ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಭಾವ; ಎಲ್ ನೈನೊ ಪರಿಣಾಮ?

ಸುದ್ದಿ ಹಿನ್ನೆಲೆ
Last Updated 22 ಜೂನ್ 2014, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಈ ಬಾರಿ ವಾಡಿಕೆಯ ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುವ ನಿರೀಕ್ಷೆ ಹುಸಿಯಾದಂತೆ ಕಂಡು ಬರುತ್ತಿದೆ.  ಜೂನ್ ತಿಂಗಳ ಮಳೆ ಅಭಾವವು ಶೇ 40ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ದೇಶದ ಅನೇಕ ಭಾಗಗಳಲ್ಲಿ ಮುಂಗಾರು ಆರಂಭದ ಮಳೆ ತೃಪ್ತಿದಾಯಕವಾಗಿಲ್ಲದಿರುವುದು ಬಿತ್ತನೆ ವಿಳಂಬಕ್ಕೂ ಕಾರಣವಾಗಲಿದೆ. 2009ರಲ್ಲಿ ದೇಶ ಕಂಡ ತೀವ್ರ ಸ್ವರೂಪದ ಬರಗಾಲದ ಸಂದರ್ಭದಲ್ಲಿಯೂ ಜೂನ್ ತಿಂಗಳ ಮಳೆ ಈಗಿನ ಮಟ್ಟದಲ್ಲಿಯೇ ಇತ್ತು.

`ಎಲ್ ನೈನೊ' ಪ್ರಭಾವದಿಂದಾಗಿ ದುರ್ಬಲ­ಗೊಳ್ಳ­ಲಿರುವ ಮುಂಗಾರು, ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಗಂಭೀರ ಸ್ವರೂಪದ ಸವಾಲು ಒಡ್ಡಲಿದೆ. 

ಪ್ರಭಾವದ ಲಕ್ಷಣಗಳು
ಎಲ್ ನೈನೊ ಹವಾಮಾನ ವಿದ್ಯಮಾನವು ಈಗಾಗಲೇ ಪೂರ್ಣವಾಗಿ ಅಭಿವೃದ್ಧಿಗೊಂಡಿಲ್ಲ. ಅದರ ಪೂರ್ಣ ಪ್ರಮಾಣದ ಪ್ರಭಾವವು ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಕಂಡು ಬರಲಿದೆ. ಅದರ ಪ್ರಭಾವದ ಲಕ್ಷಣಗಳು ಮಾತ್ರ ಈಗಾಗಲೇ ದುರ್ಬಲ ಮುಂಗಾರಿನ ರೂಪದಲ್ಲಿ ಕಂಡು ಬರುತ್ತಿವೆ. ಇದೇ ಕಾರಣಕ್ಕೆ ಈ ಬಾರಿ ಕೃಷಿ ಉತ್ಪಾದನೆ ಕುಂಠಿತಗೊಳ್ಳಲಿದ್ದು, ಆಹಾರ ಧಾನ್ಯಗಳ ಬೆಲೆಗಳು ಏರಲಿವೆ ಎಂದು ಅಂದಾಜಿಸಲಾಗುತ್ತಿದೆ.

ಅವಶ್ಯಕ ಸರಕುಗಳ ಬೆಲೆ ಏರಿಕೆಗೆ ಕಡಿವಾಣ ವಿಧಿಸುವಲ್ಲಿ ಯುಪಿಎ-2 ಸರ್ಕಾರ ವಿಫಲವಾಗಿದೆ ಎಂಬುದನ್ನೇ ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಬಳಸಿತ್ತು. ಮುಂಬರುವ ದಿನಗಳಲ್ಲಿ ಹಣದುಬ್ಬರ ಗರಿಷ್ಠ ಮಟ್ಟದಲ್ಲಿಯೇ ಇರುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಬೆಲೆ ಏರಿಕೆಗೆ ಮೂಗುದಾರ ಹಾಕಲು ಎನ್ ಡಿಎ ಸರ್ಕಾರ ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ.

ಡೋಲಾಯಮಾನ
ಎಲ್ ನೈನೊ ಪರಿಣಾಮವು ಎಲ್ಲ ಕಾಲಕ್ಕೂ ಒಂದೇ ಬಗೆಯಲ್ಲಿ ಇರುವುದಿಲ್ಲ ಮತ್ತು ಬರಗಾ­ಲಕ್ಕೂ ಕಾರಣವಾಗುವುದಿಲ್ಲ. ಇದರ ಪರಿಣಾಮ­ಗಳನ್ನು ಕರಾರುವಾಕ್ಕಾಗಿ ಅಂದಾಜು ಮಾಡಲೂ ಸಾಧ್ಯವಾಗುವುದಿಲ್ಲ. `ಎಲ್ ನೈನೊ' ಡೋಲಾ­ಯಮಾನ ರೀತಿಯಲ್ಲಿ ಇರುವುದೇ ಇದಕ್ಕೆ ಕಾರಣ.

ಪ್ಯಾಸಿಫಿಕ್ ಸಾಗರದಲ್ಲಿನ ಬಿಸಿ ವಾತಾವರಣದ ಪರಿಣಾಮವು ಪೂರ್ವ ಪ್ಯಾಸಿಫಿಕ್ ನ ಆಚೆಗೆ ಮತ್ತು  ಪ್ಯಾಸಿಫಿಕ್ ಸಾಗರದ ಕೇಂದ್ರ ಭಾಗದಲ್ಲಿ ಕಂಡು ಬಂದಾಗ ಮಾತ್ರ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುತ್ತದೆ. ಅಂದರೆ, ಬರೀ ಎಲ್ ನೈನೊ ಅಸ್ತಿತ್ವದಿಂದಷ್ಟೇ ಭಾರತ ಉಪಖಂಡದಲ್ಲಿ ಮುಂಗಾರು ಕೊರತೆ ಕಂಡು ಬರಲಾರದು. ಎಲ್ ನೈನೊ (ಬಿಸಿ ವಾತಾವರಣದ) ಪರಿಣಾಮವು ಯಾವ ದಿಕ್ಕಿನಲ್ಲಿ ಚಲಿಸುತ್ತದೆ ಎನ್ನುವುದೂ ಭಾರತದ ಮಟ್ಟಿಗೆ ಮುಖ್ಯವಾಗಿರುತ್ತದೆ. ಪ್ಯಾಸಿಫಿಕ್ ಸಾಗರದ ಯಾವ ಭಾಗದಲ್ಲಿ ಅಸಾಮಾನ್ಯ ಸ್ವರೂಪದ ಬಿಸಿ ಕಂಡುಬರುತ್ತದೆ ಎನ್ನುವುದೂ ಭಾರತದಲ್ಲಿನ ಮಳೆ ಪರಿಸ್ಥಿತಿ ಮೇಲೆ ಪ್ರಭಾವ ಬೀರುತ್ತದೆ. 

ನಿಜವಾದ ಅನುಮಾನ
ವಾಡಿಕೆಯ ಮುಂಗಾರು ಮಳೆಗೆ ಈ ಬಾರಿ `ಎಲ್ ನೈನೊ' ವಿದ್ಯಮಾನವು ಅಡ್ಡಿಪಡಿಸುವ ಸಾಧ್ಯ­ತೆಗಳ ಅನುಮಾನ ನಿಜವಾಗುತ್ತಿದ್ದು,  ಭತ್ತ, ಕಬ್ಬು ಮತ್ತು ಬೇಳೆಕಾಳು ಮತ್ತಿತರ ಕೃಷಿ ಉತ್ಪನ್ನ­ಗಳ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

`ಎಲ್ ನೈನೊ' ಪ್ರಭಾವದ ಬಗ್ಗೆ ಮುಂಚಿತ­ವಾಗಿ ಅಂದಾಜು ಮಾಡುವುದು ಸರಿಯಲ್ಲ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿತ್ತು.  ಅಂತರ­ರಾಷ್ಟ್ರೀಯ ಹವಾಮಾನ ಇಲಾಖೆಗಳ ಮುನ್ಸೂಚನೆ  ನಿಜವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

  ಪ್ಯಾಸಿಫಿಕ್ ಸಾಗರದ ಮೇಲ್ಮೈನ ಬಿಸಿ ಮತ್ತು ಗಾಳಿಯ ದಿಕ್ಕು ಏಷ್ಯಾದಲ್ಲಿ ಬರಗಾಲಕ್ಕೆ ಮತ್ತು ವಿಶ್ವದ ಇತರ ಭಾಗದಲ್ಲಿ ಅತಿವೃಷ್ಟಿ ತಂದೊಡ್ಡಲಿದೆ ಎಂದು ಶಂಕಿಸಲಾಗಿದೆ.

ಪ್ಯಾಸಿಫಿಕ್ ಸಾಗರದ ಮೇಲ್ಮೈ ಉಷ್ಣಾಂಶವು ಸರಾಸರಿಗೆ ಹೋಲಿಸಿದಾಗ ದೀರ್ಘಕಾಲದವರೆಗೆ ಬಿಸಿಯಾ­ಗಿದ್ದರೆ ಅದರಿಂದ `ಎಲ್ ನೈನೊ' ವಿದ್ಯಮಾನ ಘಟಿಸುತ್ತದೆ. ಈ ಹವಾಮಾನ ವೈಪರ­ೀತ್ಯದ ವಿದ್ಯಮಾನವು 2ರಿಂದ 7 ವರ್ಷಗಳ ಅವಧಿಯಲ್ಲಿ ಅನಿಯಮಿತವಾಗಿ ಸಂಭವಿಸುತ್ತದೆ. 9 ತಿಂಗಳಿನಿಂದ 2 ವರ್ಷದವರೆಗೆ ಇದರ ಪ್ರಭಾವ ಇರುತ್ತದೆ.

ಲಕ್ಷಣಗಳು
ಹಿಂದೂ ಮಹಾಸಾಗರ, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾದ ಸಾಗರ ಮೇಲ್ಮೈ ಒತ್ತಡದಲ್ಲಿ ಹೆಚ್ಚಳ, ಪ್ಯಾಸಿಫಿಕ್ ಸಾಗರದ ಪೂರ್ವ ಮತ್ತು ಮಧ್ಯಭಾಗದಲ್ಲಿ ಗಾಳಿಯ ಒತ್ತಡದಲ್ಲಿ ಇಳಿಕೆ, ದಕ್ಷಿಣ ಪ್ಯಾಸಿಫಿಕ್ ನಲ್ಲಿ ದುರ್ಬಲಗೊಳ್ಳುವ ಗಾಳಿ ಅಥವಾ ಪೆರು ಬಳಿ ಹೆಚ್ಚುವ ಗಾಳಿಯ ಉಷ್ಣತೆಯು ಉತ್ತರ ಪೆರುವಿನ ಮರುಭೂಮಿಯಲ್ಲಿ ಮಳೆಗೆ ಕಾರಣವಾಗುತ್ತದೆ.

ದಕ್ಷಿಣ ಅಮೆರಿಕದ ಪ್ಯಾಸಿಫಿಕ್ ಸಾಗರದಲ್ಲಿ ಕಾಲ ಕಾಲಕ್ಕೆ ಸಮುದ್ರದ ನೀರಿನ ಮೇಲ್ಮೈ ಉಷ್ಣತೆಯು ಹೆಚ್ಚಳಗೊಂಡ ಪರಿಣಾಮವಾಗಿ ಪ್ಯಾಸಿಫಿಕ್ ಸಾಗರದ ಹವಾಮಾನ ಸ್ವರೂಪದಲ್ಲಿ ಅನಿಶ್ಚಿತತೆ ಕಂಡು ಬರುತ್ತದೆ.  ಇದರ ಪರಿಣಾಮದಿಂದ ವಿಶ್ವದ ಇತರ ಭಾಗದಲ್ಲಿ  ಬರಗಾಲ, ಪ್ರವಾಹ ಮತ್ತಿತರ ಹವಾಮಾನ ವೈಪರೀತ್ಯಗಳು ಘಟಿಸುತ್ತವೆ.

ಪ್ಯಾಸಿಫಿಕ್ ಸಾಗರಕ್ಕೆ ತಗುಲಿಕೊಂಡಿರುವ ಭೂಭಾಗದಲ್ಲಿ ಈ ಹವಾಮಾನ ವೈಪರೀತ್ಯದ ಪರಿಣಾಮಗಳು ತೀವ್ರವಾಗಿರುತ್ತವೆ.

ಮುಂಗಾರಿನ ಸಂದರ್ಭದಲ್ಲಿ ಭಾರತದಲ್ಲಿನ ಮಳೆ ಬೀಳುವ ಪ್ರಮಾಣದ ಮೇಲೆ `ಎಲ್ ನೈನೊ' ವ್ಯತಿರಿಕ್ತ ಪರಿಣಾಮ ಬೀರಿದ ಬಗ್ಗೆ  ಈ ಹಿಂದೆಯೂ ಸಾಕಷ್ಟು ನಿದರ್ಶನಗಳಿವೆ. 2002, 2004 ಮತ್ತು 2009ರ ಸಂಭವಿಸಿದ ಬರಗಾಲಕ್ಕೆ ಆ ಸಂದರ್ಭದಲ್ಲಿ `ಎಲ್ ನೈನೊ' ರೂಪುಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT