ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ, ಮಂಜು ಮತ್ತು ಮಡಿಕೇರಿ

ಮರೆಯಲಿ ಹ್ಯಾಂಗ
Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನಾನು ದೇಶ–ವಿದೇಶಗಳ ಸಾಕಷ್ಟು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಆದರೆ ನಾನು ನೋಡಿದ ವಿಹಾರ ತಾಣಗಳ ಪೈಕಿ ಮನಸ್ಸಿಗೆ

ಹೆಚ್ಚು ಆಪ್ತ ಎನಿಸಿದ್ದು ನಮ್ಮ ಮಂಜಿನ ನಾಡು ಮಡಿಕೇರಿ. ಎಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದರೂ ಬೇಸರವಾಗುವುದಿಲ್ಲ. ಪ್ರತಿ ಭೇಟಿಯಲ್ಲಿಯೂ ಅಲ್ಲೊಂದು ಹೊಸ ಪ್ರಪಂಚ, ಹೊಸ ತಾಣ ನೋಡಿದ ಅನುಭವ ಆಗುತ್ತದೆ. ನನ್ನೊಳಗೆ ಹೊಸ ಭಾವ–ಕನಸನ್ನು ಮಡಿಕೇರಿ ಕಟ್ಟಿಕೊಡುತ್ತದೆ. ಅಲ್ಲಿ ಹೋದಾಗ ನನಗೆ ಸಿಗುವ ಖುಷಿಯನ್ನು ಪದಗಳಲ್ಲಿ ಕಟ್ಟಿ ಹೇಳಲು ಸಾಧ್ಯವಾಗುವುದಿಲ್ಲ.

ಮಡಿಕೇರಿಯನ್ನು ಬಾಯಿ ಮಾತಿನಲ್ಲಿ ವರ್ಣಿಸುವುದಕ್ಕಿಂತ ಅದನ್ನು ಆ ನೆಲೆಯಲ್ಲಿಯೇ ಆಸ್ವಾದಿಸುವುದು ಚೆಂದ. ನಾನು ಮೊದಲು ಮಡಿಕೇರಿಗೆ ಹೋಗಿದ್ದು ಚಿಕ್ಕವಳಿದ್ದಾಗ. ಅದೊಂದು ಶಾಲಾ ಪ್ರವಾಸ. ಆಗ ಆ ಜಾಗದ ಬಗ್ಗೆ ಅಷ್ಟೇನೂ ಮಾಹಿತಿ ಇರಲಿಲ್ಲ. ಆದರೆ ಮಡಿಕೇರಿಯನ್ನು ಮೊದಲ ಸಲ ನೋಡಿದ ಖುಷಿ ಮಾತ್ರ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಅಲ್ಲಿನ ಹಸಿರು, ಇಬ್ಬನಿ, ತಂಪು ಗಾಳಿ ಮನಸ್ಸಿಗೆ ಏನೋ ಒಂದು ಪುಳಕ ನೀಡಿತ್ತು. ಆ ಅನುಭೂತಿಯೇ ಮತ್ತೆ ಮತ್ತೆ ಆ ಸ್ಥಳಕ್ಕೆ ನನ್ನ ಸೆಳೆಯುವಂತೆ ಮಾಡುತ್ತಿದೆ.

ಮಡಿಕೇರಿಗೆ ನಾನು ಮತ್ತೆ ಹತ್ತಿರವಾಗಿದ್ದು ಸಿನಿಮಾ ಕ್ಷೇತ್ರಕ್ಕೆ ಬಂದ ನಂತರ. ನನ್ನ ಹಲವು ಸಿನಿಮಾಗಳ ಚಿತ್ರೀಕರಣ ಮಡಿಕೇರಿಯಲ್ಲಿ ಆಗಿದೆ. ‘ಮಡಿಕೇರಿಯಲ್ಲಿ ಶೂಟಿಂಗ್‌ ಇದೆ’ ಅಂದಾಕ್ಷಣ ನನ್ನ ಮನಸ್ಸಿನಲ್ಲಿ ಶಾಲಾ ದಿನಗಳ ನೆನಪು ಹಾದು ಹೋಗುತ್ತಿತ್ತು. ಸ್ನೇಹಿತರ ಜತೆಗೆ ಬಂದು ಆಸ್ವಾದಿಸಿದ ಗಳಿಗೆಗಳು ಮತ್ತೆ ಮತ್ತೆ ಮನದ ಮೂಲೆಯಿಂದ ಹೊರ ಚಿಮ್ಮುತ್ತಿತ್ತು.

ಮಡಿಕೇರಿಗೆ ನನ್ನ ಮನದಲ್ಲಿ ಸ್ವರ್ಗದ ಸ್ಥಾನವಿದೆ ಎಂದರೆ ಖಂಡಿತಾ ತಪ್ಪಾಗಲಾರದು. ಚಿತ್ರೀಕರಣಕ್ಕೆ ಹೋದಾಗ ಮೊದಲ ದಿನವೇ ಚಿತ್ರತಂಡ ಎಲ್ಲರಿಗೂ ಮೊದಲೇ ಎದ್ದು ಬೇಗನೇ ಅಲ್ಲಿನ ಪರಿಸರದಲ್ಲಿ ತಿರುಗಾಡುತ್ತಿದ್ದೆ. ಆಹ್ಲಾದದ ಅನುಭೂತಿ ಅದು. ನಗರದಲ್ಲಿನ ಮುಂಜಾವಿಗೂ ಅಲ್ಲಿನ ಮುಂಜಾವಿಗೂ ಎಷ್ಟೊಂದು ವ್ಯತ್ಯಾಸವಿದೆ! ಕಿವಿಗೆ ಇಂಪಾಗಿ ಕೇಳಿಸುವ ಹಕ್ಕಿಗಳ ಚಿಲಿಪಿಲಿ, ಚಿಗುರೆಲೆಯ ಮೇಲೆ ಮುತ್ತಿನ ಮಣಿಗಳಂತೆ ಕಾಣುವ ಇಬ್ಬನಿ, ಹಸಿರು, ಬೆಟ್ಟ–ಗುಡ್ಡ, ಕಾಫಿ ತೋಟಗಳು ಸೇರಿದಂತೆ ಪ್ರಾಕೃತಿಕ ರಮಣೀಯತೆಯೇ ಊರಾಗಿರುವ ಮಡಿಕೇರಿಯನ್ನು ನಾನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತಿದ್ದೆ. 

ನನಗೆ ಪ್ರಕೃತಿಯ ಜತೆಜತೆಗೆ ಅಲ್ಲಿನ ಜನ, ಅವರ ಸಂಪ್ರದಾಯ, ಉಡುಗೆ–ಅಡುಗೆ ಕುರಿತೂ ಆಸಕ್ತಿಯಿದೆ. ನಗರದಲ್ಲಿ ಜನ ನಗುವುದಕ್ಕೂ ಹಿಂದೆಮುಂದೆ ನೋಡುತ್ತಾರೆ. ಮಡಿಕೇರಿಯ ಜನರೋ ಮುಖದ ಮೇಲೆ ನಗುವೊಂದನ್ನು ಇಟ್ಟುಕೊಂಡೇ ಮಾತನಾಡುವರು. ಅವರ ಅಡುಗೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಲ್ಲಿನ ಚುಮು ಚುಮು ಚಳಿಗೆ ಹೆಚ್ಚು ಎಣ್ಣೆ ಬಳಸದೇ ಮಾಡುವ ಸಾಂಬಾರ್ ಸಖತ್‌ ರುಚಿಯಾಗಿರುತ್ತದೆ. ಎಷ್ಟು ಊಟ ಮಾಡಿದರೂ ಮತ್ತೆ ಮತ್ತೆ ಉಣ್ಣಬೇಕು ಎಂಬಂತೆ ಹಸಿವು ಆಗುತ್ತದೆ.

ಮಡಿಕೇರಿಯವರು ಎಣ್ಣೆ, ತುಪ್ಪ ಕಡಿಮೆ ಬಳಸುತ್ತಾರೆ. ಅಲ್ಲಿನ ಪ್ರಕೃತಿ ಮನಸ್ಸಿಗೆ ತಂಪೆರೆದರೆ, ಅಲ್ಲಿನ ಆಹಾರ ದೇಹಕ್ಕೆ ಹಿತ. ಪುಟ್ಟ ಪುಟ್ಟ ಮನೆಗಳು, ಅಕ್ಕರೆಯಿಂದ ಮಾತನಾಡಿಸುವ ಜನರು, ಮನಸ್ಸಿಗೆ ಮುದ ನೀಡುವ ಸ್ಥಳಗಳನ್ನು ಎಷ್ಟು ಹೊಗಳಿದರೂ ಕಡಿಮೆ.
ಗಿರೀಶ ಕಾಸರವಳ್ಳಿ ಅವರ ನಿರ್ದೇಶನದ ‘ಹಸೀನಾ’ ಸಿನಿಮಾ ಕೂಡ ಇಲ್ಲಿಯೇ ಚಿತ್ರೀಕರಣವಾಗಿತ್ತು. ‘ಮೊದಲಾ ಸಲ’ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣವೂ ಇಲ್ಲಿ ನಡೆದಿತ್ತು.

ಈ ಚಿತ್ರೀಕರಣಗಳ ಸಮಯದಲ್ಲಿ ನಾನು ಮತ್ತಷ್ಟು ಸೂಕ್ಷ್ಮವಾಗಿ ಮಡಿಕೇರಿಯನ್ನು ನೋಡಿದೆ. ಅಲ್ಲಿನ ಮಳೆ, ಅದು ನೀಡುವ ಖುಷಿ, ಮೋಡ ಕವಿದ ವಾತಾವರಣ– ಅದೊಂದು ಅದ್ಭುತ ಅನುಭವ. ಕೊಡಗು ಜಿಲ್ಲೆಯ ಈ ಪುಟ್ಟ ಪೇಟೆಯ ಸಮೀಪವಿರುವ ಜಲಪಾತ, ಅಲ್ಲಿಯ ಓಂಕಾರೇಶ್ವರ ದೇವಾಲಯ ನನಗೆ ಹೆಚ್ಚು ಪ್ರಿಯ. ಹತ್ತಿರದಲ್ಲಿರುವ ರಾಜಾ ಸೀಟ್ ಕೂಡ ಬಹಳ ಪ್ರಸಿದ್ಧ. ಇಲ್ಲಿಂದ  ಸೂರ್ಯಾಸ್ತದ ಸುಂದರ ಕ್ಷಣಗಳನ್ನು ನೋಡುವಾಗ ಸಿಗುವ ಖುಷಿ ಆಗಾಧ. ಮುಂಜಾನೆಯಲ್ಲಿ ರಾಜಾಸೀಟು ತುಂಬಾ ಚೆನ್ನಾಗಿರುತ್ತದೆ. ಎಷ್ಟೊಂದು ವಿಸ್ಮಯಗಳನ್ನು ಈ ಮಡಿಕೇರಿಯ ನಿಸರ್ಗ ತನ್ನ ಒಡಲಲ್ಲಿ ಇಟ್ಟುಕೊಂಡಿದೆ ಅನಿಸುತ್ತದೆ.

ಮಾಂದಲ್‌ ಪಟ್ಟಿಯ ಚೆಲುವು
ಮಡಿಕೇರಿಯ ಮಾಂದಲ್ ಪಟ್ಟಿಯಿಂದ ಪ್ರಕೃತಿಯ ಸೌಂದರ್ಯವನ್ನು ಚೆನ್ನಾಗಿಯೇ ಅನುಭವಿಸಬಹುದು. ಅಲ್ಲಿ ಆಕಾಶ ಬಾಗಿ ಭೂಮಿಯನ್ನು ಚುಂಬಿಸುವಂತೆ ಕಾಣುತ್ತದೆ. ನವಿರಾಗಿ ಬೀಸುವ ತಂಪು ಗಾಳಿ ಮೈ ಮನಸ್ಸಿಗೆ ಕಚಗುಳಿ ನೀಡಿದಂತೆ ಆಗುತ್ತದೆ.
ಗಗನವನ್ನು ಚುಂಬಿಸುವಂತೆ ಕಾಣುವ ಬೆಟ್ಟದ ಸಾಲುಗಳು ಮಂಜಿನ ಮೋಡಗಳನ್ನು ನೋಡುತ್ತಿದ್ದರೆ ಮಡಿಕೇರಿ ಎನ್ನುವ ಪ್ರಾಕೃತಿಕ ಸೊಬಗಿನ ಬೀಡಿನಿಂದ ಹೊರ ಬರಲು ಮನಸ್ಸೇ ಬರುವುದಿಲ್ಲ.

ದೂರದಲ್ಲಿ ಮುಗಿಲೆತ್ತರಕ್ಕೆ ಬೆಳೆದು ಪೈಪೋಟಿ ನೀಡಲೇನೋ ಎಂಬಂತೆ ನಿಂತಿರುವ ಗಿರಿಶಿಖರಗಳು... ಅವುಗಳ ನಡುವಿನ ಇಳಿಜಾರಿನಲ್ಲಿ ಬೆಳೆದು ನಿಂತ ಹೆಮ್ಮರಗಳು... ಕಾಫಿ, ಏಲಕ್ಕಿ ತೋಟಗಳಲ್ಲಿನ ಘಮ್ಮೆನ್ನುವ ಪರಿಮಳ, ಗದ್ದೆ ಬಯಲುಗಳು... ಹೀಗೆ ಒಂದೆರಡಲ್ಲ ಹತ್ತಾರು ಸುಂದರ ಚಿತ್ರಪಟಗಳನ್ನು ಮಡಿಕೇರಿಯಲ್ಲಿ
ಕಣ್ಣಿಗೆ ಕಟ್ಟಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT