ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಬಿರುಗಾಳಿ, ಸಿಡಿಲು: ಇಬ್ಬರ ಸಾವು

Last Updated 16 ಏಪ್ರಿಲ್ 2014, 19:55 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಕೊಡಗು, ಚಾಮರಾಜನಗರ, ಮೈಸೂರು,   ಮಂಡ್ಯ, ಬೆಳಗಾವಿ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ.ಸಿಡಿಲು ಬಡಿದು ತರೀಕೆರೆ ತಾಲ್ಲೂಕಿನಲ್ಲಿ ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ತಲಾ ಒಬ್ಬರು ಸತ್ತಿದ್ದಾರೆ.

ಚಾಮರಾಜನಗರ ವರದಿ: ಜಿಲ್ಲೆಯ ಗುಂಡ್ಲು­ಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ಹೊರವಲ­ಯ­ದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಸ್ಥಳ­ದಲ್ಲೇ ಮೃತಪಟ್ಟಿದ್ದಾನೆ.

ಮೃತನನ್ನು  ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ ತಾಲ್ಲೂಕಿನ ಕಲ್ಲಟ್ಟಿ ಗ್ರಾಮದ ಈಶ್ವರನ್ (29) ಎಂದು ಗುರುತಿಸಲಾಗಿದೆ. ತೆರಕಣಾಂಬಿಯಲ್ಲಿ ಸಿಡಿಲಿಗೆ ಎರಡು ಎತ್ತುಗಳು ಬಲಿಯಾಗಿವೆ.

ಸಕಲೇಶಪುರ (ಹಾಸನ ಜಿಲ್ಲೆ) ವರದಿ: ತಾಲ್ಲೂಕಿನಲ್ಲಿ ಸಿಡಿಲು ಬಡಿದು ಮೂವರಿಗೆ ಗಂಭೀರ ಗಾಯಗಳಾಗಿವೆ.
ಬಾಳ್ಳುಪೇಟೆಯ ಜೆ.ಪಿ ನಗರ ಬಡಾವಣೆಯ ನಿವಾಸಿ ಮುತ್ತಮ್ಮ ಅವರ ಬಲಭಾಗದ ದೇಹಕ್ಕೆ ಪೆಟ್ಟು ಬಿದ್ದಿದೆ. ಬಾಳ್ಳು ಸಮೀಪದ ಮಡ್ನಕೆರೆ ಗ್ರಾಮದಲ್ಲಿ ಮನೆಯಂಗಳದಲ್ಲಿ ಆಟವಾಡಿ­ಕೊಂಡು ಮನೆಯೊಳಗೆ ಹೋಗುತ್ತಿದ್ದ 13 ವರ್ಷದ ತಾರೇಶ್‌ಗೆ ಸಿಡಿಲು ಬಡಿದು ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡಿದ್ದು, ಬಾಳ್ಳು ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳಿಸಲಾಗಿದೆ.

ಕುಶಾಲನಗರ ಬಡಾವಣೆಯ ಫಯಾಜ್‌­ಖಾನ್ ಮನೆ ಛಾವಣಿ ಕುಸಿದಿದ್ದು, ಮನೆಯೊಳ­ಗಿದ್ದ ಅವರ ಪುತ್ರ ತೌಹೀದ್‌ಖಾನ್‌ಗೆ ಗಂಭೀರ ಗಾಯಗಳಾಗಿವೆ.ಸಮೀಪದ ಆಚಂಗಿ ಬಡಾವಣೆ ಮತ್ತು ಹಲ­ಸು­ಲಿಗೆ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಮರ­ವೊಂದು ಉರುಳಿ ನಾಲ್ಕು ವಿದ್ಯುತ್‌ ಕಂಬಗಳು ತುಂಡಾಗಿದ್ದು, ತಂತಿಗಳು ನೆಲಕ್ಕೆ ಬಿದ್ದಿವೆ.

ಹೊಳೆನರಸೀಪುರ  ವರದಿ: ತಾಲ್ಲೂಕಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ.
ಮಡಿಕೇರಿ ವರದಿ: ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆ ಕಾಲ ಉತ್ತಮ­ವಾಗಿ ಮಳೆ ಸುರಿಯಿತು. 

ಬೆಳಗಾವಿ ವರದಿ: ಜಿಲ್ಲೆಯ ನಿಪ್ಪಾಣಿ ಪಟ್ಟಣ­ದಲ್ಲಿ ಬುಧವಾರ ಸಂಜೆ ಅರ್ಧ ತಾಸು ರಭಸದ ಮಳೆಯಾಗಿದೆ.

ತರೀಕೆರೆ (ಚಿಕ್ಕಮಗಳೂರು ಜಿಲ್ಲೆ) ವರದಿ: ಸಮೀಪದ ಅರಸೀಕೆರೆ ಕಾಲೊನಿ ಬಳಿ ಆರ್‍ಮುಗಂ (೨೫) ಎಂಬ ವ್ಯಕ್ತಿಗೆ ಸಿಡಿಲು ಬಡಿದು ಮೃತ­ಪಟ್ಟಿದ್ದಾರೆ.

ಸಂಡೂರು (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಅಂಕಮನಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ  ಭಾರಿ ಗಾಳಿಯಿಂದ ಕೂಡಿದ ಆಲಿಕಲ್ಲು  ಮಳೆ­ಯಿಂದ ಗ್ರಾಮದಲ್ಲಿ ಬಾಳೆ ಬೆಳೆಗೆ ಹಾನಿ­ಯಾ­ಗಿದೆ. ಸುಮಾರು 30 ಎಕರೆಗೂ ಹೆಚ್ಚು ಪ್ರದೇ­ಶ-­­ದಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಮುರಿದು­ಬಿದ್ದಿವೆ. ಎರಡು ತಿಂಗಳು ಕಳೆದಿದ್ದರೆ  ಬೆಳೆ ಕೈಗೆ ಬರುತ್ತಿತ್ತು. ಆದರೆ ಈ ಮಳೆಯಿಂದ ಅಪಾರ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT