ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಿಗೆ ಮಣ್ಣಿನೊಡಲು

Last Updated 27 ಜೂನ್ 2016, 20:20 IST
ಅಕ್ಷರ ಗಾತ್ರ

ನದಿ ಜೋಡಣೆ, ನೀರು ಹಂಚಿಕೆಯ ಚರ್ಚೆ ನಡೆದಷ್ಟು ತಲೆ ಮೇಲೆ ಸುರಿಯುವ ಮಳೆಯ ಮಾತು ಆಡುವವರಿಲ್ಲ. ನಮಗೆ ದೂರದ ನೀರು ಬರುವುದು ಯಾವತ್ತೋ ಗೊತ್ತಿಲ್ಲ, ಬಂದಾಗ ಬರಲಿ ಬಿಡಿ.

ಮಳೆಯ ನೀರು ನಮ್ಮ ಕಣ್ಣೆದುರೇ ಈಗ ಓಡುತ್ತಿದೆ, ಅಲ್ಲಿಯೇ ಮುಂದಿನ ಜಲಕ್ಷಾಮಕ್ಕೆ ಸ್ವಾಗತದ ಬೋರ್ಡು ಕಾಣಿಸುತ್ತಿದೆ. ನೀರು ಹೋರಾಟಕ್ಕೆ ವರ್ಷಗಟ್ಟಲೇ ಕುಳಿತ ನರಗುಂದ, ನವಲಗುಂದದಲ್ಲಿ ಸುರಿದ ಮಳೆ ಬೆಣ್ಣೆಹೊಳೆಯ ಪ್ರವಾಹವಾಗಿ ಹರಿದಿದೆ. ಬರದ ಸಂಕಟ ಅರ್ಥವಾದವರಿಗೆ ನೀರು ಹಿಡಿಯುವ ನೆನಪಿರಲಿ...

ಮಳೆ ಸುರಿಯಲು ಶುರುವಾಗಿದೆ. ಜವಾರಿ ಭಾಷೆಯಲ್ಲಿ ಹಾಸನದ ಹೇಮಾವತಿ ನದಿ ಸೀಮೆಯ ಹಿರಿಯರು ಹೇಳಿದಂತೆ ಕೊಡಗು ಸೋನೆ, ಐನೂರು ಸೋನೆ, ಗೌರಿ ಜಡೆ (ಗೌರಿ ಹಬ್ಬದ ಮಳೆ) ಸುರಿಯಿತೋ ಗೊತ್ತಿಲ್ಲ.

ವನವಾಸಿ ಗೌಳಿಗರಂತೆ ಹನಿಯ ಸ್ವರೂಪ ನೋಡಿ ಕಪ್ಪೆ ಮಳೆ, ನವಿಲು ಮಳೆ ಬಂತೆಂದು ಕೆಲವರು ಹೇಳಬಹುದು. ಬೀದರ್ ಗಡಿಯಿಂದ ಆರಂಭಿಸಿ ಚುಂಚೋಳಿ, ಕೊಪ್ಪಳ, ವಿಜಯಪುರ, ನರಗುಂದ, ನವಲಗುಂದ, ಅಥಣಿ, ಚಿತ್ರದುರ್ಗ, ಸವಣೂರು, ಕೋಲಾರ  ಮುಂತಾದ ಪ್ರದೇಶದ ನೀರಿನ ಗೆಳೆಯರೆಲ್ಲ ಮಳೆ ಮಾತಿಗೆ ಸಿಕ್ಕರು, ಊರಿಗೆ ಬಂದ ನೆಂಟರಂತೆ ಮಳೆ ಪರಿಚಯಿಸಿದರು.

ಎಷ್ಟು ಮಿಲಿ ಮೀಟರ್ ಸುರಿಯಿತು? ಸರಕಾರೀ ಲೆಕ್ಕ ನಮ್ಮದಲ್ಲ. ಭೂಮಿ ಒದ್ದೆಯಾಗಿ ನೀರು ಪುಟ್ಟ ಪ್ರವಾಹವಾಗುವಷ್ಟು ‘ಹಸಿ ಮಳೆ’ ಜೂನ್ ಈಚೆಗೆ ಏಳೆಂಟು ಸಾರಿ ಬಂತೆಂಬುದು  ಕುಷ್ಟಗಿಯ ರಮೇಶ್ ಬಲೂಟಗಿ ಹೊಲದ ವರ್ತಮಾನ ನೀಡಿದರು. ಹತ್ತು ವರ್ಷದ ಹಿಂದೆ ಇಂಥ ಜೋರು ಮಳೆ ಬಂದಿತ್ತೆಂದು ನೆನಪು ಎತ್ತಿಟ್ಟರು.

ಭರ್ಜರಿ ಎರಡೂವರೆ ತಾಸು ಸುರಿದು ಮಲೆನಾಡಿನಂತೆ ನೀರು ಬಂತೆಂದು ನಂದಿ ವನದ ಬಸವರಾಜ್ ಡಿಗ್ಗಾವಿ ವಿವರಿಸಿದರು. ಅಬ್ಬರದ ಬರದಲ್ಲಿ ಕಲ್ಬುರ್ಗಿಯ ಸೀಮೆಯ ರೈತರು ನೀರು, ಮೇವಿಲ್ಲದೇ ದನಕರು ಮಾರಾಟ ಮಾಡುವ ಸಂದರ್ಭದಲ್ಲಿ ಸಾವಿರಾರು ಎತ್ತುಗಳಿಗೆ ಆಶ್ರಯ ಕಲ್ಪಿಸಿದವರು ಇವರು.

ವಿಜಯಪುರ ಜಿಲ್ಲೆಯ ಜೀರಂಕಲಗಿ ಹಳ್ಳಿ ಹಳ್ಳದ ಪ್ರವಾಹದಿಂದ ಜಲಾವೃತವಾದ ಸುದ್ದಿ ಕೇಳಿದ್ದೇವೆ. ಕೃಷಿಹೊಂಡಗಳು ಮುಚ್ಚಿ ಹೋದದ್ದು, ಕೆರೆ ಕಟ್ಟೆಗಳು ಒಡೆದ ಮಾಹಿತಿಗಳು ದೊರಕುತ್ತಿವೆ. ಫಲವತ್ತಾದ ಮಣ್ಣು ನೀರಿನ ಜೊತೆ ಕೊಚ್ಚಿ ಹೋಗಿದೆ, ಹೊಲದಲ್ಲಿ ಪ್ರವಾಹ ಹರಿದು ಬದುಗಳು ನಾಮಾವಶೇಷವಾಗಿವೆಯೆಂದು ಬೀದರ್ ಜಿಲ್ಲೆಯ ಬಸವಕಲ್ಯಾಣದ ಚಂದ್ರಶೇಖರ ಕಾಡಾದಿ ಹುಲಸೂರಿನ ಮಳೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ಆಂಧ್ರದ ಗಡಿಯ ಬಯಲುಸೀಮೆಯ ದಟ್ಟಡವಿಗಳಲ್ಲಿ ಚುಂಚೋಳಿ ಬೆಟ್ಟಗಳಿಗೆ ಅಗ್ರಸ್ಥಾನ, ದಾಂಡೇಲಿಯಂಥ ದಂಡಕಾರಣ್ಯ ಉಳಿಸಿಕೊಂಡ ಊರಲ್ಲಿ ವಾಡಿಕೆಗಿಂತ ಜಾಸ್ತಿ ಮಳೆ ಬಂದಿದೆ. ಮಳೆ ಆಶ್ರಿತ ಬೆಳೆ ಬೆಳೆಯುವ ಪ್ರದೇಶದ ರೈತರಿಗೆಲ್ಲ ಖುಷಿಯಾಗಿದೆ. ಮಲೆನಾಡಿನಲ್ಲಿ ಅಬ್ಬರದ ವೇಷ ಕಣ್ಮರೆಯಾಗಿ ತುಂತುರು ಹನಿಯಾಗಿ ವರುಣ ನೃತ್ಯ ಶುರುವಾಗಿದೆ.

ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದ ಹಳ್ಳಿಗಳು ತೀವ್ರ ಜಲಕ್ಷಾಮದಿಂದ ತತ್ತರಿಸಿದಾಗ ಹಲವು ದಿನ ಬರ ವೀಕ್ಷಣೆಯಲ್ಲಿ ಕಂಡ ಚಿತ್ರ ದಾಖಲೆಗಳಿವೆ. ಟ್ಯಾಂಕರ್ ನೀರು ನಂಬಿ 2015ರ ಅಕ್ಟೋಬರ್‌ದಿಂದ ಬದುಕಿದ ಆಳಂದದ ದುತ್ತರಗಾಂವ್‌ದ ಜನ ಬುಟ್ಟಿಯಲ್ಲಿ ಸ್ನಾನ ಮಾಡುವುದು ಕಲಿತು ಸ್ನಾನದ ನೀರನ್ನು ಬಟ್ಟೆ ತೊಳೆಯಲು ಮರುಬಳಕೆ ಮಾಡಿದವರು!

ಮೋತಿ ತಲಾಬ್ ಒಣಗಿ ನಿಂತಾಗ ಸರಸರನೇ ಸಾಲು ಹಚ್ಚಿ ಒಂಬತ್ತು ಕೊಳವೆ ಬಾವಿಗಳನ್ನು ಕೆರೆಯಂಗಳದಲ್ಲಿ ಕೊರೆಸಿದ ಜಲಮಾಯೆಯ ಕಷ್ಟ ಸವಣೂರಿಗೆ ಗೊತ್ತಿದೆ. ಒಂದು ಕೈಯಿಲ್ಲದ ಮುದುಕಪ್ಪ ತಳ್ಳುಗಾಡಿಯಲ್ಲಿ ಬಿಂದಿಗೆ ತುಂಬಿಕೊಂಡು ಕಿಲೋ ಮೀಟರ್ ದೂರ ಜೀವಜಲಕ್ಕೆ ಅಲೆದಾಡಿದ ಚಿತ್ರ ಕಣ್ಣೆದುರಿದೆ. ಹೈದರಾಬಾದ್ ಕರ್ನಾಟಕವನ್ನು ಕಾಡಿದ ಬರಸಾಥ್ (1972)ಬರದ ಬಳಿಕದ ಅತಿ ದೊಡ್ಡ ಬರವಿದು.

ಉಷ್ಣಾಂಶ 46 ಡಿಗ್ರಿ, 1950 ಅಡಿ ಕೊಳವೆ ಬಾವಿಯ ಆಳದಲ್ಲಿ ನೀರು ಹುಡುಕಾಟದ ಆಕ್ರಂದನ, ಬಿಸಿಲ ಪ್ರಹಾರಕ್ಕೆ ಸಾವು, ನೀರಿನ ಜಗಳಕ್ಕೆ ಕೊಲೆಯನ್ನು ನಾವು ಕಂಡಿದ್ದು ಇದೇ ವರ್ಷ ಎಂಬುದು ಎಲ್ಲರಿಗೂ ನೆನಪಿರಲಿ! ರಾಯಚೂರಿನ ಹಸಿ ಬಾಣಂತಿಯರು ಎಳೆ ಶಿಶುಗಳ ಜೀವ ಉಳಿಸಲು ಆಸ್ಪತ್ರೆಯ ವಿಶೇಷ ನಿಗಾ ಘಟಕಕ್ಕೆ ಸೇರಿಸಿ ವರಾಂಡದಲ್ಲಿ ಸೊಳ್ಳೆ ಕಡಿಸಿಕೊಳ್ಳುತ್ತ ಮಲಗಿದರು.

ಬಿಸಿಲ ಪ್ರಹಾರಕ್ಕೆ ಮಕ್ಕಳ ಮಿದುಳು ಅಪಾಯಕ್ಕೆ ಸಿಲುಕಿದ ಆಘಾತಕಾರಿ ಸನ್ನಿವೇಶಗಳು ವರದಿಯಾದವು! ಆಸ್ಪತ್ರೆಗಳಲ್ಲಿ ವಿದ್ಯುತ್, ನೀರಿಗೆ ಸಮಸ್ಯೆಯಾದಾಗ ಮುಂದೇನೆಂದು ದಾರಿ ಯಾರಿಗೂ ಗೊತ್ತಿರಲಿಲ್ಲ.

40–45 ಅಡಿ ಆಳದ ಕಲ್ಲಿನ ಬಾವಿಯಲ್ಲಿ ಕಟ್ಟಕಡೆಗೆ ಉಳಿದ ಒಂದೆರಡು ಬಿಂದಿಗೆ ನೀರೆತ್ತಲು ಹಗ್ಗದ ಮೂಲಕ ಇಳಿಯುವ ಮಹಿಳೆಯರು ಜಲದ ಕಡು ಕಷ್ಟದ ಪ್ರತ್ಯಕ್ಷ ಸಾಕ್ಷಿ. ಕಲುಶಿತ ನೀರು ಕುಡಿದು ಆಸ್ಪತ್ರೆಗೆ ಸೇರಿದವರ ಲೆಕ್ಕ ಸಿಗಲಿಲ್ಲ. ಹನಿ ನೀರು ಕಣ್ಮರೆಯಾದರೆ ಏನಾಗುತ್ತದೆಂಬ ಪ್ರಾತ್ಯಕ್ಷಿಕೆಗಳು ಊರಿಗೆಲ್ಲ ತಲುಪಿವೆ. ಇದಾದ ಬಳಿಕ ಈಗ ಮಳೆ ಬಂದಿದೆ.

ಮಳೆ ಬಂದರೆ ನೀರಾಗದು
ಅಂತೂ ಮಳೆ ಬಂತೆಂದು ರೈತರು ಹೊಲಕ್ಕೆ ಇಳಿದರು. ಮೀನಿಗೂ ನೀರಿಲ್ಲದೇ ಒಣಗಿದ ಹಳ್ಳದಲ್ಲಿ ಪುಟ್ಟ ತೊರೆಗೆ ಜೀವ ಬಂದಿದೆ. ಕಾಡಿನ ಸ್ವರೂಪ ಬದಲಾಗಿ ಹೊಸ ಉತ್ಸಾಹದಲ್ಲಿ ಚಿಗುರಿವೆ. ಹನಿ ನೀರಿಲ್ಲದಿದ್ದರೆ ಬೇಸಾಯವೂ ಇಲ್ಲ, ಬದುಕು ಇಲ್ಲವೆಂದು ಕಳೆದ ವರ್ಷವಿಡೀ ಅತ್ತವರು  ನಾವು.

ಆದಾಯ ನೀಡಿದ ಅನ್ನದ ನೆಲ ಬಿರುಕು ಬಿಟ್ಟಾಗಲೇ ನಮ್ಮ ಹುಡುಗರು ಊರು ಬಿಟ್ಟರು. ಅತ್ತ ನಗರಕ್ಕೆ ಹೋದರೆ ಹೊಟೆಲ್‌ಗಳು ಬಂದ್ ಆಗಿ, ಕಾರ್ಖಾನೆಗಳು ಬಾಗಿಲೆಳೆದು ಕುಳಿತವು. ನೀರಿಗೂ ನಿರುದ್ಯೋಗಕ್ಕೂ ಸಂಬಂಧಗಳು ಕಾಣಿಸಿದವು. ಇಷ್ಟೆಲ್ಲ ಅರಿವು ಬಿತ್ತಿದ ಬಳಿಕ ಸುರಿವ ಮಳೆಯಲ್ಲಿ ನಾವು ಹೇಗಿರಬೇಕಿತ್ತೋ ಹಾಗಿಲ್ಲ! ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆದಾಡುವ ಮನಸ್ಥಿತಿ.

ಓಡುವ ನೀರು ಹಿಡಿಯಲು ಎಷ್ಟು ಹೆಜ್ಜೆ ಇಟ್ಟೆವು? ಹೊಲ, ತೋಟ, ಮನೆ, ಉದ್ಯಮ ಎಲ್ಲರ ಮುಂದೆ ಪ್ರಶ್ನೆಗಳಿವೆ. ನೀರಿನ ಸಂಕಟದ ನೆನಪಿಗೆಂದು ಟ್ಯಾಂಕರ್ ಬಿಲ್ಲು ಇನ್ನೂ ಬಾಕಿಯಿರಬಹುದು, ಜಲಕ್ಷಾಮದ ಪಾಠ ಮರೆತದ್ದೇಕೆ? ಪ್ರಶ್ನೆಯಿದೆ ಎಲ್ಲರಿಗೆ.

ಮಳೆ ಸುರಿದರೆ ಬಾವಿಯಲ್ಲಿ ನೀರು ತುಂಬಿ ಕೆರೆ, ಜಲಾಶಯಗಳು ಭರ್ತಿಯಾಗುವುದು ಕಂಡಿದ್ದೇವೆ. ಈಗ ಎಣಿಸಿದರೆ ಊರಲ್ಲಿ ಎಷ್ಟು ಕೆರೆ? ಜಲಾಶಯಗಳಿವೆ? ಬಹುತೇಕ ಹೂಳು ತುಂಬಿವೆ, ಕೆರೆಗೆ ನೀರು ಒಳಬರುವ ಕಾಲುವೆಗಳು ಮುಚ್ಚಿವೆ. ಹೊಲದ 60–70 ಅಡಿ ಆಳದ ಬಾವಿಗಳಿಗೆ ಅಂತರ್ಜಲ ಏರಿದರೆ ನೀರಾಗುತ್ತದೆ.

ಅಲ್ಲೇ ರಸ್ತೆ ಪಕ್ಕದ ಕಾಲುವೆಗಳಲ್ಲಿ, ಗುಡ್ಡದ ಇಳಿಜಾರಿನ ನೀರ ದಾರಿಯಲ್ಲಿ ಲಕ್ಷಾಂತರ ಲೀಟರ್ ಮಳೆ ನೀರು ಹರಿಯುತ್ತಿದ್ದರೂ ಬಾವಿಗೆ ಮರುಪೂರಣ ಮಾಡುವ ಕಾಳಜಿಯಿಲ್ಲ!ರಾಣಿಬೆನ್ನೂರಿನ ಕಾಕೋಳದಲ್ಲಿ ಹಳೆಯ ಬಾವಿಗೆ ಮಳೆ ನೀರು ತುಂಬಿಸಿ ಗೆದ್ದದ್ದು ಗೊತ್ತಿಲ್ಲವೇ?  ಕೊಳವೆ ಬಾವಿಗಳನ್ನು ಪ್ರತಿ ವರ್ಷ ಕೊರೆಸುವ ಕೃಷಿಕರು ಚಿತ್ರದುರ್ಗ, ಕೋಲಾರ, ಕೊಪ್ಪಳಗಳಲ್ಲಿ ಸಿಗುತ್ತಾರೆ.

ಮಲೆನಾಡಿನಲ್ಲೂ ಕೊಳವೆ ಬಾವಿಯ ಕ್ಲಾಸು ಶುರುವಾಗಿದೆ. ಬಾವಿ ಒಣಗಿದಾಗ ಇನ್ನೊಂದೆಡೆ ಜಲಶೋಧ ಪ್ರಯತ್ನ ನಡೆಸುತ್ತ ಹೊಲವೆಲ್ಲ ಬಾವಿಮಯವಾಗುತ್ತಿವೆ. ಒಣಗಿದ ಬಾವಿಗಳಿಗೆ ಮಳೆ ನೀರು ತುಂಬಿಸುವ ಸರಳ ವಿದ್ಯೆ ಯಾರಿಗೂ ಬೇಕಾಗಿಲ್ಲ. ನೀರಿಲ್ಲದೇ ಅಳುವುದು ಅಭ್ಯಾಸವಾದವರಿಗೂ  ಮಳೆ ನೀರು ಕಾಣಿಸುವುದಿಲ್ಲವೆಂದರೆ ಹೇಗೆ?

ಮಳೆ ಸುರಿದು ಮಣ್ಣು ಹಸಿಯಾದರೆ ಸಾಕೆಂದು ಹಿರಿಯರು ಹೇಳುತ್ತಿದ್ದರು. ಅದು ರಾಗಿ, ಜೋಳ, ತೊಗರಿ, ಮೆಣಸು, ಸಜ್ಜೆ, ಹತ್ತಿ, ಕುಸಬಿ, ನವಣೆ ಬೆಳೆಯುವ ಮಳೆ ಆಶ್ರಿತ ಮಾತಾಗಿತ್ತು. ಈಗ ಕಾಲ ಬದಲಾಗಿ ಅದೇ ಹೊಲದಲ್ಲಿ ಅಂತರ್ಜಲ ಕುಡಿಯುವ ಬಾಳೆ, ದ್ರಾಕ್ಷಿ, ದಾಳಿಂಬೆ, ಕಬ್ಬು, ಅಡಿಕೆ, ತೆಂಗು ಬಂದಿವೆ.

ಮಳೆ ನೀರನ್ನು ಓಡಲು ಬಿಟ್ಟು ರೋಜಾಕಂಟಿ (ಲಂಟಾನಾ), ಕಾರೆಕಂಟಿಯ ದಿಬ್ಬಗಳಲ್ಲಿ ಅಡಿಕೆ ಹಚ್ಚುತ್ತ ಹೊರಟರೆ ನೀರು ಇನ್ಯಾವ ಅನ್ಯಗ್ರಹದಿಂದ ಬರಬೇಕು? ಚಿಕ್ಕಬಳ್ಳಾಪುರದಲ್ಲಿ ವಾರ್ಷಿಕ 800 ಮಿಲಿ ಮೀಟರ್ ಸುರಿಯುತ್ತದೆ, ಅಂದರೆ ಪ್ರತಿ ಎಕರೆಯಲ್ಲಿ ಸುಮಾರು 32 ಲಕ್ಷ ಲೀಟರ್ ಮಳೆ ನೀರು ಬೀಳುತ್ತದೆ.

ಇವುಗಳನ್ನು ಬದು, ಒಡ್ಡು, ಕೆರೆ, ಬಾವಿಗಳಲ್ಲಿ ಮರುಪೂರಣ ಮಾಡಿದರೆ ಜಲಕ್ಷಾಮ ಪರಿಹಾರವಾಗುತ್ತದೆ. ಸಮುದಾಯ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಓಡುವ ನೀರನ್ನು ಭೂಮಿಯಲ್ಲಿ ಬಂಧಿಸಬೇಕು. ಮಳೆ ಪ್ರವಾಹದಿಂದ ಹಳ್ಳಿ ಜಲಾವೃತವಾದ ಮಾತ್ರಕ್ಕೆ ಬೇಸಿಗೆ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ. ನಾವು ಹೀಗೆ ಇದ್ದರೆ ಎಷ್ಟು ಸುರಿದರೂ ಬೇಸಿಗೆಗೆ ಬಿಂದಿಗೆ ನೀರು ಉಳಿಯುವ ಖಾತ್ರಿಯಿಲ್ಲ. 

ಜಲ ಹೋರಾಟ ಜಲ ಜಾಗೃತಿಯಾಗಿಲ್ಲ
ಜಲಸಾಕ್ಷರತೆಗೆ ಎರಡು ದಶಕಗಳ ಹಿಂದೆ ಜನಜಾಗೃತಿಯ ಕಹಳೆ ಊದಿದ ಶ್ರೀಪಡ್ರೆ ‘ಜಲವಿಮೆ’ ಪದವನ್ನು ಆಗಾಗ ನೆನಪಿಸುತ್ತಾರೆ. ಹೊಲದಲ್ಲಿ, ಮನೆಯ ಚಾವಣಿಯಲ್ಲಿ ಸುರಿದ ಮಳೆ ನೀರನ್ನು  ಭೂಮಿಗೆ ಇಂಗಿಸಿ ಭವಿಷ್ಯದ ನೀರಿನ ಸಮಸ್ಯೆ ಎದುರಿಸುವ ತಂತ್ರವಿದು.
ಜಲತಜ್ಞ ದೇವರಾಜ ರೆಡ್ಡಿ  ಬಯಲುಸೀಮೆಯ ‘ಜಲಮನ’ ಬಲ್ಲವರು. ನಮ್ಮ ಮಧ್ಯೆ ಮೂರು ರೀತಿಯ ಜನಗಳಿದ್ದಾರೆ.

ಒಬ್ಬರು ಮಳೆ ನೀರು ಹಿಡಿಯುವುದು ಉತ್ತಮ ಕೆಲಸ, ಎಲ್ಲರೂ ಮಾಡಬೇಕು. ಸರ್ಕಾರ ಸಬ್ಸಿಡಿ/ ನೆರವು ನೀಡಬೇಕೆಂದು ಮಾತಾಡುವವರು. ಅವರೆಂದೂ ನೇರ ಕೆಲಸಕ್ಕೆ ಇಳಿಯುವುದಿಲ್ಲ, ಮಾತಾಡುವುದು ಬಿಡುವುದಿಲ್ಲ. ಇನ್ನೊಂದು ವರ್ಗ, ಇದೆಲ್ಲ ಆಗುಹೋಗದ ಕೆಲಸ, ಹಣವೆಲ್ಲಿದೆ? ಎನ್ನುತ್ತ ಕಾಲ ನೂಕುವವರು, ನಕಾರಾತ್ಮಕ ಮನಸ್ಸು ಇವರದು. ಸರ್ಕಾರ ಯೋಜನೆ ರೂಪಿಸಲಿ, ಬಿಡಲಿ ತಮ್ಮ ಹೊಲದಲ್ಲಿ ಸುರಿವ ಮಳೆ ನೀರು ಉಳಿಸುವ ಕಾರ್ಯ ಮಾಡುವವರು  ಮೂರನೇ ವರ್ಗದವರು.

ಬೇಸಿಗೆ ಪೂರ್ತಿ ನೀರಿಗಾಗಿ ಅತ್ಯಂತ ಕಷ್ಟ ಪಡುವ ನೆಲದಲ್ಲಿ ಮಳೆ ಸುರಿದಾಗ ನೀರು ಹಿಡಿಯಲು ನೆಲದಲ್ಲಿ ನಿಲ್ಲುವರು ಇಂದಿಗೂ ಶೇಕಡಾ ಎರಡಕ್ಕಿಂತ ಕಡಿಮೆ. ನಮ್ಮ ಆಡಳಿತ ಕೃಷಿಹೊಂಡ ಮಾಡಿದರೆ ನಿಮಗಿಷ್ಟು ಹಣ ಸಿಗುತ್ತದೆಂದು ಹೇಳುತ್ತದೆ. ಸರ್ಕಾರಿ ಇಲಾಖೆಗಳಿಗೆ ಕೃಷಿ ಹೊಂಡ, ಬಾಂದಾರ, ಒಡ್ಡು, ಕೆರೆಯನ್ನು ಹಣದ ದೃಷ್ಟಿಯಿಂದಷ್ಟೇ ನೋಡುತ್ತಿದೆ.

ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಗಳನ್ನು ಜನಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸಲು ಕಾಲಾಳುಗಳ ಕಾರ್ಯಪಡೆಯೇ ಇಲ್ಲ! ಮಳೆ ಪ್ರವಾಹದ ಹಾನಿ ಅಂದಾಜಿಗೆ ಓಡುವ ಆಡಳಿತ ಇನ್ನು ಮಳೆ ನೀರು ಎಷ್ಟು ಓಡಿ ಹೋಯ್ತೆಂದು ಸಮೀಕ್ಷೆ ಶುರು ಮಾಡಬೇಕು. ಬೇಸಿಗೆಗೆ ಟ್ಯಾಂಕರ್ ಓಡಿಸುವ ಕಾರಣ ಆಗ ಅರ್ಥವಾಗುತ್ತದೆ. ರಾಜ್ಯದ ನೀರಿನ ಹೋರಾಟ ಇಂದಿಗೂ ಜಲಜಾಗೃತಿಯ ಸ್ವರೂಪ ಪಡೆದಿಲ್ಲ.

ನೀರಿನ ಮಿತ ಬಳಕೆ, ಮಳೆ ನೀರು ಸಂರಕ್ಷಣೆ, ಕೆರೆ ಕಾಯಕದ ಅರಿವಿಲ್ಲದೇ  ಇವು ರಾಜಕೀಯದ ವೇದಿಕೆಯಾಗುತ್ತಿವೆಯೆಂದು ಕೋಲಾರದ ಪರಿಸರ ಚಿಂತಕ ಎಚ್.ಎಮ್. ಪುರುಷೋತ್ತಮರಾವ್  ವಿಶ್ಲೇಷಿಸುತ್ತಾರೆ. ಪ್ರತಿ ಗ್ರಾಮ ಮಳೆ ನಮ್ಮದು, ನೀರು ನಮ್ಮದು ತತ್ವ ಅನುಸರಿಸಬೇಕು.

ಎಲ್ಲರೂ ಹೀಗೆ ನೀರು ಹಿಡಿದರೆ ಅಕ್ಕಪಕ್ಕದ ಗ್ರಾಮಗಳ ಹೊಳೆ, ಹಳ್ಳಗಳ ಕಥೆಯೇನು? ಯೋಚಿಸಬೇಡಿ, ನಮಗೆ ತಾಕತ್ತಿರುವುದು ಬಹಳ ಕಡಿಮೆ, ಸುರಿದ ಎಲ್ಲ ನೀರನ್ನು ಹಿಡಿಯುತ್ತೇವೆಂದು ಹೊರಟರೂ ಶೇಕಡಾ 20ಕ್ಕಿಂತ ಜಾಸ್ತಿ ಹಿಡಿಯಲು ಸಾಧ್ಯವಿಲ್ಲ. ಭೂಮಿಯ ನೀರು ಹಿಡಿಯುವ ಶಕ್ತಿ ತೀರಿದ ಬಳಿಕ ತಗ್ಗಿನ ನೆಲೆಗಳು ಬಸಿಗಾಲುವೆಗಳಾಗಿ ತಿಳಿ ನೀರಿನ ಒರತೆ ಹರಿವು ಶುರುವಾಗುತ್ತವೆ.

ನೀರು ಭೂಮಿ ಮೇಲ್ಮೈಯಲ್ಲಿ ಓಡುವುದಕ್ಕೂ, ಆಳಕ್ಕಿಳಿದು ಒಳಗಿನ ಶಿಲಾಪದರಗಳಲ್ಲಿ ತೆವಳುತ್ತ ಸಾಗುವುದಕ್ಕೂ ವ್ಯತ್ಯಾಸವಿದೆ.
ಹೆದ್ದಾರಿಯಲ್ಲಿ ವೇಗದ ಸಂಚಾರದಿಂದಾಗುವ ಅಪಘಾತ ತಡೆಗೆ ವೇಗಮಿತಿ ಅಳವಡಿಸಿದಂತೆ ಗುಡ್ಡದ ನೀರಿನ ಸಂಚಾರ ನಿಧಾನವಾದಷ್ಟೂ  ಜಲಕ್ಷಾಮದ ಅಪಾಯ ಕಡಿಮೆ.

ಒಮ್ಮೆ ಕಲಬುರ್ಗಿಯ ಕಮಲಾಪುರ ಬೆಟ್ಟದಲ್ಲಿ ನೀರು ಹಿಡಿಯುವ ಕೆಲಸ ಸಮಗ್ರವಾಗಿ ನಡೆದರೆ ಫೆಬ್ರುವರಿಗೆ ಬತ್ತುವ ಕಮಲಾಪುರ ಹಳ್ಳ ಮಾರ್ಚ್ ಕೊನೆಯವರೆಗೂ ಹರಿಯುತ್ತದೆ. ಹಳ್ಳಕ್ಕೆ ಅಲ್ಲಲ್ಲಿ ಒಡ್ಡುಗಳನ್ನು ಹಾಕಿ ಮಳೆ ಮುಗಿದ ತಕ್ಷಣ ನೀರು ಶೇಖರಣೆ ಶುರುಮಾಡಿದರೆ ಇನ್ನೊಂದು ತಿಂಗಳು ಹೆಚ್ಚುವರಿಯಾಗಿ ನೀರು ಸಿಗಬಹುದು. ನಮ್ಮ ನೀರಿನ ಸಮಸ್ಯೆ ಇರುವುದು ಬೇಸಿಗೆಯ ನಾಲ್ಕೈದು ತಿಂಗಳು,  ಇದಕ್ಕೆ ಮಳೆ ನೀರು ಸಂಗ್ರಹ ಮೊದಲ ಮದ್ದಾಗುತ್ತದೆ.

ಪಾತ್ರೆಗಳಿಲ್ಲದ ಬಡವರ ಕೇರಿಗೆ  ನಾವು
ಲಕ್ಷ ಲಕ್ಷ ಲೀಟರ್ ಹೊಲ, ಕಾಡುಗಳಲ್ಲಿ ಸುರಿಯುತ್ತಿದ್ದರೂ ಆ ನೀರು ಶೇಖರಿಸಲು ಪಾತ್ರೆಗಳಿಲ್ಲದ ಬಡತನ ನಮ್ಮದು. ರಾಜ ಮಹಾರಾಜರು ಮಾಡಿಸಿದ ಕೆರೆಗಳನ್ನು ಸುಸ್ಥಿಯಲ್ಲಿಡಲಿಲ್ಲ, ಹೊಸ ಕೆರೆಗಳನ್ನು ಮಾಡಿಸಲಿಲ್ಲ.

ಕೊಳವೆ ಬಾವಿ ಕೊರೆಸುತ್ತ ನೀರಿನ ಬಳಕೆ ಜಾಸ್ತಿ ಮಾಡುತ್ತ ಹೋದರೆ ಮುಂದೇನು? ಮಳೆಯಲ್ಲಿ ನೀರಿನ ಧ್ಯಾನ ಶುರುವಾಗಬೇಕು. ಸರ್ಕಾರ ಎಲ್ಲವನ್ನು ಮಾಡಬೇಕೇ? ಸಾಧ್ಯವಿಲ್ಲ. ನಮ್ಮ ಮಳೆ, ಮಣ್ಣು, ಬೆಳೆ ವಿಧಾನ, ನೀರಿನ ಬಳಕೆ ಗಮನಿಸಿಕೊಂಡು ನೀರಿನ ‘ಅಡಿಟ್’ ಮಾಡಿದರೆ ನಾವು ಕನ್ನ ಹಾಕುತ್ತಿರುವ ಅಂತರ್ಜಲ ಸಂಪತ್ತಿನ ಸ್ಥಿತಿ ಗೊತ್ತಾಗುತ್ತದೆ.

ಹಳಿತಪ್ಪಿದ ಕೃಷಿ ಸೂತ್ರಗಳು ಅರ್ಥವಾಗುತ್ತವೆ. ಹೊಲದ ಬದುವಿನಲ್ಲಿ ಮರ ಬೆಳೆಸಿ, ಐದಾರು ಎಕರೆಗೊಂದು ವಿಶಾಲ ಕೆರೆ ರೂಪಿಸುವ ಸಂಕಲ್ಪದಿಂದ ಕಾರ್ಯೋನ್ಮುಖರಾದರೆ ಎಲ್ಲರೂ ಗೆಲ್ಲಬಹುದು.

ಎರೆ ಹೊಲಕ್ಕೆ ಬದು ರೂಪಿಸಿ, ಕೆರೆಯಲ್ಲಿ ಮಳೆ ನೀರು ಹಿಡಿಯುತ್ತ ಅರೆಬರ, ಕಡುಬರದಲ್ಲೂ ಬದುಕುವ ದಾರಿ ತೋರಿಸುವವರು ಬಾಗಲಕೋಟೆಯ ಹುನಗುಂದದ ಜಲತಜ್ಞ ಡಾ. ಮಲ್ಲಣ್ಣ  ನಾಗರಾಳ್, ಇವರು ಕಳೆದ ವರ್ಷ ಸುರಿದ ಒಂದೆರಡು ಸಣ್ಣ ಮಳೆಯಲ್ಲಿ ಎಕರೆಗೆ ಹತ್ತು ಹನ್ನೆರಡು ಚೀಲ ಬಿಳಿಜೋಳ ಬೆಳೆದಿದ್ದಾರೆ.

  ನೂರಾರು ರೈತರು ಇವರ ಮಾರ್ಗದರ್ಶನದಲ್ಲಿ ನೀರು ಹಿಡಿದು ಗೆದ್ದಿದ್ದಾರೆ. 800 ಮಿಲಿ ಮೀಟರ್ ಮಳೆಯ ಧಾರವಾಡದ ಸುರಶೆಟ್ಟಿಕೊಪ್ಪದಲ್ಲಿ ಕೃಷಿ ಅರಣ್ಯ, ಹಸಿರು ಬೇಲಿ, ಕೃಷಿಹೊಂಡ, ಹಣ್ಣಿನ ಮರ ಬೆಳೆಸಿ ದಶಕಗಳಿಂದ ನೆಮ್ಮದಿಯಲ್ಲಿ ಬದುಕುತ್ತಿರುವ ಯಶೋಗಾಥೆಗಳನ್ನು ಧಾರವಾಡದ ಡಾ.ಪ್ರಕಾಶ್ ಭಟ್ ವಿವರಿಸುತ್ತಾರೆ.

ನಿಜ, ಹೇಳಬೇಕೆಂದರೆ ರಾಜ್ಯದ ಜಲಕ್ಷಾಮಕ್ಕೆ ಮಳೆ ಕೊರತೆ ಮುಖ್ಯಕಾರಣವಲ್ಲ. ಮಳೆ ನೀರು ಹಿಡಿಯದಿರುವುದೇ ಬಹು ದೊಡ್ಡ ಸಮಸ್ಯೆ.

ಮಳೆ ಮೋಸಕ್ಕಿಂತ ನಮ್ಮನ್ನು ಮಾತಿನ ಮೋಸ ಜಾಸ್ತಿ ಕಾಡಿದೆ. ನದಿ ಜೋಡಣೆ, ನೀರು ಹಂಚಿಕೆಯ ಚರ್ಚೆ ನಡೆದಷ್ಟು ತಲೆಯ ಮೇಲೆ ಸುರಿಯುವ ಮಳೆ ನೋಡುವವರಿಲ್ಲ. ನಮಗೆ ದೂರದ ನದಿ ನೀರು ಬರುವುದು ಯಾವತ್ತೋ ಗೊತ್ತಿಲ್ಲ, ಬಂದಾಗ ಬರಲಿ ಬಿಡಿ.

ಆದರೆ ಮಹದಾಯಿ ನೀರು ಹೋರಾಟಕ್ಕೆ ವರ್ಷಗಟ್ಟಲೇ ಕುಳಿತ ನರಗುಂದ, ನವಲಗುಂದಲ್ಲಿ ಸುರಿದ ಮಳೆ ಬೆಣ್ಣೆಹೊಳೆಯ ಪ್ರವಾಹವಾಗಿ ಹರಿದಿದೆ. ಬರದ ಸಂಕಟ ಅರ್ಥವಾದವರಿಗೆ ನೀರು ಹಿಡಿಯುವ ನೆನಪಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT