ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸುಕಾದ ರಾಗಿ; ರೈತರಲ್ಲಿ ಭೀತಿ

ಮಾರುಕಟ್ಟೆ ವಿಶ್ಲೇಷಣೆ ಧನಿಯಾ ಕೆ.ಜಿ. 200ಕ್ಕೆ ಏರಿಕೆ; ತೆಂಗಿನಕಾಯಿ ಇಳಿಕೆ
Last Updated 21 ಅಕ್ಟೋಬರ್ 2014, 8:15 IST
ಅಕ್ಷರ ಗಾತ್ರ

ತುಮಕೂರು: ರಾಗಿ ಸುಗ್ಗಿ ಆರಂಭಕ್ಕೂ ಮುನ್ನವೇ ರಾಗಿ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬಂದಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಎರಡು ವರ್ಷದ ಹಿಂದೆ ಕೆ.ಜಿ.ಗೆ ರೂ 25ರ ವರೆಗೂ ಏರಿಕೆಯಾಗಿದ್ದ ರಾಗಿ ಬೆಲೆ ಈಗ ಕೇವಲ ರೂ 10ರಿಂದ 12ಕ್ಕೆ ಕುಸಿದಿದೆ. ರಾಗಿ ಬೆಳೆಗೆ ಹದ ಮಳೆ­ಗಾಲ ಆಗಿರುವುದರಿಂದ ಜಿಲ್ಲೆಯ ಎಲ್ಲ ಭಾಗದಲ್ಲೂ ರಾಗಿ ಹುಲುಸಾಗಿ ಬಂದಿದೆ. ಹೀಗಾಗಿ ರಾಗಿ ಕೈ ಸೇರಲಿದೆ ಎಂಬ ವಿಶ್ವಾಸದಲ್ಲಿ ಹಳೇ ರಾಗಿ ಮಾರಾ­ಟಕ್ಕೆ ರೈತರು ಮುಂದಾಗಿ­ದ್ದಾರೆ. ಆದರೆ ಇದೇ ವೇಳೆ ಬೆಲೆ ಕುಸಿತವಾಗಿದೆ.

ರಾಗಿ ಬೆಲೆ ಕುಸಿಯಲು ಮುಸುಕಿನ ಜೋಳ ಕಾರಣವಾಗಿದೆ. ಮಾರುಕಟ್ಟೆಗೆ ಮುಸುಕಿನ ಜೋಳ ಯಥೇಚ್ಛವಾಗಿ ಬಂದಿದೆ. ಮುಸುಕಿನ ಜೋಳದ ಬೆಲೆ ಕೆ.ಜಿ.ಗೆ ಕೇವಲ 10ಕ್ಕೆ ಕುಸಿದಿದೆ. ಇದು ಫಾರಂ ಕೋಳಿ ಆಹಾರ ಉತ್ಪಾದಕರಿಗೆ ವರದಾನವಾಗಿ ಪರಿಣಮಿಸಿದೆ.
ಕೋಳಿ ಆಹಾರ ಉತ್ಪನ್ನಕ್ಕೆ ಅತಿ ಹೆಚ್ಚು ರಾಗಿ ರವಾನೆಯಾಗುತ್ತಿದೆ. ಜಿಲ್ಲೆಯಷ್ಟೇ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೋಳಿಫಾರಂಗಳ ಸಂಖ್ಯೆ ವಿಪರೀತ ಹೆಚ್ಚತೊಡಗಿವೆ. ಕೋಳಿ ಫಾರಂ ಹೆಚ್ಚಿದಂತೆಲ್ಲ ರಾಗಿಗೂ ಬೇಡಿಕೆ ಹೆಚ್ಚುತ್ತಿದೆ. ಆದರೆ ಇದೇ ವೇಳೆ ಮುಸುಕಿನ ಜೋಳದ ಬೆಲೆ ಕುಸಿದಿರು­ವುದರಿಂದ ಕಂಪೆನಿಗಳು ರಾಗಿ ಬದಲಿಗೆ ಹೆಚ್ಚಿನ ಪ್ರಮಾಣದ ಮುಸುಕಿನ ಜೋಳವನ್ನು ಕೋಳಿ ಆಹಾರ ಉತ್ಪ­ನ್ನಕ್ಕೆ ಮಿಶ್ರಣ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ರಾಗಿಗೆ ಬೇಡಿಕೆ ಕಡಿಮೆಯಾಗಿದೆ.

ತಮಿಳುನಾಡು ಕೊಂಚ ಕೈ ಹಿಡಿಯದೇ ಹೋಗಿದ್ದರೆ ರಾಗಿ ಬೆಲೆ ಮತ್ತೂ ಕುಸಿಯುತ್ತಿತ್ತು ಎನ್ನುತ್ತಾರೆ ಎಪಿಎಂಸಿ ವರ್ತಕರು. ತಮಿಳುನಾಡಿ­ನಲ್ಲಿ ಒಳನಾಡು ಮೀನುಗಾರಿಕೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ.  ಮೀನಿನ ಆಹಾರದಲ್ಲಿ ರಾಗಿ ಮಿಶ್ರಣ ಮಾಡ­ಲಾ­ಗುತ್ತಿದೆ. ಪ್ರತಿವಾರ ತುಮಕೂರು ಎಪಿಎಂಸಿ ಒಂದರಿಂದಲೇ ಕನಿಷ್ಠ 100 ಟನ್‌ ರಾಗಿ ತಮಿಳುನಾಡಿಗೆ ರವಾನೆ­ಯಾಗುತ್ತಿದೆ. ಒಂದು ವೇಳೆ ತಮಿಳು­ನಾಡಿನಲ್ಲಿ ಬೇಡಿಕೆ ಕುಸಿದರೆ ರಾಗಿ ಬೆಲೆಯಲ್ಲಿ ಮತ್ತಷ್ಟು ಕಡಿಮೆಯಾಗ­ಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ದಪ್ಪ ಗಾತ್ರದ ಮಿರಮಿರ ಮಿಂಚುವ ರಾಗಿ ಕ್ವಿಂಟಲ್‌ಗೆ ರೂ 1600 ಇದೆ. ಆದರೆ ಸಾಮಾನ್ಯ ಗಾತ್ರದ್ದು, ಗರಿಷ್ಠ ರೂ 1200ಕ್ಕೆ ಮಾರಾಟವಾಗು­ತ್ತಿದೆ. ಆದರೆ ಎಪಿಎಂಸಿಯಲ್ಲಿ ಮಾರಾ­ಟ ಬೆಲೆಯನ್ನು ಕ್ವಿಂಟಲ್‌ಗೆ ರೂ 1800 ದಾಖಲಿಸುತ್ತಿರುವುದು ಅಚ್ಚರಿಯಾಗಿದೆ.
‘ರಾಗಿ ತರುವ ರೈತರನ್ನು ನೋಡಿದರೆ ನಮ್ಮ ಮನಸ್ಸಿಗೆ ಬೇಸರ­ವಾಗುತ್ತಿದೆ. ದೂರದ ಊರುಗಳಿಂದ ತರುವ ಸಾಗಣೆಕೆ ವೆಚ್ಚ, ಕೂಲಿ ಲೆಕ್ಕ ಹಾಕಿದರೆ ರೈತರಿಗೆ ಭಾರಿ ಅನ್ಯಾಯ­ವಾಗುತ್ತಿದೆ. ಯಾಕಾದರೂ ಮಾರು­ಕಟ್ಟೆಗೆ ರಾಗಿ ತರುತ್ತಾರೆ ಎಂದು ಬೇಸರ­ವಾಗುತ್ತದೆ. ಬೆಲೆ ಈ ಮಟ್ಟ­ದಲ್ಲಿ ಇಳಿಕೆಯಾಗಬಾರದಿತ್ತು’ ಎಂದು ಮಂಡಿ ವರ್ತಕರೊಬ್ಬರು ಪ್ರತಿಕ್ರಿಯಿಸಿದರು.

ಇಳಿದ ತೆಂಗಿನಕಾಯಿ:  ತೆಂಗಿನಕಾಯಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. ಉತ್ತಮ ಗುಣಮಟ್ಟದ ತೆಂಗಿನಕಾಯಿ ಬೆಲೆ ಒಂದಕ್ಕೆ ರೂ 17ರ ವರೆಗೂ ಇದೆ. ಬಲಿಯದ ಕಾಯಿಗೆ ರೂ 5ರಿಂದ 6 ಇದೆ. ದೆಹಲಿಯಲ್ಲಿ ತೆಂಗಿನಕಾಯಿಗೆ ಬೇಡಿಕೆ ಇದ್ದರೂ ಬೆಲೆಯಲ್ಲಿ ಏರಿಕೆ ಕಂಡು­ಬಂದಿಲ್ಲ.

ಧನಿಯಾ ಕೆ.ಜಿ. ರೂ 200 ಮುಟ್ಟುವ ಮೂಲಕ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ. ಬಾಳೆ ಹಣ್ಣಿನ ಬೆಲೆ ಹೆಚ್ಚುತ್ತಲೇ ಸಾಗಿದೆ. ಒಂದು ಕೆ.ಜಿ ಪುಟ್ಟಬಾಳೆ ರೂ 60ರಿಂದ 70 ಇದೆ.

ರಾಗಿ ಪ್ರೋತ್ಸಾಹಕ್ಕೆ ರೂ 7 ಕೋಟಿ; ಖರೀದಿಗೆ ಸರ್ಕಾರದ ಹಿಂದೇಟು
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ರಾಗಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲು ಸರ್ಕಾರೇತರ ಸಂಸ್ಥೆ­ಯೊಂದಕ್ಕೆ ಸರ್ಕಾರ ರೂ 7 ಕೋಟಿ ಹಣ ನೀಡಿದೆ. ಈ ಸಂಸ್ಥೆ ಅಲ್ಲಲ್ಲಿ ರೈತರನ್ನು ಸಂಘಟಿಸಿ ರಾಗಿ ಬೆಳೆಯುವಂತೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ.
ಮಾರುಕಟ್ಟೆ ಪ್ರವೇಶಿಸಿ ರಾಗಿಯನ್ನು ಸರ್ಕಾರ ಕೊಂಡು­ಕೊಂಡರೆ ರೈತರಿಗೆ ಯಾವ ಪ್ರೋತ್ಸಾಹವು ಬೇಕಾಗಿಲ್ಲ. ಬೆಲೆಯೇ ಇಲ್ಲದ ಮೇಲೆ ರಾಗಿ ಬೆಳೆದು ಏನು ಪ್ರಯೋಜನ ಎನ್ನುತ್ತಾರೆ ರೈತ ದಯಾನಂದ್‌.

ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ರಾಗಿ ಕೊಳ್ಳಲು ಎಪಿ­ಎಂಸಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಈ ಕೇಂದ್ರಗಳಲ್ಲಿ ರಾಗಿ ಮಾರಲು ಹಲವು ಕಠಿಣ ಷರತ್ತು­ಗಳನ್ನು ವಿಧಿಸಲಾಯಿತು. ಇಲ್ಲಿ ರಾಗಿ ಮಾರಬೇಕಾ­ದರೆ ಪಹಣಿಯಲ್ಲಿ ರಾಗಿ ಎಂದು ನಮೂದಿಸಿರಬೇಕು. ತೋಟ­ಗಾರಿಕೆ ಇಲಾಖೆಯಿಂದ ಗುಣಮಟ್ಟ, ದಪ್ಪದ ಪ್ರಮಾಣ ಪತ್ರ ಪಡೆದಿರಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ ಪರಿಣಾಮ ಯಾವ ರೈತರು ಖರೀದಿ ಕೇಂದ್ರಕ್ಕೆ ರಾಗಿ ತರಲಿಲ್ಲ. ರೈತರಿಂದ ರಾಗಿ ಕೊಳ್ಳಲು ಅನೇಕ ಷರತ್ತುಗಳನ್ನು ಹಾಕಿದ ಸರ್ಕಾರ ಪಡಿತರ ಮೂಲಕ ರಾಗಿ ವಿತರಿಸಲು ಬಿಡ್‌­ದಾರರಿಂದ ಕೆ.ಜಿ.ಗೆ ರೂ 23.50ರಂತೆ ಖರೀದಿಸಿದೆ. ಅಂದರೆ ರೈತರಿಗೆ ಕೆ.ಜಿ.ಗೆ 12 ಸಿಕ್ಕರೆ, ಅದೇ ರಾಗಿಯನ್ನು ಸ್ವಲ್ಪ ಸ್ವಚ್ಛಗೊಳಿಸಿ ಸರ್ಕಾರಕ್ಕೆ ಬಿಡ್‌ದಾರರು ರೂ 23.50ರಂತೆ ಮಾರಾಟ ಮಾಡಿದ್ದಾರೆ.

ಕೈ ಬಿಟ್ಟ ಬಿಸಿಯೂಟದ ಮುದ್ದೆ:  ಜಿಲ್ಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮುದ್ದೆ ನೀಡುವುದಾಗಿ ಈ ಹಿಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವ­ಹಣಾ­ಧಿಕಾರಿ ಹೇಳಿದ್ದರು. ಆದರೆ ಅದೂ ಜಾರಿಯಾಗಿಲ್ಲ. ಮಕ್ಕ­ಳಿಗೆ ಮುದ್ದೆ ನೀಡುವುದರಿಂದ ಪೌಷ್ಟಿಕಾಂಶದ ಆಹಾರ ನೀಡಿ­ದಂತಾಗುತ್ತದೆ. ರಾಗಿಗೆ ಮಾರುಕಟ್ಟೆಯೂ ಸಿಕ್ಕಂತಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT