ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಮೈತ್ರಿ ಕಸರತ್ತು

ಮಹಾರಾಷ್ಟ್ರದಲ್ಲಿ ಶಿವಸೇನಾ ಸಖ್ಯಕ್ಕೆ ಬಿಜೆಪಿ ಸಿದ್ಧ
Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಮಹಾರಾಷ್ಟ್ರ­ದಲ್ಲಿ ತನ್ನ ದೀರ್ಘ ಕಾಲದ ಸಹಜ ಮಿತ್ರ ಶಿವಸೇನಾ ಜತೆ  ಮರುಮೈತ್ರಿ ಕುದುರಿ­ಸಲು ಹಿಂಜರಿಕೆ ಇಲ್ಲ ಎಂದು ಬಿಜೆಪಿ ಮಂಗಳವಾರ ಮತ್ತೆ ಇಂಗಿತ ನೀಡಿದೆ.

ಆದರೆ ಇದರ ಜತೆಜತೆಗೇ ‘ಮಹಾ­ರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಎನ್‌ಸಿ­ಪಿಯ ಬಾಹ್ಯ ಬೆಂಬಲ ಪಡೆಯಲೂ ಸಿದ್ಧ’ ಎಂಬ  ತನ್ನ ಹೇಳಿಕೆಯಿಂದ ಅದು ಹಿಂದೆ ಸರಿಯದೇ ಶಿವಸೇನಾವನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಈ ಬೆಳವಣಿಗೆಗಳ ನಡುವೆಯೇ ಸರ್ಕಾರ ರಚನೆ ಸಂಬಂಧ ಬಿಜೆಪಿ ನಾಯಕರೊಂದಿಗೆ ಚರ್ಚಿಸಲು ಶಿವ­ಸೇನಾ ತನ್ನ ರಾಜ್ಯಸಭಾ ಸದಸ್ಯ ಅನಿಲ್‌ ದೇಸಾಯಿ ಮತ್ತು ಇನ್ನೊಬ್ಬ ಮುಖಂಡ ಸುಭಾಷ್‌ ದೇಸಾಯಿ ಅವ­ರನ್ನು ಇಲ್ಲಿಗೆ ಕಳುಹಿಸಿದೆ.

ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಕಟು ಟೀಕೆಗಳ ಬೆಂಕಿಯನ್ನೇ ಉಗುಳಿದ್ದ ಶಿವಸೇನಾ ಸಾಕಷ್ಟು ಮೆತ್ತ­ಗಾಗಿದೆ.   ತನ್ನ ಕಠೋರವಾದಿ ಮುಖಂಡ ಸಂಜಯ್‌ ರಾವುತ್‌ ಅವ­ರನ್ನು ಚರ್ಚೆಗೆ ಕಳುಹಿಸಿಲ್ಲ ಎನ್ನುವುದು ಗಮನಾರ್ಹ. ಶಿವಸೇನಾ ಜತೆಗಿನ ಮರುಮೈತ್ರಿ ಬಗ್ಗೆ ಬಿಜೆಪಿ ಎಚ್ಚರಿಕೆಯಿಂದಲೇ ಹೆಜ್ಜೆ ಇಡು­ತ್ತಿದೆ. ಜತೆಜತೆಗೇ ಎನ್‌ಸಿಪಿ ಬೆಂಬಲ ಪಡೆಯುವ ಪ್ರಸ್ತಾವವನ್ನೂ ಜೀವಂತ­ವಾಗಿಯೇ ಇರಿಸಿದೆ. ಶಿವಸೇನಾದ ಷರತ್ತು­ಗಳಿಗೆ ಬಾಗದೆ ಅದರ ಜತೆ ಮೈತ್ರಿ ಏರ್ಪಡಿಸಿಕೊಳ್ಳುವ ಕಾರ್ಯತಂತ್ರವನ್ನು ಅನುಸರಿಸುತ್ತಿದೆ.

ದೀಪಾವಳಿ ನಂತರ: ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಭೆಗೆ ವೀಕ್ಷಕರಾಗಿ ನೇಮಕ­ಗೊಂಡಿರುವ ಕೇಂದ್ರ ಗೃಹ ಸಚಿವ ರಾಜ­ನಾಥ್‌ ಸಿಂಗ್‌ ಅವರು ಸೋಮವಾರವೇ ಮುಂಬೈಗೆ ತೆರಳಬೇಕಿತ್ತು. ಅವರು ಇದನ್ನು ಮುಂದೂ­­ಡಿದ್ದು, ‘ದೀಪಾವಳಿ ನಂತರ ಮುಂಬೈಗೆ ಹೋಗುತ್ತೇವೆ. ಸರ್ಕಾರ ರಚನೆ ಏನಿದ್ದರೂ ಹಬ್ಬವಾದ ಮೇಲೆಯೇ’ ಎಂದಿದ್ದಾರೆ. ಶಿವಸೇನಾ ಜತೆಗೆ ಈಗ ಶುರುವಾಗಿರುವ ಮರು­ಮೈತ್ರಿಯ ಚರ್ಚೆಗೆ ಅನುವು ಮಾಡಿ­ಕೊಡುವುದೇ ರಾಜನಾಥ್‌ ಅವರ ಮುಂಬೈ ಭೇಟಿ ಮುಂದೂಡಿಕೆಗೆ ಕಾರಣ ಎನ್ನಲಾಗಿದೆ.

ಈ ವಿದ್ಯಮಾನಗಳ ನಡುವೆಯೇ ಮಹಾರಾಷ್ಟ್ರದ ಪಕ್ಷದ ಹಿರಿಯ ನಾಯಕ ವಿಲಾಸ್‌ ಮುಂಗಂಟಿವಾರ್‌ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೇ ಸೂಕ್ತ ಎಂಬ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಪಕ್ಷದ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವೀಸ್‌ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲವಾಗಿಯೇ ಚಲಾವಣೆ­ಯಲ್ಲಿ ಇದೆ.

ಬಿಜೆಪಿ ಪ್ರಮುಖ ಅರುಣ್‌ ಜೇಟ್ಲಿ ಮತ್ತು ಮಹಾರಾಷ್ಟ್ರದಲ್ಲಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಓಂ ಮಾಥುರ್‌ ಅವರು ‘ಪಕ್ಷವು ಶಿವಸೇನಾದೊಂದಿಗಿನ ಮೈತ್ರಿಗೆ ಬಾಗಿಲು ಮುಚ್ಚಿಲ್ಲ’ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದಾರೆ. ‘ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಮತ್ತಿತರರಿಗೆ ದೂರವಾಣಿ ಕರೆ ಮಾಡಿ ರಾಜ್ಯದಲ್ಲಿ ಪಕ್ಷದ ಸಾಧನೆಗಾಗಿ ಅಭಿನಂದಿಸಿದ್ದಾರೆ. ಈ ಅಭಿನಂದನೆಯ ಕರೆಯೇ ಸಂಭಾವ್ಯ ಮೈತ್ರಿಯ ಸಂಕೇತಗಳನ್ನು ರವಾನಿಸಿದೆ’ ಎಂದು ಜೇಟ್ಲಿ ವ್ಯಾಖ್ಯಾನಿಸಿದ್ದಾರೆ.

‘ನಮ್ಮ ಮುಂದೆ ಎರಡು ಪ್ರಸ್ತಾವ­ಗಳಿವೆ. ಒಂದೆಡೆ, ಶಿವಸೇನಾ ನಮ್ಮ ಸಹಜ ಮಿತ್ರನಾದರೆ, ಮತ್ತೊಂದೆಡೆ ಎನ್‌ಸಿಪಿ ಬೇಷರತ್‌ ಬಾಹ್ಯ ಬೆಂಬಲ ನೀಡಲು ಮುಂದಾಗಿದೆ. ಒಂದೊಮ್ಮೆ ಶಿವಸೇನಾ­ದೊಂದಿಗಿನ ಮೈತ್ರಿಗೆ ಏನಾದರೂ ಕಷ್ಟವೊದಗಿದರೆ ಎನ್‌ಸಿಪಿಯ ಬೇಷರತ್‌ ಬೆಂಬಲ ಇದ್ದೇ ಇದೆ’ ಎಂದಿದ್ದಾರೆ.

‘ಶಿವಸೇನಾ ಜತೆ ಇನ್ನೂ ವಿಸ್ತೃತ ಚರ್ಚೆ ನಡೆದಿಲ್ಲ. ಆದರೆ ನಾವು (ಬಿಜೆಪಿ ಮತ್ತು ಸೇನಾ) ಕೇಂದ್ರ ಸರ್ಕಾರದಲ್ಲಿ ಮತ್ತು ಮುಂಬೈ ಪಾಲಿಕೆಯಲ್ಲಿ ಇನ್ನೂ ಜತೆ­ಯಾಗಿಯೇ ಇದ್ದೇವೆ. ಅಂದರೆ ಸರ್ಕಾರದ ಮೂರು ಹಂತಗಳ ಪೈಕಿ ಎರಡು ಹಂತಗಳಲ್ಲಿ ನಾವು ಒಟ್ಟಿಗೇ ಇದ್ದೇವೆ. ಪರಸ್ಪರ ಅಭಿನಂದನೆಯ ಮಾತುಗಳನ್ನು ಆಡುತ್ತಿರುವುದೇ ಒಳ್ಳೆಯ ಸಂಕೇತವಾಗಿದೆ’ ಎಂದು ಜೇಟ್ಲಿ ಅವರು ಒತ್ತಿ ಹೇಳಿದ್ದಾರೆ.
ಓಂ ಪ್ರಕಾಶ್ ಮಾಥುರ್ ಕೂಡ ಇದೇ ರೀತಿಯ ಮಾತುಗಳನ್ನು ಆಡಿ, ‘ನಮ್ಮ ಸಹಜ ಮಿತ್ರನಾದ ಶಿವಸೇನಾವು ಮರಳಿ ಕೈಜೋಡಿಸಿದರೆ ಪಕ್ಷಕ್ಕೆ ಸಂತಸವಾಗು­ತ್ತದೆ’ ಎಂದಿದ್ದಾರೆ. ಈ ನಡುವೆ ವಿದ­ರ್ಭದ 40 ಬಿಜೆಪಿ ಶಾಸಕರು ನಾಗಪುರ­ದಲ್ಲಿ ಗಡ್ಕರಿ ಮನೆ ಮುಂದೆ ಅವರ ಪರವಾಗಿ ಜಯಘೋಷ ಮೊಳಗಿಸಿದರು.

ಹರಿಯಾಣ ಸಿ.ಎಂ ಖಟ್ಟರ್‌
ಚಂಡೀಗಡ (ಪಿಟಿಐ):
  ಹರಿಯಾಣದಲ್ಲಿ ಮೊತ್ತಮೊದಲ ಸಲ ರಚನೆಯಾಗಲಿರುವ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ­ಯಾಗಿ ಮನೋಹರ್‌ ಲಾಲ್‌ ಖಟ್ಟರ್‌ (60) ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಪ್ರಮಾಣ ವಚನ ಸ್ವೀಕಾರ ದಿನ ಇನ್ನೂ ನಿಗದಿಯಾಗಿಲ್ಲ.

‌ಬಿಜೆಪಿಯ 47 ಶಾಸಕರು ಇಲ್ಲಿ ಸಭೆ ಸೇರಿ ಖಟ್ಟರ್‌ ಅವರನ್ನು ಮಂಗಳವಾರ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದರು. ಇದೇ ಮೊದಲ ಸಲ ಶಾಸಕರಾಗಿ ಚುನಾಯಿತರಾಗಿರುವ ಖಟ್ಟರ್‌ ಅವರು 40 ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪೈಕಿ ಒಬ್ಬರಾಗಿದ್ದ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ರಾಮ್‌ ಬಿಲಾಸ್‌ ಶರ್ಮ ಅವರು ಖಟ್ಟರ್‌ ಅವರ ಹೆಸರನ್ನು ಸೂಚಿಸಿ­ದರು. ಮತ್ತೊಬ್ಬ ಆಕಾಂಕ್ಷಿ ಅಭಿಮನ್ಯು ಸೇರಿದಂತೆ ಹಲವರು ಇದನ್ನು ಅನು­ಮೋದಿಸಿದರು. ಭಜನ್‌ಲಾಲ್‌ ನಂತರ ಹರಿಯಾಣ 18 ವರ್ಷಗಳಾದ ಮೇಲೆ ಜಾಟೇತರ ಮುಖ್ಯಮಂತ್ರಿಯನ್ನು ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT