ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆಗಳ ಫಲಕಗಳಿಗೂ ಜಾಹೀರಾತು ತೆರಿಗೆ

Last Updated 9 ಅಕ್ಟೋಬರ್ 2015, 19:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಳಿಗೆಗಳ ಹೊರಗೆ ಪ್ರದರ್ಶಿಸುವ ಫಲಕಗಳಿಗೂ (ಸೈನೇಜ್‌) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾಹೀರಾತು ತೆರಿಗೆ ವಿಧಿಸಲು ನಿರ್ಧರಿಸಿದೆ.

ಹೆಚ್ಚುವರಿಯಾದ ಈ ಮೂಲದಿಂದ ಕೋಟ್ಯಂತರ ರೂಪಾಯಿ ವರಮಾನ ಸಂಗ್ರಹವಾಗುವ ನಿರೀಕ್ಷೆ ಇದೆ. ಬಿಬಿಎಂಪಿ ಜಾಹೀರಾತು ವಿಭಾಗದ ಅಧಿಕಾರಿಗಳು ಶಾಂತಿನಗರ ವಾರ್ಡ್‌ನ ಬ್ರಿಗೇಡ್‌ ಹಾಗೂ ಎಂ.ಜಿ. ರಸ್ತೆಗಳಲ್ಲಿ ಈಗಾಗಲೇ ತೆರಿಗೆ ಸಂಗ್ರಹ ಕಾರ್ಯಾಚರಣೆ ಆರಂಭಿಸಿದ್ದಾರೆ.

ವ್ಯಾಪಾರಿಗಳಿಂದ ಕೆಲವೆಡೆ ಈ ನಡೆಗೆ ವಿರೋಧ ವ್ಯಕ್ತವಾಗಿದೆ. ಆದರೆ, ಪಟ್ಟು ಬಿಡದ ಬಿಬಿಎಂಪಿ ಅಧಿಕಾರಿಗಳು ತೆರಿಗೆ ಕಟ್ಟದಿದ್ದರೆ ಫಲಕಗಳನ್ನು ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದು, ಹಣ ಪಾವತಿಗೆ ಕಾಲಾವಕಾಶ ಕೊಟ್ಟಿದ್ದಾರೆ.

ಜಾಹೀರಾತು ವರಮಾನದಲ್ಲಿ ಸೋರಿಕೆ ಆಗುತ್ತಿರುವ ಸಂಬಂಧ ಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ.ಮಥಾಯ್‌ ಅವರು ಹಿಂದಿದ್ದ ಆಡಳಿತಾಧಿಕಾರಿಗಳು ಮತ್ತು ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಯಾವುದಾದರೂ ಒಂದು ವಾರ್ಡ್‌ನ ಉದಾಹರಣೆ ಇಟ್ಟುಕೊಂಡು ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು ಎಂದು ಆಡಳಿತಾಧಿಕಾರಿ ಸೂಚಿಸಿದ್ದರು.

ಶಾಂತಿನಗರ ವಾರ್ಡ್‌ನ ಜಾಹೀರಾತು ವರಮಾನದ ಕುರಿತಂತೆ ಮಥಾಯ್‌ ಅವರು ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದರು. ವಾರ್ಡ್‌ನಲ್ಲಿ ₹ 4 ಕೋಟಿಯಷ್ಟು ತೆರಿಗೆ ಸಂಗ್ರಹಿಸಲು ಅವಕಾಶವಿದೆ ಎನ್ನುವುದು ಅದರಲ್ಲಿದ್ದ ಪ್ರಮುಖ ಅಂಶವಾಗಿತ್ತು. ವರದಿಯಲ್ಲಿ ಉಲ್ಲೇಖಿಸಿದಂತೆ ಎಲ್ಲ ಮೂಲಗಳಿಂದ ಜಾಹೀರಾತು ತೆರಿಗೆ ಸಂಗ್ರಹಿಸಲು ವಿಶೇಷ ಕಾರ್ಯಾಚರಣೆ ನಡೆಸಬೇಕು ಎಂದು ಆಯುಕ್ತರು ಜಾಹೀರಾತು ವಿಭಾ ಗದ ಅಧಿಕಾರಿಗಳಿಗೆ ಆದೇಶಿಸಿದ್ದರು.

ಮಥಾಯ್‌ ಅವರು ನೀಡಿದ್ದ ವರದಿ ಗಳ ಪ್ರಕಾರ ನಗರದಲ್ಲಿ ಕಳೆದ ಹತ್ತು ವರ್ಷಗಳ ದಂಡ ಸೇರಿದಂತೆ ₹ 6,500 ಕೋಟಿಯಷ್ಟು ಜಾಹೀರಾತು ತೆರಿಗೆ ಸಂಗ್ರಹಿಸಲು ಅವಕಾಶವಿದೆ. ಶಾಂತಿ ನಗರ ವಾರ್ಡ್‌ನಲ್ಲಿ ಪೂರ್ಣಪ್ರಮಾಣದ ತೆರಿಗೆ ಸಂಗ್ರಹಿಸಲು ಯಶಸ್ವಿಯಾದರೆ ಉಳಿದ ವಾರ್ಡ್‌ ಗಳಲ್ಲೂ ಈ ಕಾರ್ಯಾಚರಣೆಯನ್ನು ವಿಸ್ತರಿಸಲಾಗುತ್ತದೆ. ‘ಕಳೆದ ವರ್ಷ ₹ 22 ಕೋಟಿ ಜಾಹೀರಾತು ತೆರಿಗೆ ಸಂಗ್ರಹವಾಗಿತ್ತು. ಈ ವರ್ಷದಲ್ಲಿ ₹ 50 ಕೋಟಿ ಸಂಗ್ರಹಿಸಲು ಯತ್ನಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಹೋರ್ಡಿಂಗ್‌ಗಳ ಕಡೆಗೆ ಗಮನ ಕೇಂದ್ರೀಕರಿಸಿದ್ದರಿಂದ ಮಾಹಿತಿ ಫಲಕ ಗಳ ತೆರಿಗೆ ಆಕರಣೆಯತ್ತ ಬಿಬಿಎಂಪಿ ಇದುವರೆಗೆ ಚಿತ್ತ ಹರಿಸಿರಲಿಲ್ಲ. ಜಾಹೀರಾತು ನಿಯಮಾವಳಿ ಪ್ರಕಾರ, ಪೊಲೀಸ್‌ ಬ್ಯಾರಿಕೇಡ್‌, ಬಸ್‌ ಹಾಗೂ ಆಟೊರಿಕ್ಷಾ ಮೇಲಿನ ಜಾಹೀ ರಾತುಗಳಿಗೂ ತೆರಿಗೆ ಪಡೆಯಲು ಅವಕಾಶವಿದೆ. ಈ ಮೂಲಗಳಿಂದ ತೆರಿಗೆ ಸಂಗ್ರಹ ಮಾಡಲಾಗಿಲ್ಲ. ಹೋರ್ಡಿಂಗ್‌ ಜತೆಗೆ ಉಳಿದ ಮೂಲಗಳಿಂದಲೂ ತೆರಿಗೆ ಸಂಗ್ರಹಕ್ಕೆ ಈಗ ಯೋಜನೆ ರೂಪಿಸಲಾಗಿದೆ.

‘ಮಳಿಗೆಗಳಲ್ಲಿ ಪ್ರದರ್ಶಿಸಿದ ಮಾಹಿತಿ ಫಲಕಗಳಿಗೆ ತೆರಿಗೆ ಕಟ್ಟಬೇಕು ಎಂಬ ಸೂಚನೆಯನ್ನು ಈಗಾಗಲೇ ವ್ಯಾಪಾರಿಗಳಿಗೆ ನೀಡಲಾಗಿದೆ. ಬಸ್‌ ಹಾಗೂ ಬ್ಯಾರಿಕೇಡ್‌ ಮೇಲೆ ಪ್ರದರ್ಶಿ ಸಲಾದ ಜಾಹೀರಾತುಗಳ ಮೇಲಿನ ತೆರಿಗೆ ಪಾವತಿ ಮಾಡಲು ಸಂಬಂಧಿಸಿದ ಇಲಾಖೆಗಳಿಗೆ ಆಯುಕ್ತರು ಪತ್ರ ಬರೆಯಲಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಜಾಹೀರಾತು ವಿಭಾಗ ಈಗ ಆನ್‌ಲೈನ್‌
ಜಾಹೀರಾತು ವಿಭಾಗದ ಎಲ್ಲ ಪ್ರಕ್ರಿಯೆಗಳನ್ನು (ನೋಂದಣಿ, ನವೀಕರಣ, ಶುಲ್ಕ ಪಾವತಿ) ಆನ್‌ಲೈನ್‌ ಮೂಲಕವೇ ಪೂರೈಸುವಂತಹ ವ್ಯವಸ್ಥೆ ಪಾಲಿಕೆಯಲ್ಲಿ ಜಾರಿಗೆ ಬಂದಿದೆ. ಬಸ್‌ ಶೆಲ್ಟರ್‌ ಹಾಗೂ ಕಂಬಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಇನ್ನುಮುಂದೆ ಇ–ಟೆಂಡರ್‌ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ.

ಹೋರ್ಡಿಂಗ್‌ಗಳ ನೋಂದಣಿ ಹಾಗೂ ನವೀಕರಣ ಮಾಡುವ ಪ್ರಕ್ರಿಯೆ ವಲಯ ಮಟ್ಟದಲ್ಲಿ ನಡೆಯಲಿದೆ. ನೋಂದಣಿಗೆ ಬಂದ ಅರ್ಜಿಗಳ ವಿಲೇವಾರಿಯನ್ನು ಸಕಾಲ ಕಾಯ್ದೆ ವ್ಯಾಪ್ತಿಗೆ ತರಲಾಗಿದ್ದು, 15 ದಿನಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ.

ಅಂಗಡಿ ಮುಂದೆ ಪ್ರದರ್ಶಿಸುವ ಜಾಹೀರಾತುಗಳಿಗೆ ಸ್ವಯಂ ಘೋಷಿತ ಪದ್ಧತಿಯಲ್ಲಿ ಆನ್‌ಲೈನ್‌ ಮೂಲಕವೇ ತೆರಿಗೆ ಪಾವತಿಸಲು ಸೂಚಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ಪ್ರತಿಯೊಬ್ಬ ನಾಗರಿಕರೂ ತಮ್ಮ ಆಸ್ತಿಯ ವ್ಯಾಪ್ತಿಯಲ್ಲಿ ಹೊಂದಿರುವ ಜಾಹೀರಾತು ಫಲಕಗಳ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ. ಮಾಹಿತಿ ನೀಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT