ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಕಡಿಯಲು ನಗರವಾಸಿಗಳ ನಾನಾ ಕಾರಣ

ವಾಸ್ತುದೋಷ, ಎಲೆ–ಬೇರುಗಳಿಂದಾಗುವ ತೊಂದರೆ ಉಲ್ಲೇಖ
Last Updated 25 ಏಪ್ರಿಲ್ 2014, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೆಲವು ವರ್ಷಗಳ ಹಿಂದಿನ ಕಥೆ. ಹುಬ್ಬಳ್ಳಿ ವಲಯ ಅರಣ್ಯ ಕಚೇರಿಗೆ ಅರ್ಜಿಯೊಂದು ಬಂದಿತ್ತು. ನಗರದ ಪ್ರತಿಷ್ಠಿತ ಬಡಾವಣೆಯ ನಿವಾಸಿಯೊಬ್ಬರು ತಮ್ಮ ಮನೆ ಮುಂದೆ ಇರುವ ಮರವನ್ನು ಕಡಿಯಲು ಅವಕಾಶ ನೀಡಬೇಕೆಂದು ಆ ಅರ್ಜಿಯಲ್ಲಿ ಕೋರಿದ್ದರು. ಆ ಮರದಿಂದ ವಾಸ್ತುದೋಷ ಇದೆ ಎಂದು ಜೋತಿಷಿಯೊಬ್ಬರು ತಿಳಿಸಿದ್ದೇ ಈ ನಿರ್ಧಾಕ್ಕೆ ಬರಲು ಕಾರಣ.

ಅವರ ಬೇಡಿಕೆಗೆ ಅರಣ್ಯಾಧಿಕಾರಿಗಳು ಸೊಪ್ಪು ಹಾಕಲಿಲ್ಲ. ಆದರೆ ಆತನೂ ಬಿಡಲಿಲ್ಲ. ನಿರಂತರ ಮೂರು ವರ್ಷ ಅಧಿಕಾರಿಗಳ ತಲೆ ತಿಂದ. ಈತನಿಂದ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ದೃಢಪಟ್ಟ ನಂತರ ಅರಣ್ಯಾಧಿಕಾರಿ ಹೊಸ ತಂತ್ರ ಹೆಣೆದರು. ಮೊದಲು ಮನೆ ಮುಂದೆ ಮೂರು ಗಿಡ ನೆಟ್ಟು ಬೆಳೆಸುವಂತೆ ಹೇಳಿದರು. ಆ ಗಿಡಗಳು ಬೆಳೆದು ದೊಡ್ಡದಾದ ನಂತರ ಮರಕ್ಕೆ ಕತ್ತರಿ ಹಾಕಲು ಅವಕಾಶ ನೀಡಿದರು.

ಮರ ಕಡಿಯಲು ಇಲ್ಲದ ನೆಪ ಹೇಳಿ ಇಲಾಖೆಗೆ ಮಂಕು ಬೂದಿ ಎರಚಲು ಯತ್ನಿಸುವವರಿಗೆ ಹುಬ್ಬಳ್ಳಿ ವಲಯ ಅರಣ್ಯ ಕಚೇರಿಯಲ್ಲಿ ಇಂಥ ಪ್ರತಿತಂತ್ರಗಳು ಹಲವು. ಹೀಗಾಗಿ ವಾಸ್ತುದೋಷ, ಎಲೆ ಉದುರಿ ತೊಂದರೆಯಾಗುವುದು, ಬೇರು ಬಂದು ಗೋಡೆ ಬಿರುಕು ಬಿಡುವುದು ಮುಂತಾದ ಕ್ಷುಲ್ಲಕ ಕಾರಣಗಳನ್ನು ಹೇಳಿ ಮರ ಕಡಿಯಲು ಅವಕಾಶ ಕೋರಿದ ನೂರಾರು ಅರ್ಜಿಗಳು ಪೂರಕ ಉತ್ತರ ಸಿಗದೆ ಅರಣ್ಯ ಭವನದಲ್ಲಿರುವ ವಲಯ ಕಚೇರಿಯಲ್ಲಿ ಬಿದ್ದು ಕೊಂಡಿವೆ.

ಹುಬ್ಬಳ್ಳಿ, ನವಲಗುಂದ ತಾಲ್ಲೂಕು ಮತ್ತು ಕಲಘಟಗಿ ತಾಲ್ಲೂಕು ವ್ಯಾಪ್ತಿಯನ್ನು ಒಳಗೊಂಡ ಹುಬ್ಬಳ್ಳಿ ವಲಯ ಕಚೇರಿಗೆ ಮರ ಕಡಿಯಲು ಅನುಮತಿ ಕೋರಿ ಬರುವ ಅರ್ಜಿಗಳಲ್ಲಿ ಹೆಚ್ಚಿನವು ನಗರ ವಾಸಿಗಳದ್ದು. ತಿಂಗಳಿಗೆ ಸುಮಾರು 40ರಿಂದ 50 ಅರ್ಜಿಗಳು ಬರುತ್ತಿದ್ದು ಅಧಿಕಾರಿ ಮತ್ತು ಪರಿಸರವಾದಿಗಳ ಪರಿಶೀಲನೆಯ ನಂತರ ಇವುಗಳ ಪೈಕಿ ಸಕಾರಣವಾದ ಅರ್ಜಿಗಳನ್ನು ಮಾತ್ರ ಪುರಸ್ಕರಿಸಲಾ ಗುತ್ತಿದೆ. ಅನಿವಾರ್ಯವಾಗಿದ್ದರೆ ಮಾತ್ರ ಮರಗಳನ್ನು ಕಡಿಯಲಾಗುತ್ತದೆ. ಇಲ್ಲವಾದರೆ ಕೊಂಬೆಗಳನ್ನು ಮಾತ್ರ ಕತ್ತರಿಸಿ ಅರ್ಜಿದಾರರನ್ನು ಸಮಾಧಾನಪಡಿಸಿ ಮರವನ್ನು ಉಳಿಸಲಾಗುತ್ತದೆ. ಕಳೆದ ವರ್ಷವಿಡೀ ಬಂದ 117 ಅರ್ಜಿಗಳ ಪೈಕಿ 19 ಅರ್ಜಿಗಳಿಗೆ ಮಾತ್ರ ‘ಪೂರಕ’ವಾಗಿ ಸ್ಪಂದಿಸಲಾಗಿದೆ.

ಅರಣ್ಯ ಇಲಾಖೆಯ ಇಂಥ ‘ರಕ್ಷಣಾತ್ಮಕ ಆಟ’ಕ್ಕೆ ನಗರದ ಪರಿಸರವಾದಿಗಳು ಕೂಡ ಸ್ಪಂದಿಸುತ್ತಿದ್ದಾರೆ. ಕೆಲವು ಬಡಾವಣೆಗಳಲ್ಲಿ ಇಲಾಖೆಯಷ್ಟೇ ಕಾಳಜಿಯಿಂದ ಕಾರ್ಯನಿರ್ವಹಿಸುವ ಹಸಿರು ಪ್ರೇಮಿಗಳಿದ್ದಾರೆ. ಹಸಿರು ನಾಶವನ್ನು ಅವರು ಸಹಿಸುವುದಿಲ್ಲ. ಮರಗಳಿಗೆ ಕೊಡಲು ಹಾಕಲು ಅನುಮತಿ ಕೋರಿದವರ ಮನವೊಲಿಸುವ ಕಾರ್ಯವೂ ಇವರಿಂದ ನಡೆಯುತ್ತಿದೆ. ಇವರಿಂದಾಗಿ ಇಲಾಖೆಯ ಕಾರ್ಯ ಸುಗಮವಾಗಿ ಸಾಗುತ್ತಿದೆ ಎಂದು ಅಧಿಕಾರಿಗಳೇ ಹೇಳುತ್ತಾರೆ.

‘ಅರ್ಜಿ ಸಲ್ಲಿಸಿದವರ ಭಾವನೆ, ಮರ ಕಡಿಯಲು ನೀಡಿರುವ ಕಾರಣ ಇತ್ಯಾದಿಗಳಿಗೂ ಬೆಲೆ ನೀಡುತ್ತೇವೆ. ಪರಿಶೀಲನೆಯ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಹೆಚ್ಚಿನ ಸಂದ ರ್ಭದಲ್ಲಿ ಅವರ ಮನವೊಲಿಸಿ ಮರವನ್ನು ಉಳಿಸಲು ಪ್ರಯತ್ನಿ ಸಲಾಗುತ್ತದೆ. ಈ ವಿಷಯದಲ್ಲಿ ಪರಿಸರ ಪ್ರೇಮಿಗ ಳಿಂದ ಉತ್ತಮ ಸಹಕಾರ ಸಿಗುತ್ತಿದೆ’ ಎಂದು ವಲಯ ಅರಣ್ಯ ಅಧಿ ಕಾರಿ ರಾಜೇಂದ್ರ ಎಂ.ಪತ್ತಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರಕ್ಕೆ ಕೊಡಲಿ ಹಾಕಲು ನೀಡುವ ಅನೇಕ ಕಾರಣಗಳಿಗೆ ಪರಿಹಾರವಿದೆ. ವಾಸ್ತುದೋಷದ ಕಾರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಇತರ ಕಾರಣಗಳಿಗೆ ಪರಿಹಾರವನ್ನು ಹೇಳಲಾಗುತ್ತದೆ. ಪರಿಹರಿಸಲು ಸಾಧ್ಯವಿಲ್ಲದ ಕಾರಣಗಳಿದ್ದರೆ ಮರ ಅಥವಾ ಕೊಂಬೆ ಕಡಿಯಲಾಗುತ್ತದೆ. ನೀರಿನ ಸಂಪಿಗೆ ಬೇರು ಬರುವುದನ್ನು ತಡೆಯಲು ಮರ ಮತ್ತು ಸಂಪಿನ ನಡುವೆ ಸಿಮೆಂಟಿನ ಸಣ್ಣ ಗೋಡೆ ನಿರ್ಮಿಸಲು ಸೂಚಿಸಲಾಗುತ್ತದೆ. ಬೇರಿನಿಂದಾಗಿ ಗೋಡೆ ಬಿರುಕು ಬಿಡುತ್ತದೆ ಎಂಬುದು ಅನೇಕ ಪ್ರಸಂಗಗಳಲ್ಲಿ ನಿಜವಾಗಿರು ವುದಿಲ್ಲ. ಹಾಗಿದ್ದಾಗ ಬಿರುಕು ಬಿಡಲು ನಿಜವಾದ ಕಾರಣ ಏನೆಂದು ಪತ್ತೆ ಹಚ್ಚಲು ತಿಳಿಸುತ್ತೇವೆ. ಬೇರಿನಿಂದಾಗಿಯೇ ಹೀಗಾಗಿದೆ ಎಂದು ತಿಳಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪತ್ತಾರ ವಿವರಿಸಿದರು.

‘ಎಲ್ಲ ಅರ್ಜಿಗಳನ್ನು ಪುರಸ್ಕರಿಸಿದರೆ ಹಸಿರು ನಗರದ ಕಲ್ಪನೆ ಹೋಗಿ ಬರಡು ನಗರ ಸೃಷ್ಟಿಯಾದೀತು. ಹುಬ್ಬಳ್ಳಿ ನಗರ ವ್ಯವಸ್ಥಿತವಾಗಿಲ್ಲ. ಗಿಡಗಳನ್ನು ನೆಟ್ಟಿರುವ ವಿಧಾನ ಸಮರ್ಪಕ ವಾಗಿಲ್ಲ. ಈಗ ಇಲಾಖೆ ವತಿಯಿಂದ ಸಣ್ಣ–ಸಣ್ಣ ಹಾಗೂ ಬೇಗನೇ ಮುರಿಯದ ಮರಗಳನ್ನು ಬೆಳೆಸುವ ಶ್ರಮ ನಡೆಯುತ್ತಿದೆ’ ಎಂದು ಅವರು ಹೇಳಿದರು. ಉಪ ವಲಯ ಅರಣ್ಯಾಧಿಕಾರಿ ಎಂ.ಎಸ್‌.ಇಲಾಲ್‌ ಅವರು ಪರಿಸರವಾದಿಗಳ ಜೊತೆ ಮರಗಳನ್ನು ಪರಿಶೀಲಿಸಲು ಹೋಗುತ್ತಾರೆ.

‘ಹುಳ ತಿಂದು ಹಾಳಾದ ಮರವನ್ನು ಕಡಿಯಲೇಬೇಕಾ ಗುತ್ತದೆ. ಎರಡು ಕೊಂಬೆಗಳು ಸೇರುವಲ್ಲಿ ಜಿಗುಟು ಪದಾರ್ಥ ಸೋರುತ್ತಿದ್ದರೆ ಆ ಕೊಂಬೆಗಳು ಮುರಿದು ಬೀಳುವುದು ಖಚಿತ. ಹೀಗಾಗಿ ಅವುಗಳನ್ನು ಕತ್ತರಿಸಲಾಗುತ್ತದೆ. ಮರ ಟೊಳ್ಳಾಗಿದೆ ಎಂದು ಖಚಿತವಾದರೆ ಅಂಥ ಮರಗಳಿಗೆ ಕೊಡಲಿ ಹಾಕಲಾಗುತ್ತದೆ. ತುರ್ತಾಗಿ ಮರಗಳನ್ನು ಉರು ಳಿಸುವ ಕೆಲಸ ಪಾಲಿಕೆಯಿಂದ ನಡೆಯುತ್ತದೆ’ ಎನ್ನುತ್ತಾರೆ ಇಲಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT