ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಿಂತರೂ ಮುಗಿದಿಲ್ಲ ಕೊಳೆಯ ರಗಳೆ

ರಾಡಿ ತೊಳೆಯಲು ರಾತ್ರಿ ಇಡೀ ಜಾಗರಣೆ; ಲೆಕ್ಕಕ್ಕೆ ಸಿಗುತ್ತಿಲ್ಲ ನಷ್ಟದ ಅಂದಾಜು
Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಜನತೆ ತತ್ತರಿಸುವಂತೆ ಮಾಡಿದ ಮಳೆಯ ಪ್ರಮಾಣ ಶನಿವಾರ  ತಗ್ಗಿದೆ.  ತಗ್ಗು ಪ್ರದೇಶಗಳಲ್ಲಿ ಜಲಾವೃತಗೊಂಡಿದ್ದ ಮನೆಗಳಲ್ಲಿ ತುಂಬಿಕೊಂಡಿದ್ದ ಕೊಳಚೆ ನೀರನ್ನು ಹೊರ ಹಾಕುವ ಕಾರ್ಯ ಶನಿವಾರವೂ ಮುಂದುವರಿದಿತ್ತು. 

ಕೋಡಿ ಚಿಕ್ಕನಹಳ್ಳಿ, ಬಿಟಿಎಂ ಬಡಾವಣೆ ಪ್ರದೇಶಗಳಲ್ಲಿ  ಮಳೆ ನೀರಿನೊಂದಿಗೆ ಮನೆಯೊಳಗೆ ಸೇರಿದ್ದ ರಾಡಿಯನ್ನು ಹೊರಹಾಕಲು ಕೆಲವು ಸಂತ್ರಸ್ತರಂತೂ ಶುಕ್ರವಾರ ರಾತ್ರಿ ಇಡೀ ಜಾಗರಣೆ ನಡೆಸಿದರು.

ಕೊಳಚೆ ನೀರನ್ನು ಹೊರಗೆ ಹಾಕಿದ ಬಳಿಕವೂ ಅದರ ದುರ್ನಾತ ಹೋಗದಿರುವುದು ಸ್ಥಳೀಯರನ್ನು ಚಿಂತೆಗೀಡುಮಾಡಿದೆ.

ಕೃತಕ ನೆರೆಯಿಂದಾಗಿ ಅನುಗ್ರಹ ಬಡಾವಣೆ, ಡಿಯೋ ಲೇಔಟ್‌, ಡಾಕ್ಟರ್ಸ್‌ ಲೇಔಟ್‌ಗಳ ತುಂಬಾ ರಾಡಿ ಎದ್ದಿದೆ.  ಇಲ್ಲೆಲ್ಲಾ  ಪೌರ ಕಾರ್ಮಿಕರು ರಸ್ತೆಯನ್ನು ಸ್ವಚ್ಛಗೊಳಿಸಿ, ಕ್ರಿಮಿನಾಶಕ ಔಷಧಿ ಸಿಂಪಡಿಸುವ  ಕಾರ್ಯದಲ್ಲಿ ನಿರತರಾಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ತುಂಬಿಕೊಂಡಿದ್ದ  ಕೆಸರು ನೀರನ್ನು  ಮುಖ್ಯ ಕಾಲುವೆಗೆ ಪಂಪ್‌ ಮಾಡುವುದರಲ್ಲಿ ತಲ್ಲೀನರಾಗಿದ್ದರು. 

ನಷ್ಟದ ಲೆಕ್ಕಾಚಾರ: ಜಲಾವೃತ ಪ್ರದೇಶಗಳಲ್ಲಿ ಅಕ್ಕಪಕ್ಕದ ಮನೆಯವರು ಸೇರಿಕೊಂಡು ತಮ್ಮ ಮನೆಯ ಎಷ್ಟು ಸಮಾಗ್ರಿಗಳು ಹಾನಿಗೊಂಡಿವೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.  ಕೃತಕ ನೆರೆ ತಂದೊಡ್ಡಿರುವ ನಷ್ಟದ ಪ್ರಮಾಣ ಎಷ್ಟೆಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ. ಸ್ಥಳೀಯರ ಅಂದಾಜಿನ ಪ್ರಕಾರ,  ಮನೆಯೊಳಗಿದ್ದ ವಿದ್ಯುನ್ಮಾನ ಪರಿಕರಗಳ ಹಾನಿ ಹಾಗೂ ವಾಹನಗಳಿಗೆ ಆಗಿರುವ ಹಾನಿಯಿಂದ ಆಗಿರುವ ನಷ್ಟವೇ ಕೋಟಿ ಮೀರುತ್ತದೆ. 

ಡಿಯೋ ಲೇಔಟ್‌ನಲ್ಲಿ 70ಕ್ಕೂ ಅಧಿಕ   ಹಾಗೂ ಅನುಗ್ರಹ ಬಡಾವಣೆಯಲ್ಲಿ 40ಕ್ಕೂ ಅಧಿಕ ಮನೆಗಳಿವೆ. ಹೆಚ್ಚಿನ ಮನೆಯವರು ಕಾರು ಹೊಂದಿದ್ದಾರೆ. ಈ ಪರಿಸರದಲ್ಲಿ ಏನಿಲ್ಲವೆಂದರೂ 50ಕ್ಕೂ ಅಧಿಕ ವಾಹನಗಳು ಜಲಾವೃತವಾಗಿವೆ ಎನ್ನುತ್ತಾರೆ ಸ್ಥಳೀಯರು.

‘ಮನೆಯಲ್ಲಿದ್ದ ಫ್ರಿಡ್ಜ್‌, ಗ್ರೈಂಡರ್‌, ಸ್ಟೆಬಿಲೈಜರ್‌, ಯುಪಿಎಸ್‌ಗಳು ಹದಗೆಟ್ಟಿವೆ.  ಎರ್ಟಿಗಾ ಕಾರು ಹದಗೆಟ್ಟಿದೆ. ಏನಿಲ್ಲವೆಂದರೂ ₹ 2 ಲಕ್ಷಕ್ಕಿಂತ ಹೆಚ್ಚು ನಷ್ಟ ಉಂಟಾಗಿದೆ’ ಎನ್ನುತ್ತಾರೆ ಡಿಯೊ ಎನ್‌ಕ್ಲೇವ್‌ ಬಡಾವಣೆಯ ನಿವಾಸಿ  ಮನೋಜ್‌ ಭಂಡಾರಿ.

‘ನನ್ನ ಕಾರು ಸ್ಟಾರ್ಟ್‌ ಆಗುತ್ತಿಲ್ಲ. ಸ್ಕೂಟರ್‌ ಕೂಡಾ ಕೆಟ್ಟಿದೆ’ ಎಂದು ಅನುಗ್ರಹ ಬಡಾವಣೆಯ ಪ್ರಮೋದ್ ರೋಡಗಿ ತಿಳಿಸಿದರು.
ಮತ್ತೆ ಮತ್ತೆ ನೆರೆ: ‘ಕೋಡಿ ಚಿಕ್ಕನ ಹಳ್ಳಿ ಪರಿಸರದಲ್ಲಿ ನೆರೆ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ಈ ವರ್ಷ ಒಟ್ಟು ಮೂರು ಬಾರಿ ಇಲ್ಲಿ ನೆರೆ ಬಂದಿದೆ. ಆದರೆ, ನೆರೆ ಪ್ರಮಾಣ ಇಷ್ಟೊಂದು ತೀವ್ರವಾಗಿದ್ದುದು ಇದೇ ಮೊದಲು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸ್ಮಿತಾ.

‘ನಾನು 16 ವರ್ಷಗಳಿಂದ ಇಲ್ಲಿದ್ದೇನೆ. ನಾನು ನೋಡುತ್ತಿರುವ 12ನೇ ನೆರೆ ಇದು’ ಎನ್ನುತ್ತಾರೆ ಸೇತು ಮಾಧವನ್‌.

ನೆರೆ ವೇಳೆ ನೆರವಿಗೆ ಬಂದ ನೆರಮನೆ: ‘ಮನೆಯಲ್ಲಿ ಎದೆಮಟ್ಟದಲ್ಲಿ ನೀರು ತುಂಬಿತ್ತು. ಹಾಗಾಗಿ ಅಡುಗೆ ಮಾಡುವ ಸ್ಥಿತಿಯಲ್ಲಿ ನಾವಿರಲಿಲ್ಲ. ಮನೆಯಿಂದ ಹೊರಗೂ ಹೋಗಲಾರದೆ  ಮೇಲಿನ ಮಹಡಿಯಲ್ಲಿ ಉಳಿದುಕೊಂಡೆವು.  ನಮ್ಮ ಮನೆಯ ಸಾಮಗ್ರಿಗಳನ್ನು ಪಕ್ಕದ ಮನೆಯವರಿಗೆ ಕೊಟ್ಟೆವು. ಅವರು ನಮಗೆ  ಅಡುಗೆ ಮಾಡಿಕೊಟ್ಟರು’ ಎಂದು ಅನುಗ್ರಹ ಬಡಾವಣೆಯ ಮಾಲತಿ ಅವರು  ತಿಳಿಸಿದರು.

ನೀರಿನೊಂದಿಗೆ ಬಂದ ಅತಿಥಿ: ಅನುಗ್ರಹ ಬಡಾವಣೆಯ ಶ್ರೀನಿವಾಸ್‌ ಅವರ ಮನೆಗೆ ಹಾಗೂ ರಾಜಶೇಖರ್‌ ಅವರ ಮನೆಗೆ ನಾಗರ ಹಾವುಗಳು ನುಗ್ಗಿದ್ದವು. ಬಳಿಕ ಹಾವು ಹಿಡಿಯುವವರನ್ನು ಕರೆಸಿ ಅವುಗಳನ್ನು ಹಿಡಿದು ಕಾಡಿಗೆ ಬಿಡಲಾಯಿತು. 

ಕೋರಮಂಗಲದ ನಿವಾಸಿ ಸುಂದರ್‌ ರಾಜನ್‌ ಅವರು ಅನುಗ್ರಹ ಬಡಾವಣೆಯಲ್ಲಿ ಮನೆ ಕಟ್ಟಿಸುತ್ತಿದ್ದಾರೆ.  ಬಡಾವಣೆ ಜಲಾವೃತವಾಗಿರುವ ಸುದ್ದಿ ಕೇಳಿ ಅವರು ಸ್ಥಳಕ್ಕೆ ಧಾವಿಸಿದರು. 

‘ಕೊರಮಂಗಲದಲ್ಲಿ ಟ್ರಾಫಿಕ್‌ ಸಮಸ್ಯೆ ಜಾಸ್ತಿ ಎಂಬ ಕಾರಣಕ್ಕೆ ಇಲ್ಲಿ. ಕಟ್ಟಿಸುತ್ತಿದ್ದೇವೆ. ನೆರೆಯ ಸಮಸ್ಯೆ ನನ್ನನ್ನು ದಿಗಿಲುಗೊಳಿಸಿದೆ’ ಎನ್ನುತ್ತಾರೆ ಸುಂದರ್‌ ರಾಜನ್‌.

ಸಂಪ್‌ ನೀರು ಕಲುಷಿತ: ಕೆರೆಯು ಕೊಳಚೆ ನೀರು ಸೇರಿ ಮನೆಯ ಸಂಪ್‌ಗಳಲ್ಲಿ ಸಂಗ್ರಹಿಸಿದ್ದ ನೀರೆಲ್ಲವೂ ಕಲುಷಿತಗೊಂಡಿದೆ. ಅವುಗಳನ್ನು ಖಾಲಿ ಮಾಡುವುದು ಕೂಡಾ ಸಮಸ್ಯೆಯಾಗಿ ಪರಿಣಮಿಸಿದೆ.

ಕೂಲಿಯಾಳು ಸಿಗುತ್ತಿಲ್ಲ ವೃದ್ಧ ದಂಪತಿ ಅಳಲು
ನೆರೆಯಲ್ಲಿ ಸಿಲುಕಿದ ವೃದ್ಧ ದಂಪತಿಯ ಪರಿಸ್ಥಿತಿ ಕರುಣಾಜನಕವಾಗಿದೆ.  74 ವರ್ಷ ರಾಮಮೂರ್ತಿ ಅವರು ಪತ್ನಿ ಜೊತೆ ಡಿಯೊ ಲೇಔಟ್‌ನ  ಮನೆಯಲ್ಲಿ ವಾಸವಾಗಿದ್ದಾರೆ. ಅವರ ಪುತ್ರ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.

ಈ ಬಡಾವಣೆಯ ಇತರ ನಿವಾಸಿಗಳ ಮನೆಯೊಳಗೆ ತುಂಬಿದ್ದ ನೀರು ಶನಿವಾರ ಮಧ್ಯಾಹ್ನದ ವೇಳೆಗೆ ಬಹುತೇಕ ಖಾಲಿ ಆಗಿದೆ. ಆದರೆ ಈ  ದಂಪತಿಯ ಮನೆಯೊಳಗೆ ಸೇರಿರುವ ನೀರು ಮಾತ್ರ ಹಾಗೆಯೇ ಇತ್ತು. ಅವರಿಬ್ಬರು ಸೇರಿ  ಕೈಲಾದಷ್ಟು ನೀರನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರ ಮನೆಯ ಅಡುಗೆ ಕೋಣೆಗಳಲ್ಲಿ ಒದ್ದೆಯಾಗಿರುವ ಸಾಮಾಗ್ರಿಗಳು, ಈಗಲೂ ನೀರನಲ್ಲಿ ಬಿದ್ದುಕೊಂಡಿರುವ ಫ್ರಿಡ್ಜ್‌ ಅವರ ಅಸಹಾಯಕತೆಗೆ ಕನ್ನಡಿ ಹಿಡಿವಂತಿವೆ.

‘ನೀರನ್ನು ಹೊರ ಹಾಕುವಷ್ಟು ತ್ರಾಣ ನಮಗಿಲ್ಲ. ಬೇರೆ ಕೆಲಸದಾಳುಗಳಿಂದ ಈ ಕೆಲಸ ಮಾಡಿಸೋಣವೆಂದರೆ ಕೂಲಿಯಾಳುಗಳೂ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ರಾಮಮೂರ್ತಿ.

ಸಮಸ್ಯೆ ತಂದೊಡ್ಡಿದ ತಡೆಗೋಡೆ
‘ಶೌಚಾಲಯಗಳ ತ್ಯಾಜ್ಯನೀರು ಸೇರಿ ಕಲುಷಿತಗೊಂಡಿರುವ ಕಾಲುವೆಯ ನೀರು   ಕೆರೆಗೆ ಸೇರ ಬಾರದೆಂಬ ಉದ್ದೇಶದಿಂದ ಕಟ್ಟಿರುವ ತಡೆಗೋಡೆಯೇ ಕೃತಕ ನೆರೆಯನ್ನು ಸೃಷ್ಟಿಸುತ್ತಿದೆ’ ಎಂದು ಆರೋಪಿಸುತ್ತಾರೆ ಅನುಗ್ರಹ ಬಡಾವಣೆಯ ನಿವಾಸಿ ಸೇತು ಮಾಧವ ಅವರು.

ರಾಜಕಾಲುವೆಯೊಂದು ಈ ಹಿಂದೆ ಕೋಡಿ ಚಿಕ್ಕನಹಳ್ಳಿ ಕೆರೆಯನ್ನು ಸೇರುತ್ತಿತ್ತು. ಇಲ್ಲಿ ಒಳಚರಂಡಿ ಸಂಪರ್ಕ ಸಮರ್ಪಕವಾಗಿಲ್ಲದ ಕಾರಣ ಸುತ್ತಮುತ್ತಲ ಮನೆಗಳ ಶೌಚಾಲಯದ ನೀರನ್ನು ಈ ಕಾಲುವೆಗೆ ಬಿಡುತ್ತಿದ್ದಾರೆ. ಈ ಕೊಳಚೆ ನೀರು  ಕೆರೆಯನ್ನು ಸೇರಬಾರದು ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯವರು ತಡೆಗೋಡೆಯನ್ನು ನಿರ್ಮಿಸಿದ್ದಾರೆ. ಸುಮಾರು 20 ಅಡಿ ಅಗಲದ ಕಾಲುವೆಯಲ್ಲಿ ಹರಿದುಬರುವ ಕೊಳಚೆ ನೀರು ಕೆರೆಗೆ ಸಮಾನಾಂತರವಾಗಿ  ನಿರ್ಮಿಸಿರುವ ಪುಟ್ಟ ಕಾಲುವೆಗಳಲ್ಲಿ ಹರಿಯುತ್ತದೆ. ಜೋರು ಮಳೆ ಬಂದಾಗ ಹರಿದು ಬರುವ  ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲ. ಮಳೆ ನೀರೆಲ್ಲ  ಕೆರೆ ಸೇರುವ ಬದಲು ಪಕ್ಕದ ಬಡಾವಣೆಗಳಿಗೆ ನುಗ್ಗುತ್ತಿದೆ’ ಎಂದು ಸಮಸ್ಯೆ ಮೂಲವನ್ನು ವಿವರಿಸುತ್ತಾರೆ ಅವರು.

‘ತಡೆಗೋಡೆಯ ಎತ್ತರವನ್ನು ತಗ್ಗಿಸುವ ಮೂಲಕ ಕಾಲುವೆಯಲ್ಲಿ ಹರಿದು ಬರುವ ಮಳೆಯ ನೀರು  ಕೆರೆಯನ್ನು ಸೇರುವುದಕ್ಕೆ ಅವಕಾಶ ಕಲ್ಪಿಸಬೇಕು. ಎರಡು ಅಡಿ ಎತ್ತರದ ತಡೆಗೋಡೆ ಬೇಸಿಗೆಯಲ್ಲಿ ಶೌಚಾಲಯದ ನೀರು ಕೆರೆ ಸೇರದಂತೆ ತಡೆಯಲು ಸಾಕಾಗುತ್ತದೆ’ ಎಂದು ಸಲಹೆ ನೀಡುತ್ತಾರೆ ಅವರು.

‘ಕೆಲವರು ಮನೆಯನ್ನು ನಿರ್ಮಿಸುವಾಗ ರಾಜಕಾಲುವೆಯನ್ನು ಬೇಕಾಬಿಟ್ಟಿ ತಿರುಗಿಸಿದ್ದಾರೆ. ಅನೇಕ ಕಡೆ ಈ ರಾಜಕಾಲುವೆ 90 ಡಿಗ್ರಿಯಷ್ಟು ತಿರುವು ಪಡೆಯುತ್ತದೆ.  ಇಂತಹ ಕಡೆ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲ. ಮೊದಲು ಇಂತಹ ಒತ್ತುವರಿಗಳನ್ನು ತೆರವುಗೊಳಿಸಿ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜಕಾಲುವೆಯನ್ನು ಸೇರುವ ಕಸಗಳನ್ನು ಸಕಾಲದಲ್ಲಿ ತೆರವುಗೊಳಿಸಿದರೆ ಇಲ್ಲಿ ಯಾವ  ಸಮಸ್ಯೆಯೂ ಸೃಷ್ಟಿಯಾಗದು’ ಎನ್ನುತ್ತಾರೆ ಡಿಯೊ ಲೇಔಟ್‌ ನಿವಾಸಿ ಮನೋಜ್‌ ಭಂಡಾರಿ.

ಸಹಜ ಸ್ಥಿತಿಗೆ ಮರಳದ ಜನಜೀವನ
ಜಲಾವೃತಗೊಂಡಿದ್ದ ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿ ನೀರಿನ ಅಬ್ಬರ ತಗ್ಗಿದೆ. ಆದರೆ,  ಜನಜೀವನ ಸಹಜ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. 

ಬಡಾವಣೆಯ ಕೆಎಎಸ್‌ ಅಧಿಕಾರಿಗಳ ಕಾಲೊನಿಯ ಕೆಲವು ಮುಖ್ಯ ರಸ್ತೆಗಳು ಶನಿವಾರವೂ ಜಲಾವೃತಗೊಂಡಿದ್ದವು. ಬಹುಮಹಡಿ ಕಟ್ಟಡಗಳ ತಳಅಂತಸ್ತು ಸೇರಿದಂತೆ ವಿವಿಧೆಡೆ ನಿಂತಿದ್ದ ನೀರನ್ನು ಪಂಪ್‌ಗಳ ಮೂಲಕ ಹೊರ ಹಾಕುವ ಸನ್ನಿವೇಶ ಸಾಮಾನ್ಯವಾಗಿತ್ತು. ಕೆಲವರು ಅಗ್ನಿ ಶಾಮಕ ಸಿಬ್ಬಂದಿಯ ನೆರವಿಗೆ ಕಾಯದೇ  ಪಂಪ್‌ಗಳನ್ನು ಬಾಡಿಗೆ ಪಡೆದು ನೀರು ಖಾಲಿ ಮಾಡಿದರು.

ನೀರಿಗೆ ತತ್ವಾರ: ನೀರು ಪೂರೈಕೆ ವ್ಯವಸ್ಥೆಯೂ ಹಾನಿಗೊಂಡಿದ್ದರಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು.  ಸ್ಥಳೀಯರು ಬಿಂದಿಗೆ, ಕ್ಯಾನ್‌ಗಳನ್ನು ಹಿಡಿದು ಟ್ಯಾಂಕರ್‍ ನೀರಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರು ಶುದ್ಧನೀರಿನ ಕ್ಯಾನ್‌ಗಳನ್ನು ಖರೀದಿಸಿಕೊಂಡು ಹೋಗುತ್ತಿದ್ದರು.

ಸಂಪ್‌ ಶುಚಿಗೊಳಿಸಲು 3 ಸಾವಿರ!: ನೆರೆಯಿಂದಾಗಿ ಕೋಡಿ ಚಿಕ್ಕನಹಳ್ಳಿ ಪರಿಸರದ ಹೆಚ್ಚಿನ ಎಲ್ಲಾ ಮನೆಗಳ ಸಂಪ್‌ಗಳು ಕಲುಷಿತಗೊಂಡಿವೆ. ಇವುಗಳನ್ನು  ಶುಚಿಗೊಳಿಸುವುದು ಸ್ಥಳೀಯರ ಪಾಲಿಗೆ ಚಿಂತೆಯ ವಿಷಯವಾಗಿದೆ.  ಸಂಪ್‌ಗೆ ಇಳಿದು ಅದನ್ನು ಶುಚಿಗೊಳಿಸುವುದಕ್ಕೆ ಪಳಗಿದ ಕೂಲಿಯಾಳುಗಳ ಅಗತ್ಯ ಇದೆ.  ಈ ಕೆಲಸಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿರುವುದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

‘ಸಾಮಾನ್ಯವಾಗಿ ₹ 1 ಸಾವಿರ ರೂಪಾಯಿ ಕೊಟ್ಟರೆ ಕಾರ್ಮಿಕರು ಸಂಪ್‌ ಶುಚಿ ಗೊಳಿಸುತ್ತಾರೆ. ಈಗ ಈ ಕೆಲಸಕ್ಕೆ ₹ 3 ಸಾವಿರ ಕೇಳುತ್ತಿದ್ದಾರೆ’ ಎಂದು  ಸ್ಥಳೀಯರೊಬ್ಬರು ತಿಳಿಸಿದರು.

ಕೆಲಸ ಮುಗಿಸಿಯೇ ಹೋಗುತ್ತೇವೆ: ನಾಲ್ಕು ಅಗ್ನಿಶಾಮಕ ವಾಹನಗಳು, ನಾಲ್ಕು ಪೋರ್ಟೆಬಲ್ ಪಂಪ್‌ಗಳು, 15 ಅಧಿಕಾರಿಗಳು, 30 ಸಿಬ್ಬಂದಿ ದಿನವಿಡೀ ಕಾರ್ಯಾಚರಣೆ ನಡೆಸಿ ಕಸ್ಟಮ್ಸ್‌ ಕ್ವಾರ್ಟರ್ಸ್‌ ಸ್ವಚ್ಛಗೊಳಿಸುತ್ತಿದ್ದೇವೆ’ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ (ಪೂರ್ವ ವಲಯ) ಸಿ.ಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

75ಕ್ಕೂ ಅಧಿಕ ಮಂದಿ ರಕ್ಷಣೆ
ಅಗ್ನಿಶಾಮಕ ಸಿಬ್ಬಂದಿ ಹಾಗೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಯ (ಎನ್‌ಡಿಆರ್‌ಎಫ್‌)  ಸಿಬ್ಬಂದಿ ರಾತ್ರಿ ಇಡೀ  ನಿದ್ದೆ ಬಿಟ್ಟು ನೆರೆ ಸಂತ್ರಸ್ತರ ಪುನರ್ವಸತಿಗೆ ನೆರವಾಗಿದ್ದಾರೆ. 75ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.

‘ಎರಡು ಇಲಾಖೆಯ 200ಕ್ಕೂ ಅಧಿಕ ಸಿಬ್ಬಂದಿ ಪುನರ್ವಸತಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ  75ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದೇವೆ. ಮನೆಯೊಳಗೆ ಸಿಲುಕಿದ್ದವರ ಪೈಕಿ ಅನಾರೋಗ್ಯ ಪೀಡಿತರೂ ಇದ್ದರು. ಅವರು  ಗೆಳೆಯರ ಹಾಗೂ ಸಂಬಂಧಿಕರ ಮನೆಗೆ ಹೋಗುವುದಕ್ಕೆ ನಮ್ಮ ಸಿಬ್ಬಂದಿ ನೆರವಾಗಿದ್ದಾರೆ’ ಎಂದು ಅಗ್ನಿಶಾಮಕ ದಳದ ಉಪನಿರ್ದೇಶಕ ಎನ್‌.ಆರ್‌.ಮಾರ್ಕಂಡೇಯ  ‘ಪ್ರಜಾವಾಣಿ’ಗೆ ತಿಳಿಸಿದರು.   

ಮೆಚ್ಚುಗೆ: ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌, ಗೃಹರಕ್ಷಕ ದಳ, ಪೊಲೀಸ್‌ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಪರಿಸ್ಥಿತಿ ಮರುಕಳಿಸದಂತೆ ತಡೆಯುವ ಜವಾಬ್ದಾರಿ ಬಿಬಿಎಂಪಿಗೆ ಇದೆ ಎಂದು ಸ್ಥಳೀಯರು ಹೇಳಿದರು.  

ಮೂಲಸೌಕರ್ಯಗಳಿಗೂ ಹಾನಿ: ಅನೇಕ ಕಡೆ ಮಳೆ ನೀರು ಚರಂಡಿಗೆ ಭಾರಿ ಹಾನಿ ಉಂಟಾಗಿದೆ. ರಾಜಕಾಲುವೆಯ ದಂಡೆಗಳು ಕುಸಿದಿವೆ. ರಸ್ತೆಗಳೂ ಶಿಥಿಲಗೊಂಡಿವೆ.

ಮಕ್ಕಳಿಗೆ ಮೀನು ಹಿಡಿಯುವ ಮೋಜು: ಹಿರಿಯರೆಲ್ಲ ಮನೆಯನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿದ್ದರೆ ಮಕ್ಕಳಿಗೆ ಮೀನು ಹಿಡಿಯುವ ಮೋಜು. ಕೆಲವು ಮಕ್ಕಳು ಕೆರೆಯ ಪಕ್ಕದ ಪುಟ್ಟ ಕಾಲುವೆಗಳಲ್ಲಿ ಮೀನು ಹಿಡಿಯುತ್ತಿದ್ದ ದೃಶ್ಯ ಶನಿವಾರವೂ ಕಂಡು ಬಂತು.

ಪ್ರವಾಹದ ಸ್ಥಳಗಳಿಗೆ ಸಾರಿಗೆ ಸಚಿವ, ಮುಖ್ಯ ಕಾರ್ಯದರ್ಶಿ ಭೇಟಿ
ಪ್ರವಾಹದಿಂದ ಜಲಾವೃತಗೊಂಡಿದ್ದ ಕೋಡಿಚಿಕ್ಕನಹಳ್ಳಿ ಹಾಗೂ ಬಿಟಿಎಂ ಬಡಾವಣೆ 2ನೇ ಹಂತಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್‌ ಹಾಗೂ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ರಾಜಕಾಲುವೆಗಳಲ್ಲಿ ತುಂಬಿದ್ದ ಹೂಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಬೇಕು. ಜಲಾವೃತಗೊಂಡ ಸ್ಥಳಗಳಲ್ಲಿ ಪಂಪ್‌ಸೆಟ್‌ ಅಳವಡಿಸಿ ನೀರು ಹೊರ ಹಾಕಬೇಕು. ಅನಾಹುತ ಸಂಭವಿಸಿರುವ ಜಾಗಗಳಲ್ಲಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು  ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಜುನಾಥ ರೆಡ್ಡಿ, ‘ಕೋಡಿಚಿಕ್ಕನಹಳ್ಳಿ ಹಾಗೂ ಬಿಟಿಎಂ ಬಡಾವಣೆಯಲ್ಲಿ ಪ್ರವಾಹ ಉಂಟಾಗಲು ಅರಣ್ಯ ಇಲಾಖೆ ಅಧಿಕಾರಿಗಳೇ ಕಾರಣ. ಮಡಿವಾಳ ಕೆರೆ ಅಂಗಳದಲ್ಲಿ ಮಳೆ ನೀರು ಕಾಲುವೆ ನಿರ್ಮಾಣಕ್ಕೆ ಅವಕಾಶ ನೀಡಿರಲಿಲ್ಲ’ ಎಂದು ದೂರಿದರು.

‘ಮಡಿವಾಳ ಕೆರೆಗೆ ಏಳು ಕೆರೆಗಳು ಸಂಪರ್ಕಗೊಂಡಿವೆ. ಈ ಕೆರೆಗಳು ಕೋಡಿ ಬಿದ್ದಿದ್ದರಿಂದ ಮಡಿವಾಳ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ನೀರು ರಸ್ತೆಯ ಮೇಲೆ ಹರಿದಿದೆ. ಕೋಡಿಚಿಕ್ಕನಹಳ್ಳಿ, ಬಿಟಿಎಂ ಬಡಾವಣೆಯ ಕೆಲ ಜಾಗಗಳು ತಗ್ಗು ಪ್ರದೇಶಗಳಾಗಿವೆ. ಹೀಗಾಗಿ ನೀರು ಸಂಗ್ರಹಗೊಂಡಿದೆ’ ಎಂದರು.

‘ಮಡಿವಾಳ ಕೆರೆ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಪ್ರವಾಹವನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ್ದೇವೆ. ಇದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ತಡೆಯಾಜ್ಞೆ  ತೆರವುಗೊಳಿಸುವಂತೆ ಕೋರುತ್ತೇವೆ’ ಎಂದರು.

‘ಈ ರಾಜಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸುತ್ತೇವೆ. ಜತೆಗೆ ಕಾಲುವೆಯನ್ನು 7–8 ಅಡಿ ಆಳದವರೆಗೆ ಅಗೆದು ಸುತ್ತಲೂ ಕಾಂಕ್ರೀಟ್‌ ಕಟ್ಟಡ ನಿರ್ಮಿಸುತ್ತೇವೆ’ ಎಂದು ಹೇಳಿದರು. ‘ಕೆರೆ ಜಲಾನಯನ ಪ್ರದೇಶಗಳು, ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸುವ ಜತೆಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ನಗರದ 36 ಮಳೆ ನೀರು ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯಲಾಗುತ್ತಿದೆ. ₹ 32 ಕೋಟಿ ವೆಚ್ಚದ ಮಳೆ ನೀರು ಕಾಲುವೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದರು.

ಕೈಕೊಂಡ್ರಹಳ್ಳಿ ಕೆರೆಗೆ ಭೇಟಿ: ಸರ್ಜಾಪುರ ರಸ್ತೆಯ ಕೈಗೊಂಡ್ರಹಳ್ಳಿ ಕೆರೆಗೆ ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.

‘ಕೈಗೊಂಡ್ರಹಳ್ಳಿಯ ಐದಾರು ಮನೆಗಳಿಗೆ ನೀರು ನುಗ್ಗಿದೆ.  ರಾಜಕಾಲುವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಎರಡು ಕಾಂಪೌಂಡ್‌ಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಲಾಯಿತು. ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ಪಂಪ್‌ಸೆಟ್‌ ಅಳವಡಿಸಿ ನೀರನ್ನು ಹೊರ ಬಿಡಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT