ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರದಲ್ಲಿ ಗೊಂಬೆಗಳ ಹಬ್ಬ

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದಸರಾ, ದೀಪಾವಳಿ ಎಂದಕೂಡಲೇ ನೆನಪಾಗುವುದು ಬಣ್ಣ ಬಣ್ಣದ ಗೊಂಬೆಗಳು ಹಾಗೂ ವಿವಿಧ ಆಕೃತಿಯ ದೀಪಗಳು. ಹಬ್ಬಕ್ಕಾಗಿ ನಾನಾ ರೀತಿಯ ಗೊಂಬೆ ಮತ್ತು ದೀಪಗಳಿಗಾಗಿ ನಗರದಲ್ಲಿರುವ ಹಲವು ಮಾರುಕಟ್ಟೆಗಳನ್ನು ಸುತ್ತು ಹೊಡೆಯಬೇಕಾಗುತ್ತದೆ. ಜನಜಂಗುಳಿಯ ನಡುವೆ ಶಾಪಿಂಗ್‌ ಮಾಡುವುದನ್ನು ನೆನಪಿಸಿಕೊಳ್ಳುವುದಕ್ಕೂ ಭಯವಾಗುತ್ತದೆ.

ನಗರದ ಮಲ್ಲೇಶ್ವರದಲ್ಲಿರುವ ಕಮಲಿನಿ ಕ್ರಾಫ್ಟ್‌ ಸ್ಟೋರ್‌ ದಸರಾ ಮತ್ತು ದೀಪಾವಳಿ ಹಬ್ಬಗಳ ಅಂಗವಾಗಿ ‘ಗೊಂಬೆಗಳ ಹಬ್ಬ’ವನ್ನು ಆಚರಿಸುತ್ತಿದೆ. ಗೊಂಬೆ ಹಬ್ಬದಲ್ಲಿ ದೇಶದ ವಿವಿಧ ಭಾಗಗಳಲ್ಲಿ ತಯಾರಾಗುವ ವಿಶೇಷವಾದ ಗೊಂಬೆಗಳು, ದೀಪಗಳು, ಮನೆಯ ಅಲಂಕಾರದ ವಸ್ತುಗಳು, ಮೊಗಲರ ಕಾಲದಲ್ಲಿ ಬಳಸುತ್ತಿದ್ದ ಗಂಜೀಫಾ ಕಾರ್ಡ್‌ಗಳು ಲಭ್ಯವಿದೆ. ಆಟವಾಡುವ ಈ ಕಾರ್ಡ್‌ಗಳ ಮೇಲೆ ಚಿತ್ರಗಳನ್ನು ಬರೆದು ಆಕರ್ಷಕವಾಗಿ ಕಾಣುವಂತೆ ಮಾಡಲಾಗಿರುತ್ತದೆ. ಈ ಎಲ್ಲ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಕ್ರಾಫ್ಟ್‌ ಕೌನ್ಸಿಲ್‌ ಆಫ್‌ ಕರ್ನಾಟಕದ ಅಂಗ ಸಂಸ್ಥೆಯಾಗಿರುವ ಕಮಲಿನಿ ಸ್ಟೋರ್ಸ್‌ ಪ್ರತಿವರ್ಷ ದಸರಾ ಹಾಗೂ ದೀಪಾವಳಿ ಹಬ್ಬದ ಅಂಗವಾಗಿ ಗೊಂಬೆ ಹಬ್ಬವನ್ನು ಆಚರಿಸುತ್ತದೆ. ಇದರಲ್ಲಿ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ಕಲಾವಿದರು ತಯಾರಿಸುವ ಕಲಾಕೃತಿ, ಪೇಂಟಿಂಗ್‌, ವಿವಿಧ ರೀತೀಯ ಗೊಂಬೆಗಳು, ದೀಪಗಳು ಸೇರಿದಂತೆ ಮನೆಯನ್ನು ಅಲಂಕರಿಸುವ ವಸ್ತುಗಳನ್ನು ಖರೀದಿಸಲಾಗುತ್ತದೆ. ನಂತರ ಅದನ್ನು ಮಾರಾಟ ಮೇಳದಲ್ಲಿ ಪ್ರದರ್ಶಿಸುತ್ತದೆ.

‘ಬಡ ಕಲಾವಿದರನ್ನು ದಲ್ಲಾಳಿಗಳ ಹಾವಳಿಯಿಂದ ತಪ್ಪಿಸುವ ಸಲುವಾಗಿ ಕಲಾಕೃತಿಗಳನ್ನು ಕಲಾವಿದರಿಂದಲೇ ನೇರವಾಗಿ ಖರೀದಿಸಲಾಗುತ್ತದೆ. ನಂತರ ಅವುಗಳನ್ನು ಈ ಮೇಳದಲ್ಲಿ ಮಾರಾಟ ಮಾಡಲಾಗುತ್ತದೆ. ಇಲ್ಲಿ ಪ್ರದರ್ಶಿಸಲಾಗುವ ಕಲಾಕೃತಿಗಳಲ್ಲಿ ಹೆಚ್ಚಿನವು ಹೊರಗೆ ಮಾರುಕಟ್ಟೆಯಲ್ಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಅಲ್ಲದೆ. ಮೇಳದಲ್ಲಿ ಒಮ್ಮೆ ಮಾರಾಟವಾದ ನಂತರ ಮತ್ತೆ ಮುಂದಿನ ವರ್ಷವೇ ಕಲಾವಿದರು ಆ ಕಲಾಕೃತಿಗಳನ್ನು ತಯಾರಿಸಿ ತಂದುಕೊಡುತ್ತಾರೆ’ ಎನ್ನುತ್ತಾರೆ ಗೊಂಬೆ ಹಬ್ಬದ ಆಯೋಜಕರಾದ ಪದ್ಮಜ. 

ಕೊಪ್ಪಳದ ಬಳಿ ಇರುವ ಸಣ್ಣ ಹಳ್ಳಿಯಾದ ಕಿನ್ನಾಳದಿಂದ ದೇವರ ಮರದ ಗೊಂಬೆಗಳನ್ನು ತರಿಸಲಾಗುತ್ತದೆ. ಇಲ್ಲಿ ದೇವರ ಗೊಂಬೆಗಳನ್ನು ಮಾಡಲು ಸ್ವಲ್ಪ ಮೃದುವಾದ ಮರ ಬಳಸಲಾಗುತ್ತದೆ. ಅವುಗಳಿಗೆ ಉಪಯೋಗಿಸುವ ಬಣ್ಣವೂ ನೈಸರ್ಗಿಕವಾಗಿರುತ್ತದೆ. ಇದು ಕಿನ್ನಾಳ ಗೊಂಬೆಗಳ ವಿಶೇಷ. ಇಲ್ಲಿಂದ ತರುವ ಗೊಂಬೆಗಳಲ್ಲಿ 2 ಅಥವಾ 2.5 ಅಡಿ ಎತ್ತರದ ಹನುಮಾನ್‌, ಗರುಡ, ಜಯವಿಜಯ, ಶಿವ, ಪಾರ್ವತಿ, ಗ್ರಾಮದೇವತೆಗಳ ಮರದ ಗೊಂಬೆಗಳು ವಿಶೇಷ. ಇಂತಹ ಗೊಂಬೆಗಳು ಪ್ರತಿವರ್ಷ 2–3 ಪೀಸ್‌ ಮಾತ್ರ ಬಂದಿವೆ ಎಂದು ವಿವರಣೆ ನೀಡುತ್ತಾರೆ ಅವರು. 

ಆಂಧ್ರಪ್ರದೇಶದ ಕೊಂಡಪಲ್ಲಿಯಿಂದ ತರಕಾರಿಗಳಿಂದ ತಯಾರಿಸಿದ ಬಣ್ಣಗಳನ್ನು ಬಳಸಿರುವ ಗೊಂಬೆಗಳನ್ನು ತರಿಸಲಾಗುತ್ತದೆ. ಕೊಂಡಪಲ್ಲಿಯ ಗೊಂಬೆಗಳಲ್ಲಿ ದಶಾವತಾರ ತುಂಬಾ ಪ್ರಸಿದ್ಧ. ಇವುಗಳೊಂದಿಗೆ ಹಳ್ಳಿಗಳ ಚಿತ್ರಣವನ್ನು ಕಣ್ಮುಂದೆ ತರುವ ಗೊಂಬೆಗಳು, ಕಲಾ ಮಕರಿಗಳು ಇಲ್ಲಿ ದೊರೆಯಲಿದೆ.

ಇಷ್ಟೇ ಅಲ್ಲದೆ ಅಸ್ಸಾಂನ ಬಿದಿರಿನ ಬಾಸ್ಕೆಟ್‌, ಜೈಪುರದ ಮೆಟಲ್‌ ಕ್ರಾಫ್ಟ್ಸ್‌, ತಮಿಳುನಾಡಿನ ಚೆಟ್ಟಿನಾಡಿನ ಬಾಸ್ಕೆಟ್‌, ಆಂಧ್ರಪ್ರದೇಶದ ಚರ್ಮದ ಗೊಂಬೆಗಳು, ಚೆನ್ನಪಟ್ಟಣ, ಹಳೇಬೀಡಿನ ಗೊಂಬೆಗಳು, ಬೆಂಗಳೂರಿನ ತೊಗಲು ಗೊಂಬೆಗಳು ಈ ಪ್ರದರ್ಶನದಲ್ಲಿವೆ. ಕಳೆದ ಶನಿವಾರದಿಂದ (ಸೆ.12) ಪ್ರಾರಂಭವಾಗಿರುವ ಈ ಮಾರಾಟ ಮೇಳ ದೀಪಾವಳಿ ಹಬ್ಬದವರೆಗೂ ಮುಂದುವರೆಯಲಿದೆ. ಪ್ರದರ್ಶನದಲ್ಲಿ ₨ 120ಕ್ಕೆ ಮೇಲ್ಪಟ್ಟ ಗೊಂಬೆಗಳು ಹಾಗೂ ರೂ 50ಕ್ಕಿಂತ ಮೇಲ್ಪಟ್ಟ ದರದಲ್ಲಿ ದೀಪಗಳು ಲಭ್ಯ.

ಮಾಹಿತಿಗೆ: ನಂ. 37, ಶ್ರೀ ಭೂಮಾ, 17ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು. ದೂರವಾಣಿ ಸಂಖ್ಯೆ: 080 23567470.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT