ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಅತಿಥಿ ಹಾವು

Last Updated 22 ಜೂನ್ 2016, 19:30 IST
ಅಕ್ಷರ ಗಾತ್ರ

ಕಾಫಿ ಮಾಡಲು ಅಡುಗೆ ಮನೆಗೆ ಹೋದಾಗ ನಾಗರಹಾವು ಬುಸುಗುಟ್ಟುತ್ತಾ ಸ್ವಾಗತ ಕೋರಿದರೆ, ವಾಷಿಂಗ್‌ ಮೆಷಿನ್‌ ಬಾಗಿಲು ತೆಗೆದಾಗ ಘಟಸರ್ಪ ಹೆಡೆ ಎತ್ತಿದರೆ, ಶೌಚಗೃಹದ ಕಮೋಡ್‌ನಲ್ಲಿ ಉರಗ ಅಡಗಿದ್ದರೆ... ಮಳೆಗಾಲದಲ್ಲಿ ಇಂಥ ಆತಂಕ ಸಹಜ.

ಹಾವುಗಳು ಜೀವ ಜಗತ್ತಿನ ಪ್ರಮುಖ ಕೊಂಡಿ. ಕೇವಲ ಭಯ ಅಥವಾ ಸ್ವಾರ್ಥದಿಂದ ಅವುಗಳ ಸಾವಿಗೆ ಮುನ್ನುಡಿ ಬರೆಯವುದು ಅರಿಯದ ಆಪತ್ತಿಗೆ ಆಹ್ವಾನ ನೀಡಿದಂತೆ. ಮಳೆಗಾಲದಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಸಹಜ ಪ್ರಕ್ರಿಯೆ.

ಬೆಳಿಗ್ಗೆ ಎದ್ದು ಕಾಫಿ ಮಾಡಲು ಅಡುಗೆ ಮನೆಗೆ ಹೋದಾಗ ಬುಸುಗುಡುವ ನಾಗರಹಾವು ಸ್ವಾಗತ ಕೋರಿದರೆ, ಬಟ್ಟೆ ತೊಳೆಯಲು ವಾಷಿಂಗ್‌ ಮಷಿನ್‌ ಹೆಡೆಬಿಚ್ಚಿ ನಿಂತ ನಾಗಪ್ಪ ಕಂಡರೆ, ನಿತ್ಯಕರ್ಮ ಮುಗಿಸಲು ಶೌಚಗೃಹಕ್ಕೆ ಹೋದಾಗ ಕಮೋಡ್‌ನಲ್ಲಿ ಹಾವು ಕಂಡರೆ...

ಅಬ್ಬಾ! ಇಂಥ ಸನ್ನಿವೇಶಗಳನ್ನು ನೆನೆಸಿಕೊಳ್ಳಲೂ ಭಯಾನಕ. ಓದೋಕೆ ಮೈಜುಮ್ಮೆನಿಸುತ್ತದೆ. ನಿಜವಾಗಿ ಅನುಭವಕ್ಕೆ ಬಂದರೆ ಎಂಥ ಧೈರ್ಯಶಾಲಿಗೂ ಒಂದು ಕ್ಷಣ ಏನೂ ತೋಚದಂತಾಗುತ್ತದೆ.

ಇಷ್ಟೇ ಅಲ್ಲ ಮನೆಗಳ ಅಂಗಳದಲ್ಲಿ, ನಿಂತಿರುವ ಬೈಕ್‌ನಲ್ಲಿ, ಕಾರಿನ ಎಂಜಿನ್‌ನಲ್ಲಿ, ಚಪ್ಪಲಿ ಸ್ಟ್ಯಾಂಡ್ ಹಾಗೂ ಶೂಗಳ ಒಳಗೆ ಹೀಗೆ ಎಲ್ಲಿ ಬೆಚ್ಚಗಿನ ವಾತಾವರಣ ಹಾಗೂ ಗಲಾಟೆ ಇಲ್ಲದ ಸ್ಥಳ ಇರುವುದೋ ಅಲ್ಲೆಲ್ಲಾ ಹಾವುಗಳು ಕಾಣಿಸಿಕೊಳ್ಳುತ್ತಿವೆ.

ಎಲ್ಲೆಲ್ಲೂ ಹಾವುಗಳು
ಜಯನಗರ, ಜೆ.ಪಿ.ನಗರ, ನಾಗರಬಾವಿ, ರಾಜರಾಜೇಶ್ವರಿನಗರ, ವೈಟ್‌ಫೀಲ್ಡ್‌, ಹಲಸೂರು, ಎಂ.ಜಿ.ರಸ್ತೆ, ಹೆಬ್ಬಾಳ, ಹೆಣ್ಣೂರು ಬಂಡೆ, ಕೆಂಗೇರಿ, ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದಲ್ಲಿ ಹಾವುಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ. ನಗರದ ಇತರ ಪ್ರದೇಶಗಳಲ್ಲಿಯೂ ಹಾವು ಕಾಣಿಸಿಕೊಂಡ ಪ್ರಸಂಗಗಳು ಇವೆ.

ಮರಿ ಮಾಡುವ ಕಾಲ
ಬೇಸಿಗೆಯಲ್ಲಿ ಪ್ರೌಢ ಹಾವುಗಳು ಹೆಚ್ಚಾಗಿ ಜನರ ಕಣ್ಣಿಗೆ ಬಿದ್ದರೆ, ಮಳೆಗಾಲದಲ್ಲಿ ಮನೆಗಳಲ್ಲಿ ಪತ್ತೆಯಾಗುವ ಹಾವುಗಳಲ್ಲಿ ಮರಿಗಳ ಸಂಖ್ಯೆಯೇ ಹೆಚ್ಚು ಎಂಬ ಅಚ್ಚರಿಯ ಸಂಗತಿ ಹಾವು ರಕ್ಷಿಸುವ ಸ್ವಯಂ ಸೇವಕರನ್ನು ಮಾತನಾಡಿಸಿದಾಗ ಬೆಳಕಿಗೆ ಬಂತು.

ಬೇಸಿಗೆಯಲ್ಲಿ ಬಿಸಿಲ ಬೇಗೆಯಿಂದ ಹುತ್ತ ಹಾಗೂ ಬಿಲಗಳಿಂದ ಹೊರ ಬೀಳುವ ಹಾವುಗಳು ತಂಪಾದ ವಾತಾವರಣ ಇರುವ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಹಾವುಗಳು ಮೊಟ್ಟೆ ಇಡುವ– ಮರಿ ಮಾಡುವ ಕಾಲ ಮಳೆಗಾಲ. ಮೊಟ್ಟೆಯಿಂದ ಹೊರ ಬಂದ ಮರಿಗಳು ಆಹಾರ ಹುಡುಕುತ್ತಾ ಮನ ಬಂದ ಕಡೆ ನುಗ್ಗುತ್ತವೆ. ಇದು ಪ್ರತಿ ವರ್ಷ ನಡೆಯುವ ಸಹಜ ಕ್ರಿಯೆ.

ಮಳೆ ನೀರಿನಿಂದ ಮೋರಿ, ಮ್ಯಾನ್‌ಹೋಲ್‌ಗಳು ತುಂಬಿಕೊಂಡರೆ, ಅದರಲ್ಲಿ ವಾಸವಿರುವ ಹಾವುಗಳು ಹೊರ ಬೀಳುತ್ತವೆ. ಆಗ ಹಾವುಗಳು ಒಣ– ಸುರಕ್ಷಿತ ಪ್ರದೇಶದ ಹುಡುಕಾಟ ಆರಂಭಿಸುತ್ತವೆ. ಸಹಜವಾಗಿಯೇ ರಸ್ತೆಗಳ ಮೇಲೆ, ಮನೆಗಳ ಬಳಿ ಕಾಣಿಸಿಕೊಳ್ಳುತ್ತವೆ.

ಮುಂಗಾರಿಗೆ ಮೊದಲು ಹಾವುಗಳ ಮಿಲನ ನಡೆಯುತ್ತದೆ. ಹೆಣ್ಣು ಹಾವು ಇಡುವ ಮೊಟ್ಟೆ ಇಟ್ಟ 60 ದಿನಗಳಲ್ಲಿ ಮರಿಗಳು ಹೊರ ಬರುತ್ತವೆ. ಹೀಗಾಗಿಯೇ ಮೇ–ಜೂನ್‌ ತಿಂಗಳಲ್ಲಿ ಹಾವಿನ ಮರಿಗಳು ಹೆಚ್ಚು ಪತ್ತೆಯಾಗುತ್ತವೆ.

ನಾಗರಹಾವೇ ಹೆಚ್ಚು
ನಾಗರಹಾವು ಸಾಮಾನ್ಯವಾಗಿ ಭೂಮಿಯ ಒಳಗಡೆ ವಾಸಿಸುತ್ತದೆ. ಮೋರಿಗಳ ಬಳಿ ಇರುವ ತೂತುಗಳು, ಇಲಿ ಕೊರೆದಿರುವ ಬಿಲಗಳೇ ಅದರ ವಾಸಸ್ಥಾನ.

ಕಪ್ಪೆ ಹಾಗೂ ಇಲಿಗಳನ್ನು ಬೇಟೆಯಾಡಿ ತಿನ್ನುವ ನಾಗರಹಾವುಗಳು ಇಲಿಗಳ ಬಿಲಗಳನ್ನೇ ಮನೆಯನ್ನಾಗಿಸಿಕೊಳ್ಳುತ್ತವೆ. ಇಲಿ ಮರಿಗಳು ನಾಗರಹಾವಿನ ಮುಖ್ಯ ಆಹಾರ. ಹೀಗಾಗಿ ಮರಿಗಳನ್ನು ಹುಡುಕುತ್ತಾ ಬಿಲಗಳಲ್ಲಿ ಅಡ್ಡಾಡುತ್ತವೆ.

ಆದರೆ ಇಲಿಯ ಬಿಲಗಳು ಎಲ್ಲಿ ಕೊನೆಗೊಳ್ಳುತ್ತವೆ ಎಂಬುದನ್ನು ಯಾರೂ ಅರಿಯರು. ಬಿಲಗಳು ಕೊನೆಗೊಳ್ಳುವ ಜಾಗದಿಂದಲೇ ಹಾವುಗಳೂ ಹೊರ ಬೀಳುತ್ತವೆ.

ಮೋರಿ ಹಾಗೂ ಮನೆಯ ಕಾಂಪೌಂಡ್ ಹೊರ ಭಾಗದಿಂದ ಇಲಿಗಳು ಕೊರೆಯುವ ಬಿಲಗಳು ಬಹುತೇಕ ಸಂದರ್ಭಗಳಲ್ಲಿ ಮನೆಯ ಒಳಗೆ, ಅಡುಗೆ ಮನೆ, ಸ್ಟೋರ್‌ ರೂಂ, ಮನೆ ಮುಂದಿನ ತೋಟಗಳಲ್ಲಿ ಕೊನೆಗೊಳ್ಳುತ್ತವೆ. ಇಂಥ ಬಿಲ ಹೊಕ್ಕ ಹಾವು ತನಗೆ ಅರಿವಿಲ್ಲದೇ ಮನೆಗಳ ಒಳಗೆ ಪ್ರತ್ಯಕ್ಷವಾಗುತ್ತವೆ.

ನಾಗರಹಾವುಗಳು ಇಲಿಯ ಬಿಲಗಳಲ್ಲೇ ಮೊಟ್ಟೆ ಇಡುವುದರಿಂದ ಮರಿಗಳು ಮನೆಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಪ್ರೌಢ ಹಾವಿಗೆ ಸಂಚರಿಸಬೇಕಾದ ಪ್ರದೇಶದ ಅರಿವಿರುತ್ತದೆ. ಆದರೆ ಆಗಷ್ಟೇ ಹುಟ್ಟಿದ ಮರಿಗಳಿಗೆ ಈ ಜ್ಞಾನ ಇರುವುದಿಲ್ಲ. ಆಹಾರದ ಹುಡುಕಾಟದಲ್ಲಿ ತಮಗಿಷ್ಟ ಬಂದ ಕಡೆ ನುಗ್ಗುತ್ತವೆ.

ದೊಡ್ಡಹಾವಿನಂತೆಯೇ ನಾಗರಹಾವಿನ ಮರಿಗಳೂ ವಿಷಕಾರಿ. ಅವುಗಳಿಗೆ ದೇಹದಲ್ಲಿರುವ ವಿಷವನ್ನು ಯಾವಾಗ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ಅರಿವಿರುವುದಿಲ್ಲ.

ಹೀಗಾಗಿ ಅವುಗಳು ಗಾಬರಿಗೊಂಡಾಗ ಆತ್ಮರಕ್ಷಣೆಗಾಗಿ ಕಚ್ಚುವ ಸಾಧ್ಯತೆ ಇರುತ್ತದೆ. ನಾಗರಹಾವಿನ ಮರಿಗಳನ್ನು ಹಿಡಿಯುವ ಪ್ರಯತ್ನಕ್ಕೆ ಯಾರೂ ಕೈ ಹಾಕಬಾರದು ಎಂದು ಎಚ್ಚರಿಸುತ್ತಾರೆ ಪಿಎಫ್‌ಎ ಸಂಸ್ಥೆಯ ಪಶು ವೈದ್ಯ ಎಂ. ಕಾರ್ತಿಕ್‌.  

ಕೇರೆ ಹಾವುಗಳು ಸಾಮಾನ್ಯವಾಗಿ ಮರಗಳ ಮೇಲೆ ಕಾಣಸಿಗುತ್ತವೆ. ಕೊಳಕುಮಂಡಲ ಹಾಗೂ ಉರಿ ಮಂಡಲಗಳು ಬಂಡೆ ಅಥವಾ ಚಪ್ಪಡಿಗಳ ಕೆಳಗೆ ಕಾಣಿಸಿಕೊಳ್ಳುತ್ತವೆ. ಈ ಹಾವುಗಳು ಇಲಿಯ ಬಿಲಗಳ ಒಳಗೆ ಹೋಗುವುದು ಅಪರೂಪ. ಹೀಗಾಗಿ ಇವು ಮನೆಗಳ ಒಳಗೆ ಕಾಣಿಸಿಕೊಳ್ಳುವುದು ಅಪರೂಪ.

ಕಸವೇ ಕಾರಣ
ಮಹಾನಗರಪಾಲಿಕೆ ಕಸ ನಿರ್ವಹಣೆಯಲ್ಲಿ ವಿಫಲವಾಗಿರುವುದಕ್ಕೂ– ಮನೆಗಳಲ್ಲಿ ಹಾವು ಕಾಣಿಸಿಕೊಳ್ಳುವುದಕ್ಕೂ ಸಂಬಂಧವಿದೆ.
‘ಈ ಹಿಂದೆ ಹೊಸ ಬಡಾವಣೆಗಳಿಂದ ಹಾವುಗಳು ಕಾಣಿಸಿಕೊಳ್ಳುತ್ತಿರುವ ಕುರಿತು ಕರೆಗಳು ಬರುತ್ತಿದ್ದವು. ಅವುಗಳ ವಾಸಸ್ಥಾನವಾದ ಬಿಲಗಳು– ಹುತ್ತಗಳನ್ನು ಮುಚ್ಚಿ ಮನೆಗಳನ್ನು ಕಟ್ಟಲಾಗುತ್ತಿತ್ತು.

ಎಲ್ಲಿ ಹೋಗಬೇಕು ಎಂಬುದು ತಿಳಿಯದೇ ಹಾವುಗಳು ಮನೆಗಳಿಗೆ ನುಗ್ಗುತ್ತಿದ್ದವು. ಆದರೆ ಈಗ ನಗರದ ಚೆನ್ನಾಗಿ ಅಭಿವೃದ್ಧಿಯಾದ (ವೆಲ್ ಡೆವಲಪ್ಡ್‌) ಬಡಾವಣೆಗಳಲ್ಲೂ ಹಾವುಗಳು ಮನೆಗಳಿಗೆ ನುಗ್ಗುತ್ತಿವೆ’ ಎಂದು ವಿವರಿಸಿದರು ವನಮಿತ್ರ ಸಂಸ್ಥೆಯ ವನ್ಯಜೀವಿ ರಕ್ಷಣೆ ವಿಭಾಗದ ನಿರ್ದೇಶಕ ಕೆ.ಮೋಹನ್.
‘ನಗರದಲ್ಲಿ ಕಸದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.

ಹೀಗಾಗಿಯೇ ಇಲಿಗಳ ಸಂಖ್ಯೆ ಹೆಚ್ಚುತ್ತಿದೆ. ಇಲಿಗಳನ್ನು ಹಿಂಬಾಲಿಸುವ ಹಾವುಗಳು ಮನೆಗಳಿಗೆ ನುಗ್ಗುತ್ತಿವೆ. ಕಸದ ನಿರ್ವಹಣೆ ವ್ಯವಸ್ಥಿತವಾಗಿ ನಡೆದಾಗ ಮಾತ್ರ ಹಾವುಗಳ ಸಮಸ್ಯೆ ಪರಿಹಾರವಾಗಬಲ್ಲದು’ ಎಂದು ಅವರು ವಿಶ್ಲೇಷಿಸುತ್ತಾರೆ.

ಹಾವುಗಳು ಹೆಚ್ಚು ಆಹಾರ ಸಿಗುವ ಸ್ಥಳದಲ್ಲಿಯೇ ವಾಸಿಸುತ್ತವೆ. ಹೀಗಾಗಿ ಮನೆಯ ಸುತ್ತಲೂ ಸ್ವಚ್ಛವಾಗಿರಿಸಿಕೊಳ್ಳಲು ಗಮನ ಹರಿಸಬೇಕು. ಇಲಿ, ಕಪ್ಪೆ, ಇಲಿ, ಅಳಿಲುಗಳು ಹಾವುಗಳನ್ನು ಆಕರ್ಷಿಸುತ್ತವೆ.

ಹಿಡಿದ ಹಾವು ಏನು ಮಾಡ್ತಾರೆ
ಹಿಡಿದ ಹಾವುಗಳಲ್ಲಿ ಆರೋಗ್ಯವಾಗಿರುವ ವಿಷಕಾರಿ ಹಾವುಗಳನ್ನು ಮಾತ್ರ ಅರಣ್ಯಕ್ಕೆ ಬಿಡುತ್ತಾರೆ. ಮರಿಗಳನ್ನು ಹಿಡಿದ ಪ್ರದೇಶದಿಂದ ಸ್ವಲ್ಪ ದೂರದಲ್ಲೇ ಬಿಡುವುದು ವಾಡಿಕೆ. ಪಿಎಫ್‌ಎ ಸಿಬ್ಬಂದಿ ಹಾವಿಗೆ ಗಾಯವಾಗಿದ್ದರೆ ಚಿಕಿತ್ಸೆ ನೀಡಿ, ನಂತರ ಬಿಡುಗಡೆ ಮಾಡುತ್ತಾರೆ. ಹೆಚ್ಚಿನ ವನ್ಯಜೀವಿ ರಕ್ಷಕರು ವಿಷಕಾರಿಯಲ್ಲದ ಹಾವುಗಳನ್ನು ಸ್ಥಳೀಯರ ಮನವೊಲಿಸಿ ಅದೇ ಪ್ರದೇಶದಲ್ಲೇ ಬಿಡುಗಡೆ ಮಾಡಲು ಪ್ರಯತ್ನಿಸುತ್ತಾರೆ.

ಯಾವ ಹಾವು ಹೇಗೆ ಕಚ್ಚುತ್ತದೆ
ನಾಗರಹಾವು ತನ್ನ ದೇಹದ ಅರ್ಧ ಭಾಗವನ್ನು ಕಚ್ಚಲು ಬಳಸುತ್ತದೆ. ಆದರೆ ಕೊಳಕು ಮಂಡಲ ಹಾವು ತನ್ನ ಇಡೀ ದೇಹವನ್ನು ಬಳಸಿಕೊಂಡು ಜಿಗಿದು ಕಚ್ಚುತ್ತದೆ.

ನಾಲ್ಕು ಅಡಿ ಉದ್ದದ ಕೊಳಕು ಮಂಡಲ, ಅಷ್ಟೇ ಎತ್ತರಕ್ಕೆ ಜಿಗಿದು ಕಚ್ಚಬಲ್ಲದು. ಇದು ಎಲ್ಲಿ, ಯಾವ ಕಡೆಯಿಂದ ದಾಳಿ ಮಾಡುತ್ತದೆ ಎಂದು ಅಂದಾಜಿಸುವುದು ಕಷ್ಟ. ನಾಗರಹಾವು ಕಡಿದ ಸ್ಥಳದಲ್ಲಿ ಎರಡು ಹಲ್ಲಿನ ಗುರುತು ಇರುತ್ತದೆ. ಕಟ್ಟಾವು ಕಡಿದ ಭಾಗದಲ್ಲಿ ಯಾವುದೇ ರೀತಿಯ ಗುರುತು ಇರುವುದಿಲ್ಲ.

ಉಳಿವಿನ ಹಕ್ಕಿಲ್ಲವೇ
ಆಹಾರ ಸರಪಳಿಯಲ್ಲಿ ಯಾವುದಾದರೊಂದು ಕೊಂಡಿ ಕಳಚಿದರೂ ಅದರ ಪರಿಣಾಮ ಪರಿಸರದ ಮೇಲಾಗುತ್ತದೆ. ಇಂದು ಹಾಳಾದ ಕೊಂಡಿಯ ಪರಿಣಾಮವನ್ನು ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ.

ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಪ್ರಕ್ರಿಯೆಯಲ್ಲಿ ಹಾವುಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಹಾವುಗಳಿಗೆ ಇಲಿ, ಹೆಗ್ಗಣ, ಕಪ್ಪೆಗಳೇ ಆಹಾರ. ಬೆಕ್ಕು, ನಾಯಿ, ಗೂಬೆ ಹಾಗೂ ಹದ್ದುಗಳು ಇಲಿಗಳು ಬಿಲದಿಂದ ಹೊರಗಡೆ ಬಂದಾಗ ಅವುಗಳನ್ನು ಹಿಡಿದು ಕೊಲ್ಲುತ್ತವೆ. ಆದರೆ ಹಾವುಗಳು ಇಲಿಗಳ ಬಿಲಕ್ಕೇ ನುಗ್ಗಿ ಬೇಟೆಯಾಡುತ್ತದೆ. ಬಿಲದಲ್ಲಿರುವ ಮರಿಗಳನ್ನೂ ಸದ್ದಿಲ್ಲದಂತೆ ತಿಂದು ಮುಗಿಸುತ್ತವೆ.

ದೊಡ್ಡ ಹಾವುಗಳು ಹಾವಿನ ಮರಿಗಳು, ಚಿಕ್ಕ ಗಾತ್ರದ ಹಾವುಗಳನ್ನು ತಿನ್ನುವ ಮೂಲಕ ಹಾವಿನ ಸಂಖ್ಯೆ ಹೆಚ್ಚಾಗದಂತೆ ನಿಯಂತ್ರಿಸುತ್ತವೆ.
ಯಾವ ಪ್ರದೇಶದಲ್ಲಿ ಹಾವುಗಳು ಇರುವುದಿಲ್ಲವೋ ಅಲ್ಲಿ ಇಲಿ ಹಾಗೂ  ಹೆಗ್ಗಣಗಳ ಸಂಖ್ಯೆ ಹೆಚ್ಚಾಗಿರುತ್ತದೆ. 

ಅಂತಹ ಪ್ರದೇಶಗಳಲ್ಲಿ ಸಾಮಾನ್ಯವಾಗಿಯೇ ಇಲಿ ಹಾಗೂ ಹೆಗ್ಗಣಗಳಿಂದ ಬರುವ ರೋಗಗಳು ಹೆಚ್ಚಾಗುತ್ತದೆ. ಇದರ ಅಂತಿಮ ಪರಿಣಾಮ ಅನುಭವಿಸುವುದು ಮನುಷ್ಯ.

ನಮ್ಮ ಪರಂಪರೆ ಇದೇ ಕಾರಣಕ್ಕೆ ಇರಬಹುದು ಹಾವುಗಳಿಗೆ ಧಾರ್ಮಿಕ ಮಹತ್ವ ನೀಡಿತ್ತು. ಹಾವುಗಳ ರಕ್ಷಣೆ ಪುಣ್ಯದ ಕೆಲಸ ಎಂಬ ನಂಬಿಕೆ ಬಿತ್ತಿತ್ತು.
ಆದರೆ, ಇಂದು ಪರಿಸ್ಥಿತಿ ವ್ಯತಿರಿಕ್ತವಾಗಿದೆ.

‘ಕಲ್ಲ ನಾಗರ ಕಂಡರೆ ಹಾಲನೆರೆಯುವರು– ದಿಟದ ನಾಗರ ಕಂಡರೆ ಕೊಲ್ಲೆಂಬರು’ ಎಂಬ ಬಸವಣ್ಣನವರ ಮಾತು ಇಂದಿಗೂ ನಿಜ. ಹಾವು ಕೊಂದವರು ಶಾಂತಿ ಮಾಡಿಸಿ, ಪಾಪಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆಯೇ ವಿನಃ ಅವುಗಳಿಗೂ ನಮ್ಮಂತೆಯೇ ಜೀವಿಸುವ ಹಕ್ಕಿದೆ ಎಂದು ಯೋಚಿಸುವುದಿಲ್ಲ.

ನೆಲೆ ಬದಲಾದರೆ ಸಾವು ಖಚಿತ
ತಮ್ಮ ಮೂಲ ನೆಲೆಯಿಂದ ಸ್ಥಳಾಂತರ ಮಾಡಿದರೂ ಹಾವುಗಳು ಸಾಯುತ್ತವೆ. ಈ ಮೊದಲು ಆ ಪ್ರದೇಶದಲ್ಲಿ ವಾಸವಿರುವ ಹಾವು ತನ್ನ ನೆಲೆ ಉಳಿಸಿಕೊಳ್ಳಲು ಹೊಸ ಹಾವಿನೊಂದಿಗೆ ಕಾಳಗಕ್ಕೆ ಇಳಿಯುತ್ತದೆ. ಎರಡರಲ್ಲಿ ಒಂದು ಸಾಯುವವರೆಗೆ ಹೋರಾಟ ನಡೆಯುತ್ತಲೇ ಇರುತ್ತದೆ.

ಕಾಳಗದಲ್ಲಿ ಒಂದು ವೇಳೆ, ಮೂಲ ಹಾವು ಸತ್ತು, ಹೊಸ ಹಾವು ಉಳಿದುಕೊಂಡರೂ ಅದಕ್ಕೆ ಹೊಸ ಪ್ರದೇಶದ ಪರಿಚಯ ಇರುವುದಿಲ್ಲ. ಆಹಾರ ಹುಡುಕುವುದು ದೊಡ್ಡ ಸವಾಲಾಗುತ್ತದೆ. ಹೊಸ ನೆಲೆಯಲ್ಲಿ ವೈರಿಗಳಿಂದ ತಪ್ಪಿಸಿಕೊಳ್ಳುವ ಜಾಗದ ಅರಿವೂ ಅದಕ್ಕೆ ಇರುವುದಿಲ್ಲ.
ನೆಲೆ ಇಲ್ಲದ ಕಾರಣ ವಿಶ್ರಾಂತಿ ಇಲ್ಲದೆ ಹಾವುಗಳು ಹೆಚ್ಚಿನ ಮಾನಸಿಕ ಒತ್ತಡ (ಸ್ಟ್ರೆಸ್) ಅನುಭವಿಸುತ್ತವೆ. ಬಹುಬೇಗ ಸಾವನ್ನಪ್ಪುತ್ತವೆ.

ಎಲ್ಲ ಹಾವುಗಳ ಸ್ಥಳಾಂತರ ತಪ್ಪು
‘ಮನೆಗೆ ಹಾವು ಬಂದಿದೆ. ಬೇಗ ಬನ್ನಿ ಸಾರ್...’ ಎಂಬ ಧಾಟಿಯ ಹತ್ತಾರು ಕರೆಗಳು ಪ್ರತಿದಿನ ನಗರದ ವಿವಿಧೆಡೆಯಿಂದ ಬರುತ್ತವೆ ಎನ್ನುತ್ತಾರೆ ವನಮಿತ್ರ ಸಂಸ್ಥೆಯ ಮುಖ್ಯಸ್ಥ ಜೈಶಂಕರ್‌.

ಬಹುತೇಕ ಸಂದರ್ಭದಲ್ಲಿ ಹಾವುಗಳು ನಾವು ಸ್ಥಳ ತಲುಪುವ ಮೊದಲೇ ಹೊರಟು ಹೋಗಿರುತ್ತವೆ. ಒಂದು ವೇಳೆ ನಾವು ಹಾವು ಹಿಡಿದರೂ, ಬಹುತೇಕ ಮಂದಿ ಅವನ್ನು ಕಾಡಿಗೆ ಬಿಡಿ ಎಂದು ಹೇಳುತ್ತಾರೆ.

ಜನರ ಈ ಪ್ರವೃತ್ತಿಯನ್ನು ತಪ್ಪಿಸುವ ಸಲುವಾಗಿ ವನಮಿತ್ರ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಹಾವುಗಳ ಕುರಿತು ಅರಿವು ಕಾರ್ಯಕ್ರಮವನ್ನೂ ನಡೆಸುತ್ತಿದೆ. ಹಾವುಗಳನ್ನು ವಾಸಸ್ಥಾನದಿಂದ ದೂರ ಮಾಡದಂತೆ ಜನರಲ್ಲಿ ಮನವಿ ಮಾಡುತ್ತಿದೆ ಎನ್ನುತ್ತಾರೆ ಅವರು.

ಉಪದ್ರವಿ ಜೀವಿಗಳ ನಿಯಂತ್ರಣ
ಕಸದ ರಾಶಿ ಇರುವ ಸ್ಥಳದಲ್ಲಿ ಇಲಿ, ಹೆಗ್ಗಣಗಳ ವಾಸ್ತವ್ಯ ಸಹಜ. ಸಾಂಕ್ರಾಮಿಕ ರೋಗಗಳನ್ನು ಹರಡುವ ಇಂಥ ಉಪದ್ರವಿ ಜೀವಿಗಳ ನಾಶ ಅಷ್ಟು ಸುಲಭವಲ್ಲ. ನಾಯಿ, ಬೆಕ್ಕು, ಹದ್ದು ಮತ್ತು ಹಾವುಗಳು ಇಂಥ ಉಪದ್ರವಿಕಾರಿ ಜೀವಿಗಳ ಸಂಖ್ಯೆಯನ್ನು ನೈಸರ್ಗಿಕವಾಗಿಯೇ ನಿಯಂತ್ರಣದಲ್ಲಿ ಇಡಬಲ್ಲದು.
ಮನೆಗೆ ಬರುವುದು ಬೇಡವಾದರೆ...

ಹಾವುಗಳು ಮನೆಯ ಒಳಗೆ ಸುಲಭವಾಗಿ ಬಾರದಂತೆ ಮಾಡಲು  ಹಲವು ಉಪಾಯಗಳಿವೆ.
*ಮನೆಯ ಬಳಿ ಇರುವ ಇಲಿಯ ಬಿಲಗಳನ್ನು ಮುಚ್ಚಿ
*ಮನೆಯಿಂದ ಮೋರಿಗೆ ಸೇರುವ ಸ್ಯಾನಿಟರಿ ಪೈಪ್‌ಗಳಿಗೆ ಕಬ್ಬಿಣದ ಜಾಲರ ಅಳವಡಿಸಿ
*ಮನೆಯ ಸುತ್ತಮುತ್ತ ಕಸವಿಲ್ಲದಂತೆ, ಇಲಿಗಳು ಬಾರದಂತೆ ಸ್ವಚ್ಛತೆ ಕಾಪಾಡಿ

ನಗರದಲ್ಲಿರುವ ಹಾವುಗಳ ವಿವರ
ನಗರದಲ್ಲಿ ಒಟ್ಟಾರೆ 28 ಪ್ರಭೇದದ ಹಾವುಗಳಿವೆ. ಇವುಗಳಲ್ಲಿ 17 ಪ್ರಭೇದದ ಹಾವುಗಳು ವಿಷ ರಹಿತ. ನಾಗರಹಾವು, ಕಟ್ಟಾವು, ಕೊಳಕು ಮಂಡಲ– ಉರಿ ಮಂಡಲ, ಬ್ಯಾಂಬೂ ಪಿಟ್‌ ವೈಪರ್‌, ಸ್ಲೆಂಡರ್‌ ಕೋರಲ್‌ ವಿಷಕಾರಿ ಹಾವುಗಳು.

ನಾಗರಹಾವು, ಕಟ್ಟಾವು, ಸ್ಲೆಂಡರ್‌ ಕೋರಲ್‌ ಕಚ್ಚಿದರೆ (ನ್ಯೂರೊಟಾಕ್ಸಿಕ್‌) ನರದ ಮೇಲೆ ಪರಿಣಾಮವಾಗುತ್ತದೆ. ಕೊಳಕು ಮಂಡಲ, ಉರಿ ಮಂಡಲ ಮತ್ತು ಬ್ಯಾಂಬೂ ಪಿಟ್ ವೈಪರ್ ಕಚ್ಚಿದರೆ (ಹಿಮೊಟಾಕ್ಸಿಕ್) ರಕ್ತದ ಮೇಲೆ ಪರಿಣಾಮವಾಗುತ್ತದೆ.

ಪ್ರಥಮ ಚಿಕಿತ್ಸೆ
ಹಾವು ಕಚ್ಚಿದಾಗ ಅದು ವಿಷಕಾರಿ ಹಾವೇ ಅಥವಾ ವಿಷ ರಹಿತ ಹಾವೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ವಿಷಕಾರಿ ಹಾವು ಕಚ್ಚಿದ್ದರೆ ಅನುಸರಿಸಬೇಕಾದ ಕ್ರಮಗಳು ಹೀಗಿವೆ.
*ಹಾವು ಕಚ್ಚಿದವರನ್ನು ಮೊದಲು ಆತಂಕ ಪಡದೆ ಶಾಂತವಾಗಿರುವಂತೆ ಮಾಡಬೇಕು.
*ಇದರಿಂದ ಅವರ ದೇದಲ್ಲಿ ರಕ್ತ ಪರಿಚಲನೆ ಸಾಮಾನ್ಯವಾಗಿದ್ದು, ವಿಷ ಹರಡುವುದು ನಿಧಾನವಾಗುತ್ತದೆ.
*ಕೈ ಅಥವಾ ಕಾಲಿಗೆ ಹಾವು ಕಚ್ಚಿದರೆ, ಕಚ್ಚಿದ ಜಾಗದಿಂದ ಎರಡು ಅಂಗುಲ ಮೇಲೆ ಹಗ್ಗದಿಂದ ಬಿಗಿಯಾಗಿ ಕಟ್ಟಬೇಕು.
*20 ನಿಮಿಷಕ್ಕೊಮ್ಮೆ ಕಟ್ಟನ್ನು ಸ್ವಲ್ಪ ಸ್ವಲ್ಪ ಸಡಿಲಗೊಳಿಸಬೇಕು.
*ಹಾವು ಕಚ್ಚಿದ ತಕ್ಷಣ ಆ ಜಾಗವನ್ನು ನೀರಿನಿಂದ ಅಥವಾ ಸೋಂಕು ನಿವಾರಕದಿಂದ ಸ್ವಚ್ಛಗೊಳಿಸಬೇಕು.
*ಹಾವು ಕಚ್ಚಿದ ಜಾಗದಿಂದ ವಿಷ ತೆಗೆದಯುವ ಪ್ರಯತ್ನ ಅಥವಾ ಆ ಜಾಗವನ್ನು ಕತ್ತರಿಸುವ ಪ್ರಯತ್ನ ಮಾಡಬಾರದು.
*ಹಾವು ಕಚ್ಚಿದ ವ್ಯಕ್ತಿಯ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುವ ಕೆಲಸಗಳನ್ನು ಮಾಡಿಸಬಾರದು (ಓಡಾಡಿಸಬಾರದು, ಮಲಗಿಸಬಾರದು, ಸ್ನಾನ ಮಾಡಿಸಬಾರದು).
*ಆದಷ್ಟು ಬೇಗ ವೈದ್ಯರನ್ನು ಕಾಣಬೇಕು.
*ವಿಷರಿಯಲ್ಲದ ಹಾವು ಕಚ್ಚಿದಲ್ಲಿ, ಕಚ್ಚಿದ ಜಾಗವನ್ನು ಸ್ವಚ್ಛಗೊಳಿಸಿ, ದಡಾರ ನಿರೋಧಕ (ಆ್ಯಂಟಿ ಟೆಟಾನಸ್) ಚುಚ್ಚುಮದ್ದು ತೆಗೆದುಕೊಂಡರೆ ಸಾಕು.

ಉಳಿಯುವುದೇ ಕಷ್ಟ
ಹಾವುಗಳು ಒಮ್ಮೆಲೆ ಇಷ್ಟೊಂದು ಮೊಟ್ಟೆ– ಮರಿ ಮಾಡಿದರೂ ಉಳಿಯುವ  ಸಂಖ್ಯೆ ಕಡಿಮೆ. ಹಾವುಗಳ ತನ್ನ ಮರಿಗಳಿಗೆ ಬದುಕುವ ಕಲೆ ಕಲಿಸುವುದಿಲ್ಲ. ಹೀಗಾಗಿ ಸಂತಾನಾಭಿವೃದ್ಧಿಯ ಒಂದು ಚಕ್ರದಲ್ಲಿ ಎರಡು ಮರಿಗಳು ಉಳಿದರೂ ಹೆಚ್ಚು.

ಈ ವರ್ಷದ ದಾಖಲೆಗಳು
*ಕಳೆದ ಮೂರು ವರ್ಷದ ಅಂತರದಲ್ಲಿ ಇದೇ ಮೊದಲ ಬಾರಿಗೆ ಉರಿಮಂಡಲ ಕಾಣ ಸಿಕ್ಕಿದೆ
*ಮೇ ತಿಂಗಳಲ್ಲಿ 23 ಮತ್ತು ಜೂನ್ ತಿಂಗಳಲ್ಲಿ 29 ನಾಗರಹಾವಿನ ಮರಿಗಳನ್ನು ರಕ್ಷಿಸಲಾಗಿದೆ.
*ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ವಾತಾವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾವುಗಳು ಸಿಗುತ್ತವೆ ಎನ್ನಲು ಇದು ಸಾಕ್ಷಿ\

(ಅವಧಿ: ಜನವರಿಯಿಂದ ಜುಲೈ 20ರವರೆಗೆ, ಮಾಹಿತಿ: ವನಮಿತ್ರ– ಪಿಎಫ್‌ಎ)

*
ಮೇ 23ರಿಂದ ಜೂನ್‌7ರ ವರೆಗೆ ಹಾವುಗಳನ್ನು ಸೆರೆ ಹಿಡಿಯುವಂತೆ ಕೋರಿ ಒಟ್ಟು 400 ಮಂದಿ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಕಸ ತುಂಬಿದ ಸ್ಥಳಗಳು, ಪಾಳುಬಿದ್ದ ಮನೆಗಳಲ್ಲಿ ಸೇರಿಕೊಂಡ ಹಾವುಗಳನ್ನು ಹಿಡಿಯಲು ಸಾಧ್ಯವಾಗಿಲ್ಲ. ನಗರದಲ್ಲಿ ಕಂಡುಬರುವ ಎಲ್ಲ ವಿಷಪೂರಿತ ಹಾವುಗಳ ಕಡಿತಕ್ಕೆ ಔಷಧ ಲಭ್ಯವಿದೆ.
–ಆರ್‌.ಶರತ್‌ ಬಾಬು,
ವನ್ಯಜೀವಿ ಸಲಹೆಗಾರ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT