ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ ಬರುತಿದೆ ಎಚ್ಚರ!

ಮನೆ ಸುರಕ್ಷಿತವಾಗಿಟ್ಟುಕೊಳ್ಳಿರೋ ನೀವೆಲ್ಲರೂ
ಅಕ್ಷರ ಗಾತ್ರ

ಮೊನ್ನೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತು, ‘ಜೂನ್‌ 5ರಂದು ಮುಂಗಾರು ಕೇರಳವನ್ನು ಪ್ರವೇಶಿಸಲಿದೆ’. ನಂತರ ರಾಜ್ಯದ ಕರಾವಳಿಯನ್ನೂ ಪ್ರವೇಶಿಸುತ್ತದೆ.

ಕಳೆದ ಕೆಲವು ವಾರಗಳಿಂದ ರಾಜ್ಯದ ವಿವಿಧೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತವಾದ ಮಳೆ ಜೋರಾಗಿಯೇ ಸುರಿಯುತ್ತಿದೆ. ಕೆಲವೆಡೆ ಕೃಷಿ ಚಟುವಟಿಕೆ ವಾಡಿಕೆಗಿಂತ ಮುಂಚಿತವಾಗಿಯೇ ಆರಂಭಗೊಂಡಿದೆ.  ಹಳ್ಳ ಕೊಳ್ಳಗಳಿಗೂ ಸ್ವಲ್ಪ ನೀರು  ಹರಿದುಬಂದಿದೆ. ಹೊಸ ಹಸಿರು ಚಿಗುರಿದೆ. ಪ್ರಕೃತಿಯಲ್ಲಿ ನಿಧಾನವಾಗಿ ನಗು ಅರಳುತ್ತಿದೆ....

ಆದರೆ, ರಾಜ್ಯದ ಹಲವೆಡೆ ಇನ್ನೂ ಬಿಸಿಲ ತಾಪ ಜೋರಾಗಿಯೇ ಇದೆ. ಅಷ್ಟೇ ಅಲ್ಲ, ದಿನೇ ದಿನೆ ಹೆಚ್ಚುತ್ತಲೇ ಇದೆ. ಬೆಂಗಳೂರಂತೂ ಕೆಂಡದ ಮೇಲೇ ನಿಂತಿರುವಂತೆ ಸುಡುತ್ತಿದೆ.

ಅದೆಲ್ಲ ಒತ್ತಟ್ಟಿಗಿರಲಿ, ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭಗೊಳ್ಳುವುದು ಖಚಿತ. ಮುಂಗಾರನ್ನು ಸ್ವಾಗತಿಸಲು, ಮಳೆಗಾಲದಲ್ಲಿ ಎದುರಾಗಲಿರುವ ಸಮಸ್ಯೆಗಳನ್ನು ಎದುರಿಸಲು ನೀವು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದೀರಾ?

ರೈತರು ಕೃಷಿ ಚಟುವಟಿಕೆಗೆ ನೇಗಿಲು, ಜಾನುವಾರು, ಬಿತ್ತನೆ ಬೀಜ, ಗೊಬ್ಬರ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಳ್ಳಬೇಕಿದೆ. ನಗರ, ಪಟ್ಟಣ, ಹಳ್ಳಿಗಳೇ ಇರಲಿ ವಾರದ ಐದಾರು ದಿನ ಶಾಲೆ, ಕಚೇರಿ, ವ್ಯಾಪಾರಕ್ಕೆಂದು ಹೊರಕ್ಕೆ ಹೋಗಲೇಬೇಕಾದವರು ಛತ್ರಿ, ರೇನ್‌ಕೋಟ್‌ ಹೊಂದಿಸಿ ಇಟ್ಟುಕೊಳ್ಳಬೇಕಿದೆ.

ಮೊದಲು ಗಮನ ಹರಿಸಿ
ಇವೆಲ್ಲವೂ ಪ್ರತಿ ವರ್ಷ ಮಳೆಗಾಲ ಆರಂಭಕ್ಕೂ ಮುಂಚಿನ ಕಾಲದ ಜಾಗ್ರತೆಯ ಕ್ರಮಗಳು. ಇದು ಜನರು ಮತ್ತು ಅವರ ನಿತ್ಯದ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಯಿತು. ಆದರೆ, ನಿಮ್ಮ ಕುಟುಂಬವನ್ನು ಮತ್ತು ಬೆಲೆಬಾಳುವ ಸರಕು ಸಾಮಗ್ರಿಗಳನ್ನು ಮಳೆ, ಗಾಳಿ, ಬಿಸಿಲಿನಿಂದ ಸದಾಕಾಲ ಸಂರಕ್ಷಿಸಿಡುವ ‘ಅಮೂಲ್ಯವಾದ ಮನೆ’ಯನ್ನು ಮಳೆಗಾಲಕ್ಕಾಗಿ ಸಜ್ಜುಗೊಳಿಸಬೇಡವೇ? ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳಿಗೆ ಮುಂಚಿತವಾಗಿಯೇ ಪರಿಹಾರ ಕಂಡುಕೊಂಡು ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಡವೇ?

ಹಿಂದೆಲ್ಲ ಗ್ರಾಮೀಣ ಭಾಗಗಳಲ್ಲಿ, ಮಳೆಗಾಲ ಬರುವುದಕ್ಕೂ ಮುನ್ನವೇ, ತಮ್ಮ ಮತ್ತು ಜಾನುವಾರಗಳ ವಾಸದ ಜಾಗವನ್ನು ಜನರು ಬಹಳ ಮುಂಜಾಗ್ರತೆಯಿಂದ ವಿಶೇಷವಾಗಿ ಸಜ್ಜುಗೊಳಿಸಿಡುತ್ತಿದ್ದರು. ನಾಡ ಹೆಂಚಿನ ಮನೆಗಳಾದರೆ ಜನವರಿ, ಫೆಬ್ರುವರಿಯಲ್ಲಿಯೇ ಹೆಂಚು ಕೈಯಾಡುವವರನ್ನು ಕರೆಸಿ ಇಡೀ ಛಾವಣಿಯ ಜೋಡಣೆಯನ್ನು ಬದಲಿಸುತ್ತಿದ್ದರು. ಹೆಂಚುಗಳನ್ನು ತೆಗೆಸಿ, ಕೊಳೆ ತೊಳೆದು, ಅದಲು ಬದಲು ಮಾಡಿಸಿ ಜೋಡಿಸುವಂತೆ ಮಾಡುತ್ತಿದ್ದರು. ಮುರಿದು ಹೋಗಿರುವ ಹೆಂಚಿನ ಜಾಗಕ್ಕೆ ಹೊಸ ಹೆಂಚು ಹಾಕಿಸುತ್ತಿದ್ದರು. ಮಳೆಗಾಲ ಆರಂಭಗೊಂಡ ನಂತರ ಛಾವಣಿಯಲ್ಲಿ ಸೋರಿಕೆ ಆಗದಂತೆ ಮುಂಜಾಗ್ರತೆ ವಹಿಸುತ್ತಿದ್ದರು.

ಮಂಗಳೂರು ಹೆಂಚು ಎಂದೇ ಕರೆಸಿಕೊಳ್ಳುತ್ತಿದ್ದ ಅಗಲವಾದ ಕೆಂಪು ಹೆಂಚುಗಳಾದರೆ ಇಡೀ ಛಾವಣಿಯನ್ನು ಅದಲು ಬದಲು ಮಾಡಿಸುವ ಅಗತ್ಯ ಬರುತ್ತಿರಲಿಲ್ಲ. ಎಲ್ಲಿ ಒಡೆದಿದೆಯೋ ಅಲ್ಲೆಲ್ಲ ಹೊಸ ಹೆಂಚು ಹಾಕಿಸುತ್ತಿದ್ದರು, ಇಲ್ಲವಾದರೆ ಗಾರೆ ಮೆತ್ತಿಸಿ ಮಳೆ ನೀರು ಮನೆಯೊಳಕ್ಕೆ ಸೋರದಂತೆ ಮಾಡುತ್ತಿದ್ದರು.

ದಶಕಗಳ ಹಿಂದೆ ಮಲೆನಾಡು, ಕೊಡಗು, ಕರಾವಳಿ ಭಾಗಗಳ ಲ್ಲಂತೂ ಮಳೆಗಾಲಕ್ಕೂ ಮುಂಚಿನ ಚಟುವಟಿಕೆಗಳನ್ನು ನೋಡು ವುದೇ ಚೆಂದ. ಈಗಂತೂ ಎಲ್ಲ ಕಡೆಯೂ ತಾರಸಿ ಮನೆಗಳೇ ಅವತರಿಸಿರುವುದರಿಂದ ಈ ‘ಹೆಂಚು ಕೈಯಾಡಿಸುವ’ ಕೆಲಸ ಕಾಣುವುದೇ ಇಲ್ಲ. ಅಷ್ಟೇ ಅಲ್ಲ, ಗ್ರಾಮೀಣ ಭಾಗದ ಕುಂಬಾರರ ಮನೆಗಳಲ್ಲಿ ನಾಡ ಹೆಂಚುಗಳನ್ನು ತಯಾರಿಸುತ್ತಿದ್ದ ಕೆಲಸವೇ ಸ್ಥಗಿತಗೊಂಡಿದೆ. ಮಂಗಳೂರು ಹೆಂಚು ತಯಾರಿಕೆಯಲ್ಲಿ ಬದಲಾವ ಣೆಗಳು ಕಂಡುಬಂದಿವೆ. ವಿನ್ಯಾಸದ ಹೆಂಚುಗಳು (ಕಾಂಕ್ರಿಟ್‌ ತಾರಸಿ ಮೇಲೆಯೂ ಅಂದಕ್ಕಾಗಿ ಹೊದಿಸಲು ಬಳಸುವಂತಹುದು) ತಯಾರಾಗುತ್ತಿವೆ. ಮಳೆಯ ತೀವ್ರತೆ ಇರುವ ಕರಾವಳಿ, ಮಲೆನಾಡು ಭಾಗದಲ್ಲಿಯಷ್ಟೇ ನಗರಗಳಲ್ಲೂ ಮಂಗಳೂರು ಹೆಂಚಿನ ಮನೆಗಳನ್ನು ಈಗಲೂ ಹೆಚ್ಚಾಗಿ ಕಾಣಬಹುದಾಗಿದೆ.

ಸಮಸ್ಯೆ ಕಟ್ಟಿಟ್ಟಬುತ್ತಿ
ಇದೆಲ್ಲವೂ ಸಾಂಪ್ರದಾಯಿಕ ಶೈಲಿಯ ಹೆಂಚಿನ ಮನೆಗಳ ಕುರಿತದ್ದು. ತಾರಸಿ ಮನೆಗಳು, ಬಹುಮಹಡಿ ಕಟ್ಟಡಗಳು, ಬೃಹತ್‌ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಕತೆಯೇ ಬೇರೆ ಬಗೆಯದು. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ದಾವಣಗೆರೆ ಸಹಿತ ದೊಡ್ಡ ನಗರಗಳಿರಲಿ, ಚಿಕ್ಕ ಪಟ್ಟಣಗಳಲ್ಲಿನ ಕಾಂಕ್ರಿಟ್‌ ಕಟ್ಟಡಗಳೂ ಮಳೆಗಾಲದಲ್ಲಿನ ಸಮಸ್ಯೆಗಳನ್ನು ಎದುರಿಸಲು ಈಗಲೇ ಸಿದ್ಧತೆ ಆರಂಭಿಸಬೇಕಿದೆ. ಇಲ್ಲವಾದರೆ, ಜೋರು ಮಳೆಯ ದಿನಗಳಲ್ಲಿ ಸಮಸ್ಯೆ ಕಟ್ಟಿಟ್ಟಬುತ್ತಿ.

ಕಾಂಕ್ರಿಟ್‌ ಕಟ್ಟಡ- ಮುಂಜಾಗ್ರತೆ ಹೇಗೆ?
ಮೊದಲಿಗೆ ಮನೆಯ ತಾರಸಿ ಮೇಲೆ ಹೋಗಿ ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಬೇಕು. ಅಲ್ಲಿ ಹರಡಿಬಿದ್ದಿರುವ ಕಸವನ್ನು ಆಗಾಗ್ಗೆ ತೆಗೆದು ಸ್ವಚ್ಛ ಮಾಡುತ್ತಿರಬೇಕು. ಮನೆಯಲ್ಲಿನ ಅನಗತ್ಯ ಸಾಮಗ್ರಿಗಳು, ಡಬ್ಬಿಗಳು ಮೊದಲಾದವನ್ನು ತಾರಸಿಯಲ್ಲಿ ಇರಿಸಿದ್ದರೆ ಅವೆಲ್ಲವನ್ನೂ ಕೆಳಕ್ಕೆ ಸಾಗಿಸಬೇಕು. ಇವುಗಳಲ್ಲಿಯೂ ಕೆಲವು ವಸ್ತುಗಳು ನಿಮಗೆ ಸ್ವಲ್ಪ ಹಣ ತಂದುಕೊಡುವಂತಹವು ಇರುತ್ತವೆ. ಅಂತಹವನ್ನು ಕಸದ ಗುಡ್ಡೆಯಿಂದ ಪ್ರತ್ಯೇಕಿಸಿ ಗುಜರಿ ವ್ಯಾಪಾರಿಗಳಿಗೆ ಹಸ್ತಾಂತರಿಸಿದರೆ ಅವರು ತೂಕದ ಲೆಕ್ಕದಲ್ಲಿ ಅಲ್ಪಸ್ವಲ್ಪ ಹಣ ಕೊಟ್ಟೇಕೊಡುತ್ತಾರೆ.
ಹೀಗೆ ಮಾಡುವುದರಿಂದ ತಾರಸಿಯೂ ಸ್ವಚ್ಛವಾಯಿತು, ಬೇಡದ ಸಾಮಗ್ರಿಯೂ ವಿಲೇವಾರಿ ಆಯಿತು, ಕೈಗೆ ಸ್ವಲ್ಪ ಹಣವೂ ಬಂದಿತು.
ಮನೆ ಪಕ್ಕದಲ್ಲಿ ಮರ, ಗಿಡಗಳಿದ್ದು ಅವುಗಳ ಎಲೆ, ಕೊಂಬೆಗಳು ತಾರಸಿ ಮೇಲೆ ಬೀಳುತ್ತಿದ್ದರೆ ವಾರದಲ್ಲಿ ಒಂದೆರಡು ಬಾರಿಯಾದರೂ ತಾರಸಿ ಮೇಲೇರಿ ನೋಡುತ್ತಿರಬೇಕು. ಕೊಂಬೆ, ಎಲೆಗಳನ್ನು ಗುಡಿಸಿ ಕೆಳಕ್ಕೆ ಸಾಗಿಸಿ ವಿಲೇವಾರಿ ಮಾಡಬೇಕು. ಉರುವಲಿಗೆ ಆಗುವಂತಹವು ಇದ್ದರೆ ಅವನ್ನು ಬಳಸಲು ಸಿದ್ಧವಿರುವ ಕುಟುಂಬಗಳು ಸಮೀಪದಲ್ಲಿದ್ದರೆ ಅವರಿಗೆ ತಲುಪಿಸಬಹುದು.

ಇನ್ನು ರಾಶಿಬಿದ್ದಿರುವ ತರಗೆಲೆಗಳನ್ನು ಮನೆಯ ಅಂಗಳದಲ್ಲೇ ಪುಟ್ಟ ಗುಂಡಿಯಲ್ಲಿ ತುಂಬಿಸಿ ಮೇಲೆ ಮಣ್ಣು ಮುಚ್ಚಿದರೆ ಮಳೆಗಾಲದ ವೇಳೆಗೆ ಒಳ್ಳೆಯ ಕಾಂಪೋಸ್ಟ್‌ ಗೊಬ್ಬರ ಸಿದ್ಧವಾಗುತ್ತದೆ. ಅಂಗಳದ ಮಣ್ಣೂ ಫಲವತ್ತಾಗುತ್ತದೆ. ಇಲ್ಲವಾದರೆ, ಸ್ಥಳೀಯ ಸಂಸ್ಥೆಯ ಕಸ ವಿಲೇವಾರಿ ವಾಹನ ಬರುವುದನ್ನೇ ಕಾಯ್ದುಕೊಂಡಿದ್ದು ಅವರಿಗೆ ಒಪ್ಪಿಸಿದರಾಯಿತು.

ಮನೆ ಸುರಕ್ಷತೆಗೆ ಕ್ರಮ
ಮಳೆಗಾಲದಲ್ಲಿ ನೀವೇನೋ ಹೊರಗೆ ಹೋಗುವುದಾದರೆ ಛತ್ರಿ ಹಿಡಿದು ಸಾಗುತ್ತೀರಿ. ತಾರಸಿ ಮನೆಯೊಳಗಾದರೆ ಬೆಚ್ಚಗೆ ಇದ್ದುಬಿಡುತ್ತೀರಿ. ಆದರೆ, ನಿಮಗೆ ಬೆಚ್ಚನೆಯ ಅನುಭವ ನೀಡುವ ಮನೆಯ ಸುರಕ್ಷತೆಗೇನು ಕ್ರಮ ಕೈಗೊಂಡಿದ್ದೀರಾ?
ಮನೆಯನ್ನು, ಹೊರಭಾಗದಲ್ಲಿರುವ ಅದರ ಬಾಗಿಲು, ಕಿಟಕಿಗಳನ್ನೂ ಮಳೆಗಾಲದ ಸ್ವಾಗತಕ್ಕಾಗಿ ವಿಶೇಷ ರೀತಿಯಲ್ಲಿ ಸಿದ್ಧಪಡಿಸಬೇಕು ಅಲ್ಲವೇ?

ಸಜ್ಜಾಗಳು ಇಲ್ಲದ ಕಿಟಕಿ, ಬಾಗಿಲುಗಳು ಇದ್ದರೆ ತುಸು ಹೆಚ್ಚೇ ಜಾಗ್ರತೆ ವಹಿಸಬೇಕು.  ಇಲ್ಲವಾದರೆ, ಮುಂದಿನ ಮೂರ್ನಾಲ್ಕು ತಿಂಗಳ ಕಾಲ ವರುಣನ ದಾಳಿಗೆ ಸಿಲುಕಿ ನಿಮ್ಮ ಮನೆಯ ಕಿಟಕಿ ಬಾಗಿಲು, ಚೌಕಟ್ಟು (ತೇಗದ ಮರದ್ದೇ ಆಗಿದ್ದರೂ ಸಹ) ದುರ್ಬಲಗೊಳ್ಳುತ್ತದೆ. ದಶಕಗಳ ಕಾಲ ಬಾಳಿಕೆ ಬರುವಂತಹದ್ದೇ ಆಗಿದ್ದರೂ ಮಳೆ, ಬಿಸಿಲಿನ ಪೆಟ್ಟು ತಿಂದು ಆಯುಷ ಕಳೆದುಕೊಳ್ಳುತ್ತದೆ.

ಕಿಟಕಿ, ಬಾಗಿಲು ಜೋಕೆ
ಸಜ್ಜಾವೇನೋ ಇದೆ. ಆದರೆ, ಕಿಟಕಿ, ಬಾಗಿಲಿನ ಕೆಳಭಾಗಕ್ಕೆ, ಮುಂಬಾಗಿಲ ಹೊಸ್ತಿಲಿಗೆ ಮಳೆಯ ಎರಚಲು ನೀರು ಬೀಳುವಂತಿದೆ. ಆಗೇನು ಮಾಡಬೇಕು? ಬಾಗಿಲು, ಕಿಟಕಿ ಚೌಕಟ್ಟಿಗೆ ತೇಗದ ಮರವನ್ನೇ ಬಳಸಿದ್ದೀರಿ. ಅದರ ಗ್ರೇನ್ಸ್‌ (ಗೆರೆಗಳು) ಪಾರದರ್ಶಕವಾಗಿ ಗೋಚರಿಸಲಿ ಎಂದು ಒಳ್ಳೆಯ ಪಾಲಿಷ್‌ ಮಾಡಿಸಿದ್ದೀರಿ. ಆದರೆ, ಮುಂಬಾಗಿಲ ಹೊಸ್ತಿಲು, ಕಿಟಕಿಗಳ ಕೆಳಭಾಗ ಮಳೆಯ ಎರಚಲಿನಿಂದ ತೋಯ್ದು ಪಾಲಿಷ್‌ ಕಳೆದುಕೊಳ್ಳುತ್ತಿದೆ. ಏನು ಮಾಡುವುದು? ಇಂತಹ ಪ್ರಶ್ನೆ ಎದುರಾಗಿದ್ದರೆ, ನೀವು ಹೀಗೆ ಮಾಡಬಹುದು. ಮಳೆ ನೀರು ಹಾರಿ ಹಾನಿಯಾಗುವ ಭಾಗಕ್ಕೆ ಬಣ್ಣ ಬಳಿಯಬಹುದು, ತಾತ್ಕಲಿಕವಾಗಿಯಾದರೂ (ಮೂರು ತಿಂಗಳ ಕಾಲ) ತೆಳುವಾದ ಪ್ಲಾಸ್ಟಿಕ್‌ ಹಾಳೆಯನ್ನು ಗಮ್‌ ಟೇಪ್‌ ಬಳಸಿ ಅಂಟಿಸಬಹುದು, ಇಲ್ಲವೇ ಪಾಲಿಷ್‌ ಕರಗಿದಂತೆ ಮಳೆಗಾಲ ಮುಗಿಯುವವರೆಗೂ ಮತ್ತೆ ಮತ್ತೆ ಪಾಲಿಷ್‌ ಮಾಡಿಸುತ್ತಿರಬೇಕು. ಇಲ್ಲವಾದರೆ ನೀವು ಸಾವಿರಾರು ರೂಪಾಯಿ ಪಾವತಿಸಿ ಅಳವಡಿಸಿದ ತೇಗದ ಮರದ ಬಾಗಿಲೂ ಶಕ್ತಿ ಕಳೆದುಕೊಳ್ಳುತ್ತದೆ, ಕಳೆಗುಂದುತ್ತದೆ.

ಅಗ್ಗದ ಬೇವಿನ ಮರದ ಚೌಕಟ್ಟಾದರೇನು,  ದುಬಾರಿ ತೇಗದ ಮರದ್ದೇ ಆಗಿದ್ದರೇನು? ವರುಣನಿಗೆ ಅದಾವುದೂ ಲೆಕ್ಕಕ್ಕಿಲ್ಲ!

ಗೋಡೆ ಪರಿಶೀಲಿಸಿದಿರಾ?
ಮನೆಯ ಹೊರಭಾಗದ ಗೋಡೆಗಳಲ್ಲಿನ ಬಣ್ಣ ಮಾಸಿದ್ದರೆ, ಗಾರೆ ಕಿತ್ತು ಬಂದಿದ್ದರೆ, ಗೋಡೆಯಲ್ಲಿ ತೂತುಗಳು ಬಿದ್ದಿದ್ದರೆ, ತಾರಸಿಯಲ್ಲಿನ ಕಾಂಕ್ರಿಟ್‌ ಸಣ್ಣ ಪ್ರಮಾಣದಲ್ಲಿಯೇ ಆದರೂ ಚಕ್ಕೆ ಎದ್ದಿದ್ದರೆ ನಿರ್ಲಕ್ಷಿಸದಿರಿ.

ಗೋಡೆ ಮತ್ತು ತಾರಸಿಯಲ್ಲಿನ ಈ ಹುಳುಕುಗಳತ್ತ ಗಮನ ಹರಿಸಿ ನುರಿತ ಕೆಲಸಗಾರರನ್ನು ಕರೆಸಿ ತಕ್ಷಣವೇ ರಿಪೇರಿ ಕೆಲಸ ಮಾಡಿಸಿ. ಇಲ್ಲವಾದರೆ ಮಳೆಗಾಲದಲ್ಲೋ ಅಥವಾ ಮುಂಗಾರು ಅವಧಿ ಮುಗಿದ ನಂತರವೋ ಅದರ ಪರಿಣಾಮಗಳು ಕಂಡೇ ಕಾಣುತ್ತವೆ. ಉದಾ; ಚಕ್ಕೆ ಎದ್ದಿದ್ದ ಭಾಗದಲ್ಲಿ ರಭಸದ ಮಳೆ ನೀರು ಒಳಕ್ಕೆ ತೋರಿ ಹೋಗಿ ತಾರಸಿ ದುರ್ಬಲಗೊಳ್ಳುತ್ತದೆ. ಗೋಡೆಗಳೂ ನೀರು ಕುಡಿದು ಗಾರೆ ಕಿತ್ತು ಬರುತ್ತದೆ. ಸಣ್ಣ  ಮೈಮರೆವು ನಿಮ್ಮ ಅಮೂಲ್ಯವಾದ ಮನೆಗೆ ಹೀಗೆ ಹಲವು ಹಾನಿಗಳನ್ನು ಉಂಟು ಮಾಡಿಬಿಡುತ್ತದೆ.

ಒಳಚರಂಡಿಯನ್ನೂ ಗಮನಿಸಿ
ಮನೆಯಿಂದ ತ್ಯಾಜ್ಯದ ನೀರು ಹೊರ ಹೋಗುವ ಮಾರ್ಗದಲ್ಲೇನಾದರೂ ಸಣ್ಣ ಅಡೆತಡೆ ಇದ್ದರೂ ತಕ್ಷಣ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ನಿಮ್ಮ ಮನೆ ಮುಂದೆಯೋ ಎಡ ಬಲದಲ್ಲೋ ಒಳಚರಂಡಿ ಮಾರ್ಗದ ಮ್ಯಾನ್‌ಹೋಲ್‌ ಇದ್ದರೆ, ಅದರಿಂದ ಕೊಳಚೆ ನೀರು ಸಣ್ಣ ಪ್ರಮಾಣದಲ್ಲೇ ಆದರೂ ಹೊರಬರುತ್ತಿದ್ದರೆ ನಿರ್ಲಕ್ಷಿಸದಿರಿ. ‌

ಸ್ಥಳೀಯ ಸಂಸ್ಥೆಯಲ್ಲಿನ ಒಳಚರಂಡಿ ನಿರ್ವಹಣೆ ವಿಭಾಗದ ಸಿಬ್ಬಂದಿಯನ್ನು ಕರೆತಂದು ಮ್ಯಾನ್‌ಹೋಲ್‌ ಸ್ವಚ್ಚಗೊಳಿಸುವ ಕೆಲಸವನ್ನು ಮೊದಲು ಮಾಡಬೇಕು.

ಇಲ್ಲವಾದರೆ ಏನಾಗುತ್ತದೆ?
ಮಳೆಗಾಲದಲ್ಲಿ ಕೆಲವರ ಮನೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವ ನೀರು ಒಳಚರಂಡಿ ಕೊಳವೆ ಮಾರ್ಗದಲ್ಲಿ ಸರಾಗವಾಗಿ ಹರಿದು ಹೋಗಲಾರದೇ ಕಟ್ಟಿಕೊಂಡರೆ ಮೊದಲಿಗೆ ಮ್ಯಾನ್‌ಹೋಲ್‌ ಮುಚ್ಚಲದಿಂದ ಹೊರಸೂಸಲಾರಂಭಿಸುತ್ತದೆ. ಮುಚ್ಚಲ ಬಿಗಿಯಾಗಿದ್ದು, ಅಲ್ಲಿ ಸೋರಿಕೆಗೆ ಅವಕಾಶವಾಗದಿದ್ದರೆ, ಸಮೀಪದ ಮನೆಗಳ ತ್ಯಾಜ್ಯದ ಕೊಳವೆ ಮಾರ್ಗದಲ್ಲಿ ಹಿಮ್ಮುಖವಾಗಿ ಹರಿದುಬಂದು ಮನೆಯೊಳಗೆಲ್ಲ ಕೊಳಚೆ ನೀರು ತುಂಬಿಕೊಳ್ಳುತ್ತದೆ.

ಇವಿಷ್ಟೇ ಅಂಶಗಳಲ್ಲಿ ಅಲ್ಲ, ಮಳೆಗಾಲದಲ್ಲಿ ನಿಮ್ಮ ಕನಸಿನ ಮನೆಯನ್ನು, ಕಟ್ಟಡ್ಡವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಇನ್ನೂ ಹೆಚ್ಚಿನ ಗಮನ ಹರಿಸಬೇಕು. ವಾರದಲ್ಲಿ ಆಗಾಗ್ಗೆಯಾದರೂ ಮನೆಯ ಸುತ್ತ ಮತ್ತು ಮೇಲ್ಭಾಗದತ್ತ ಕಣ್ಣು ಹಾಯಿಸುತ್ತಿರಬೇಕು.

ಮಳೆ ನೀರು ಸಂಗ್ರಹ
ಮಹಾ ನಗರ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಹೊಸದಾಗಿ ವಾಸದ ಮನೆ, ವಾಣಿಜ್ಯ ಕಟ್ಟಡ ಕಟ್ಟಿದವರಿಗೆ ‘ಮಳೆ ನೀರು ಸಂಗ್ರಹ ವ್ಯವಸ್ಥೆ’ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಬಹಳಷ್ಟು ಮನೆಗಳು ನೆಪ ಮಾತ್ರ­ಕ್ಕೆಂಬಂತೆ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದೂ ಇದೆ.

ಇಂತಹ ಮನೆಗಳಲ್ಲಿ ಸದ್ಯ ವಾಸವಿರುವವರು ಮಳೆಗಾಲದಲ್ಲಿ ತೊಟ್ಟಿಯಲ್ಲಿ ಸಂಗ್ರಹವಾಗುವ ಮಳೆ ನೀರನ್ನು ಬಳಸಿಕೊಳ್ಳುವು ದಾಗಲೀ, ಕಾಲಕಾಲಕ್ಕೆ ಆ ನೀರನ್ನು ಹೊರ ಚೆಲ್ಲಿ ತೊಟ್ಟಿಯನ್ನು ಶುಚಿಯಾಗಿಟ್ಟುಕೊಳ್ಳುವುದಾಗಲೀ ಮಾಡುವುದೇ ಇಲ್ಲ. ಇಂತಹ ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯ ನಿರ್ವಹಣೆ ಸಂಪೂರ್ಣ ಶೂನ್ಯ ಮಟ್ಟದಲ್ಲಿರುತ್ತದೆ.

ಮುಂಜಾಗ್ರತೆ; ಸ್ವಚ್ಛತೆ
ಕೆಲವು ‘ನಾಗರಿಕ’ರಾದರೂ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತೊಟ್ಟಿಯಲ್ಲಿ ಸಂಗ್ರಹವಾದ ಮಳೆ ನೀರನ್ನು ಮಳೆಗಾಲ ಮುಗಿದ ನಂತರವೋ, ನೀರಿಗೆ ಕೊರತೆ ಎದುರಾಗುವ ಬೇಸಿಗೆ ಕಾಲದಲ್ಲೂ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ.

ಕೆಲವು ಮನೆಗಳಲ್ಲಿ ಸ್ನಾನಕ್ಕೆ, ಪಾತ್ರೆ ಬಟ್ಟೆ ತೊಳೆಯಲು ಮಳೆ ನೀರು ಸಂಗ್ರಹ ಬಳೆಯಾಗು ತ್ತಿರುವ ಉದಾಹರಣೆಗಳಿವೆ. ಇನ್ನು ಕೆಲವೆಡೆ ಉದ್ಯಾನಕ್ಕೆ, ಕಾರು ಸ್ವಚ್ಛಗೊಳಿಸಲು, ಅಂಗಳ ತೊಳೆಯಲು ಬಳಸಲಾಗುತ್ತಿದೆ.

ನೀರು ವ್ಯರ್ಥವಾಗದಿರಲಿ
ಇಂತಹ ಕೆಲವೇ ಕುಟುಂಬಗಳ ವಿವೇಚನೆಯ ನಡೆಯಿಂದ ಲಾದರೂ ಅಮೂಲ್ಯ ಕುಡಿಯುವ ನೀರು ವ್ಯರ್ಥವಾಗುವ, ದುರ್ಬಳಕೆಯಾಗುವ ಪ್ರಮಾಣ ಕಡಿಮೆಯಾಗಿದೆ ಎನ್ನಬಹುದು.

ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡ ಕಟ್ಟಡಗಳ ಮಾಲೀಕರು ಈ ಬಾರಿಯ ಮಳೆಗಾಲಕ್ಕೂ ಮುನ್ನ ಕೆಲವು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಒಳಿತು.

ತಾರಸಿ ಗುಡಿಸಿ
ಮೊದಲಿಗೆ ಮಳೆ ನೀರು ಬೀಳುವೆಡೆ ಅಂದರೆ ತಾರಸಿ, ಸಜ್ಜಾಗಳಲ್ಲಿ ಕಸ, ಕಡ್ಡಿ ಸಂಗ್ರಹವಾಗಿದ್ದರೆ ಅದನ್ನು ಸಂಪೂರ್ಣವಾಗಿ ತೆರೆವುಗೊಳಿಸಬೇಕು. ನಂತರ, ಮಳೆ ನೀರುವ ಸಂಗ್ರಹ ತೊಟ್ಟಿಗೆ ಸಾಗಿ ಬರುವ ಮಾರ್ಗದಲ್ಲಿನ ಕೊಳವೆಗಳನ್ನು ಪರಿಶೀಲಿಸಬೇಕು. ಎಲ್ಲಿಯಾದರೂ ಕಸ, ಕಡ್ಡಿ, ಸಣ್ಣ ಕಲ್ಲುಗಳು ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಯುಂಟು ಮಾಡುತ್ತಿದ್ದರೆ ಆ ಭಾಗದ ಕೊಳವೆಯನ್ನು ಬಿಚ್ಚಿ ತೆಗೆದು ಸ್ವಚ್ಛಗೊಳಿಸಿ ಮತ್ತೆ ಜೋಡಿಸಬೇಕು.

ಕೊಳವೆ ಮಾರ್ಗ?
ಆನಂತರದ್ದೇ ಪ್ರಮುಖ ಕೆಲಸ. ತಾರಸಿ, ಸಜ್ಜಾಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಿದ್ದರೂ ಸಹ, ಗಾಳಿ ಬೀಸಿದಂತೆ ಮತ್ತೆ ಕಸ ಸಂಗ್ರಹವಾಗುತ್ತಿರುತ್ತದೆ. ಇಲ್ಲಿ ಬಿದ್ದ ಮಳೆ ನೀರು ಸಣ್ಣ ಪ್ರಮಾಣದಲ್ಲಿಯಾದರೂ ಕಸ, ಕಡ್ಡಿಯನ್ನು ಹೊತ್ತು ತರುತ್ತದೆ.

ಫಿಲ್ಟರ್‌ ಪರಿಶೀಲಿಸಿ
ಗಲೀಜಾದ ನೀರು ಮಳೆ ನೀರಿನ ಸಂಗ್ರಹ ತೊಟ್ಟಿ ಸೇರದಂತೆ ತಡೆಯಲು ಕೊಳವೆ ಮಾರ್ಗದಲ್ಲಿ ಕೆಲವೆಡೆ ಅಥವಾ ಒಂದೆಡೆ ಫಿಲ್ಟರ್‌ ಜೋಡಿಸಿರಲಾಗುತ್ತದೆ. ಈ ಫಿಲ್ಟರನ್ನು ನುರಿತ ಕೆಲಸಗಾರರಿಂದ ಅಥವಾ ಫಿಲ್ಟರನ್ನು ಈ ಹಿಂದೆ ಅಳವಡಿಸಿಕೊಟ್ಟವರನ್ನೇ ಕರೆಸಿ ಸ್ವಚ್ಛಗೊಳಿಸಿ ಮರು ಜೋಡಣೆ ಮಾಡಿಸಬೇಕಾದ್ದು ಅತ್ಯಗತ್ಯ.

ಇಲ್ಲವಾದರೆ ನೀರು ಸರಾಗವಾಗಿ ಹರಿದು ತೊಟ್ಟಿ ಸೇರುವುದಕ್ಕೆ ಅಡ್ಡಿಯಾಗುತ್ತದೆ. ಅಲ್ಲದೇ ಸಂಗ್ರಹ ತೊಟ್ಟಿಗೂ ಗಲೀಜು ನೀರು ಸೇರುತ್ತದೆ. ಅದು ನಿಮ್ಮ ಮನೆ ಬಳಕೆಗೆ ಅಯೋಗ್ಯವಾಗುತ್ತದೆ. ಜತೆಗೆ ಇಡೀ ಮಳೆ ನೀರು ಸಂಗ್ರಹ ವ್ಯವಸ್ಥೆಯೇ ಹಾನಿಗೀಡಾಗುವ ಸಂಭವವೂ ಇರುತ್ತದೆ.

ಹಾಗಾಗಿ, ಮಳೆಗಾಲ ಆರಂಭಕ್ಕೂ ಮುನ್ನವೇ ನಿಮ್ಮ ಮನೆಯ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಸ್ವಚ್ಛಪಡಿಸಿಟ್ಟುಕೊಳ್ಳಿರಿ. ನೀರಿನ ಸದ್ಬಳಕೆಗೆ ಅವಕಾಶ ಮಾಡಿಕೊಳ್ಳಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT