ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುವಿಚಾರಣೆಗೆ ಒತ್ತಾಯಿಸಿ ಪ್ರತಿಭಟನೆ

ಕಂಬಾಲಪಲ್ಲಿ ದಲಿತರ ಸಜೀವ ದಹನ ಪ್ರಕರಣ
Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಂಬಾಲಪಲ್ಲಿಯಲ್ಲಿ ನಡೆದ ದಲಿತರ ಸಜೀವ ದಹನ ಪ್ರಕರಣದ ಮರು ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ನಗರದ ಪುರಭವನದಿಂದ ಬನಪ್ಪ ಉದ್ಯಾನದವರೆಗೆ ಪ್ರತಿಭಟನಾ ರ್‌್ಯಾಲಿ ನಡೆಸಿದರು.

‘ಕಂಬಾಲಪಲ್ಲಿಯಲ್ಲಿ ನಡೆದ ದಲಿತರ ಹತ್ಯೆ ಪ್ರಕರಣ ಸಂಬಂಧ 32 ಆರೋಪಿ­ಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ಘಟನೆ ನಡೆದ 14 ವರ್ಷಗಳ ನಂತರ ಈ ತೀರ್ಪು ಬಂದಿದೆ. ತ್ವರಿತ ನ್ಯಾಯಾಲಯಗಳ ಮೂಲಕ ವಿಚಾ­ರಣೆ ನಡೆಸದೆ ವಿಳಂಬ ಮಾಡಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ನಡೆದುಕೊಂಡ ರೀತಿಯು ದಲಿತರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರು­ತ್ತದೆ’ ಎಂದು ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಮಾರಪ್ಪ ಆರೋಪಿಸಿದರು.

‘ಹತ್ಯೆಯಂಥ ಸಮಾಜ ವಿರೋಧಿ ಕೃತ್ಯ ಎಸಗಿದವರು ಯಾವುದೇ ಕಾರಣಕ್ಕೂ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಬಾರದು. ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗ­ಬೇಕು. ಆಗ ಮಾತ್ರ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುತ್ತದೆ. ಜತೆಗೆ, ಆತಂಕದಲ್ಲಿ­ರುವ ದಲಿತರು, ಭಯವಿಲ್ಲದೆ ಜೀವನ ನಡೆಸುವಂತಾಗುತ್ತದೆ. ಆರೋಪಿಗಳು ಖುಲಾಸೆಯಾಗಿರುವುದರಿಂದ ಕಂಬಾಲಪಲ್ಲಿಯ ದಲಿತರಿಗೆ ಮತ್ತು ಪ್ರಕರಣದ ಸಾಕ್ಷಿದಾರರಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ ಎಂದು ಪ್ರತಿಭಟ­ನಾಕಾರರು ತಿಳಿಸಿದರು. ಸಮಿತಿಯ ರಾಜ್ಯ ಘಟಕದ ಉಪ ಪ್ರಧಾನ ಕಾರ್ಯ-ದರ್ಶಿ ಮುನಿಬೈರಪ್ಪ, ಸಂಚಾಲಕ ಡ್ಯಾನಿಯಲ್ ಕೋಲ್ಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT