ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿ: ಆತುರ ತಂದ ಅನಾಹುತ

ಸುದ್ದಿ ವಿಶ್ಲೇಷಣೆ
Last Updated 29 ಜುಲೈ 2016, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಾದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯ ಸರ್ಕಾರ ಆತುರದ ಹೆಜ್ಜೆ ಇಟ್ಟು ಮುಖಭಂಗ ಅನುಭವಿಸಿದೆ. ಇನ್ನೇನು ಹೊರಬರಲಿರುವ ನ್ಯಾಯಮಂಡಳಿಯ ಐತೀರ್ಪಿಗೆ ಕಾಯದೆ ಅನಗತ್ಯವಾಗಿ ಮಧ್ಯಂತರ ಅರ್ಜಿ ಹಾಕಿ ಇಕ್ಕಟ್ಟಿಗೆ ಸಿಕ್ಕಿಕೊಂಡಿದೆ. ಇದರಿಂದ ಸಮಯವೂ ವ್ಯರ್ಥವಾಗಿದೆ.

ಕಾವೇರಿ, ಕೃಷ್ಣಾ ಅಥವಾ ಮಹಾದಾಯಿ... ಯಾವುದೇ  ನದಿ ನೀರಿನ ವಿಷಯ ಬಂದಾಗ ಜನ  ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ರಾಜಕೀಯ ನಾಯಕರೂ ದೂರದೃಷ್ಟಿಯಿಂದ ಸಮಸ್ಯೆ ನೋಡದೆ, ತಕ್ಷಣದ ಪರಿಹಾರ ಮಾರ್ಗಗಳನ್ನು ಹುಡುಕುತ್ತಾರೆ. ವಿವಾದ ಕಾನೂನು ವ್ಯಾಪ್ತಿ ಮೀರಿ    ಪ್ರತಿಷ್ಠೆಯ ವಿಷಯವಾಗುತ್ತದೆ.

ಮಹಾದಾಯಿ ನೀರಿಗಾಗಿ ಮುಂಬೈ– ಕರ್ನಾಟಕ ಭಾಗದಲ್ಲಿ  ಕಳೆದ ವರ್ಷದಿಂದ ಚಳವಳಿ ಭುಗಿಲೆದ್ದಿದೆ. ರೈತರು ಬೀದಿಗಿಳಿದಿದ್ದಾರೆ. ಚಳವಳಿಗೆ ಬೆಚ್ಚಿದ ಸರ್ಕಾರ  ಮಹಾದಾಯಿ ನ್ಯಾಯಮಂಡಳಿ ಮುಂದೆ ಮಧ್ಯಂತರ ಅರ್ಜಿ ಹಾಕಿ ಕೈಸುಟ್ಟುಕೊಂಡಿದೆ.

ಮಧ್ಯಂತರ ಅರ್ಜಿ ಸಲ್ಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸರ್ಕಾರ ಹಾಗೂ  ರಾಜ್ಯವನ್ನು ಪ್ರತಿನಿಧಿಸಿರುವ ವಕೀಲರ ತಂಡದ ನಡುವೆ ಭಾರಿ ವಾಗ್ವಾದವೇ ನಡೆದಿತ್ತು. ಹಿರಿಯ ವಕೀಲ ಎಫ್‌.ಎಸ್‌. ನಾರಿಮನ್‌ ಅವರಿಗೆ ಮಧ್ಯಂತರ ಅರ್ಜಿ ಸಲ್ಲಿಸಲು ಸುತಾರಾಂ ಇಷ್ಟವಿರಲಿಲ್ಲ. ಮಧ್ಯಂತರ ಅರ್ಜಿ ತಿರಸ್ಕೃತವಾದರೆ ಅಂತಿಮವಾಗಿ ಬರುವ ಐತೀರ್ಪಿನ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.

ಸುಮಾರು ಆರು ತಿಂಗಳ ಹಗ್ಗಜಗ್ಗಾಟದ ಬಳಿಕ ಆಡಳಿತ ಮತ್ತು ವಿರೋಧ ಪಕ್ಷಗಳ ಒತ್ತಡಕ್ಕೆ ನಾರಿಮನ್‌ ಕಟ್ಟುಬಿದ್ದರು. ಆದರೆ, ಅರ್ಜಿ ಸಲ್ಲಿಸಲು ಅವರು ಅನೇಕ ಷರತ್ತುಗಳನ್ನು ಹಾಕಿದ್ದರು. ಸರಿಯಾದ ಕಾರಣವಿಲ್ಲದಿದ್ದರೆ ಮಧ್ಯಂತರ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದೂ ನೇರವಾಗಿ ಹೇಳಿದ್ದರು. ಮುಂಬೈ– ಕರ್ನಾಟಕ ಭಾಗದಲ್ಲಿ ಬೀಳುವ ಸರಾಸರಿ ಮಳೆ, ಬರಗಾಲಪೀಡಿತ ಪ್ರದೇಶಗಳ ವಿವರ, ಎಷ್ಟು ವರ್ಷಗಳಿಂದ ಬರಗಾಲವಿದೆ. ಮಲಪ್ರಭಾ ಜಲಾಶಯದ ನೀರಿನ ಸಂಗ್ರಹ ಮೊದಲು ಮತ್ತು ಈಗ ಮುಂತಾದ ಮಾಹಿತಿಗಳನ್ನು ಅವರು ಕೇಳಿದ್ದರು. ಸರ್ಕಾರ ಅಗತ್ಯ ಮಾಹಿತಿ ಪೂರೈಸಿತ್ತು.

‘ಕರ್ನಾಟಕಕ್ಕೆ ಮಧ್ಯಂತರ ಪರಿಹಾರ ಸಿಗುವ ಬಗ್ಗೆ ಖಾತ್ರಿ ಇಲ್ಲ. ನ್ಯಾಯಮಂಡಳಿ ಅರ್ಜಿಯನ್ನು ಒಪ್ಪಬಹುದು ಇಲ್ಲವೆ ತಿರಸ್ಕರಿಸಬಹುದು. ಏನೇ ಆದರೂ ಅದರ ಹೊಣೆಯನ್ನು ನೀವೇ ಹೊರಬೇಕು‘ ಎಂದೂ ನಾರಿಮನ್‌ ಖಚಿತವಾಗಿ ರಾಜ್ಯ ಸರ್ಕಾರಕ್ಕೆ ಹೇಳಿದ್ದರು. ಕಾನೂನು ತಜ್ಞರು ಅನುಮಾನಿಸಿದಂತೆ ನ್ಯಾಯಮಂಡಳಿ ಆದೇಶ  ಹೊರಬಂದಿದೆ.  ನ್ಯಾ. ಜೆ.ಎಂ. ಪಾಂಚಾಲ ಅವರ ನೇತೃತ್ವದ ನ್ಯಾಯಮಂಡಳಿ ರಾಜ್ಯದ ಅರ್ಜಿಯನ್ನು ತಿರಸ್ಕರಿಸಿದೆ. ಸಮರ್ಪಕ ಮಾಹಿತಿ ಹಾಗೂ ದಾಖಲೆಗಳ  ಕೊರತೆಯ ಕಾರಣಗಳನ್ನು ಅದು ಕೊಟ್ಟಿದೆ. ಈಗ ರಾಜ್ಯದ ವೈಫಲ್ಯಕ್ಕೆ ನಾರಿಮನ್‌ ಅವರನ್ನು ಹೊಣೆ ಮಾಡಲಾಗುತ್ತಿದೆ.

2015ರ ಡಿಸೆಂಬರ್‌ 1ರಂದು  ಹಾಕಲಾಗಿದ್ದ ಮಧ್ಯಂತರ ಅರ್ಜಿಯಲ್ಲಿ  7.56ಟಿಎಂಸಿ ಅಡಿ ನೀರು ಕೇಳಲಾಗಿತ್ತು. ಹುಬ್ಬಳ್ಳಿ– ಧಾರವಾಡ ಸೇರಿದಂತೆ ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಸುವುದಾಗಿ ವಾದಿಸಲಾಗಿತ್ತು. ಆದರೆ, ಕರ್ನಾಟಕ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಿ ನ್ಯಾಯಮಂಡಳಿಗೆ ಮನವರಿಕೆ ಮಾಡಿಕೊಡಲು ವಿಫಲವಾಗಿದೆ.

‘ನೀರು ಬಳಕೆಗೆ ಮೂಲ ಸೌಲಭ್ಯಗಳನ್ನು ಹೇಗೆ ನಿರ್ಮಿಸುತ್ತೀರಿ. ಸಂಬಂಧಪಟ್ಟ ಇಲಾಖೆಗಳ ಅನುಮೋದನೆ ಪಡೆಯದೆ ನೀರು ಬಳಕೆ ಸಾಧ್ಯವೇ. ನೀವು ಕೇಳಿರುವಷ್ಟು ನೀರು ಎಲ್ಲಿದೆ’ ಎಂಬ  ಪ್ರಶ್ನೆಗಳನ್ನು ನ್ಯಾಯಮಂಡಳಿ ಕೇಳಿತ್ತು. ಅದಕ್ಕೆ ರಾಜ್ಯದ ಬಳಿ ಸರಿಯಾದ ಉತ್ತರವಿರಲಿಲ್ಲ.

ಕುಡಿಯುವ ನೀರಿನ ಯೋಜನೆಗಳಿಗೆ ಅಡ್ಡಿಪಡಿಸಬಾರದು ಎಂಬ ಸುಪ್ರೀಂ ಕೋರ್ಟ್‌ ತೀರ್ಪಿದೆ. ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ನ್ಯಾಯಮಂಡಳಿಗೆ  ತನ್ನ ಮನವಿಯನ್ನು ಮನವರಿಕೆ ಮಾಡಿಕೊಟ್ಟಿದ್ದರೆ  ಇಂಥ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

ಮಹಾದಾಯಿ ನದಿಯಲ್ಲಿ ಕರ್ನಾಟಕದ ಪಾಲು 24.19ಟಿಎಂಸಿ ಅಡಿ. ನ್ಯಾಯಸಮ್ಮತ ಪಾಲನ್ನು ನ್ಯಾಯಮಂಡಳಿ ಹಂಚಿಕೆ ಮಾಡಲೇಬೇಕು. ಅಲ್ಲಿಯವರೆಗೂ ರೈತರು ಕಾಯಬೇಕು.

ನ್ಯಾಯಮಂಡಳಿ ರಚನೆಯಾಗಿ ಆರು ವರ್ಷ ಕಳೆದಿದೆ. ಈ ವರ್ಷದ ಆಗಸ್ಟ್‌ 20ಕ್ಕೆ ನ್ಯಾಯಮಂಡಳಿ ಅವಧಿ ಮುಗಿಯಲಿದೆ. ಅಗತ್ಯವಾದರೆ ಕಾಲಾವಧಿ ವಿಸ್ತರಣೆ ಮಾಡಬಹುದು.

ರಾಜ್ಯದ ಮಧ್ಯಂತರ ಅರ್ಜಿಯನ್ನು ನ್ಯಾಯಮಂಡಳಿ ವಜಾ ಮಾಡಿರುವುದರಿಂದ ಮುಂದೇನು ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ. ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬೇಕೇ ಅಥವಾ ಬಿಡಬೇಕೇ ಎಂಬ ಗೊಂದಲ ರಾಜ್ಯದ ವಕೀಲರ ತಂಡಕ್ಕಿದೆ. ಈ ಆದೇಶವನ್ನು ಪ್ರಶ್ನಿಸಿದರೂ ಕಷ್ಟ. ಬಿಟ್ಟರೂ ಕಷ್ಟ. ಅಲ್ಲೂ ರಾಜ್ಯದ ಮೇಲ್ಮನವಿ ಬಿದ್ದುಹೋದರೆ ಇನ್ನಷ್ಟು ಮುಜುಗರ ಅನುಭವಿಸಬೇಕಾಗಬಹುದು.

ಅದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂಬ ಕೂಗೆದ್ದಿದೆ. ಒಮ್ಮೆ ನ್ಯಾಯಮಂಡಳಿ ರಚನೆ ಆಗಿ, ಕಾನೂನು ಪ್ರಕ್ರಿಯೆಗಳು ಆರಂಭವಾದರೆ ರಾಜಿ– ಸಂಧಾನಕ್ಕೆ ಅವಕಾಶವಿಲ್ಲ. ಹಿಂದೆ ಯುಪಿಎ ಸರ್ಕಾರದ ಆಡಳಿತದಲ್ಲೂ ಅನೇಕ ಬಿಕ್ಕಟ್ಟಿನ ಸಂದರ್ಭಗಳು ಎದುರಾಗಿದ್ದಾಗ ಆಗಿನ ಪ್ರಧಾನಿ ಮನಮೋಹನ್‌ಸಿಂಗ್‌ ಹಸ್ತಕ್ಷೇಪ ಮಾಡಿರಲಿಲ್ಲ.

ಅಷ್ಟೇ ಏಕೆ, ಇತ್ತೀಚೆಗೆ ರಾಜ್ಯದ ಸರ್ವ ಪಕ್ಷ ನಿಯೋಗ ಮೋದಿ ಅವರನ್ನು ಭೇಟಿ ಮಾಡಿ ಮಹಾದಾಯಿ ನದಿಯಿಂದ 7.56 ಟಿಎಂಸಿ ಅಡಿ ನೀರು ಬಿಡಿಸಲು ಮಧ್ಯ ಪ್ರವೇಶ ಮಾಡಬೇಕೆಂದು ಒತ್ತಾಯಿಸಿತ್ತು. ಅದಕ್ಕೆ ಮೋದಿ ಅವರು, ‘ಮೊದಲು ಗೋವಾದಲ್ಲಿ ನಿಮ್ಮ ಪಕ್ಷದ ನಾಯಕರನ್ನು ಒಪ್ಪಿಸಿಕೊಂಡು ಬನ್ನಿ’ ಎಂದು ಕಾಂಗ್ರೆಸ್‌ ಮುಖಂಡರಿಗೆ ಹೇಳಿ ಜಾಣ್ಮೆಯಿಂದ ನುಣುಚಿಕೊಂಡಿದ್ದರು.

ಮಹಾದಾಯಿ ನ್ಯಾಯಮಂಡಳಿ ಆದೇಶದ  ಹೊರ ಬಂದ ಬಳಿಕ ಮುಂಬೈ– ಕರ್ನಾಟಕದಲ್ಲಿ ಹಿಂಸೆ ಭುಗಿಲೆದ್ದಿದೆ. ಸಮಸ್ಯೆಗೆ ಕಾನೂನು ಚೌಕಟ್ಟಿನೊಳಗೆ ಪರಿಹಾರ ಕಂಡುಕೊಳ್ಳಬೇಕಾದ ರೈತರು ಪ್ರತಿಭಟನೆ ಹಾದಿ ಹಿಡಿಯುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ. ನ್ಯಾಯಮಂಡಳಿ ವಿರುದ್ಧ ವ್ಯಕ್ತವಾಗುವ ಆಕ್ರೋಶದಿಂದ ಕರ್ನಾಟಕಕ್ಕೆ ನಷ್ಟ ಆಗಿಬಿಡುವ ಅಪಾಯವಿದೆ ಎಂಬ ಆತಂಕ ಎದುರಾಗಿದೆ.

ಮಹಾದಾಯಿ ನದಿ ನೀರಿನಲ್ಲಿ ತನ್ನ ಪಾಲು ಪಡೆಯಲು ಕರ್ನಾಟಕಕ್ಕೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಸರ್ಕಾರ ಮೈಮರೆತು ಅಂಥ ಅವಕಾಶ ಕಳೆದುಕೊಳ್ಳಬಾರದು. ವಿರೋಧ ಪಕ್ಷ  ಬಿಜೆಪಿ ರಾಜ್ಯದ ಹಿತಾಸಕ್ತಿ ವಿಷಯ ಬಂದಾಗ ರಾಜಕೀಯ ಮಾಡುವುದನ್ನು ಬಿಟ್ಟು ರಚನಾತ್ಮಕವಾಗಿ ಸರ್ಕಾರದ ಜತೆ ಸಹಕರಿಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT