ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯಾ ತಡೆಗೆ ಸಹಕರಿಸಲು ಮನವಿ

ಮನೆಯ ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಜನಜಾಗೃತಿ ಜಾಥಾ
Last Updated 30 ಜೂನ್ 2015, 9:38 IST
ಅಕ್ಷರ ಗಾತ್ರ

ಗದಗ: ಮಲೇರಿಯಾ ಉಲ್ಬಣಗೊಳ್ಳುವ ಮುನ್ನವೇ ತಡೆಗಟ್ಟಲು ಸುತ್ತಮುತ್ತಲ ಪರಿಸರ ಶುಚಿಯಾಗಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಾಂತವ್ವ ದಂಡಿನ ಸಲಹೆ ನೀಡಿದರು.  

ನಗರದಲ್ಲಿ ಸೋಮವಾರ ಎಂ.ವಿ.ಮೂಲಿಮನಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ  ಮಟ್ಟದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜನಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಹೆಚ್ಚಾಗಿ ಮಲೇರಿಯಾ ಹರಡುತ್ತದೆ. ಪರಿಸರ ಸ್ವಚ್ಛವಾಗಿ ಇಟ್ಟುಕೊಂಡರೆ ಬಹುತೇಕ ಕಾಯಿಲೆಗಳನ್ನು ತಡೆಗಟ್ಟ­ಬಹುದು. ಮಲೇರಿಯಾ ನಿಯಂತ್ರಣ ವಿಧಾನ ಹಾಗೂ ರೋಗದ ಬಗ್ಗೆ ಅರಿತು ತಡೆಗಟ್ಟಲು ಸ್ವಯಂ ಪ್ರೇರಿತವಾಗಿ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುನಿತಾ ಹಳ್ಳೆಪ್ಪನವರ ಮಾತನಾಡಿ, ಅಶುದ್ಧ ವಾತಾವರಣ ಇರುವ ಪ್ರದೇಶ­ದಲ್ಲಿ ಮಲೇರಿಯಾ ಹೆಚ್ಚು ಕಂಡು ಬರುವ ಕಾರಣ,  ಪರಿಸರ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದರು.

ಡಿವಿಬಿಸಿಓನ ಸಹಾಯ ಕೀಟಶಾಸ್ತ್ರಜ್ಞೆ ಅನ್ನಪೂರ್ಣ ಶೆಟ್ಟರ ಮಾತನಾಡಿ, ಮಲೇರಿಯಾ ಪೂರ್ವ ಕಾಲದ ರೋಗವಾಗಿದೆ. ಮಲೇರಿಯಾ ರೋಗ ಅನಾಫಿಲಿಸ್‌ ಹೆಣ್ಣು ಸೊಳ್ಳಿಯಿಂದ ಹರಡುತ್ತದೆ. ಎಲ್ಲ ಸೊಳ್ಳೆಗಳಿಂದ ರೋಗ ಬರುವುದಿಲ್ಲ. ಕೆಲವೊಂದು ರೋಗ­ವಾಹಕ ಸೊಳ್ಳೆಗಳು ಕಚ್ಚುವು­ದರಿಂದ ರೋಗ ಹರಡುತ್ತವೆ.  ಸೊಳ್ಳೆಗಳ ಆಯಸ್ಸು 30 ರಿಂದ 40 ದಿನ. ಅಷ್ಟರಲ್ಲಿಯೇ ರೋಗ ಹರಡಿಸುವ ಶಕ್ತಿಯನ್ನು ಸೊಳ್ಳೆ­ಗಳು ಹೊಂದಿವೆ ಎಂದು ನುಡಿದರು.

ತಲೆ ನೋವು, ಚಳಿ ಜ್ವರ, ಮೈ ಕೈ ನೋವು ಲಕ್ಷಣ ಕಂಡು ಬಂದಲ್ಲಿ ಕೂಡಲೇ ರಕ್ತಪರೀಕ್ಷೆ ಮಾಡಿಸಬೇಕು. ಬೇವಿನ ಸೊಪ್ಪಿನ ಹೊಗೆ ಹಾಕಬೇಕು, ಮನೆಯಲ್ಲಿ ಸೊಳ್ಳೆ ಪರದೆ ಕಟ್ಟಿಕೊಂಡು ಮಲಬೇಕು ಹಾಗೂ ಮೈ ತುಂಬ ಬಟ್ಟೆ ಧರಿಸುವುದರಿಂದ ಸೊಳ್ಳೆಗಳಿಂದ ಬರುವ ರೋಗಗಳಿಂದ ದೂರವಿರಬ­ಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರೆಡ್ಡಿ ಮಾತನಾಡಿದರು. ವಿದ್ಯಾರ್ಥಿನಿ ಕಾವ್ಯಾ ಹಿರೇಮಠ ಪ್ರಾರ್ಥಿಸಿದರು, ರವೀಂದ್ರ ಬಾಪರೆ ಸ್ವಾಗತಿಸಿದರು, ಕಾಲೇಜಿನ ಆಡಳಿತ ನಿರ್ವಾಹಕ ಆರ್.ವಿ.ಕರಡಿ ನಿರೂಪಿಸಿದರು. ಡಾ.ಪಿ.ಎಚ್.ಕಬಾಡಿ, ಡಾ.ಎಚ್.ಸಿದ್ದಪ್ಪ, ಡಾ.ಸತೀಶ ಬಸರೀಗಿಡದ, ಡಾ.ಎಸ್.ಎಸ್.­ನೀಲಗುಂದಿ, ಎಂ.ವಿ.ಮೂಲಿಮನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಸರೋಜಿನಿ ಅಂಗಡಿ ಹಾಜರಿದ್ದರು.

ಮೀನನ್ನು ನೀರಿನಲ್ಲಿ ಬಿಡುವು­ದರಿಂದ ಲಾರ್ವಾ ಹಾಗೂ ಸೊಳ್ಳೆ ಮರಿಗಳನ್ನು ನಿಯಂತ್ರಿಸಬಹುದು. ಸೊಳ್ಳೆ ನಿಯಂತ್ರಣಕ್ಕೆ ಜನರು ಸೂಕ್ತ ಕ್ರಮ ಕೈಗೊಳ್ಳಬೇಕು
ಅನ್ನಪೂರ್ಣ ಶೆಟ್ಟರ,
ಸಹಾಯಕ ಕೀಟಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT