ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು: ತುಂತುರು ಇದು ನೀರಹಾಡು

Last Updated 16 ಜುಲೈ 2016, 19:30 IST
ಅಕ್ಷರ ಗಾತ್ರ

ನಿಧಾನವಾಗಿ ಆಧುನಿಕತೆಗೆ ಹೊರಳುತ್ತಲೇ ತನ್ನ ಹೆಸರಿನಲ್ಲಿರುವ ‘ಹಳ್ಳಿ’ಯ ಅಸ್ಮಿತೆಯನ್ನು ಉಳಿಸಿಕೊಂಡಿರುವ ಮಲೆನಾಡಿನ ತೀರ್ಥಹಳ್ಳಿ ಎನ್ನುವ ಊರಿಗೆ ಈಗ ಕಾಲಿಟ್ಟರೆ ಮೈನಡುಗಿಸುವ ಉಡುರು ಚಳಿ, ಮಳೆ, ಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ. ಇದು ಮಳೆ ಮತ್ತೆ ಮತ್ತೆ ಸುರಿಯುವ ಕಾಲ. ಸೂರ್ಯನ ದರ್ಶನ ತೀರಾ ಅಪರೂಪ. ಮಳೆಯ ಅಬ್ಬರವನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡು ಬಂದರೆ ಪ್ರಕೃತಿಯೊಡಗಿನ ಒಡನಾಟ ಇನ್ನಷ್ಟು ಮತ್ತಷ್ಟು ಆಪ್ಯಾಯಮಾನ.

ತೀರ್ಥಹಳ್ಳಿ ಅಪ್ಪಟ ಮಲೆನಾಡಿನ ಸೆರಗು ಹೊದ್ದುಕೊಂಡ ಹಳ್ಳಿಗಳಲ್ಲೊಂದು. ಹೀಗಾಗಿ ಇಲ್ಲಿ ಸೂರುಗಳಡಿ ಇರುವ ಪ್ರವಾಸಿ ತಾಣಗಳ ಒಳಹೊಕ್ಕು ಮಾಹಿತಿ ಹುಡುಕಬೇಕಿಲ್ಲ. ‘ನೋಡಿ ಬರುವ’ ಸ್ಥಳಕ್ಕಿಂತ ಇಲ್ಲಿರುವುದು ಆಸ್ವಾದಿಸಬೇಕಾದ ತಾಣಗಳು. ಇದಕ್ಕೆ ಪ್ರಕೃತಿ ಸೊಬಗನ್ನು ಸವಿಯುವ ಆಸಕ್ತಿ ಮತ್ತು ಉತ್ಸಾಹದ ಜೊತೆ, ಬಿರುಮಳೆಯನ್ನು ಸಹಿಸಿಕೊಳ್ಳುವ ಸಹನೆ ಹಾಗೂ ಛಾತಿಯೂ ಬೇಕು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ಇಲ್ಲಿ ಪ್ರಸಿದ್ಧ ದೇವಸ್ಥಾನಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ ಮಳೆಸೋಕುವ ಕಾಲದಲ್ಲಿ ಪ್ರಕೃತಿ ಮತ್ತು ನಿಮ್ಮ ನಡುವಣ ಒಡನಾಟವೇ ಹೆಚ್ಚು ಆಪ್ತ.

ತೀರ್ಥಹಳ್ಳಿ ಸುತ್ತಮುತ್ತ ಸಾಕಷ್ಟು ಹೋಮ್‌ಸ್ಟೇಗಳಿವೆ. ನಿಮ್ಮ ಪ್ರವಾಸದ ಗುರಿಗಳಿಗೆ ಅನುಗುಣವಾಗಿ ಸೂಕ್ತ ಅನ್ನಿಸಿದ್ದನ್ನು ಆಯ್ದುಕೊಳ್ಳಬಹುದು.
ಪ್ರವಾಸದ ಆರಂಭಕ್ಕೆ ಯಾವುದೇ ಸದ್ದುಗದ್ದಲವಿಲ್ಲದ ಕುಪ್ಪಳ್ಳಿಯ ಕವಿಶೈಲ ಉತ್ತಮ ಆಯ್ಕೆ. ಕವಿಮನೆಯ ಒಳಹೊಕ್ಕು ನೋಡಬೇಕಾದರೆ ಬೆಳಿಗ್ಗೆ 9 ಗಂಟೆಯವರೆಗೆ ಕಾಯಬೇಕು. ವೇಳಾಪಟ್ಟಿಯಲ್ಲಿ ಬದಲಾವಣೆಗಳಿದ್ದರೆ ಸಂಜೆಯ ವೇಳೆಯನ್ನೂ ಆಯ್ದುಕೊಳ್ಳಬಹುದು. ಬೈಗಿನ ಕವಿಶೈಲ ಇನ್ನಷ್ಟು ಮುದ ನೀಡುತ್ತದೆ. ತೀರ್ಥಹಳ್ಳಿಯಿಂದ ಕೊಪ್ಪ ಮಾರ್ಗದಲ್ಲಿ 18 ಕಿ.ಮೀ. ದೂರವಷ್ಟೇ ಇರುವುದರಿಂದ ಪ್ರಯಾಣದ ಆಯಾಸವೂ ಆಗುವುದಿಲ್ಲ.

ಅಲ್ಲಿಂದ ಮರಳಿ ತೀರ್ಥಹಳ್ಳಿಗೆ ಬಂದು 18 ಕಿ.ಮೀ. ದೂರದ ಕವಲೇದುರ್ಗ ಕೋಟೆಯ ಹಾದಿ ಹಿಡಿಯಬಹುದು. ಕೆಳದಿ ಅರಸರ ಕಾಲದ ಇತಿಹಾಸದ ಕುರುಹುಗಳನ್ನು ಅಡಗಿಸಿಕೊಂಡ ಕವಲೇದುರ್ಗದ ಕೋಟೆಯ ಹಾದಿ ದುರ್ಗಮವೇನಲ್ಲ. ಮೇಲೆ ಹತ್ತುವ ಕಲ್ಲಿನ ದಾರಿ ತುಸು ಆಯಾಸ ಮೂಡಿಸಿದರೂ ಹಸಿರಿನ ಸಾಂಗತ್ಯ ಅದನ್ನು ಮರೆಸುತ್ತದೆ. ಮೋಡಗಳು ಬಂದು ಮುತ್ತಿಕ್ಕುವ ಹೊತ್ತು ಅನುಭವಿಸಿದಷ್ಟೂ ಸುಖ. ಸುತ್ತಲೂ ಹರಡಿರುವ ಹಸಿರು, ಒಂದು ಕಾಲದಲ್ಲಿ ಅದು ಭವ್ಯ ನಾಡಾಗಿತ್ತು ಎಂಬುದನ್ನು ಸೂಚಿಸುವ ಇತಿಹಾಸದ ಪಳೆಯುಳಿಕೆಗಳು ಇನ್ನಷ್ಟು ಹೊತ್ತು ಆ ಗಳಿಗೆಯನ್ನು ಸಂಭ್ರಮಿಸಬೇಕು ಎಂಬ ಬಯಕೆ ಮೂಡಿಸುತ್ತವೆ.

ಹೆಚ್ಚು ಕಾಲ ಅಲ್ಲಿಯೇ ಕಳೆಯಬೇಕು ಎಂಬ ಅಪೇಕ್ಷೆ ಹೊಂದಿರುವವರು ತೀರ್ಥಹಳ್ಳಿಯಿಂದಲೇ ಊಟ ಕಟ್ಟಿಸಿಕೊಂಡು ಹೋಗುವುದೊಳಿತು. ಕೋಟೆಯ ಹಾದಿಯ ಆರಂಭದಲ್ಲಿ ಚಿಕ್ಕ ಅಂಗಡಿ ಹೊರತುಪಡಿಸಿದರೆ ಬೇರೇನೂ ಅಲ್ಲಿ ಸಿಕ್ಕುವುದಿಲ್ಲ. ಸಂಜೆ ಐದರವರೆಗೂ ಅಲ್ಲಿ ಅಡ್ಡಾಡಲು ಅವಕಾಶವಿದೆ. ಸಮಯವಿದ್ದರೆ ವರಾಹಿ ಪ್ರಾಜೆಕ್ಟ್‌ ಮತ್ತು ಅದರ ಸಮೀಪದಲ್ಲಿ ಇರುವ, ಜೋಗಕ್ಕಿಂತಲೂ ಅತಿ ಎತ್ತರದಿಂದ ಜಲಧಾರೆ ಹರಿಸುವ ಕುಂಚಿಕಲ್‌ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು.

ಕವಲೇದುರ್ಗದಂತೆಯೇ ವಿಶಿಷ್ಟ ಅನುಭವ ನೀಡುವುದು ಕುಂದಾದ್ರಿ ಬೆಟ್ಟ. ತೀರ್ಥಹಳ್ಳಿಯಿಂದ ಆಗುಂಬೆ ಮಾರ್ಗದಲ್ಲಿ ಸುಮಾರು 20 ಕಿ.ಮೀ. ದೂರದಲ್ಲಿರುವ ಕುಂದಾದ್ರಿ ಸಹ ಐತಿಹಾಸಿಕ ಮಹತ್ವ ಪಡೆದಿರುವಂಥದ್ದು. ಕಿರಿದಾದ ರಸ್ತೆಯಲ್ಲಿ ಘಾಟಿಯನ್ನು ಹತ್ತುವಾಗ ಜಾಗರೂಕತೆ ಅವಶ್ಯ. ಕಡಿದಾದ ಬೆಟ್ಟದ ನೆತ್ತಿಯಲ್ಲಿ ಶತಮಾನಗಳ ಹಿಂದೆಯೇ ನಿರ್ಮಿಸಿರುವ ಜೈನಮಂದಿರ, ಅದರ ಪಕ್ಕದಲ್ಲೇ ಇರುವ ಕೊಳ ಅಚ್ಚರಿ ಮೂಡಿಸುತ್ತದೆ. ಅದಕ್ಕೂ ಮಿಗಿಲಾಗಿ ನಮ್ಮನ್ನು ಸೆಳೆಯುವುದು ಬೆಟ್ಟದ ತುದಿಯಿಂದ ಸುತ್ತಲೂ ಕಾಣುವ ದಟ್ಟ ಹಸಿರು. ನಮ್ಮ ಆಯತಪ್ಪುವಷ್ಟು ಜೋರಾಗಿ ಬೀಸುವ ಗಾಳಿಗೆ ಮೈಯೊಡ್ಡಿದರೆ ಆಹ್ಲಾದಕರ ಅನುಭವ. ಇನ್ನು ಅದರೊಟ್ಟಿಗೆ ಮಳೆ ಹನಿಗಳಂತೂ ಕಲ್ಲು ಬೀಸಿದಷ್ಟು ವೇಗವಾಗಿ ಅಪ್ಪಳಿಸುತ್ತವೆ. ಬೆಟ್ಟದ ಒಂದು ಭಾಗ ಬೃಹತ್‌ ಕಲ್ಲುಬಂಡೆಯ ಮೇಲೆ ನಿಂತಿದೆ. ಜಾರುವ ಅಪಾಯವಿರುವುದರಿಂದ ಈ ಕಲ್ಲಿನ ತುದಿಯಲ್ಲಿ ನಡೆಯುವಾಗ ಎಚ್ಚರಿಕೆ ಅತ್ಯಗತ್ಯ.

ದಕ್ಷಿಣದ ಚಿರಾಪುಂಜಿ ಎನಿಸಿರುವ ಆಗುಂಬೆಗೆ ಇಲ್ಲಿಂದ ಹೆಚ್ಚು ದೂರವಿಲ್ಲ. ಆದರೆ, ಸೂರ್ಯಾಸ್ತದ ದೃಶ್ಯವನ್ನು ವೀಕ್ಷಿಸಲು ಹೆಸರಾದ ಆಗುಂಬೆಯಲ್ಲಿ ಈ ವೇಳೆ ಸೂರ್ಯನ ದರ್ಶನವಾಗುವುದೇ ವಿರಳ. ಮೋಡ ತಬ್ಬಿಕೊಂಡ ರಸ್ತೆಯಲ್ಲಿ ಮುಂದೆ ಸಾಗುವುದೂ ಸುಲಭವಲ್ಲ. ಆದರೆ ‘ಆಗುಂಬೆಯಾ.... ಪ್ರೇಮಸಂಜೆಯಾ...’ ಎಂದು ಹಾಡುತ್ತಾ ಮೈಮರೆಯಲು ಅಡ್ಡಿಯಿಲ್ಲ. ಬರ್ಕಣ, ಒನಕೆ ಅಬ್ಬಿ, ಜೋಗಿಗುಂಡಿ, ಕೂಡ್ಲುತೀರ್ಥ ಹೀಗೆ ಅನೇಕ ಜಲಪಾತಗಳು ಆಗುಂಬೆಯ ದಟ್ಟಾರಣ್ಯದೊಳಗಿವೆ. ಮಳೆಗಾಲದಲ್ಲಿ ಈ ಜಲಪಾತಗಳ ಹತ್ತಿರ ಹೋಗುವುದು ಸುಲಭವಲ್ಲ. ಮೋಡ ಮುಸುಕಿದ ಕಾಡಿನೊಳಗಿರುವ ಜಲಧಾರೆಗಳು ದೂರದಿಂದ ಕಾಣುವುದೂ ಇಲ್ಲ. ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ‘ಮಾಲ್ಗುಡಿ ಡೇಸ್‌’ ಚಿತ್ರೀಕರಣ ನಡೆದ ಮನೆಯನ್ನು ನೋಡಿ ಆ ದಿನಗಳನ್ನು ನೆನಪಿಸಿಕೊಳ್ಳಬಹುದು. ಕತ್ತಲೇರುವ ಮುನ್ನ ತೀರ್ಥಹಳ್ಳಿಗೆ ಮರಳಿ ಬೇಸಗೆಯಲ್ಲಿ ಶಾಂತವಾಗಿ ಕಾಣಿಸುವ ತುಂಗೆಯ ರೌದ್ರಾವತಾರವನ್ನೂ ಕಣ್ತುಂಬಿಕೊಳ್ಳಬಹುದು. ಶೃಂಗೇರಿ ಶಾರದಾಂಬೆಯ ಸಾನ್ನಿಧ್ಯ ಇಲ್ಲಿಂದ 40 ಕಿ.ಮೀ ದೂರವಷ್ಟೇ.

ಕೊಡಚಾದ್ರಿಯ ಸೊಬಗು
ಪ್ರವಾಸದ ಎರಡನೇ ದಿನಕ್ಕೆ ಎರಡು ಸರಳ ಆಯ್ಕೆಗಳಿವೆ. ಮೊದಲ ದಿನದ ಪ್ರವಾಸ ಮುಗಿಸಿ ಸಂಜೆಯೇ ತೀರ್ಥಹಳ್ಳಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಸಾಗರಕ್ಕೆ ಕೋಣಂದೂರು–ಹುಂಚ ಮಾರ್ಗವಾಗಿ ತೆರಳಬಹುದು. ಅಥವಾ ಕೊಡಚಾದ್ರಿಗೆ ಒಂದು ದಿನವನ್ನು ಮೀಸಲಿಡಬಹುದು.

ತೀರ್ಥಹಳ್ಳಿಯಿಂದ 68 ಕಿ.ಮೀ ದೂರದಲ್ಲಿರುವ ಕೊಡಚಾದ್ರಿ ಬೆಟ್ಟ ಹೊಸನಗರ ತಾಲ್ಲೂಕಿಗೆ ಸೇರಿದೆ. ಕೊಡಚಾದ್ರಿಯ ತುದಿ ತಲುಪುದು ಹೆಚ್ಚು ಆಯಾಸ ಉಂಟುಮಾಡಬಹುದು. ಕಲ್ಲುಗಳೇ ತುಂಬಿರುವ ಅಲ್ಲಿನ ಕಡಿದಾದ ರಸ್ತೆಯಲ್ಲಿ ಸಾಮಾನ್ಯ ಕಾರುಗಳು ಸಂಚರಿಸುವುದು ಕಷ್ಟ. ಹೀಗಾಗಿ ಅಲ್ಲಿ ಸೇವೆ ನೀಡುವ ಜೀಪುಗಳನ್ನು ಅವಲಂಬಿಸಬೇಕಾಗುತ್ತದೆ. ದೇಹದಲ್ಲಿ ಕಸುವುಳ್ಳವರು ನಡೆದೇ ಹತ್ತಬಹುದು.

ಕೊಡಚಾದ್ರಿಯ ಬೆಟ್ಟದ ತುದಿಯಲ್ಲಿ ಅಗತ್ಯ ಸೌಲಭ್ಯಗಳು ದೊರಕುವುದರಿಂದ ಪರದಾಡಬೇಕಿಲ್ಲ. ಅಲ್ಲಿ ಸರ್ವಜ್ಞಪೀಠ, ಚಿಕ್ಕಪುಟ್ಟ ಜಲಧಾರೆಗಳು, ಮಲೆನಾಡಿನ ಮೋಹಕತೆಯನ್ನು ತುಂಬಿಕೊಳ್ಳಲೆಂದೇ ನಿಸರ್ಗ ಕಡೆದಂತಿರುವ ‘ವ್ಯೂ ಪಾಯಿಂಟ್‌’ಗಳು ಪ್ರವಾಸದ ಕ್ಷಣಗಳನ್ನು ಸಾರ್ಥಕಗೊಳಿಸುತ್ತವೆ. ಭಕ್ತಿಯ ಆಲಯ ಬಯಸುವವರಿಗೆ ಕೊಲ್ಲೂರಿನ ಮೂಕಾಂಬಿಕೆಗೆ ಅಲ್ಲಿಂದ 21 ಕಿ.ಮೀ. ಮಾತ್ರ ಅಂತರ. ಎರಡು ದಿನದ ಪ್ರವಾಸವನ್ನು ಹೀಗೆ ಹಿತಮಿತದ ಓಡಾಟದ ನಡುವೆ ಆನಂದಿಸಬಹುದು.

ಮೊದಲೇ ಹೇಳಿದಂತೆ ಪ್ರವಾಸದ ವೇಳಾಪಟ್ಟಿಯನ್ನು ಬದಲಿಸಿಕೊಳ್ಳಲೂ ಅವಕಾಶವಿದೆ. ಒಂದು ದಿನದ ಪ್ರವಾಸವನ್ನು ಸಾಗರ ತಾಲ್ಲೂಕಿನಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗಾಗಿ ವಿನಿಯೋಗಿಸಬಹುದು. ವಿಶ್ವವಿಖ್ಯಾತ ಜೋಗ ಜಲಪಾತ ಎಲ್ಲ ಕಾಲದ ಪ್ರವಾಸಿಗರ ಆಯ್ಕೆ. ಮಳೆಗಾಲದಲ್ಲಂತೂ ಪ್ರವಾಸಿಗರಿಂದ ಕಿಕ್ಕಿರಿದಿರುತ್ತದೆ. ಇನ್ನು ಹೊನ್ನೆಮರಡು, ಕೆಳದಿ, ಇಕ್ಕೇರಿ, ಸಿಗಂದೂರು, ವರದಾಮೂಲ, ಲಿಂಗನಮಕ್ಕಿ ಅಣೆಕಟ್ಟು ಹೀಗೆ ಹೊತ್ತೇರಿದರೂ ಮುಗಿಯಲಾರದಷ್ಟು ತಾಣಗಳಿವೆ.

ವಾಹನದಲ್ಲಿ ತೆರಳುವಾಗ ಜಾಗರೂಕತೆ ಅವಶ್ಯ. ಕಿರಿದಾದ, ತಿರುವುಗಳಿರುವ ಮತ್ತು ಹೊಂಡಗುಂಡಿಯಿಂದ ಕೂಡಿದ ರಸ್ತೆಗಳು, ಮಳೆಗಾಲದಲ್ಲಿ ಇನ್ನಷ್ಟು ಅಪಾಯಕಾರಿಯಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT