ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಕೊರತೆ: ಜನ-ಜಾನುವಾರುತತ್ತರ

Last Updated 7 ಜುಲೈ 2012, 10:45 IST
ಅಕ್ಷರ ಗಾತ್ರ

ಹೊಸದುರ್ಗ ತಾಲ್ಲೂಕಿಲ್ಲಿ ಮಳೆ ಬಾರದೆ ಬರದ ಛಾಯೆ  ಆವರಿಸಿದ್ದು, ಬಿತ್ತಿದ ಬೆಳೆ ಕೈಗೆ ಸಿಗದೆ ಕಂಗಾಲಾಗಿರುವ ರೈತರು ಮುಂದೇನು ಎಂದು ಚಿಂತೆಗೀಡಾಗಿದ್ದಾರೆ.

ಮುಂಗಾರು ಸಮಯದಲ್ಲಿ ಸದಾ ಚಟುವಟಿಕೆಯಿಂದ ಇರುತ್ತಿದ್ದ ರೈತರು, ಈ ಬಾರಿ ಮಳೆಯಿಲ್ಲದೆ ಹೊಲದಲ್ಲಿ ಕೆಲಸವಿಲ್ಲದೆ ಊರಿನಲ್ಲೇ ಕಾಲ ಕಳೆಯುವಂತಾಗಿದೆ.

ತಾಲ್ಲೂಕಿನಲ್ಲಿ 8,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಹೆಸರು ಶೇ 99ರಷ್ಟು ಒಣಗಿಹೋಗಿದೆ. ಎಳ್ಳು ಬೆಳೆಯಂತೂ ಸಂಪೂರ್ಣವಾಗಿ ಒಣಗಿದೆ. ಉತ್ತಮ ಮುಂಗಾರು, ಫಸಲು ನಿರೀಕ್ಷೆಯಲ್ಲಿದ್ದ ರೈತರು ಬಿತ್ತನೆಗಾಗಿ ಮಾಡಿದ ಸಾವಿರಾರು ರೂಪಾಯಿ ಸಾಲ ತೀರಿಸಲು ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾರೆ.

ಉಳುಮೆ, ಬಿತ್ತನೆ, ಕಳೆ ತೆಗೆಯುವುದು... ಹೀಗೆ ಸದಾ ಚಟುವಟಿಕೆಯಿಂದಿರಬೇಕಿದ್ದ ಈ ದಿನಗಳಲ್ಲಿ ರೈತರು ಗ್ರಾಮದ ಅರಳಿಕಟ್ಟೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದೆ ಹೋದಲ್ಲಿ ಕೃಷಿ ಕಾರ್ಮಿಕರು ಗುಳೇ ಹೋಗಬೇಕಾಗುತ್ತದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ರಮೇಶ್.

ಮಳೆಯಿಲ್ಲದೆ ಜಾನುವಾರುಗಳಿಗೆ ಮೇವು ಸಿಗದಂತಾಗಿದೆ. ಕೆರೆ ಕಟ್ಟಗಳಲ್ಲಿ ನೀರು ಬತ್ತಿದ್ದು, ಅಂತರ್ಜಲಮಟ್ಟ ಕುಸಿದಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಪಣಿಸುತ್ತದೆ ಎನ್ನುತ್ತಾರೆ ಕಸಬಾ ಹೋಬಳಿಯ ರೈತ ಸಿದ್ದರಾಮಪ್ಪ.

ಕಳೆದ ಸಾಲಿನಲ್ಲಿ ಅಲ್ಪ ಸ್ವಲ್ಪ ಬೆಳೆ ತೆಗೆದಿದ್ದ ರೈತರು ಜಾನುವಾರಿಗೆ  ಸಂಗ್ರಹಿಸಿದ್ದ ಮೇವು ಈಗ ಸಂಪೂರ್ಣ ಖಾಲಿ ಆಗುತ್ತಾ ಬಂದಿದೆ. ಮಳೆಯಾಗಿದ್ದರೆ ಹೊಲದಲ್ಲಿ ಹಸಿರುವ ಮೇವು ದೊರೆಯುತ್ತಿತ್ತು. ಮಳೆರಾಯನ ಅವಕೃಪೆಯಿಂದಾಗಿ ಹೊಲದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ. ಬದುಗಳೆಲ್ಲಾ ಒಣಗಿಹೋಗಿವೆ. ದನಕರುಗಳನ್ನು ಪಾಲನೆ ಮಾಡುವುದು ಕಷ್ಟ ಸಾಧ್ಯವಾಗಿದೆ. ಜಾನುವಾರು ಮಾರಾಟ ಮಾಡುವುದೇ ಮುಂದಿನ ದಾರಿ ಎನ್ನುತ್ತಾರೆ ರೈತ ನಾಗರಾಜ್.

ಹಸಿರಿನಿಂದ ಕಂಗೊಳಿಸಬೇಕಿದ್ದ ಜಮೀನುಗಳು ಬಯಲಿನಂತೆ ಆಗಿವೆ. ಏಪ್ರಿಲ್‌ನಲ್ಲಿ  ಬಿದ್ದ ಅಲ್ಪ ಮಳೆಯಲ್ಲಿ ಜಮೀನನ್ನು ಬಿತ್ತನೆಗೆ ಹದಮಾಡಿಕೊಂಡಿದ್ದ ರೈತರು, ಮಳೆ ಬಾರದ ಕಾರಣ ಕೃಷಿ ಪರಿಕರಗಳನ್ನು ಮೂಲೆಗಿಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT