ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ ವಾಪಸ್‌ ಕಳಿಸಲು ಬ್ರಿಟನ್‌ಗೆ ಕೇಂದ್ರ ಪತ್ರ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉದ್ಯಮಿ ವಿಜಯ ಮಲ್ಯ ಅವರನ್ನು ಗಡಿಪಾರು ಮಾಡಿ ಭಾರತಕ್ಕೆ ವಾಪಸ್‌ ಕಳುಹಿಸುವಂತೆ  ವಿದೇಶಾಂಗ ಸಚಿವಾಲಯ ಗುರುವಾರ ಬ್ರಿಟನ್‌ ಸರ್ಕಾರಕ್ಕೆ ಪತ್ರ ಬರೆದಿದೆ.

ಈಗ ಸ್ಥಗಿತಗೊಂಡಿರುವ ಮಲ್ಯ ಮಾಲೀಕತ್ವದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ವಿವಿಧ ಬ್ಯಾಂಕುಗಳಿಗೆ ₹9,400 ಕೋಟಿಗೂ ಹೆಚ್ಚು ಸಾಲ ಬಾಕಿ ಉಳಿಸಿಕೊಂಡಿದೆ. ಮಲ್ಯ ಪಾಸ್‌ಪೋರ್ಟ್‌ ರದ್ದುಪಡಿಸಲಾಗಿದ್ದು ಅವರ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಲಾಗಿದೆ. ಮಲ್ಯ ಅವರನ್ನು ಭಾರತಕ್ಕೆ ಕಳಿಸುವಂತೆ ಬ್ರಿಟನ್‌ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ದೆಹಲಿಯಲ್ಲಿರುವ ಬ್ರಿಟನ್‌ ಹೈಕಮಿಷನ್‌ಗೆ ಪತ್ರ ಬರೆಯಲಾಗಿದೆ. ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ಎದುರಿಸುವುದಕ್ಕೆ ಅವರು ಭಾರತದಲ್ಲಿ ಇರುವುದು ಅಗತ್ಯ ಎಂದು ತಿಳಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನ್‌ ಕೂಡ ಅಲ್ಲಿನ ವಿದೇಶಾಂಗ ಮತ್ತು ಕಾಮನ್ವೆಲ್ತ್‌ ಕಚೇರಿಗೆ ವಿನಂತಿ ಸಲ್ಲಿಸಲಿದೆ ಎಂದು ಅವರು ಹೇಳಿದ್ದಾರೆ. ಐಡಿಬಿಐನಿಂದ ಪಡೆದ ₹900 ಕೋಟಿ ಸಾಲವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಬಗ್ಗೆ ಮಲ್ಯ ಮೇಲಿರುವ ಆರೋಪವನ್ನು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ನೋಟಿಸ್‌ ನೀಡಿದ್ದರೂ ಮಲ್ಯ ಹಾಜರಾಗಿರಲಿಲ್ಲ. ಹಾಗಾಗಿ ಅವರ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಲಾಗಿದೆ. ಇ.ಡಿಯ ವಿನಂತಿಯ ಮೇರೆಗೆ ಈಗ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ. ಮಾರ್ಚ್‌ 2ರಂದು ಭಾರತ ತೊರೆದಿರುವ ಮಲ್ಯ ಬ್ರಿಟನ್‌ನಲ್ಲಿ ಇದ್ದಾರೆ.

ಕಿಂಗ್‌ಫಿಷರ್‌ ಲಾಂಛನ ಹರಾಜಿಗೆ
ಮುಂಬೈ (ಪಿಟಿಐ):
 ವಿಜಯ ಮಲ್ಯ ಅವರ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಮುಂಬೈನಲ್ಲಿರುವ ಕೇಂದ್ರ ಕಚೇರಿಯನ್ನು ಹರಾಜು ಮಾಡುವ ಯತ್ನ ವಿಫಲವಾದ ಬೆನ್ನಿಗೇ ಆ ಸಂಸ್ಥೆಯ ಲಾಂಛನ ಮತ್ತು ಒಂದು ಬಾರಿ ಪ್ರಸಿದ್ಧವಾಗಿದ್ದ ‘ಫ್ಲೈ ದ ಗುಡ್‌ ಟೈಮ್ಸ್‌’ ಘೋಷಣೆಯನ್ನು ಹರಾಜು ಮಾಡಲು ಬ್ಯಾಂಕುಗಳ ಒಕ್ಕೂಟ ನಿರ್ಧರಿಸಿದೆ.  ಶನಿವಾರ ಹರಾಜು ನಡೆಯಲಿದೆ.

ಹಾರಾಟ ಮಾದರಿಗಳು, ಲಾಂಛನ, ಘೋಷಣೆ, ಫ್ಲೈಯಿಂಗ್‌ ಬರ್ಡ್‌ ಉಪಕರಣಗಳು ಸೇರಿ ₹366 ಕೋಟಿ ಬೆಲೆ ನಿಗದಿ ಮಾಡಲಾಗಿದೆ. ಸಾಲ ಪಡೆಯುವಾಗ ಟ್ರೇಡ್‌ ಮಾರ್ಕ್‌, ಲಾಂಛನ ಇತ್ಯಾದಿಗಳನ್ನು ಭದ್ರತೆಯಾಗಿ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಇರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT