ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನಲ್ಲಿ ಅಗ್ಗದ ಕೆಂಪುಕಲ್ಲು ಮನೆ

Last Updated 13 ಜನವರಿ 2015, 19:30 IST
ಅಕ್ಷರ ಗಾತ್ರ

ಬರೀ ನಗರದಲ್ಲಿನ ಬೃಹತ್‌ ಬಂಗಲೆ, ಸೊಗಸಿನ ಮನೆ, ವಿಶೇಷ ವಿನ್ಯಾಸದ ಮನೆ ಎಂಬ ಮಾತೇ ಆಯಿತು. ಗ್ರಾಮೀಣ ಭಾಗದಲ್ಲಿಯೂ ಇರುವ ವಿಶಿಷ್ಟ ಸ್ವರೂಪದ ಮನೆಗಳ ಬಗ್ಗೆ ಎಲ್ಲಿಯೂ ಹೆಚ್ಚು ಪ್ರಸ್ತಾಪವೇ ಆಗುವುದಿಲ್ಲವಲ್ಲ.

ಹಳ್ಳಿಗಾಡಿನಲ್ಲಿಯೂ ಚೆಂದದ ಮನೆಗಳಿರುತ್ತವೆ. ಕಾಂಕ್ರೀಟ್‌ ಕಟ್ಟಡಗಳೂ ಇರುತ್ತವೆ. ಆದರೆ, ಗ್ರಾಮೀಣ ಭಾಗದಲ್ಲಿನ ವಿಶೇಷವೆಂದರೆ ತೊಟ್ಟಿ ಮನೆಗಳು, ಕಂಬದ ಮನೆಗಳು, ಹೆಂಚಿನ ಮನೆಗಳು.

ಹಸಿರಿನ ನಡುವೆ ಇರುವ ಮಲೆನಾಡಿನ ಮನೆಗಳನ್ನು ನೋಡುವುದೇ ಒಂದು ಸೊಬಗು. ಈ ಮನೆಗಳು ಅಲಂಕಾರವಿಲ್ಲದೆಯೂ ‘ಸಹಜ ಸುಂದರಿ’ಯಂತೆ ಕಂಗೊಳಿಸುತ್ತವೆ. ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕೆನಿಸುತ್ತದೆ. ಮನೆಯ ಆ ತಂಪಿಗೆ, ಆ ಮೌನಕ್ಕೆ ಮನ ಶರಣಾಗಿ ಅಲ್ಲೇ ಇದ್ದು ಬಿಡೋಣ ಎಂದು ಅನಿಸುತ್ತದೆ.

ವಿಶಾಲ ಹಜಾರ, ಕಲ್ಲಿನ ಅಥವಾ ಮರದ ಕೆತ್ತನೆ ಕಂಬಗಳನ್ನು ಹೊಂದಿದ, ಸಿಮೆಂಟನ್ನು ಕಡಿಮೆ ಬಳಸಿ ಮರದಿಂದಲೇ ನಿರ್ಮಿಸಿದ ಮಲೆನಾಡಿನ ಮನೆಗಳು ಇಂದು ಆಧುನಿಕತೆಯ ಪ್ರಭಾವಕ್ಕೆ ಸಿಲುಕಿ ಕಣ್ಮರೆಯಾಗುವ ಹಂತದಲ್ಲಿವೆ. ಇಂತಹ ಒಂದು ಅಪರೂಪದ ಬೃಹತ್ ಮನೆಯನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ಕಾಂತಬೈಲಿನಲ್ಲಿ ಕಾಣಬಹುದು. ಇದರ ನಿರ್ಮಾತೃ ಕಾಂತಬೈಲು ಕೃಷ್ಣ ಭಟ್ಟರು. ಈಗ ಅವರಿಗೆ 89 ವರ್ಷ. ಅವರು ಸುಮಾರು 45 ವರ್ಷಗಳ ಹಿಂದೆ ಇದನ್ನು ನಿರ್ಮಿಸಿದರು. ಆಗ ತಗುಲಿದ ವೆಚ್ಚ ರೂ 35 ಸಾವಿರ ಮಾತ್ರ!

ನಿಲೇಶ್ವರದ ಬಡಗಿ
ಈ ಮನೆ 25 ಕೋಲು (ಒಂದು ಕೋಲು ಅಂದರೆ ಎರಡೂವರೆ ಅಡಿ) ಉದ್ದ, 15 ಕೋಲು ಅಗಲ ಇದೆ. ಅಡಿಪಾಯ ಹಾಕುವವರನ್ನು ಪಕ್ಕದ ತಮಿಳುನಾಡಿನ ಕೊಯಮತ್ತೂರಿನಿಂದ ಹಾಗೂ ಬಡಗಿಗಳನ್ನು ಕೇರಳದ ನೀಲೇಶ್ವರದಿಂದ ಕರೆತರಿಸಲಾಗಿತ್ತು ಎಂಬುದು ಗಮನಾರ್ಹ ಅಂಶ.

ನಾಲ್ಕು ಸಾವಿರ ಕರ್ಗಲ್ಲು ಹಾಗೂ 20 ಸಾವಿರ ಕೆಂಪು ಕಲ್ಲುಗಳನ್ನು (ಲ್ಯಾಟರೇಟ್‌ ಟೈಲ್‌) ಬಳಸಿಕೊಳ್ಳಲಾಗಿದೆ. ಆಗ ಬಡಗಿಯ ಸಂಬಳ ದಿನಕ್ಕೆರೂ 8ರಿಂದ ರೂ 9 ಇತ್ತು. ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆ ಬಂದರೆ ಸಂಜೆ 6ರ ವರೆಗೂ ದುಡಿಯುತ್ತಿದ್ದರು. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಮಾತ್ರ ಒಂದು ಗಂಟೆ ಬಿಡುವು ಇರುತ್ತಿತ್ತು.

ಒಂದು ಕೆಂಪು ಕಲ್ಲಿನ ಬೆಲೆ 50 ಪೈಸೆ. ಅದು 12 ಅಂಗುಲ ಉದ್ದ, 5 ಅಂಗುಲ ದಪ್ಪ ಇದೆ. ಅಂದಿನ ಕಲ್ಲಿನ ಗಾತ್ರಕ್ಕೆ ಹೋಲಿಸಿದರೆ ಇಂದಿನ ಕಲ್ಲು ಇಟ್ಟಿಗೆಗೆ ಸಮ ಎಂದು ನೆನಪಿಸಿಕೊಳ್ಳುತ್ತಾರೆ ಕೃಷ್ಣ ಭಟ್.

ಹಳ್ಳಿಯಲ್ಲಿನ ಮನೆಗಳಿಗೂ ನಗರದ ಗೃಹಗಳಿಗೂ ಇರುವ ಬಹು ಮುಖ್ಯ ವ್ಯತ್ಯಾಸವೆಂದರೆ ನಿವೇಶನದ ವಿಸ್ತಾರ. ನಗರದಲ್ಲಿ ನಿವೇಶನಗಳು ಅಡಿಗಳ ಲೆಕ್ಕದಲ್ಲಿ ವಿಸ್ತಾರದಲ್ಲಿ ಬಹಳ ಮಿತಿಯಲ್ಲಿದ್ದರೆ, ಹಳ್ಳಿಯ ಮನೆಗಳಿಗೆ ಜಾಗದ ಸಮಸ್ಯೆ ಅಷ್ಟಾಗಿ ಇರುವುದಿಲ್ಲ. ಅದರಲ್ಲೂ ಹೊಲದಲ್ಲೋ, ತೋಟದಲ್ಲಿಯೋ  ಕೃಷಿ ಕುಟುಂಬಗಳು ನಿರ್ಮಿಸಿಕೊಳ್ಳುವ ಮನೆಗಳಿಗಂತೂ ಜಾಗ ಎಂಬುದು ಒಂದು ಸಮಸ್ಯೆ ಆಲ್ಲ.

ಸ್ವತಃ ಇಟ್ಟಿಗೆ ಸಿದ್ಧಪಡಿಸಿಕೊಂಡು, ಸ್ಥಳದಲ್ಲೇ ದೊರೆಯುವ ಮರ, ಮರಳು ಮೊದಲಾದ ಕಚ್ಚಾಪದಾರ್ಥಗಳನ್ನು ಬಳಸಿಕೊಂಡು ವಿಶಾಲವಾಗಿಯೇ ಕಟ್ಟಡ ನಿರ್ಮಿಸಿಕೊಳ್ಳುತ್ತಾರೆ. ಅದರಲ್ಲೂ ಕಡಿಮೆ ಕೂಲಿಗೆ ಕಟ್ಟಡ ಕಾರ್ಮಿಕರು ಲಭ್ಯವಿರುವುದೂ ಸಹ ನಿರ್ಮಾಣ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ. ಹಾಗಾಗಿ ಇಲ್ಲಿ ಮನೆಗಳನ್ನು ಬಹಳ ವಿಶಾಲವಾಗಿಯೇ ನಿರ್ಮಿಸಲಾಗುತ್ತದೆ.

ಮನೆ ಕರ್ಗಲ್ಲಿನ ಅಡಿಪಾಯವನ್ನು ಹೊಂದಿದ್ದು ಸಂಪೂರ್ಣವಾಗಿ ಕೆಂಪು ಕಲ್ಲಿನಿಂದ ಕಟ್ಟಲಾಗಿದೆ. ಮುಂಭಾಗದಲ್ಲಿ ಚಾವಡಿ, ಅದಕ್ಕೆ ಹೊಂದಿಕೊಂಡಂತೆಯೇ ಮಲಗುವ ಕೋಣೆ,  ಮಧ್ಯಭಾಗದಲ್ಲಿ ಕೈಸಾಲೆ, ಪಕ್ಕದಲ್ಲಿ ದೇವರ ಕೋಣೆ, ಹಿಂಭಾಗದಲ್ಲಿ ಊಟದ ಹಾಲ್, ಎರಡು ಅಡುಗೆ ಕೋಣೆ, ಸ್ಟೋರ್ ರೂಂ, ಸ್ನಾನದ ಮನೆ ಇವೆ.

ಕಿಟಕಿ- ಬಾಗಿಲುಗಳಿಗೆ ತೇಗದ ಮರವನ್ನೇ ಬಳಸಲಾಗಿದೆ. ಆ ತೇಗದ ಮರಗಳ ಅದೇ ಜಾಗದಲ್ಲಿ ಬೆಳೆದವು ಎಂಬುದು ವಿಶೇಷ.

16 ಬಾಗಿಲು, 27 ಕಿಟಕಿ!
ಒಟ್ಟು 16 ಬಾಗಿಲುಗಳು ಹಾಗೂ 27 ಕಿಟಕಿಗಳು ಇವೆ. ಮನೆಯ ಒಳಗೆ ಗಾಳಿ, ಬೆಳಕು ಸಾಕಷ್ಟಿದೆ. ಚಾವಣಿಗೆ ಮಂಗಳೂರು ಹೆಂಚು ಹೊದಿಸಲಾಗಿದೆ. ಅದರ ಕೆಳಕ್ಕೆ ಮರದ ಹಲಗೆಗಳ ಮುಚ್ಚಿಗೆ ಇದೆ.

ಮನೆಯ ನಾಲ್ಕು ಸುತ್ತಲೂ ಜಗಲಿ, ವೃತ್ತಾಕಾರದಲ್ಲಿ ಕಡೆದು ನಿಲ್ಲಿಸಿದ ಕೆಂಪು ಕಲ್ಲಿನ ಕಂಬಗಳ ಸಾಲು ಮನೆಯ ಆಕರ್ಷಣೆ ಹೆಚ್ಚಿಸಿವೆ. ಇತ್ತೀಚೆಗಷ್ಟೇ ಒಳ ಕೋಣೆಗಳಿಗೆ ಕೆಂಪು ಕಾವಿಯ ಬಣ್ಣವನ್ನು ಬಳಿಯಲಾಗಿದೆ. ಹೊರ ಜಗಲಿಗೆ ಮಣ್ಣಿನ ನೆಲವಿದ್ದು ಸೆಗಣಿಯಿಂದ ಸಾರಿಸುತ್ತಾರೆ.

ಮಾಳಿಗೆ ಮೇಲೊಂದು ಅಟ್ಟ
ಕೃಷ್ಣ ಭಟ್ಟದ ಮನೆಗೆ ಮಾಳಿಗೆಯೂ ಇದೆ. ಅದರ ಮೇಲೆ ಸಣ್ಣ ಅಟ್ಟವೂ ಇದೆ. ಮಾಳಿಗೆಯಲ್ಲಿ ಹಾಸಿಗೆ-ಹೊದಿಕೆ -ದಿಂಬು, ಚಾಪೆ ಇತ್ಯಾದಿಗಳನ್ನು ಇಡುವ ಕೋಣೆ, ಎರಡು ದೊಡ್ಡ ಹಜಾರ, ಅಡಿಕೆ ಸಂಗ್ರಹಿಸಿ ಇಡಲೆಂದೇ ಪತ್ತಾಯ, ಉಪ್ಪಿನಕಾಯಿ, ತೆಂಗಿನೆಣ್ಣೆ, ಬೆಲ್ಲ ದಾಸ್ತಾನು ಇಡುವ ಹೊಗೆ ಅಟ್ಟ, ಅಲ್ಲದೆ ಅತಿಥಿಗಳಿಗಾಗಿ ಕೋಣೆಯೂ ಇದೆ.

ಮನೆಗೆ ತಾಗಿಕೊಂಡು ಹಿಂಭಾಗದಲ್ಲಿ ದೊಡ್ಡ ಕೊಟ್ಟಿಗೆ ಇದೆ. ಇದು ಸ್ನಾನದ ಕೋಣೆ, ಕೃಷಿ ಉಪಕರಣಗಳನ್ನು ಇರಿಸುವ ಕೋಣೆ, ಎರಡು ಸ್ನಾನ ಶೌಚದ ಮನೆ, ತರಕಾರಿ ಇಡುವ ಕೋಣೆ, ವಿಶೇಷ ದಿನಗಳಂದು ಅಡುಗೆ ಮಾಡುವ ಹಾಲ್, ಹಸು ಕಟ್ಟುವ ಕೊಟ್ಟಿಗೆಯ ವಿಶಾಲ ಜಾಗವನ್ನು ಹೊಂದಿದೆ. ಇದರ ಮೇಲೆ ತೆಂಗಿನಕಾಯಿ, ಒಣಹುಲ್ಲು ಸಂಗ್ರಹಿಸಿಡುವ ಅಟ್ಟವೂ ಇದೆ.

ಮನೆಯ ಮುಂದೆ ಬಲಭಾಗದಲ್ಲಿ ವಾಹನ ನಿಲ್ಲಿಸುವ ಪುಟ್ಟ ಕಟ್ಟಡವಿದೆ. ಇದರ ಒಂದು ಭಾಗದಲ್ಲಿ ಮಳೆಗಾಲಕ್ಕೆ ಬೇಕಾದ ಸೌದೆಯನ್ನು ದಾಸ್ತಾನು ಮಾಡಿದರೆ ಇನ್ನೊಂದರಲ್ಲಿ ಜೀಪ್ ನಿಲ್ಲಿಸುತ್ತಾರೆ. 

ವಿದ್ಯುತ್ ಸ್ವಾವಲಂಬನೆ
ಮನೆಯಲ್ಲಿ ಬೆಳಕಿಗಾಗಿ ಸೌರಶಕ್ತಿ ವ್ಯವಸ್ಥೆ ಮಾಡಲಾಗಿದೆ ಅಲ್ಲದೆ ಮನೆಯ ಮಗ್ಗಲಲ್ಲಿ ಹರಿಯುವ ಹಳ್ಳದ ನೀರಿಗೆ ಅಡ್ಡಲಾಗಿ ಜನರೇಟರ್ ಇಟ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುತ್ತಾರೆ. ಈ ವಿದ್ಯುತ್ ಮಳೆಗಾಲದಲ್ಲಿ ಮಾತ್ರ ಅಲ್ಲ ಕಡು ಬೇಸಿಗೆಯಲ್ಲೂ ಇರುತ್ತದೆ!

ಈ ಮನೆಯ ವಿಶೇಷವೆಂದರೆ ಬೇಸಿಗೆಯಲ್ಲಿ ಹೊರಗೆ ಎಷ್ಟೇ ಬಿಸಿಲಿದ್ದರೂ ಮನೆಯೊಳಗೆ ಮಾತ್ರ ಹಿತವಾದ ತಂಪು ವಾತಾವರಣ ಇರುತ್ತದೆ. ಇನ್ನೊಂದು ಅಚ್ಚರಿ ಎಂದರೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಮನೆಯ ಒಳಭಾಗದಲ್ಲಿ ಸಾಕಷ್ಟು ಬೆಚ್ಚಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT