ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ವನ್ಯಜೀವಿ ಧಾಮಕ್ಕೆ ಜೀವಕಳೆ

ಕುಂಚಾವರಂ ಅರಣ್ಯ: ಬರಡು ಮರಗಳಲ್ಲಿ ಚಿಗುರು
Last Updated 25 ಮೇ 2016, 11:15 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಅರಣ್ಯಕ್ಕೆ ಜೀವಕಳೆ ಬಂದಿದೆ. ಮಳೆಯಿಲ್ಲದೇ ಎಲೆ ಉದುರಿಸಿಕೊಂಡು ಬರಡು ಬರಡಾಗಿದ್ದ ಮರಗಳಲ್ಲಿ ಚಿಗುರು ಕಾಣಿಸಿಕೊಂಡಿದ್ದು, ಅರಣ್ಯದಲ್ಲಿ ಹಸಿರು ಉಸಿರು ಪಡೆದುಕೊಳ್ಳುತ್ತಿದೆ.

ಪ್ರಸಕ್ತ ತೀವ್ರ ಬರಗಾಲಕ್ಕೆ ಈ ಭಾಗ ತುತ್ತಾಗಿದ್ದರಿಂದ ಬಯಲುಸೀಮೆಯ ವನ್ಯಜೀವಿ ಧಾಮದಲ್ಲಿ ಕಾಡುಪ್ರಾಣಿಗಳು ಕುಡಿವ ನೀರು ಹಾಗೂ ಆಹಾರಕ್ಕೆ ತೀವ್ರ ಪರದಾಟ ನಡೆಸಿದ್ದವು.

ಆದರೆ, ವಾರದ ಹಿಂದೆ ಕುಂಚಾವರಂ, ಶಾದಿಪುರ, ಗೊಟ್ಟಂಗೊಟ್ಟ ಮೊದಲಾದೆಡೆ ಮಳೆ ಸುರಿದಿದ್ದರಿಂದ ಕಾಡಿನ ಮರಗಳು ಮರುಜನ್ಮ ಪಡೆದಂತೆ ಗೋಚರಿಸುತ್ತಿವೆ.
13,800 ಹೆಕ್ಟೇರ್‌ ವಿಸ್ತಾರದ ಕುಂಚಾವರಂ ವನ್ಯಜೀವಿ ಧಾಮದಲ್ಲಿ ಈಗ ಹಸಿರು ಗೋಚರವಾಗಿದ್ದು, ಮುಂದಿನ ಕೆಲ ವಾರಗಳಲ್ಲಿ ಇನ್ನಷ್ಟು ಮಳೆ ಸುರಿದರೆ ಕಾಡು ಸಂಪೂರ್ಣವಾಗಿ ಹಸಿರುಹೊದಿಕೆ ಆವರಿಸಿಕೊಳ್ಳಲಿದೆ.

ಚೈತ್ರಮಾಸ ಆರಂಭವಾಗುತ್ತಿದ್ದಂತೆ ಪ್ರಕೃತಿ ದತ್ತವಾಗಿ ಕೆಲವು ಮರಗಳು ಚಿಗುರೊಡೆದು ಹಸಿರುಡುಗೆ ಪಡೆದರೆ ಕುಂಚಾವರಂ ಕಾಡಿನಲ್ಲಿ ಹೆಚ್ಚಾಗಿರುವ ತೇಗ, ದಿಂಡಿಲು, ಮಶವಾಳ, ಹೊನ್ನೆ, ಹಿಪ್ಪೆ, ಶಿವನಿ, ತಾರೆ, ಠಾಣೆ, ನೆಲ್ಲಿ, ಕಾಡು ಗೇರು, ಸೀತಾಫಲ, ಸ್ವಾಮಿ, ಹೊಳೆ ಮತ್ತಿ, ಬೇವು, ಹೊಂಗೆ, ಶಿಗರಗ್ಯಾ, ಮಳಿಗ್ಯಾ, ಲಕ್ಕಿ, ಅವರೆ ಮರ, ಬೀಡಿ ಎಲೆ ಮೊದಲಾದ ಮರಗಳಿದ್ದು, ಮರಗಳು ಎಲೆ ಉದುರಿಸಿಕೊಂಡು ಬೇರಿನಲ್ಲಿ ಜೀವ ಹಿಡಿದುಕೊಂಡಿದ್ದವು.

ಇದರಲ್ಲಿ ಬೇವು, ಹೊಂಗೆ, ಬೀಡಿ ಎಲೆ, ಹಿಪ್ಪೆ ಬೇಸಿಗೆಯಲ್ಲೂ ಹಸಿರಾಗಿತ್ತು. ಈಗ ಉಳಿದ ಮರಗಳಲ್ಲೂ ಹಸಿರು ಗೋಚರಿಸಿದ್ದು ಕಾಡಿನ ಅಂದ ಹೆಚ್ಚಿಸಿದೆ.
ಆದರೆ, ಅಲ್ಪಮಳೆಗೆ ಕಾಡಿನ ಚಿತ್ರಣ ಬದಲಾಗತೊಡಗಿದ್ದು, ಬಿರುಬೇಸಿಗೆ ಬಿಸಿಲಿನಿಂದ ಕಂಗೆಟ್ಟ ವನ್ಯಜೀವಿಗಳಿಗೆ ನೆರಳಿನ ಆಸರೆ ಈಗ ದೊರೆಯತೊಡಗಿದೆ.

ಅಂತರ್ಜಲ ವೃದ್ಧಿಯಾಗುವಷ್ಟು ಮಳೆ ಇಲ್ಲಿ ಸುರಿದಿಲ್ಲ. ಆದರೆ, ಭೂಮಿಯ ತಾಪಮಾನ ತಗ್ಗಿಸುವಷ್ಟು ಮಳೆ ಸುರಿದಿದ್ದು ಗಿಡಮರಗಳಲ್ಲಿ ಹಸಿರು ಇಣುಕುವಂತಾಗಿದೆ. ಆದರೆ ಎಲ್ಲಿಯೂ ಕುಡಿವ ನೀರಿನ ಸೆಲೆ ಕಾಣಿಸುತ್ತಿಲ್ಲ. ಇದರಿಂದ ವನ್ಯಜೀವಿಗಳು ನೀರಿಗಾಗಿ ಪರದಾಟ ಮುಂದುವರಿಸಿವೆ. ರಸ್ತೆ ಬದಿಯಲ್ಲಿ ಮಾತ್ರ ತೊಟ್ಟಿಗಳಿಗೆ ಅರಣ್ಯ ಇಲಾಖೆ ನೀರು ಹಾಕುತ್ತಿದೆ. ಆದರೆ, ಕೆಲವು ಪ್ರದೇಶದಲ್ಲಿ ಖಾಲಿ ತೊಟ್ಟಿ ನೀರಿಲ್ಲದೆ ಬಣಗುಡುತ್ತಿರುವುದು ಗೊಟ್ಟಂಗೊಟ್ಟದಲ್ಲಿ ಗೋಚರಿಸಿದೆ.

ಮಳೆ ಅಭಾವದಿಂದ ಗೊಟ್ಟಂಗೊಟ್ಟದ ದೇವವನದಲ್ಲಿ ಕೆಲವು ಗಿಡಗಳು ಒಣಗಿದ್ದು, ಹೆಚ್ಚಿನ ಮರಗಳನ್ನು ಒಣಗದಂತೆ ಅರಣ್ಯ ಇಲಾಖೆ ಸಂರಕ್ಷಿಸಿದೆ. ಆದರೆ, ನೀರಿನ ಕೊರತೆಯಿಂದ ಕೆಲವು ಸೂಕ್ಷ್ಮ ಮರಗಳು ಒಣಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗೊಟ್ಟಂಗೊಟ್ಟದಲ್ಲಿ 2 ಬಾರಿ ಉತ್ತಮ ಮಳೆ ಸುರಿದಿದೆ. ಆದರೆ, ಕುಂಚಾವರಂ ಮತ್ತು ಶಾದಿಪುರದಲ್ಲಿ ಒಮ್ಮೆ ಮಳೆಯಾಗಿದೆ. ಇನ್ನೂ ಮುಂಗಾರು ಆರಂಭವಾಗಿಲ್ಲ. ಪ್ರಸಕ್ತ ವರ್ಷ ನಿರೀಕ್ಷೆಯಂತೆ ಉತ್ತಮ ಮುಂಗಾರು ಮಳೆ ಸುರಿದರೆ ಕುಂಚಾವರಂ ವನ್ಯಜೀವಿಧಾಮ ಪ್ರವಾ
ಸಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT