನಗರದ ಸುತ್ತಮುತ್ತಲೇ ಇದ್ದವರು. ಉಗ್ರರ ಅಟ್ಟಹಾಸಕ್ಕೆ ಹೆದರಿ ಮನೆಮಠ ಬಿಟ್ಟು ಓಡಿ ಬಂದಿರುವ ಯಾಜಿದಿ ನಿರಾಶ್ರಿತರ ಸಂಖ್ಯೆ 1.30 ಲಕ್ಷ. ಒಮ್ಮೆ ಮೂಲ ನೆಲೆ ಬಿಟ್ಟವರು ತಮ್ಮ ಸಂಪ್ರದಾಯದ ಶಿಷ್ಟಾಚಾರಗಳನ್ನು ಅನುಸರಿಸುವುದು ಕಷ್ಟ.

‘ನಮ್ಮ ಸಂಪ್ರದಾಯಗಳನ್ನು ಅನುಸರಿಸಲು ಸೂಕ್ತ ವಾತಾವರಣ ಅಗತ್ಯ. ಪಾಶ್ಚಾತ್ಯ ದೇಶಗಳಲ್ಲಿ ಇಂಥ ಅವಕಾಶ ಇಲ್ಲ. ನಮ್ಮ ನೆಲೆಯಿಂದ ಹೊರ ಬಂದರೆ ನಿಧಾನವಾಗಿ ನಮ್ಮತನ ಕಳೆದುಕೊಳ್ಳುತ್ತೇವೆ. ಏನು ಮಾಡುವುದು, ಜೀವ ಉಳಿಸಿಕೊಳ್ಳಲು ಬೇರೆ ಮಾರ್ಗವೇ ಇಲ್ಲವಲ್ಲ’ ಎಂದು ಯಾಜಿದಿ ಧರ್ಮಗುರು ಬಾಬಾ ಶೇಖ್ ನೋವಿನಿಂದ ಹೇಳುತ್ತಾರೆ.

ಯಾಜಿದಿ ಜನಾಂಗವನ್ನು ತಮ್ಮ ನೆಲೆಯಿಂದ ಹೊಡೆದೋಡಿಸಿದ ಉಗ್ರಗಾಮಿ ಸಂಘಟನೆಗೂ ಒಂದು ಇತಿಹಾಸವಿದೆ. ಇರಾಕ್‌ನಲ್ಲಿ ಅಮೆರಿಕನ್ ಸೇನೆ ನಡೆಸಿದ ದೌರ್ಜನ್ಯಕ್ಕೆ ಉತ್ತರವೆಂಬಂತೆ 2003ರಲ್ಲಿ ಅಲ್‌ಖೈದಾ ಸಂಘಟನೆಯ ಸಹವರ್ತಿಯಾಗಿ ‘ಐಎಸ್‌ಐಎಸ್‌’ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಜನ್ಮತಾಳಿತು. 2005ರಿಂದ 2009ರವರೆಗೆ ಇರಾಕ್‌ನಲ್ಲಿ ಅಮೆರಿಕ ಸೈನ್ಯದ ಬಂಧನದಲ್ಲಿದ್ದ ಉಗ್ರ ಅಬುಬಕರ್ ಅಲ್‌ ಬಾಗ್ದಾದಿ ಎಂಬಾತ ಇದರ ನಾಯಕ.

ಇಂದು ಸುಮಾರು 10 ಸಾವಿರ ಹೋರಾಟಗಾರರು ಬಾಗ್ದಾದಿ ನಾಯಕತ್ವ ಒಪ್ಪಿಕೊಂಡಿದ್ದಾರೆ. ಸಿರಿಯಾದಲ್ಲಿ ತನ್ನ ಆಡಳಿತವಿರುವ ಪ್ರದೇಶದಲ್ಲಿ ‘ಐಎಸ್‌ಐಎಸ್‌’ ಉಗ್ರರು ಷರಿಯತ್ (ಇಸ್ಲಾಮ್ ಧಾರ್ಮಿಕ ಕಾನೂನು) ಜಾರಿ ಮಾಡಿದ್ದಾರೆ. ಸಾರ್ವಜನಿಕವಾಗಿ ನೇಣಿಗೇರಿಸುವುದು, ತಲೆ ತೆಗೆಯುವುದು ಇವರ ಆಡಳಿತದಲ್ಲಿ ಸಾಮಾನ್ಯ ಸಂಗತಿ ಎನಿಸಿದೆ. ಇದೀಗ ಇರಾಕ್‌ನ ಮೊಸುಲ್ ನಗರದಿಂದ ಆಡಳಿತ ನಡೆಸುತ್ತಿದ್ದು, ಕಳೆದ ಜೂನ್‌ ತಿಂಗಳಲ್ಲಿ ತನ್ನ ನಾಯಕನನ್ನು ಜಗತ್ತಿನ ಮುಸ್ಲಿಮರೆಲ್ಲರ ಮುಖಂಡ (ಖಲೀಫಾ) ಎಂದು ಸಂಘಟನೆ ಘೋಷಿಸಿತು.

ಆದಾಯಕ್ಕೆ ಹಲವು ದಾರಿಗಳು
ಮಧ್ಯಪ್ರಾಚ್ಯ ದೇಶಗಳ ಶ್ರೀಮಂತ ವ್ಯಾಪಾರಿಗಳು ಹಿಂದುಳಿದ ಮುಸ್ಲಿಂ ದೇಶಗಳಿಗೆ ನೀಡುವ ದೇಣಿಗೆಯ ಹಣ ಜಿಹಾದಿಗಳ ಪಾಲಾಗುತ್ತಿದೆ. ಇಸ್ಲಾಮಿಕ್ ಸ್ಟೇಟ್‌ಗೆ 2012ರವರೆಗೂ ಇದೇ ಆಧಾರವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದು ಸಿರಿಯಾದಲ್ಲಿ ತೈಲ ಬಾವಿಗಳನ್ನು ವಶಪಡಿಸಿಕೊಂಡು ವ್ಯಾಪಾರಕ್ಕೆ ಇಳಿಯಿತು. ತನ್ನ ಅಧೀನದಲ್ಲಿರುವ ಪ್ರದೇಶದಲ್ಲಿ ಉತ್ಖನನ ನಡೆಸಿ, ಅಪರೂಪದ ಪಾರಂಪರಿಕ ಮೌಲ್ಯವಿರುವ ವಸ್ತುಗಳನ್ನು ಯೂರೋಪ್‌ಗೆ ಮಾರುವುದು ‘ಇಸ್ಲಾಮಿಕ್‌ ಸ್ಟೇಟ್‌’ ಹಣ ಸಂಗ್ರಹಣೆಯ ಮತ್ತೊಂದು ಮುಖ್ಯ ಆದಾಯದ ಮೂಲ.

ಡಮಾಸ್ಕಸ್ ಸಮೀಪ 8000 ವರ್ಷ ಹಳೆಯದಾದ ಐತಿಹಾಸಿಕ ಪ್ರದೇಶದಲ್ಲಿ ಉತ್ಖನನ ನಡೆಸಿ, ಪುರಾತನ ವಸ್ತುಗಳನ್ನು ಮಾರುವ ಮೂಲಕ 36 ದಶಲಕ್ಷ ಡಾಲರ್ ಹಣ ಸಂಪಾದಿಸಿತು! ಮೊಸುಲ್ ನಗರ ವಶಪಡಿಸಿಕೊಳ್ಳುವ ಮೊದಲು ‘ಇಸ್ಲಾಮಿಕ್‌ ಸ್ಟೇಟ್‌’ನ ಒಟ್ಟು ಮೌಲ್ಯ 875 ದಶಲಕ್ಷ ಡಾಲರ್ ಆಗಿತ್ತು. ಪ್ರಸ್ತುತ ಇದರ ಮೌಲ್ಯ 2 ಶತಕೋಟಿ ಡಾಲರ್ ಮೀರಿದೆ.

ಸಿಪಾಯಿಗಳಿಂದ ತರಬೇತಿ
ಅಮೆರಿಕವು ಇರಾಕ್‌ನಲ್ಲಿ ವಿಜಯ ಸಾಧಿಸಿದ ನಂತರ ಅಸ್ತಿತ್ವದಲ್ಲಿದ್ದ ಇರಾಕ್ ಸೇನೆಯನ್ನು ವಿಸರ್ಜಿಸಿ, ಹೊಸ ಸೇನೆ ಕಟ್ಟಿತು. ಶಸ್ತ್ರ ತರಬೇತಿ ಪಡೆದಿದ್ದ ಕಮಾಂಡರ್‌ಗಳು ನಿರುದ್ಯೋಗಿಗಳಾದರು. ಇವರನ್ನೇ ಉಗ್ರಗಾಮಿಗಳು ತರಬೇತುದಾರರನ್ನಾಗಿ ನೇಮಿಸಿಕೊಂಡರು.

ಇತ್ತ ಹೊಸದಾಗಿ ಸೇನೆಗೆ ಭರ್ತಿ ಮಾಡಿಕೊಳ್ಳುವಾಗಲೂ ಶಿಯಾ ಜನಾಂಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಹೀಗಾಗಿ ಸಂಕಷ್ಟ ಸ್ಥಿತಿಯಲ್ಲಿದ್ದ ಇರಾಕ್ ಸೇನೆಗೆ ಸ್ಥಳೀಯ ಸುನ್ನಿ ಮುಸ್ಲಿಮರ ಬೆಂಬಲ ಸಿಗಲಿಲ್ಲ. ಸರ್ಕಾರದ ತಾರತಮ್ಯ ಧೋರಣೆಯಿಂದ ನೊಂದಿದ್ದ ಸುನ್ನಿ ಸೈನಿಕರು ಮನಸ್ಸಿಟ್ಟು ಯುದ್ಧ ಮಾಡಲಿಲ್ಲ.

ಇನ್ನೊಂದೆಡೆ ಸದಾ ಸ್ವಾತಂತ್ರ್ಯದ ಜಪ ಮಾಡುತ್ತಿದ್ದ ಪೇಷ್ಮರ್ಗಾ (ಖುರ್ದಿಷ್ ಸೇನೆ) ಮೊಸುಲ್ ದಾಳಿ ಸಂದರ್ಭ ಇರಾಕ್ ಸೇನೆಗೆ ಹೆಗಲು ಕೊಡಲಿಲ್ಲ. ಇರಾಕ್ ಯೋಧರು ಬಿಟ್ಟು ಹೋದ ಸೇನಾ ಠಾಣೆಗಳಲ್ಲಿ ತನ್ನ ಸೈನಿಕರನ್ನು ನಿಲ್ಲಿಸಿ, ಮೀಸೆ ತಿರುವಿತು. ಮುಂದೆ ಉಗ್ರರು ಪೇಷ್ಮರ್ಗಾ ಮೇಲೆ ಉಗ್ರರು ದಾಳಿ ನಡೆಸಿದಾಗ ಇರಾಕ್ ಅವರ ನೆರವಿಗೆ ಬರಲಿಲ್ಲ. ಇರಾಕ್‌ನ ಆಂತರಿಕ ತಿಕ್ಕಾಟಗಳನ್ನು ಸಮರ್ಪಕವಾಗಿ ಬಳಸಿಕೊಂಡ ಉಗ್ರರು ಹಲವು ನಗರಗಳಲ್ಲಿ ಸುಲಭದ ಗೆಲುವು ಸಾಧಿಸಿ, ಪ್ರಬಲರಾದರು.

ವಿಭಿನ್ನ ರಣತಂತ್ರ
ಇಸ್ಲಾಮಿಕ್ ಉಗ್ರರು ಕಳೆದ ಜೂನ್ 9ರಂದು ಇರಾಕ್‌ನ ಎರಡನೇ ದೊಡ್ಡ ನಗರ ಮೊಸೂಲ್ ಗೆದ್ದ ಬಗೆ ರಣತಂತ್ರದ ಹೊಸ ಪಾಠಗಳನ್ನು ಹೇಳುತ್ತದೆ. ದೈಹಿಕವಾಗಿ ಬಲಿಷ್ಠರಾದ, ಅಮೆರಿಕನ್ನರಿಂದ ತರಬೇತಿ ಪಡೆದ, ಲೋಡುಗಟ್ಟಲೆ ಶಸ್ತ್ರಾಸ್ತ್ರ ಹೊಂದಿದ್ದ ಸುಮಾರು 22,500 ಸಾವಿರ ಇರಾಕಿ ಸೈನಿಕರು ಮೊಸುಲ್ ನಗರದ ರಕ್ಷಣೆಗೆ ನಿಯುಕ್ತರಾಗಿದ್ದರು. ಇಸ್ಲಾಮಿಕ್‌ ಸ್ಟೇಟ್‌ನ ಕೇವಲ 1500 ಸಾವಿರ ಸೈನಿಕರನ್ನು ತಡೆಯಲು ಅವರಿಗೆ ಆಗಲಿಲ್ಲ.

ಇನ್ನೊಂದೆಡೆ ‘ಸಾವಿಗೂ ಹೆದರದವರು’ ಎಂಬ ಅನ್ವರ್ಥಕ ಬಿರುದು ಹೊಂದಿದ್ದ ಪೇಷ್ಮರ್ಗಾ ಯೋಧರನ್ನು ಸಿಂಜರ್ ನಗರದ ಸಮೀಪ ಕಳೆದ ಆಗಸ್ಟ್‌ 3ರಂದು ಇಸ್ಲಾಮಿಕ್ ಸ್ಟೇಟ್ ಮಣಿಸಿತು. ಇಲ್ಲಿಯೂ ಪೇಷ್ಮರ್ಗಾ ಯೋಧರ ಸಂಖ್ಯೆ ಉಗ್ರರ ಸಂಖ್ಯೆಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚಾಗಿತ್ತು.

ಈ ಎರಡೂ ನಗರಗಳನ್ನು ಇಸ್ಲಾಮಿಕ್ ಸ್ಟೇಟ್ ಗೆದ್ದ ಬಗೆ ಮಿಲಿಟರಿ ದೃಷ್ಟಿಕೋನದಿಂದ ಕುತೂಹಲಕರವಾದುದು. ಇಸ್ಲಾಮಿಕ್‌ ಸ್ಟೇಟ್‌ ಉಗ್ರರಲ್ಲಿ ಮಾಧ್ಯಮ ಪಡೆ, ಆತ್ಮಹತ್ಯಾ ಪಡೆ ಮತ್ತು ಹೋರಾಟಗಾರರ ಪಡೆ ಎಂಬ ಮೂರು ವಿಭಾಗಗಳಿವೆ. ಯುದ್ಧ ಆರಂಭವಾಗುವ ಮೊದಲು ತಮ್ಮ ಕ್ರೌರ್ಯ ಮತ್ತು ತಾಕತ್ತು ಬಿಂಬಿಸುವ ಗ್ರಾಫಿಕ್, ವಿಡಿಯೋ ಮತ್ತು ಹೇಳಿಕೆಗಳಿಂದ ಉಗ್ರರ ವೆಬ್‌ಸೈಟ್‌– ಟ್ವಿಟರ್ ಅಕೌಂಟ್‌ ತುಂಬಿಹೋಗುತ್ತದೆ. ವಿವಿಧ ದೇಶಗಳಲ್ಲಿರುವ ಉಗ್ರ ಪರ ಸಹಾನುಭೂತಿ ಹೊಂದಿದ ಲಕ್ಷಾಂತರ ಮಂದಿ ಅದನ್ನು ವ್ಯವಸ್ಥಿತವಾಗಿ ರಿಟ್ವೀಟ್– ಶೇರ್ ಮಾಡುತ್ತಾರೆ. ಇದು ಹೇಗೋ ಎದುರಾಳಿ ಸೈನಿಕರ ಮನಸ್ಥಿತಿ ಕಲಕುತ್ತದೆ. ಧೈರ್ಯದ ಸ್ಥಳದಲ್ಲಿ ಭಯ ಆವರಿಸುತ್ತದೆ. ಹೋರಾಟದ ‘ಕೆಚ್ಚು’ ಕಡಿಮೆಯಾಗುತ್ತದೆ.

ಯುದ್ಧಕ್ಕೆ ಮುಹೂರ್ತ ನಿಗದಿಯಾದ ನಂತರ ಆತ್ಮಹತ್ಯಾ ಪಡೆಗಳು ಟ್ರಕ್‌ಗಳ ತುಂಬಾ ಸ್ಫೋಟಕ ತುಂಬಿಕೊಂಡು ಶತ್ರುಗಳ ಚೆಕ್‌ಪೋಸ್ಟ್‌ ಮತ್ತು ಸೇನಾ ಠಾಣೆಗಳಿಗೆ ನುಗ್ಗುತ್ತವೆ. ಸ್ಫೋಟದ ತೀವ್ರತೆ ಹತ್ತಾರು ಕಿ.ಮೀ.ಗಳಲ್ಲಿ ಪ್ರತಿಧ್ವನಿಸುತ್ತದೆ ಇದು ಎದುರು ಪಾಳಯದಲ್ಲಿ ‘ಗೊಂದಲ’ ಮೂಡಿಸುತ್ತದೆ. ಎದುರು ಪಡೆ ಶಸ್ತ್ರಾಸ್ತ್ರ ಜೋಡಿಸಿ, ಸೈನಿಕರನ್ನು ಹೊಂದಿಸಿ, ವ್ಯೂಹ ರಚಿಸುವ ವೇಳೆಗೆ ಉಗ್ರರು ನುಗ್ಗಿ ಬರುತ್ತಾರೆ. ಅಳಿದುಳಿದ ಸೈನಿಕರನ್ನು ಕೊಂದು, ಸೆರೆ ಹಿಡಿದು ಕಪ್ಪು ಬಾವುಟ ಹಾರಿಸಿರುತ್ತಾರೆ.

ಮುಂದೇನು...?
ಇದೀಗ ಹೋರಾಟ ಖುರ್ದಿಷ್ ಪ್ರಾಂತ್ಯದ ರಾಜಧಾನಿ ಇಬ್ರಿಲ್‌ ನಗರದ ಸನಿಹಕ್ಕೆ ಬಂದಿದೆ. ಖುರ್ದಿಷ್ ಪ್ರದೇಶಗಳ ರಕ್ಷಣೆಗೆಂದು ಟರ್ಕಿ ಮತ್ತು ಸಿರಿಯಾಗಳಿಂದ ಬಂದಿರುವ ಹೋರಾಟಗಾರರು ಮೊದಲ ಬಾರಿಗೆ ಇಸ್ಲಾಮಿಕ್ ಸ್ಟೇಟ್‌ಗೆ ಎರಡು ನಗರಗಳಲ್ಲಿ ಸೋಲಿನ ರುಚಿ ತೋರಿಸಿದ್ದಾರೆ.

ಇರಾಕ್‌ ಪರ ಅಮೆರಿಕ ಸಹ ವಾಯುದಾಳಿ ಆರಂಭಿಸಿದೆ. ಮೊದಲ ಬಾರಿಗೆ ಪೇಷ್ಮರ್ಗಾ – ಇರಾಕ್ ಸೇನೆ ಹಳೆ ದ್ವೇಷ ಮರೆತು ಒಂದಾಗಿವೆ. ಇರಾಕ್‌ನ ಪ್ರಧಾನಿ ಬದಲಾಗಿದ್ದು, ಸುನ್ನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುವ ಭರವಸೆ ಸಿಕ್ಕಿದೆ. ಇದರ ಜೊತೆಗೆ ‘ದೇವರ ಅನುಗ್ರಹ ನಮ್ಮ ಮೇಲಿದೆ. ನಾವು ಹೆಜ್ಜೆ ಇಟ್ಟಲ್ಲೆಲ್ಲಾ ಜಯ ಶತಃಸಿದ್ಧ’ ಎಂದು ಬೀಗುತ್ತಿದ್ದ ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರ ‘ಕೆಚ್ಚು’ ಕುಗ್ಗಿದೆ. ಯುದ್ಧರಂಗದ ಮುಂದಿನ ಪರಿಣಾಮಗಳ ಮೇಲೆ ಈ ಎಲ್ಲ ಅಂಶಗಳೂ ಪ್ರಭಾವ ಬೀರುತ್ತವೆ.

ಒಂದು ವೇಳೆ ಯುದ್ಧರಂಗದಲ್ಲಿ ಉಗ್ರರು ಜಯ ಸಾಧಿಸಿದರೂ ಅವರ ಸರ್ಕಾರ ಉಳಿಯುವುದು ಕಷ್ಟ. ಇಸ್ಲಾಮಿಕ್ ಉಗ್ರರ ಸಂಘಟನೆ ಸದ್ಯಕ್ಕೆ ಒಗ್ಗಟ್ಟಾಗಿಯೂ ಪ್ರಬಲವಾಗಿಯೂ ಇರುವಂತೆ ತೋರುತ್ತಿದೆ. ಆದರೆ ಸಂಘಟನೆಯಲ್ಲಿರುವ ಸದ್ದಾಂ ಕಾಲದ ಬಾತ್‌ ಸೈನಿಕರು, ಜಿಹಾದಿಗಳು ಮತ್ತು ಬುಡಕಟ್ಟು ಹೋರಾಟಗಾರರು ಬಹುಕಾಲ ಒಗ್ಗಟ್ಟು ಕಾಪಾಡಿಕೊಳ್ಳುವುದು ಕಷ್ಟ. ಅವರಲ್ಲಿಯೇ ಭಿನ್ನಮತ ಸ್ಫೋಟಗೊಂಡು ಸೋದರ ಹತ್ಯೆಗಳು ನಡೆಯುತ್ತವೆ. ಇಲ್ಲವಾದರೆ, ವಿಪರೀತ ಬಿಗಿಯಾದ ಧಾರ್ಮಿಕ ಆಡಳಿತದಡಿ ನಲುಗುವ ಜನರೇ ಬಂಡೆದ್ದು ಉಗ್ರರ ಸರ್ಕಾರ ಕಿತ್ತೊಗೆಯುತ್ತಾರೆ.

ತನ್ನ ಮನೆ ಬಾಗಿಲಿಗೆ ಅಪಾಯ ಬಿಟ್ಟುಕೊಳ್ಳಲು ಇಷ್ಟಪಡದ ಅಮೆರಿಕ ಮತ್ತೆ ಭೂ ಸೇನೆ ಕಳಿಸಿ ಇಸ್ಲಾಮಿಕ್ ಸ್ಟೇಟ್‌ಗೆ ಅಂತ್ಯ ಹಾಡುತ್ತದೆ ಅಥವಾ ಸುತ್ತಲ ಅರಬ್ ದೇಶಗಳು ಒಗ್ಗೂಡಿ ದಾಳಿ ಮಾಡಿ ಉಗ್ರರಿಂದ ಇರಾಕ್ – ಸಿರಿಯಾ ಮುಕ್ತಿಗೊಳಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತವೆ ಎಂಬ ವಿಶ್ಲೇಷಣೆಗಳೂ ಚಾಲ್ತಿಯಲ್ಲಿವೆ.

ಆದರೆ, ಉಗ್ರರ ಸರ್ಕಾರವನ್ನು ಹೊಸಕಿ ಹಾಕಿದರೂ ಅದು ತೇಲಿ ಬಿಟ್ಟಿರುವ ಸಿದ್ಧಾಂತ ಮತ್ತು ಕ್ರೌರ್ಯವನ್ನೇ ಅಸ್ತ್ರವನ್ನಾಗಿಸಿಕೊಳ್ಳುವ ರಣತಂತ್ರ ಜಗತ್ತನ್ನು ಬಹುಕಾಲ ಕಾಡುವುದಂತೂ ಸತ್ಯ.  ಇಷ್ಟೆಲ್ಲ ವಿಶ್ಲೇಷಣೆಗಳ ನಂತರವೂ ಕಾಡುವ ಪ್ರಶ್ನೆ ಒಂದೇ ಒಂದು– ಪ್ರಕೃತಿ ಆರಾಧಕರಾದ ಯಾಜಿದಿ ಧರ್ಮೀಯರ ಕಥೆ ಏನಾಗಬಹುದು? ಉತ್ತರ ಎಲ್ಲಿಯೂ ಸಿಗುತ್ತಿಲ್ಲ. (ಆಕರಗಳು–ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT