ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೆ ರಸ್ತೆಗಳಲ್ಲಿ ಪ್ರವಾಹ

ಎಚ್ಚರಗೊಳ್ಳದ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳು
Last Updated 27 ಏಪ್ರಿಲ್ 2015, 20:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಲವು ರಸ್ತೆಗಳ ಗುಂಡಿಗಳು ಬಾಯ್ಬಿಟ್ಟಿದ್ದು, ಬಲಿಗಾಗಿ ಕಾಯುತ್ತಿವೆ. ಕಟ್ಟಿಕೊಂಡಿರುವ ಒಳಚರಂಡಿ ಮತ್ತು ಮ್ಯಾನ್‌ಹೋಲ್‌ಗಳಿಂದ ನೀರು ರಸ್ತೆ ಮೇಲೆ ಉಕ್ಕುತ್ತಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ!

ಮಳೆ ಬಂದರೆ ನಗರದಲ್ಲಿ ಸಾಮಾನ್ಯವೆನಿಸುವ ಇಂತಹ ದೃಶ್ಯಗಳು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ  (ಬಿಬಿಎಂಪಿ) ಹಾಗೂ ಜಲ ಮಂಡಳಿಯ  ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿವೆ.

ನಗರದ ಒಳಚರಂಡಿಗಳು ಮತ್ತು ರಾಜಕಾಲುವೆಗಳ ಸಮರ್ಪಕ ನಿರ್ವಹಣೆ ಕೊರತೆಯೇ ಇದಕ್ಕೆ ಮುಖ್ಯ ಕಾರಣ.  ಹಾಗಾಗಿ ಮಳೆ ಬಂತೆಂದರೆ ನಗರದ ಬಹತೇಕ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುವುದು ಸಾಮಾನ್ಯವಾಗಿದೆ.

ನಗರದಲ್ಲಿ ಈ ತಿಂಗಳು 180 ಮಿ.ಮೀ. ಮಳೆಯಾಗಿದೆ. ತೊಂದರೆಗಳಿಗೆ ಸಂಬಂಧಿಸಿದಂತೆ ಜಲಮಂಡಳಿ  300ಕ್ಕೂ ಹೆಚ್ಚು ದೂರು ಕರೆಗಳನ್ನು ಸ್ವೀಕರಿಸಿದೆ. ಈ  ಪೈಕಿ ಬಹುತೇಕ ಕರೆಗಳು ವನ್ನಾರ್‌ಪೇಟೆ, ಶಿವಾಜಿನಗರ, ಕಸ್ತೂರಿನಗರ, ಎನ್‌ಜಿಇಎಫ್‌, ನೀಲಸಂದ್ರ ಹಾಗೂ ಚಾಮರಾಜಪೇಟೆಗಳಿಂದ ಬಂದಿವೆ.

ರಸ್ತೆಗಳಲ್ಲಿ ಬಾಯ್ಬಿಟ್ಟ ಗುಂಡಿಗಳು: ಭಾರಿ ಮಳೆಯಿಂದಾಗಿ ಜನನಿಬಿಡ ಕೆ.ಆರ್‌. ಮಾರುಕಟ್ಟೆಯ ಸುತ್ತಮುತ್ತಲಿನ ಸ್ಥಳಗಳು ಸೇರಿದಂತೆ ಹಲಸೂರು, ಬನಶಂಕರಿ, ಜಯನಗರ, ಕನಕಪುರ ರಸ್ತೆ, ಕೋಣನಕುಂಟೆ ಕ್ರಾಸ್‌, ಶಿವಾಜಿನಗರ, ಅವೆನ್ಯೂ ರಸ್ತೆ, ಚಿಕ್ಕಪೇಟೆ, ಎಂ.ಜಿ.ರಸ್ತೆ,  ಚರ್ಚ್‌ ಸ್ಟ್ರೀಟ್‌, ಮೆಯೋಹಾಲ್, ರೆಸಿಡೆನ್ಸಿ ರಸ್ತೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ  ಸಮೀಪದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಅಪಾಯವನ್ನು ಆಹ್ವಾನಿಸುತ್ತಿವೆ.

‘ನಗರದ ಬಹುತೇಕ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. ಮಳೆ ಬಂದರೆ ಈ ರಸ್ತೆಗಳಲ್ಲಿ ಓಡಾಡುವುದೇ  ದುಸ್ತರವಾಗಿದೆ.  ಮುಂಗಾರು ಆರಂಭಕ್ಕೂ ಮುಂಚೆಯೇ ಈ ಸ್ಥಿತಿ ಇದೆ. ಇನ್ನು ಮುಂದೆ ಭಾರಿ ಮಳೆ ಬಂದಾಗ ರಸ್ತೆಗಳು ಯಾವ ಮಟ್ಟ ತಲುಪಲಿವೆ ಎಂಬುದನ್ನು ಉಹಿಸಲು ಆಗುತ್ತಿಲ್ಲ’ ಎನ್ನುತ್ತಾರೆ ಖಾಸಗಿ ಸಂಸ್ಥೆ ಉದ್ಯೋಗಿ  ಚಂದ್ರಶೇಖರ್.

ಮ್ಯಾನ್‌ಹೋಲ್‌ಗಳಲ್ಲಿ ಉಕ್ಕುವ ನೀರು: ನಗರದ ಬಹುತೇಕ ಒಳಚರಂಡಿ ಮತ್ತು ಮ್ಯಾನ್‌ಹೋಲ್‌ಗಳಲ್ಲಿ ಆಗಾಗ್ಗೆ ಹೂಳು ತೆಗೆಯದಿರುವುದರಿಂದ ಮಳೆ ಬಂತೆಂದರೆ ಸಾಕು, ಇವುಗಳಿಂದ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತದೆ.
ಕಸ– ಕಡ್ಡಿ ಮತ್ತು ಕೊಳಚೆಯುಕ್ತ ನೀರು ರಸ್ತೆ ಮೇಲೆ ಹರಿಯುವುದರಿಂದ ಪಾದಚಾರಿಗಳು ರಸ್ತೆ ದಾಟುವಾಗ ಸೂಕ್ತ ನಿರ್ವಹಣೆ ಮಾಡದ ಬಿಬಿಎಂಪಿ ಮತ್ತು ಜಲಮಂಡಳಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ.

‘ಕಟ್ಟಿಕೊಂಡ ಒಳಚರಂಡಿಗಳ ನೀರು ಕೆಲವೊಮ್ಮೆ ಕುಡಿಯುವ ನೀರು ಪೂರೈಕೆ ಪೈಪುಗಳಿಗೆ ಸೇರಿ ಕಲುಷಿತಗೊಳಿಸುತ್ತವೆ.  ಈ ಕುರಿತು ಜಲಮಂಡಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಕಸ್ತೂರಿನಗರದ ನಿವಾಸಿ ಪುರಷೋತ್ತಮ ಅವರು ದೂರುತ್ತಾರೆ.

ಕಾಣೆಯಾಗುವ ಫುಟ್‌ಪಾತ್‌ಗಳು: ಮಳೆ ಬಂತೆಂದರೆ ನಗರದ ಅನೇಕ ರಸ್ತೆಗಳ ಫುಟ್‌ಪಾತ್‌ಗಳು ಕಾಣೆಯಾಗುತ್ತವೆ. ಚರಂಡಿಗಳಲ್ಲಿ ಹೂಳು ಮತ್ತು ಕಸ ತುಂಬಿರುವುದರಿಂದ ನೀರು ಸರಾಗವಾಗಿ ರಾಜಕಾಲುವೆ ಸೇರಲಾಗದೆ, ರಸ್ತೆ ಮೇಲೆ ಹರಿಯುವುದು ಮಳೆ ಬಂದಾಗಿನ ಸಾಮಾನ್ಯ ದೃಶ್ಯವಾಗಿದೆ.

ಬಿಬಿಎಂಪಿಯ ಮೂಲಗಳ ಪ್ರಕಾರ,  ರಾಜಧಾನಿಯ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ ಐದು ವರ್ಷದಲ್ಲಿ ಸುಮಾರು ₹ 5 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಆದರೂ ಯಾವುದೇ ಬದಲಾವಣೆಯಾಗಿಲ್ಲ.

ಮಳೆ ಬಂದಾಗ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ಹರಿಯುವುದು ಸಾಮಾನ್ಯ.  ಶಾಂತಿನಗರ, ಅವೆನ್ಯೂ ರಸ್ತೆ ಹಾಗೂ ಚಿಕ್ಕಪೇಟೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದ್ದು, ಮಳೆ ಬಂದಾಗ ಈ ಪ್ರದೇಶಗಳಲ್ಲಿ ನೀರು ಕಟ್ಟಿಕೊಂಡು ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಜಲಮಂಡಳಿಯ ಮುಖ್ಯ ಎಂಜಿನಿಯರ್ ಟಿ. ವೆಂಕಟರಾಜು.

ಈ ಪ್ರದೇಶಗಳ ಒಳಚರಂಡಿಗಳು ಮತ್ತು ಮ್ಯಾನ್‌ಹೋಲ್‌ಗಳಲ್ಲಿ ಹೂಳು ಎತ್ತಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಈ ಕುರಿತು ಬಂದಿರುವ ಅನೇಕ ದೂರುಗಳ ಕುರಿತು  ಗಮನ ಹರಿಸಲಾಗಿದೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT