ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇರಿಯಾ ಪತ್ತೆಗೆ ಸ್ಮಾರ್ಟ್‌ ಉಪಕರಣ

Last Updated 23 ಅಕ್ಟೋಬರ್ 2014, 14:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರ ತಂಡ ಮಲೇರಿಯಾ ರೋಗ ಪತ್ತೆ ಮಾಡುವ ಪುಟ್ಟ ಉಪಕರಣವೊಂದನ್ನು ಕಂಡು ಹಿಡಿದಿದೆ. ಈ ಉಪ­ಕರಣ ಕೇವಲ 30 ನಿಮಿಷಗಳಲ್ಲಿ ರೋಗವನ್ನು ನಿಖರವಾಗಿ ಪತ್ತೆ ಮಾಡಿ ಫಲಿತಾಂಶ ನೀಡಲಿದೆ.

ದೆಹಲಿಯಲ್ಲಿ ಇತ್ತೀಚೆಗೆ ಜೈವಿಕ ತಂತ್ರಜ್ಞಾನ ಕೈಗಾರಿಕೆ ಸಂಶೋಧನಾ ಸಹಾಯಕ ಪರಿಷತ್‌ (ಬಿಐ­ಆ­ರ್‌ಎಸಿ) ಏರ್ಪಡಿಸಿದ್ದ ಹೊಸ ಅನ್ವೇಷಣೆಗಳ ಪ್ರದರ್ಶನದಲ್ಲಿ ಈ ಉಪಕರಣಕ್ಕೆ ‘ಉತ್ತಮ ಆವಿಷ್ಕಾರ’ ಪ್ರಶಸ್ತಿ ಸಹ ಲಭಿಸಿದೆ. ಐಐಎಸ್‌ಸಿಯ ಅನ್ವಯಿಕ ಭೌತಶಾಸ್ತ್ರ ವಿಭಾ­ಗದ ಸಹಾಯಕ ಪ್ರಾಧ್ಯಾಪಕ ಡಾ. ಸಾಯಿ ಶಿವ ಗೊರ್ತಿ ಅವರ ನೇತೃತ್ವದ ಸಂಶೋಧಕರ ತಂಡ ಈ ಉಪ­­ಕರಣವನ್ನು ಶೋಧಿಸಿದೆ. ಸಂಸ್ಥೆಯ ಆವರಣ­­ದಲ್ಲಿರುವ ರಾಬರ್ಟ್‌ ಬಾಷ್‌ ಸೈಬರ್‌ ಫಿಸಿಕಲ್‌ ಸಿಸ್ಟಮ್ಸ್‌ ಕೇಂದ್ರದಲ್ಲಿ (ಆರ್‌ಬಿಸಿಸಿಪಿಎಸ್‌) ಅದನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಸಂಶೋಧನೆಗೆ ಬಿಐಆರ್‌ಎಸಿ ಧನ ಸಹಾಯ ನೀಡಿತ್ತು. ಯಾವ ಸಂಸ್ಥೆಗಳಿಗೆ ಈ ಧನ ಸಹಾಯ ಕೊಡಬೇಕು ಎಂಬುದನ್ನು ನಿರ್ಧರಿಸಲು ಸುದೀರ್ಘ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಮೌಲ್ಯ ಮಾಪ­ನದ ವರದಿ ಆಧಾರಿಸಿ ಆರ್ಥಿಕ ನೆರವು ಘೋಷಿ­ಸಲಾಗುತ್ತದೆ.

ಸೊಳ್ಳೆಗಳಿಂದ ಹರಡುವ ಮಲೇರಿಯಾ ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಕಾಡುತ್ತಿರುವ ಪ್ರಮುಖ ಕಾಯಿಲೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ದಾಖಲೆಗಳ ಪ್ರಕಾರ, 2012ನೇ ಸಾಲಿನಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯೋಮಾನದ 4.82 ಲಕ್ಷ ಮಕ್ಕಳು ಈ ಕಾಯಿ­ಲೆ­­ಯಿಂದ ಸಾವನ್ನಪ್ಪಿದ್ದಾರೆ. ಅಂದರೆ ಮಲೇ­ರಿಯಾ ರೋಗವು ಪ್ರತಿ ನಿಮಿಷಕ್ಕೆ ಒಂದು ಮಗುವನ್ನು ಬಲಿ ಪಡೆದಿದೆ ಎಂದರ್ಥ.
2011ರಲ್ಲಿ ನಮ್ಮ ದೇಶದಲ್ಲಿ 13 ಲಕ್ಷ ಮಲೇ­ರಿಯಾ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 754 ಜನ ಸಾವನ್ನಪ್ಪಿದ್ದರು. ಮಲೇರಿಯಾದ ಗಾಂಭೀರ್ಯವನ್ನು ಅರಿಯಲು ಇದಕ್ಕಿಂತ ಬೇರೆ ಅಂಕಿ–ಸಂಖ್ಯೆಗಳು ಬೇಕೆ?

ಡಾ. ಗೊರ್ತಿ ಅವರ ತಂಡ ಮಲೇರಿಯಾ ಪತ್ತೆ ಉಪಕರಣ ಶೋಧಿಸಲು ಕಾಯಿಲೆಯೊಂದಿಗೆ ತಳಕು ಹಾಕಿಕೊಂಡ ಈ ಗಂಭೀರ ಸಮಸ್ಯೆಗಳೇ ಕಾರಣ. ಒಂದು ತೊಟ್ಟು ರಕ್ತದ ಮಾದರಿ ಪಡೆದು ಅದ­­ರಲ್ಲಿನ ಜೀವಕೋಶಗಳ ವಿಶ್ಲೇಷಣೆ ನಡೆಸಿ, ಮಲೇ­ರಿಯಾ ಬಾಧಿತ ಕಣಗಳು ಅದರಲ್ಲಿವೆಯೇ ಎನ್ನುವು­ದನ್ನು ಪತ್ತೆ ಮಾಡುವುದು ಈ ಕಡಿಮೆ ವೆಚ್ಚದ ಅದರ ಕೆಲಸ. ಅಂಗೈಯಲ್ಲಿ ಹಿಡಿಯಲು ಸಾಧ್ಯ­ವಿರುವ ಪುಟ್ಟ ಗಾತ್ರ ಉಪಕರಣ ಅದಾಗಿದೆ.

‘ಸಂಪೂರ್ಣ ಸ್ವಯಂಚಾಲಿತವಾದ ಈ ಉಪ­ಕರಣದ ಕಾರ್ಯವೈಖರಿ ನೋಡಿ ನಮಗೆ ತುಂಬಾ ಖುಷಿಯಾಗಿದೆ. ವೈದ್ಯಕೀಯ ಅಗತ್ಯಗಳನ್ನು ಪೂರೈ­ಸ­ಬಲ್ಲ ಈ ಉಪಕರಣ ನಿಖರ ಫಲಿತಾಂಶವನ್ನೂ ನೀಡಲಿದೆ. ಆಸ್ಪತ್ರೆಗಳಲ್ಲಿ ಅತ್ಯಂತ ಮಹತ್ವದ ಸಾಧನ ಇದಾಗಲಿದೆ’ ಎಂದು ಹೇಳುತ್ತಾರೆ ಆರ್‌ಬಿ­ಸಿ­­ಸಿಪಿಎಸ್‌ನ ಹೆಲ್ತ್‌ಕೇರ್‌ ವಿಭಾಗದ ಮುಖ್ಯಸ್ಥ­ರಾದ ಡಾ. ಪರಮ ಪಾಲ್‌.

ಭಾರತ ಹಳ್ಳಿಗಳ ರಾಷ್ಟ್ರ. ಪ್ರತಿಯೊಂದು ಹಳ್ಳಿ­ಯಲ್ಲಿ ಸಮರ್ಪಕ ಆರೋಗ್ಯ ವ್ಯವಸ್ಥೆ ಈಗಲೂ ಬಹುದೊಡ್ಡ ಸವಾಲಾಗಿದೆ. ರೋಗ ಪತ್ತೆಗಾಗಿ ಹಳ್ಳಿ­ಗಳ ಜನ ನಗರಗಳಿಗೆ ಅಲೆಯುವುದು ಅನಿ­ವಾರ್ಯ­ವಾಗಿದೆ. ರಕ್ತದ ಮಾದರಿ ಪಡೆದು ಸೂಕ್ಷ್ಮದರ್ಶಕದಲ್ಲಿ ಅದರ ವಿಶ್ಲೇಷಣೆ ನಡೆಸಿ, ವರದಿ ನೀಡಲು ಪ್ರಯೋಗಾಲಯದಲ್ಲಿ ಒಂದು ದಿನವೇ ವ್ಯಯವಾಗುತ್ತದೆ. ಇದರಿಂದ ಚಿಕಿತ್ಸೆ ನಿಧಾನ­ವಾಗುತ್ತಿದೆ. ರೋಗಪತ್ತೆ ಹಾಗೂ ಚಿಕಿತ್ಸೆ­ಯಲ್ಲಿ ಆಗುವ ವಿಳಂಬದಿಂದ ಹಳ್ಳಿಗರ ‘ದುಡಿಮೆ ದಿನಗಳು’ ಇನ್ನಷ್ಟು ಕಡಿಮೆ ಆಗುತ್ತಿವೆ.
‘ನಮ್ಮ ಸಂಶೋಧನೆಯು ಬಹು ತಂತ್ರಜ್ಞಾನ­ವನ್ನು ಒಳಗೊಂಡಿದೆ. ಇಮೇಜ್‌ ಪ್ರೊಸೆಸಿಂಗ್‌, ಮೈಕ್ರೊಫ್ಲ್ಯೂಡಿಕ್ಸ್‌ ಮತ್ತು ಮೈಕ್ರೊಸ್ಕೊಪಿ ತಂತ್ರ­ಜ್ಞಾನದ ಮೂಲಕ ರಕ್ತದ ಕಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ಅದೊಂದು ಉಪಕರಣ ರೂಪದ ಪ್ರಯೋಗಾಲಯವೇ ಆಗಿದೆ’ ಎನ್ನುತ್ತಾರೆ ಗೊರ್ತಿ.

‘ಸಾಂಪ್ರದಾಯಿಕ ಪರೀಕ್ಷಾ ವಿಧಾನಕ್ಕೆ ಹೋಲಿಸಿ­ದರೆ ಈ ಉಪಕರಣದಲ್ಲಿ ತಪಾಸಣೆ ನಡೆಸಲು ತುಂಬಾ ಕಡಿಮೆ ಪ್ರಮಾಣದ ರಕ್ತದ ಮಾದರಿ ಸಾಕು. ಸಾಮಾನ್ಯವಾಗಿ 200 ನ್ಯಾನೊ ಲೀಟರ್‌ ರಕ್ತವನ್ನು ಪಡೆಯಲಾಗುತ್ತದೆ. ಅದರಲ್ಲಿ ಹತ್ತು ಲಕ್ಷಕ್ಕೂ ಅಧಿಕ ರಕ್ತದ ಕಣಗಳು ಇರುತ್ತವೆ. ಪ್ರತಿಯೊಂದು ಕಣವನ್ನೂ ವಿಶ್ಲೇಷಣೆಗೆ ಒಳಪಡಿ­ಸುವ ಈ ಉಪಕರಣ, ಅದರಲ್ಲಿರುವ ಮಲೇ­ರಿಯಾ ಬಾಧಿತ ಕಣಗಳನ್ನು ಪತ್ತೆ ಮಾಡುತ್ತದೆ. ಅದರ ಪರದೆ ಮೇಲೆ ಕಣಗಳ ಚಿತ್ರಣವನ್ನು ತೆರೆದಿಡುತ್ತದೆ. ರೋಗಿಯು ಮಲೇರಿಯಾದಿಂದ ಬಳಲುತ್ತಿರುವನೋ ಹೇಗೋ ಎಂಬುದು ತಕ್ಷಣವೇ ತಿಳಿದುಬಿಡುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಸ್ಮಾರ್ಟ್‌ ಫೋನ್‌ ರೂಪದ ಈ ಉಪಕರಣದ ನಿರ್ವಹಣೆಗೆ ಯಾವ ತಂತ್ರಜ್ಞರ ಅಗತ್ಯವೂ ಇಲ್ಲ. ಎಲ್ಲವನ್ನೂ ಅದು ಸ್ವಯಂಚಾಲಿತವಾಗಿ ಮಾಡ­ಲಿದೆ. ರಕ್ತದ ಕಣಗಳನ್ನು ವಿಶ್ಲೇಷಿಸಿ ಫಲಿತಾಂಶ ಹೇಳಲು ಉಪಕರಣಕ್ಕೆ 30 ನಿಮಿಷ ಬೇಕು. ಬೇರೆ ರೋಗಗಳ ಪತ್ತೆಗೆ ಬೇಕಾದ ಬದಲಾವಣೆಯನ್ನು ಸಹ ಈ ಉಪಕರಣದಲ್ಲಿ ಮಾಡಲು ಸಾಧ್ಯ’ ಎಂದು ಗೊರ್ತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT