ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಆಲ್‌ರೌಂಡರ್‌ ಕ್ಲೈವ್‌ ರೈಸ್‌

Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಟ್ರಾನ್ಸ್‌ವಾಲ್‌ ಮತ್ತು ವೆಸ್ಟರ್ನ್‌ ಪ್ರಾವಿನ್ಸ್‌ ತಂಡಗಳ ನಡುವಿನ ಪಂದ್ಯವದು. ವೆಸ್ಟರ್ನ್‌ ಪ್ರಾವಿನ್ಸ್‌ನ ವೇಗದ ಬೌಲರ್‌ ಲಿ ರಾವುಕ್ಸ್‌ ಎಸೆದ ಬೌನ್ಸರ್‌ ಬ್ಯಾಟ್ಸ್‌ಮನ್ ರಾಬಿ ಮುಜೆಲ್‌ ಮುಖಕ್ಕೆ ಜೋರಾಗಿ ಬಡಿದು ತೀವ್ರ ಗಾಯವಾಗಿತ್ತು. ಪಂದ್ಯದುದ್ದಕ್ಕೂ ರಾವುಕ್ಸ್‌ ಅದೇ ರೀತಿ ಬೌನ್ಸರ್‌ ದಾಳಿ ನಡೆಸಿ ಟ್ರಾನ್ಸ್‌ವಾಲ್‌ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಿದ್ದರು.

ಟ್ರಾನ್ಸ್‌ವಾಲ್ ತಂಡದ ನಾಯಕ ಬ್ಯಾಟಿಂಗ್‌ಗೆ ಬಂದಾಗ ರಾವುಕ್ಸ್‌, ‘ನಿನ್ನ ಮತ್ತು ನನ್ನ ಬೌನ್ಸರ್‌ಗಳ ನಡುವಿನ ವ್ಯತ್ಯಾಸ ಆ ಪೆಟ್ಟು’ ಎಂದು ವ್ಯಂಗ್ಯವಾಡಿದ್ದರು. ಏಳು ವಿಕೆಟ್‌ ಉರುಳಿದಾಗ ಟ್ರಾನ್ಸ್‌ವಾಲ್ ನಾಯಕ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡರು. ವೆಸ್ಟರ್ನ್‌ ಪ್ರಾವಿನ್ಸ್‌ನ ‘ಬಾಲಂಗೋಚಿ ಬ್ಯಾಟ್ಸ್‌ಮನ್‌’ ಲಿ ರಾವುಕ್ಸ್‌ ಕ್ರೀಸ್‌ಗೆ ಬಂದಾಗ ಸ್ವತಃ ನಾಯಕ ಚೆಂಡು ತೆಗೆದುಕೊಂಡರು.

ಮೊದಲ ಎಸೆತದಲ್ಲೇ ರಾವುಕ್ಸ್‌ ತುಟಿ ಒಡೆದು ಹೋಗುವಂತಹ ಬೌನ್ಸರ್ ಅಪ್ಪಳಿಸಿತು. ತನ್ನ ತಂಡದ ಆಟಗಾರನಿಗೆ ಆದ ಪೆಟ್ಟಿನ ಮುಯ್ಯಿಯನ್ನು ಅವರು ಹೀಗೆ ತೀರಿಸಿಕೊಂಡಿದ್ದರು. ಅಂದ ಹಾಗೆ ಆ ನಾಯಕನ ಹೆಸರು ಕ್ಲೈವ್‌ ರೈಸ್‌. ಹೋದ ವಾರ ನಿಧನರಾದ ದಕ್ಷಿಣ ಆಫ್ರಿಕಾದ ಕ್ಲೈವ್‌ ಎಡ್ವರ್ಡ್‌ ಬಟ್ಲರ್‌ ರೈಸ್‌ ವ್ಯಕ್ತಿತ್ವದ ಪರಿಚಯಕ್ಕೆ ಇದಕ್ಕಿಂತ ಮತ್ತೊಂದು ಉತ್ತಮ ಉದಾಹರಣೆ ಸಿಗಲಾರದು.

ಪ್ರಥಮ ದರ್ಜೆ ಪಂದ್ಯಗಳಲ್ಲಿ ದೊಡ್ಡ ಹೆಸರು ಮಾಡಿದ್ದ ಈ ಆಲ್‌ರೌಂಡರ್, ವಿವಾದಿತ ವ್ಯಕ್ತಿಯೂ ಹೌದು. ಕ್ಲೈವ್‌ ರೈಸ್‌ ನೂರಾರು ಅಂತರರಾಷ್ಟ್ರೀಯ ಪಂದ್ಯಗಳನ್ನೇನೂ ಆಡಿಲ್ಲ. ಶತಕಗಳನ್ನೂ ಬಾರಿಸಿಲ್ಲ. ಎದುರಾಳಿಗಳನ್ನು ಕಂಗಾಲು ಮಾಡುವಂತಹ ಬೌಲಿಂಗ್‌ ಕೂಡ ಮಾಡಿಲ್ಲ. ಆಡಿದ್ದು ಕೇವಲ ಮೂರು ಏಕದಿನ ಪಂದ್ಯಗಳನ್ನು. ಆ ಮೂರೂ ಪಂದ್ಯಗಳಲ್ಲಿ ಅವರು ತಂಡದ ನೇತೃತ್ವ ವಹಿಸಿದ್ದರು!

ಇಂಗ್ಲೆಂಡ್‌ ತಂಡದಲ್ಲಿ ಕಪ್ಪುವರ್ಣೀಯ ಕ್ರಿಕೆಟಿಗನಿದ್ದಾನೆ ಎಂಬ ಕಾರಣಕ್ಕೆ ಪ್ರವಾಸವನ್ನೇ ರದ್ದುಗೊಳಿಸಿದ್ದ ದಕ್ಷಿಣ ಆಫ್ರಿಕಾ ತಂಡವನ್ನು 1970ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತು ಮಾಡಲಾಗಿತ್ತು. ಆ ನಿಷೇಧ ತೆರವಾಗಿದ್ದು 1991ರಲ್ಲಿ. ಹೀಗೆ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಪುನರ್‌ಪ್ರವೇಶ ಆರಂಭವಾಗಿದ್ದು ಭಾರತದ ಎದುರಿನ ಸರಣಿ ಮೂಲಕ. ಕ್ಲೈವ್ ರೈಸ್‌ ಆ ಸರಣಿಯ ನಾಯಕತ್ವ ವಹಿಸಿದ್ದರು. ಭಾರತ ಸರಣಿಯಲ್ಲಿ 2–1ರಲ್ಲಿ ಜಯ ಪಡೆದಿತ್ತು.

ಅಂತರರಾಷ್ಟ್ರೀಯ ಟೂರ್ನಿಗಳಿಂದ ಎರಡು ದಶಕ ಹೊರಗಿದ್ದ ದಕ್ಷಿಣ ಆಫ್ರಿಕಾ ಅತ್ಯುತ್ತಮ ಆಟಗಾರರನ್ನು ರೂಪಿಸಿತ್ತು. 1992ರ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಕಟ್ಟುವ ಸೂಚನೆ ನೀಡಿತ್ತು. ವಿಶ್ವಕಪ್‌ನಲ್ಲಿ ಕ್ಲೈವ್ ರೈಸ್‌ಗೆ ತಂಡ ಮುನ್ನಡೆಸುವ ಜವಾಬ್ದಾರಿ ಲಭಿಸುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಕೆಪ್ಲರ್‌ ವೆಸೆಲ್ಸ್‌ ನಾಯಕರಾಗಿ ಆಯ್ಕೆಯಾದರು. ಕ್ಲೈವ್ ರೈಸ್‌ ಅವರನ್ನು ತಂಡಕ್ಕೆ ಪರಿಗಣಿಸಲೇ ಇಲ್ಲ. ಆದ್ದರಿಂದ ಭಾರತದ ಎದುರಿನ ಸರಣಿಯೇ ಅವರಿಗೆ ಕೊನೆಯ ಸರಣಿಯಾಗಿತ್ತು.

ಪ್ರಥಮ ದರ್ಜೆಯಲ್ಲಿ ರಾಜ
ಜೊಹಾನ್ಸ್‌ಬರ್ಗ್‌ನಲ್ಲಿ 1949ರಲ್ಲಿ ಜನಿಸಿದ ಕ್ಲೈವ್‌ ರೈಸ್‌ ಬೀದಿ ದೀಪದ ಕಂಪೆನಿಯೊಂದರಲ್ಲಿ ನೌಕರನಾಗಿದ್ದರು. ಅವರ ಸಹೋದರ ರಿಚರ್ಡ್‌ ಕೂಡ ಕ್ರಿಕೆಟ್ ಆಟಗಾರ. ರೈಸ್‌ ಕ್ರಿಕೆಟ್‌ ಬದುಕು ಶುರುವಾಗಿದ್ದು 1969ರಲ್ಲಿ. ಟ್ರಾನ್ಸ್‌ವಾಲ್‌ ತಂಡದ ಸದಸ್ಯನಾಗಿದ್ದ ಅವರಿಗೆ ಎರಡೇ ವರ್ಷದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರಕಿತು. ಆದರೆ 1971–72ರಲ್ಲಿನ ಆಸ್ಟ್ರೇಲಿಯಾ ಪ್ರವಾಸದ ಈ ಸರಣಿ ರದ್ದುಗೊಂಡಿತು. 80ರ ದಶಕದಿಂದ ಟ್ರಾನ್ಸ್‌ವಾಲ್‌ನ ನಾಯಕರಾಗಿ ‘ಮೀನ್‌ ಮೆಷಿನ್’ ಖ್ಯಾತಿಯ ರೈಸ್‌ ಹಲವು ಟ್ರೋಫಿಗಳನ್ನು ಗೆದ್ದುಕೊಟ್ಟರು.

1975ರಲ್ಲಿ ಕೌಂಟಿ ತಂಡ ನಾಟಿಂಗ್‌ಹ್ಯಾಮ್‌ಶೈರ್‌ಗೆ ಸೇರಿಕೊಂಡರು. ಅಲ್ಲಿ ಅಂತರರಾಷ್ಟ್ರೀಯ ಖ್ಯಾತನಾಮರಾದ ರಿಚರ್ಡ್‌ ಹ್ಯಾಡ್ಲಿ, ಡೆರೆಕ್‌ ರಾಂಡಾಲ್‌ ಅವರೊಂದಿಗೆ ಡ್ರೆಸ್ಸಿಂಗ್ ರೂಮ್‌ ಹಂಚಿಕೊಂಡರು. ಹ್ಯಾಡ್ಲಿ ಮತ್ತು ರೈಸ್‌ ಜೋಡಿಯ ಮೋಡಿ ಎಷ್ಟಿತ್ತೆಂದರೆ, ನಾಟಿಂಗ್‌ಹ್ಯಾಮ್‌ಶೈರ್‌ನಲ್ಲಿ ಒಟ್ಟಿಗೆ ಆಡಿದ ಪಂದ್ಯಗಳಲ್ಲಿ ಇವರಿಬ್ಬರೂ 170 ವಿಕೆಟ್‌ಗಳನ್ನು ಹಂಚಿಕೊಂಡಿದ್ದರು.

1929ರ ಬಳಿಕ ಮೊದಲ ಬಾರಿಗೆ ನಾಟಿಂಗ್‌ಹ್ಯಾಮ್‌ಶೈರ್‌ಗೆ ಚಾಂಪಿಯನ್‌ ಪಟ್ಟ ತಂದುಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೂ ರೈಸ್‌ ಪಾತ್ರರಾದರು. ಅದೇ ವರ್ಷ ‘ವಿಸ್ಡನ್‌ ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಸಹ ಪಡೆದರು. ನಟಾಲ್ ಮತ್ತು ಸ್ಕಾಟ್ಲೆಂಡ್‌ ತಂಡಗಳನ್ನೂ ರೈಸ್‌ ಕೆಲ ಕಾಲ ಪ್ರತಿನಿಧಿಸಿದ್ದರು. 1991ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ರೈಸ್‌ ಪದಾರ್ಪಣೆ ಮಾಡಿದಾಗ ಅವರ ವಯಸ್ಸು 42! ಅವರಿಗೆ ಕ್ರಿಕೆಟ್ ಪ್ರೀತಿ ಎಷ್ಟಿತ್ತು ಎಂಬುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?

‘ಒಬ್ಬ ಅಥ್ಲೀಟ್‌ಗೆ ಇರಬೇಕಾದ ಫಿಟ್‌ನೆಸ್‌ ರೈಸ್‌ ಅವರಲ್ಲಿತ್ತು. ಎಲ್ಲರೂ ಅಭ್ಯಾಸ ಮುಗಿಸಿ ಮನೆಗೆ ತೆರಳಿದ ಬಳಿಕವೂ ರೈಸ್, ಇಡೀ ಮೈದಾನದಲ್ಲಿ 10ರಿಂದ 15 ಸುತ್ತು ಓಡುತ್ತಿದ್ದರು. ಆ ಮಟ್ಟಕ್ಕೆ ಫಿಟ್‌ನೆಸ್‌ ಉಳಿಸಿಕೊಳ್ಳಲು ಬದ್ಧತೆ ಮೆರೆಯುತ್ತಿದ್ದ ಆಟಗಾರನನ್ನು ನೋಡಿದ್ದು ಅದೇ ಮೊದಲು’ ಎಂದು ಸಹ ಆಟಗಾರ ಅಲಿ ಬಾಕರ್‌ ಅದೊಮ್ಮೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ದಕ್ಷಿಣ ಆಫ್ರಿಕಾ ತಂಡ ನಿಷೇಧಕ್ಕೆ ಒಳಗಾಗದಿದ್ದರೆ ಕ್ಲೈವ್ ರೈಸ್‌ ಎಂಬ ಹೆಸರು ಇಂದು ಜಗತ್ತಿನ ಶ್ರೇಷ್ಠ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಇರುತ್ತಿತ್ತು ಎನ್ನುವುದು ಅವರನ್ನು ಕಂಡ ಅನೇಕ ಆಟಗಾರರ ಅನಿಸಿಕೆ.  ‘ಬಾಲಂಗೋಚಿ’ ಬ್ಯಾಟ್ಸ್‌ಮನ್‌ ಆಗಿ ವೃತ್ತಿ ಬದುಕು ಪ್ರಾರಂಭಿಸಿದ ರೈಸ್‌, ಕೊನೆಗೆ ಐದನೇ ಕ್ರಮಾಂಕದ ವರೆಗೂ ಬಡ್ತಿ ಪಡೆದಿದ್ದರು. ಮೂರನೇ ಕ್ರಮಾಂಕದಲ್ಲಿ ಆಡಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ರೈಸ್‌ಗೆ ಬ್ಯಾಟಿಂಗ್‌ಗಿಂತಲೂ ಬೌಲಿಂಗ್ ಹೆಚ್ಚು ಸುಲಭವಾಗಿತ್ತು. ಬ್ಯಾಟ್‌ ಹಿಡಿದು ಬಂದಾಗ ಅವರು ರನ್ ಗಳಿಸಲು ಹೆಣಗಾಡುತ್ತಿದ್ದರು ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್‌ ಮೈಕ್ ಪ್ರಾಕ್ಟರ್‌ ಹೇಳುತ್ತಾರೆ.

ಜಗಳಗಂಟ
ಕ್ಲೈವ್ ರೈಸ್‌ ನಿಷ್ಠುರ ಮಾತಿನ, ಮುಂಗೋಪಿ ಸ್ವಭಾವದ ವ್ಯಕ್ತಿ. ಇದೇ ಅವರ ವೃತ್ತಿಗೆ ಮುಳುವಾಯಿತು. 1992ರ ವಿಶ್ವಕಪ್ ತಂಡದಿಂದ ಅವರನ್ನು ಕೈಬಿಡಲು ತಂಡದ ಸಂಚಾಲಕರಾಗಿದ್ದ ಪೀಟರ್‌ ವಾನ್‌ಡರ್‌ ಮರ್ವೆ ಅವರೊಂದಿಗೆ 1980ರಿಂದಲೂ ಸಾಧಿಸಿಕೊಂಡು ಬಂದಿದ್ದ ಜಿದ್ದು ಕಾರಣವಾಗಿತ್ತು. ತನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ರೈಸ್‌ ಪ್ರತಿಭಟಿಸಿ ಹೋಟೆಲ್‌ ಒಂದರಲ್ಲಿ ಕೃತಕ ಗಡ್ಡ ಅಂಟಿಸಿಕೊಂಡು ವೀಲ್‌ ಚೇರ್‌ನಲ್ಲಿ ಕುಳಿತು ಓಡಾಡಿದ್ದರು. ವಾನ್‌ಡರ್‌ ಮರ್ವೆ ಅವರನ್ನು ‘ಬೆನ್ನುಹುರಿಯಿಲ್ಲದ ಮನುಷ್ಯ’ ಎಂದು ಟೀಕಿಸಿದ್ದರು. ಅವರನ್ನು ಅಣಕಿಸಲು ಈ ರೀತಿ ಮಾಡಿದ್ದರು. ನಿಷ್ಠುರ ಮಾತಿನಿಂದ ರೈಸ್‌ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುತ್ತಿದ್ದರು.

ನುರಿತ ತರಬೇತುದಾರ
1994ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ರೈಸ್‌ ಕೋಚ್‌ ಆಗಿಯೂ ಸಾಕಷ್ಟು ಹೆಸರು ಮಾಡಿದರು. ತಾವು ಆಡಿದ್ದ ನಾಟಿಂಗ್‌ಹ್ಯಾಮ್‌ಶೈರ್‌ ತಂಡದ ಕೋಚ್‌ ಆಗಿ 1999 ರಿಂದ 2001ರವರೆಗೆ ಕೆಲಸ ಮಾಡಿದ್ದರು. ದಕ್ಷಿಣ ಆಫ್ರಿಕಾ ತಂಡದಲ್ಲಿ ಅವಕಾಶವಿಲ್ಲದೆ ಇಂಗ್ಲೆಂಡ್‌ಗೆ ಬಂದ ಕೆವಿನ್ ಪೀಟರ್‌ಸನ್‌ಗೆ ಆಶ್ರಯ ನೀಡಿ ಅವರ ಆಟವನ್ನು ತಿದ್ದಿತೀಡಿದ ಗುರು ಕ್ಲೈವ್ ರೈಸ್‌. ಗ್ಯಾರಿ ಕರ್ಸ್ಟನ್‌, ಜಾಂಟಿ ರೋಡ್ಸ್‌ ಮುಂತಾದ ಪ್ರತಿಭಾನ್ವಿತರು ಕ್ಲೈವ್ ರೈಸ್‌ ಗರಡಿಯಲ್ಲಿ ಪಳಗಿದವರೇ.

ಕಾಡಿದ ಕಾಯಿಲೆ
49ನೇ ವಯಸ್ಸಿನಲ್ಲಿ ರೈಸ್‌ ಬ್ರೈನ್‌ ಟ್ಯೂಮರ್‌ಗೆ ತುತ್ತಾದರು. ಆ ವೇಳೆಗಾಗಲೇ ಅವರ ಎಡ ಕಿವಿ ಸಾಮರ್ಥ್ಯ ಕಳೆದು ಕೊಂಡಿತ್ತು. ಅಲ್ಲಿಂದ ನಿರಂತರವಾಗಿ ಆರೋಗ್ಯ ಸಮಸ್ಯೆಗಳಿಗೆ ಒಳಗಾದರು. ಕಳೆದ ಮಾರ್ಚ್‌ನಲ್ಲಿ ಚಿಕಿತ್ಸೆಗೆಂದು ಬೆಂಗ ಳೂರಿಗೆ ಬಂದಿದ್ದರು. ಮೆದುಳು ಗಡ್ಡೆಯ ವಿರುದ್ಧ ಸುಮಾರು 17 ವರ್ಷ  ಹೋರಾಡಿದ ಅವರ ಬದುಕು ಹೋದ ವಾರ ಅಂತ್ಯ ಕಂಡಿತು.               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT